ನಾಗಪುರ: ಪೌರತ್ವ (ತಿದ್ದುಪಡಿ) ಕಾಯ್ದೆ ಭಾರತದ ಮುಸ್ಲಿಂ ಸಮುದಾಯದ ವಿರುದ್ಧವಾಗಿಲ್ಲ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ರವಿವಾರ ಇಲ್ಲಿ ಪ್ರತಿಪಾದಿಸಿದ್ದಾರೆ.
ನೂತನ ಕಾನೂನು ಹೊರತರುವ ಮೂಲಕ ಎನ್‌ಡಿಎ ಸರಕಾರ ದೇಶದ ಮುಸ್ಲಿಮರಿಗೆ ಯಾವುದೇ ಅನ್ಯಾಯ ಮಾಡುತ್ತಿಲ್ಲ ಎಂದು ತಿಳಿಸಿದ ಅವರು, ಕಾಂಗ್ರೆಸ್ ವೋಟ್ ಬ್ಯಾಂಕಿನ ರಾಜಕೀಯಕ್ಕಾಗಿ ಈ ವಿಷಯದ ಬಗ್ಗೆ ತಪ್ಪು ಮಾಹಿತಿ ಹರಡುತ್ತಿದೆ ಎಂದು ಆರೋಪಿಸಿದರು.
ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶದಿಂದ ಕಿರುಕುಳಕ್ಕೊಳಗಾದ ಅಲ್ಪಸಂಖ್ಯಾಕರಿಗೆ ಭಾರತದ ಪೌರತ್ವ ನೀಡಲು ಬಯಸುವ ನೂತನ ಕಾನೂನನ್ನು ಜಾರಿಗೆ ತರುವ ಎನ್‌ಡಿಎ ಸರಕಾರದ ನಿರ್ಧಾರವನ್ನು ಬೆಂಬಲಿಸಿ ಇಲ್ಲಿ ನಡೆದ ರ್ಯಾಲಿಯಲ್ಲಿ ಅವರು ಮಾತನಾಡುತ್ತಿದ್ದರು. ಬಿಜೆಪಿ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರೆಸ್ಸೆಸ್) ಬೆಂಬಲದೊಂದಿಗೆ ಸ್ಥಳೀಯ ಸಂಸ್ಥೆಯು ಈ ರ್ಯಾಲಿಯನ್ನು ಆಯೋಜಿಸಿತ್ತು.
ಅಫ್ಘಾನಿಸ್ತಾನ, ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಧಾರ್ಮಿಕ ಅಲ್ಪಸಂಖ್ಯಾಕರಿಗೆ ನ್ಯಾಯ ಒದಗಿಸಲು ಸರಕಾರ ತೆಗೆದುಕೊಂಡ ನಿರ್ಧಾರವು ಭಾರತದ ಮುಸ್ಲಿಂ ಸಮುದಾಯಕ್ಕೆ ವಿರುದ್ಧವಾಗಿಲ್ಲ. ನಾವು ಮುಸ್ಲಿಮರನ್ನು ದೇಶದಿಂದ ಹೊರಗೆ ಕಳುಹಿಸುವ ಬಗ್ಗೆ ಮಾತನಾಡುತ್ತಿಲ್ಲ ಎಂದು ಗಡ್ಕರಿ ಅವರು ತಮ್ಮ ಭಾಷಣದಲ್ಲಿ ಸ್ಪಷ್ಟಪಡಿಸಿದರು. ದೇಶದಲ್ಲಿ ವಾಸಿಸುತ್ತಿರುವ ವಿದೇಶಿ ಒಳನುಸುಳಿಗರು ಸರಕಾರದ ಏಕೈಕ ಕಾಳಜಿಯಾಗಿದೆ ಎಂದರು.
ಸಮುದಾಯದ ಅಭಿವೃದ್ಧಿಗೆ ಕಾಂಗ್ರೆಸ್ ಸಹಾಯ ಮಾಡಲು ಸಾಧ್ಯವಿಲ್ಲ ಎಂಬುದನ್ನು ಮುಸ್ಲಿಮರು ಅರ್ಥಮಾಡಿಕೊಳ್ಳಬೇಕು ಎಂದೂ ಸಚಿವರು ಹೇಳಿದರು. ಅದು (ಕಾಂಗ್ರೆಸ್) ನಿಮಗಾಗಿ ಏನು ಮಾಡಿದೆ? ನಾನು ದೇಶದ ಮುಸ್ಲಿಂ ಸಮುದಾಯಕ್ಕೆ ಈ ಪಿತೂರಿಯನ್ನು ಅರ್ಥಮಾಡಿಕೊಳ್ಳಬೇಕೆಂದು ವಿನಂತಿಸುತ್ತೇನೆ. ನಿಮ್ಮ ಅಭಿವೃದ್ಧಿಯನ್ನು ಬಿಜೆಪಿಯಿಂದ ಮಾತ್ರ ಮಾಡಬಹುದಾಗಿದೆಯೇ ಹೊರತೂ ಕಾಂಗ್ರೆಸ್‌ನಿಂದ ಅಲ್ಲ ಎಂದು ಗಡ್ಕರಿ ನುಡಿದರು.
ನೀವು ಸೈಕಲ್-ರಿಕ್ಷಾ ಸವಾರಿ ಮಾಡುತ್ತಿದ್ದೀರಿ, ನಾವು ನಿಮಗೆ ಇ-ರಿಕ್ಷಾವನ್ನು ನೀಡಿದ್ದೇವೆ ಮತ್ತು ನಿಮಗೆ ನಿಲ್ಲಲು ಸಹಾಯ ಮಾಡಿದ್ದೇವೆ. ಕಾಂಗ್ರೆಸ್ ನಿಮ್ಮನ್ನು ಕೇವಲ ಮತ ಯಂತ್ರವೆಂದು ಪರಿಗಣಿಸುತ್ತದೆ. ನೀವು ಅದರ ತಪ್ಪು ಮಾಹಿತಿಗೆ ಬಲಿಯಾಗಬೇಡಿ ಎಂದರು.
ನಾವೆಲ್ಲರೂ ಒಬ್ಬರು, ನಮ್ಮ ಪರಂಪರೆ ಒಂದು. ನೀವು ಮಸೀದಿಗೆ ಹೋಗುತ್ತೀರಿ, ನಾವು ಅದನ್ನು ವಿರೋಧಿಸುವುದಿಲ್ಲ. ಡಾ| ಬಾಬಾಸಾಹೇಬ್ ಅಂಬೇಡ್ಕರ್ ಅವರು ರೂಪಿಸಿದ ಸಂವಿಧಾನದ ಪ್ರಕಾರ ನಾವೆಲ್ಲರೂ ಒಟ್ಟಾಗಿ ಬದುಕಬೇಕು ಮತ್ತು ಒಟ್ಟಾಗಿ ಕೆಲಸ ಮಾಡಬೇಕು. ನಾವೂ ಇದನ್ನೇ ಹೇಳುತ್ತಿದ್ದೇವೆ, ಹೊಸತು ಏನನ್ನೂ ಅಲ್ಲ ಎಂದು ಕೇಂದ್ರ ಸಚಿವ ಗಡ್ಕರಿ ತಿಳಿಸಿದ್ದಾರೆ.