Advertisement
ನಾಗತಿಹಳ್ಳಿ ತಮ್ಮ ಶಿಷ್ಯಂದಿರ ಸಿನಿಮಾ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ, ಹೊಸಬರ ಚಿತ್ರಗಳಿಗೆ ಬೆಂಬಲ ಬೇಕು ಎಂಬುದನ್ನೂ ಸಾರಿದ್ದಾರೆ. ಈಗಿನ ಪ್ರತಿಭಾವಂತರ ಆಸೆಗಳು, ಅವರ ಸಿನಿಮಾಗಳ ಮಾರುಕಟ್ಟೆ ಕುರಿತು ನಾಗತಿಹಳ್ಳಿ ಮಾತನಾಡಿದ್ದಾರೆ. “ಈಗಂತೂ ಕನ್ನಡ ಚಿತ್ರರಂಗದಲ್ಲಿ ಹೊಸಬರೇ ಹೆಚ್ಚಾಗಿದ್ದಾರೆ.
Related Articles
Advertisement
ಇಲ್ಲಿ ಮುಖ್ಯವಾಗಿ ಕೈ ಹಿಡಿಯಬೇಕಿದ್ದು ಪ್ರೇಕ್ಷಕ. ಜೊತೆಗೆ ಪೂರಕವಾಗಿ ಉದ್ಯಮ ಮತ್ತು ಮಾಧ್ಯಮ ಬೆಂಬಲವೂ ಬೇಕು’ ಎನ್ನುತ್ತಾರೆ ನಾಗತಿಹಳ್ಳಿ ಚಂದ್ರಶೇಖರ್. ಹೊಸಬರು ತುಂಬಾ ಚೆನ್ನಾಗಿ ಕಥೆ ಹೇಳುತ್ತಾರೆ. ಆದರೆ, ಅವರಿಗೆ ಯಾರು ಹಣ ಹಾಕುತ್ತಾರೆ? ಕೆಲವೇ ಕೆಲವು ಅದೃಷ್ಟವಂತರಿಗೆ ಮಾತ್ರ ಕುಟುಂಬದ ಬೆಂಬಲ ಇರುತ್ತೆ, ಶ್ರೀಮಂತ ಅಪ್ಪ, ಅಮ್ಮ ಇರುತ್ತಾರೆ.
ಗಾಡ್‌ಫಾದರ್ ಕೂಡ ಇರುತ್ತಾರೆ. ಆದರೆ, ಮಿಕ್ಕವರ ಕನಸುಗಳ ಗತಿ ಏನು? ಆ ಕನಸುಗಳನ್ನು ಪೋಷಿಸುವುದಾದರೂ ಹೇಗೆ? ಎನ್ನುವುದು ನಾಗತಿಹಳ್ಳಿ ಚಂದ್ರಶೇಖರ್ ಅವರ ಪ್ರಶ್ನೆ. “ಒಂದು ಕಾಲ ಘಟ್ಟದಲ್ಲಿ ಕನಸುಗಳು ನಿಜ ಆಗದಿದ್ದರೆ, ಅವರ ಬದುಕಿನ ಮುಖ್ಯವಾದ ಕ್ಷಣ, ತಾರುಣ್ಯ ಎಲ್ಲವೂ ಹೊರಟು ಹೋಗುತ್ತೆ. ಹೀಗಾಗಿ ಅದೊಂದು ಧರ್ಮ ಸಂಕಟದ ಪ್ರಶ್ನೆ.
ಬೇಡ ಎನ್ನುವುದಕ್ಕೆ ಮನಸ್ಸು ಆಗಲ್ಲ. ಬೇಕು ಅನ್ನುವುದಕ್ಕೆ ಭಯ ಆಗುತ್ತೆ’ ಎನ್ನುವನಾಗತಿಹಳ್ಳಿ, “ಇಲ್ಲಿ ಹತ್ತು ಕೋಟಿ ಖರ್ಚು ಮಾಡೋರಿಗೂ ಸಿನಿಮಾ ಒಂದು ಜೂಜು. ಅದೇ ಒಂದು ಕೋಟಿ ಖರ್ಚು ಮಾಡೋರಿಗೂ ಜೂಜೇ. ಜೂಜು ಅನ್ನೋದು ಕಾಮನ್ ಪದವಾಗಿದೆ. ಎಲ್ಲರೂ ಅವರದೇ ಆತಂಕದಲ್ಲಿರುತ್ತಾರೆ.
ಚಿತ್ರ ಮಾಡುವಾಗಿನಿಂದ ಹಿಡಿದು, ಬಿಡುಗಡೆಗೆ ಚಿತ್ರಮಂದಿರಗಳ ಹುಡುಕಾಟ, ಆ ತಯಾರಿ ಎಲ್ಲವೂ ಒಂದು ರೀತಿ ಒತ್ತಡ, ಗೊಂದಲದಲ್ಲೇ ಕೆಲಸ ಮಾಡಬೇಕು. ಇವೆಲ್ಲವನ್ನು ಒಪ್ಪಿಕೊಂಡೇ ಇಲ್ಲಿ ಕೆಲಸ ಮಾಡಬೇಕು. ಇಂತಹ ಜಟಿಲವಾದ ಪ್ರಯಾಣದ ಮೊದಲ ಹೆಜ್ಜೆ ಇಟ್ಟುಕೊಂಡು ಹೊರಟಿರುವ ಪ್ರತಿಭೆಗಳಿಗೆ ಒಳ್ಳೆಯದಾಗಲಿ’ ಎಂದು ಶುಭಹಾರೈಸುತ್ತಾರೆ ನಾಗತಿಹಳ್ಳಿ.