Advertisement

ಕಸದಿಂದ ರಸ ತೆಗೆದ ನಗರ ಜಿಲ್ಲಾಡಳಿತ

01:49 PM Dec 23, 2018 | Team Udayavani |

ಬೆಂಗಳೂರು: ತ್ಯಾಜ್ಯ ವಿಲೇವಾರಿಗೆ ಕೋಟ್ಯಂತರ ರೂ. ವೆಚ್ಚ ಮಾಡುತ್ತಿದ್ದ ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಇದೀಗ ಆ ಕಸದಿಂದಲೇ ಆದಾಯ ಗಳಿಸುವುದನ್ನು ಕರಗತ ಮಾಡಿಕೊಂಡಿದೆ.

Advertisement

ಕಳೆದ ಆರು ತಿಂಗಳಲ್ಲಿ ಪ್ಲಾಸ್ಟಿಕ್‌, ಬಾಟಲಿ, ಕೈ ಚೀಲ, ಬಟ್ಟೆ ಬ್ಯಾಗ್‌ ಮತ್ತು ಬಳಕೆಗೆ ಬರುವ ಕಾಗದದ ರಟ್ಟು ಸೇರಿ ವಿವಿಧ ಬಗೆಯ ಒಣ ತ್ಯಾಜ್ಯ ಮಾರಾಟದಿಂದಲೇ ಜಿ.ಪಂ ಸುಮಾರು 2 ಲಕ್ಷ ರೂ.ಆದಾಯಗಳಿಸಿದೆ. ನಗರ ಜಿ.ಪಂ ವ್ಯಾಪ್ತಿ ದಿನೇ ದಿನೆ ವಿಸ್ತಾರವಾಗುತ್ತಿದ್ದು, ಕಸದ ವಿಲೇವಾರಿ ಸಮಸ್ಯೆ ಸವಾಲಾಗಿ ಪರಿಣಮಿಸುತ್ತಿದೆ. ಸಮರ್ಪಕ ಕಸ ವಿಲೇವಾರಿ ಸಂಬಂಧ ನಗರ ಜಿಲ್ಲಾಡಳಿತ ಈಗಾಗಲೇ ಹಲವು ಯೋಜನೆಗಳನ್ನು ರೂಪಿಸಿದೆ. ಜಾಗದ ಕೊರತೆಯಿಂದಾಗಿ ಯೋಜನೆಗಳ ಜಾರಿಗೆ ಹಿನ್ನೆಡೆಯಾಗಿದೆ. ಈ ನಡುವೆಯೇ ಹಲವು ಪ್ರಯೋಗ ನಡೆಸಿರುವ ನಗರ ಜಿ.ಪಂ ಈಗ ತನ್ನ ವ್ಯಾಪ್ತಿಯಲ್ಲಿ ಬಳಕೆಯಾಗದೆ ಉಳಿದಿರುವ ಸರ್ಕಾರಿ ಕಟ್ಟಡಗಳನ್ನು ಒಣ ಕಸ ನಿರ್ವಹಣೆಗಾಗಿ ಬಳಸಿಕೊಂಡು ಆ ಕಸದಿಂದಲೇ ಆದಾಯ ಗಳಿಸುವ ಹೊಸ ಹೆಜ್ಜೆ ಇರಿಸಿದೆ.

ರಾಜಾನುಕುಂಟೆಯಲ್ಲಿ ಆರಂಭ: ಬೆಂಗಳೂರು ಉತ್ತರ ತಾಲೂಕಿನ ರಾಜಾನುಕುಂಟೆಯ ಕೃಷಿ ಉತ್ಪನ್ನಗಳ ಮಾರಾಟ ಮಂಡಳಿಯಲ್ಲಿ (ಎಪಿಎಂಸಿ) ಬಳಕೆಯಾಗದೆ ಉಳಿದಿದ್ದ ಸರ್ಕಾರಿ ಕಟ್ಟಡವನ್ನು, ನಗರ ಜಿಲ್ಲಾಡಳಿತ ಆರು ತಿಂಗಳಿಂದ ಒಣ ಕಸ ನಿರ್ವಹಣೆಗೆ ಬಳಸಿಕೊಳ್ಳುತ್ತಿದೆ. ಪ್ರತಿ ನಿತ್ಯ ಸಾಕಷ್ಟು ಪ್ರಮಾಣದಲ್ಲಿ ಸಂಗ್ರಹವಾಗುವ ಪ್ಲಾಸ್ಟಿಕ್‌, ಬಾಟಲಿ, ಕೈ ಚೀಲ, ಬಟ್ಟೆ ಬ್ಯಾಗ್‌ ಮತ್ತು ಬಳಸಬಹುದಾದ ಕಾಗದದ ರಟ್ಟು ಸೇರಿ ಹಲವು ಸಾಮಗ್ರಿಗಳನ್ನು ಪ್ರತ್ಯೇಕಿಸಿ, ಮರು ಬಳಕೆ ಮಾಡುವ ಕೆಲಸ ನಡೆದಿದೆ. 

ಈ ಕಾರ್ಯದಿಂದ ಬೆಂಗಳೂರು ಜಿಲ್ಲಾಡಳಿತಕ್ಕೆ ಸುಮಾರು 2 ಲಕ್ಷ ರೂ. ಆದಾಯ ಬಂದಿದೆ. ಈ ಯೋಜನೆ ಯಶಸ್ಸಿನ ಖುಷಿಯಲ್ಲಿರುವ ನಗರ ಜಿ.ಪಂ ಮುಂದಿನ ದಿನಗಳಲ್ಲಿ ಹಲವೆಡೆ ಯೋಜನೆ ವಿಸ್ತರಿಸುವ ಆಲೋಚನೆಯಲ್ಲಿದೆ. ಈ ಹಿನ್ನೆಲೆಯಲ್ಲಿ ಜಿ.ಪಂ ವ್ಯಾಪ್ತಿಯಲ್ಲಿ ಬಳಕೆಯಾಗದೆ ಉಳಿದಿರುವ ಸರ್ಕಾರಿ ಕಟ್ಟಡಗಳ ಹುಡುಕಾಟ ನಡೆಸಿದೆ. 

ಜತಗೆ ಬೆಂಗಳೂರು ಉತ್ತರ ತಾಲೂಕಿನ ಹೆಸರುಘಟ್ಟ ಮತ್ತು ಹುರುಳಿಚಿಕ್ಕನಹಳ್ಳಿಯಲ್ಲಿ ಬಳಕೆಯಾಗದೆ ಇರುವ ಸರ್ಕಾರಿ ಕಟ್ಟಡಗಳನ್ನು ಜಿಲ್ಲಾಡಳಿತ ಪತ್ತೆ ಹಚ್ಚಿದ್ದು, ಈ ಕಟ್ಟಡಗಳನ್ನು ಒಣಕಸ ನಿರ್ವಹಣೆಗೆ ಬಳಸುವ ಚಿಂತನೆ ನಡೆಸಿದೆ. ಶೀಘ್ರದಲ್ಲೆ ಈ ಕಟ್ಟಡಗಳಲ್ಲಿ ಕೆಲಸ ಆರಂಭಿಸುವುದಾಗಿ ಬೆಂಗಳೂರು ನಗರ ಜಿ.ಪಂ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

Advertisement

ಉಡುಪಿಗೆ ಭೇಟಿ ನೀಡಿದ್ದ ತಂಡ ಒಣ ಕಸ ನಿರ್ವಹಣೆ ಪದ್ಧತಿ ಈಗಾಗಾಲೇ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಮತ್ತು ಉಡುಪಿಯಲ್ಲಿ ಜಾರಿಯಲ್ಲಿದೆ. ಅಲ್ಲಿನ ಆಡಳಿತಗಳು ಈ ಪದ್ಧತಿ ಮೂಲಕ ಯಶಸ್ಸು ಕಂಡಿರುವ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಜಿಲ್ಲಾಡಳಿತದ ಒಂದು ತಂಡ ಈಗಾಗಲೇ ಉಡುಪಿ ಜಿಲ್ಲೆಗೆ ಭೇಟಿ ನೀಡಿ ತ್ಯಾಜ್ಯ ನಿರ್ವಹಣೆ ಬಗ್ಗೆ ಸಂಪೂರ್ಣ ಮಾಹಿತಿ ಕಲೆಹಾಕಿದೆ. ಅಧಿಕಾರಿಗಳ ತಂಡ ಉಡುಪಿಯಿಂದ ಬಂದ ಬಳಿಕ ಬೆಂಗಳೂರು ಉತ್ತರ ತಾಲೂಕಿನ ರಾಜಾನುಕುಂಟೆ ಯಲ್ಲಿ ಒಣ ಕಸ ನಿರ್ವಹಣೆ ಮಾಡುವ ಕೆಲಸ ಪ್ರಾರಂಭಿಸಲಾಗಿದೆ.

ಘನ ತ್ಯಾಜ್ಯ ನಿರ್ವಹಣೆಗೆ ಸರ್ಕಾರದಿಂದ ಭೂಮಿ ಮಂಜೂರಾಗದೆ ಇರುವುದರಿಂದ ಜಿ.ಪಂ. ವ್ಯಾಪ್ತಿಯಲ್ಲಿ ಬಳಕೆಯಾಗದೆ ಇರುವ ಸರ್ಕಾರಿ ಕಟ್ಟಡಗಳನ್ನು ಒಣ ತ್ಯಾಜ್ಯ ನಿರ್ವಹಣೆಗೆ ಬಳಸಿಕೊಳ್ಳುತ್ತಿದ್ದೇವೆ.
ಎಂ.ಎಸ್‌.ಅರ್ಚನಾ, ಬೆಂಗಳೂರು ನಗರ ಜಿ.ಪಂ. ಸಿಇಒ

ದೇವೇಶ ಸೂರಗುಪ್ಪ

Advertisement

Udayavani is now on Telegram. Click here to join our channel and stay updated with the latest news.

Next