ಬೆಂಗಳೂರು: ನಗರಕ್ಕೆ ಹೊರರಾಜ್ಯದಿಂದ ಬಂದಿದ್ದ ಕೋವಿಡ್ 19 ಸೋಂಕಿತ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಈ ಮೂಲಕ ಸೋಂಕಿನಿಂದ ಸಾವಿಗೀಡಾದವರ ಸಂಖ್ಯೆ 9ಕ್ಕೆ ಏರಿಕೆಯಾಗಿದೆ. ಇದರೊಂದಿಗೆ ಬುಧವಾರ ನಾಲ್ಕು ಮಂದಿಗೆ ಸೋಂಕು ದೃಢಪಟ್ಟಿದ್ದು, ಸೋಂಕಿಗೊಳಗಾದವರ ಸಂಖ್ಯೆ 250 ತಲುಪಿದೆ. ಮೃತ ವ್ಯಕ್ತಿಗೆ 43 ವರ್ಷದ ವಯಸ್ಸಾಗಿದ್ದು, ತಮಿಳುನಾಡಿನ ವೆಲ್ಲೂನಿಂದ ಇತ್ತೀಚೆಗೆ ಬೆಂಗಳೂರಿಗೆ ಬಂದಿದ್ದರು.
ಸೋಮವಾರವಷ್ಟೇ ಸೋಂಕು ದೃಢಪಟ್ಟಿತ್ತು. ರಕ್ತದೊತ್ತಡ, ಹೃದ್ರೋಗ ಸಮಸ್ಯೆಯಿಂದ ಬಳಲುತ್ತಿದ್ದ ಇವರು ಬುಧವಾರ ಚಿಕಿತ್ಸೆ ಫಲಕಾರಿಯಾಗದೆ ಮೃತರಾಗಿದ್ದಾರೆ. ನಗರದಲ್ಲಿ ಬುಧವಾರ ಪತ್ತೆಯಾದ ನಾಲ್ಕು ಸೋಂಕು ಪ್ರಕರಣಗಳಲ್ಲಿ ಮಲ್ಲೇಶ್ವರದಲ್ಲಿ ಇಬ್ಬರು, ನಾಗವಾರ ಮತ್ತು ಜೆ.ಜೆ.ಆರ್ ನಗರ ವಾರ್ಡ್‌ನಲ್ಲಿ ತಲಾ ಒಬ್ಬರು ಸೋಂಕಿತರಾಗಿದ್ದಾರೆ.
ಮಲ್ಲೇಶ್ವರ ವಾರ್ಡ್‌ನಲ್ಲಿ ಯಶವಂತಪುರ ಸಮೀಪದ ಮಂಗಲ್ಸ್ ಆಸ್ಪತ್ರೆಯಲ್ಲಿ ಪಶ್ಚಿಮ ಬಂಗಾಳದ 50 ವರ್ಷದ ಮಹಿಳೆಗೆ ಕೋವಿಡ್ 19 ಸೋಂಕು ತಗುಲಿತ್ತು. ಸದ್ಯ ಆ ಮಹಿಳೆಯ ದ್ವಿತೀಯ ಸಂಪರ್ಕ ಹೊಂದಿದ್ದವರ ಪೈಕಿ ಇಬ್ಬರಲ್ಲಿ ಸೋಂಕು ಪತ್ತೆಯಾಗಿದೆ. ಒಬ್ಬರು ಮಹಿಳೆಗೆ ಚಿಕಿತ್ಸೆ ನೀಡಿದ್ದ ವೈದ್ಯರ ಸೊಸೆ, ಮತ್ತೂಬ್ಬರು ಕುಟುಂಬ ಸದಸ್ಯ. ಇನ್ನೆರಡು ಪ್ರಕರಣಗಳಲ್ಲಿ ಸೋಂಕಿತರು ಪೊಲೀಸ್ ವಶದಲ್ಲಿದ್ದರು.
ಮಂಗಮ್ಮನಪಾಳ್ಯದಲ್ಲಿ ಪರೀಕ್ಷೆ: ಪಾದರಾಯನಪುರದಲ್ಲಿ ಸಮುದಾಯಿಕ ಕೋವಿಡ್ 19 ಸೋಂಕು ಪರೀಕ್ಷೆ ಮಾಡುತ್ತಿರುವ ರೀತಿಯಲ್ಲೇ ಮಂಗಮ್ಮನ ಪಾಳ್ಯದಲ್ಲೂ ಸಮುದಾಯಿಕ ಕೋವಿಡ್ 19 ಸೋಂಕು ಪರೀಕ್ಷೆ ಪ್ರಾರಂಭಿಸಲಾಗುವುದು ಎಂದು ಬಿಬಿಎಂಪಿಯ ಮುಖ್ಯ ಆರೋಗ್ಯಾಧಿಕಾರಿ ವಿಜಯೇಂದ್ರ ತಿಳಿಸಿದರು.
ಸುದ್ದಿಗಾರರ ಜತೆ ಮಾತನಾಡಿ, ಪಾದರಾಯನಪುರದಲ್ಲಿ ರ್‍ಯಾಂಡಮ್ ಪರೀಕ್ಷೆಯಲ್ಲಿ ಕೋವಿಡ್ 19 ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಪಾದರಾಯನಪುರದಲ್ಲಿ ಸೋಂಕು ದೃಢಪಟ್ಟ ಪ್ರಮುಖ ರಸ್ತೆಗಳಲ್ಲಿನ ನಿವಾಸಿಗಳನ್ನು ಸೋಂಕು ಪರೀಕ್ಷೆಗೆ ಒಳಪಡಿಸಲಾಗಿತ್ತು. ಇದೇ ಮಾದರಿಯಲ್ಲಿ ಮಂಗಮ್ಮನ ಪಾಳ್ಯದಲ್ಲೂ ಕೋವಿಡ್ 19 ಪರೀಕ್ಷೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.
ಇನ್ನು ಮಂಗಮ್ಮನ ಪಾಳ್ಯದಲ್ಲಿ 9 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಇವರಲ್ಲಿ ಬಹುತೇಕರಿಗೆ ಸೋಂಕು ಯಾರಿಂದ ಬಂದಿದೆ ಎನ್ನುವುದು ಪತ್ತೆಯಾಗಿಲ್ಲ. ಅಲ್ಲದೆ, ಹೊಂಗಸಂದ್ರದ ಮೂಲವಿರುವ ಬಗ್ಗೆಯೂ ಆರೋ ಗ್ಯಾಧಿ ಕಾರಿಗಳು ಸಂಶಯ ವ್ಯಕ್ತಪಡಿಸಿ ದ್ದಾರೆ. ಈ ಹಿನ್ನೆಲೆಯಲ್ಲಿ ಇಲ್ಲೂ ಸಮುದಾಯಿಕ ಸೋಂಕು ಪರೀಕ್ಷೆ ಪ್ರಾರಂಭಿಸಲು ನಿರ್ಧರಿಸಲಾಗಿದೆ ಎಂದು ಬಿಬಿಎಂಪಿಯ ಅಧಿಕಾರಿಗಳು ತಿಳಿಸಿದ್ದಾರೆ.
ಮುಂದುವರಿದ ಪರೀಕ್ಷೆ: ಮೊಬೈಲ್ ಕಿಯೋಸ್ಕ್ನ ಮೂಲಕ 20ಜನರಿಗೆ ಹಾಗೂ ಮತ್ತೂಂದು ಕಿಯೋಸ್ಕ್ನ ಮೂಲಕ 19 ಜನರಿಗೆ ಒಟ್ಟು 39ಜನರಿಗೆ ಸೋಂಕು ಪರೀಕ್ಷೆ ಮಾಡಲಾಗಿದೆ. ಸಮುದಾಯಿಕ ಕೋವಿಡ್ 19 ಸೋಂಕು ಪರೀಕ್ಷೆ ಮಾಡಿದವರಲ್ಲಿ ಯಾರಿಗೂ ಸೋಂಕು ಇಲ್ಲಿಯವರೆಗೆ ದೃಢಪಟ್ಟಿಲ್ಲ ಎಂದು ಪಶ್ಚಿಮ ವಲಯದ ಮುಖ್ಯ ಆರೋಗ್ಯಾಧಿಕಾರಿ ಮನೋರಂಜನ್ ಹೆಗ್ಡೆ ತಿಳಿಸಿದ್ದಾರೆ.