Advertisement
ಮನೋರಂಜನೆಯೊಂದಿಗೆ ಅರಿವನ್ನೂ ಮೂಡಿಸಬಲ್ಲ ಸಿನಿಮಾ ಜನಸಂವಹನದ ಪ್ರಮುಖ ಸಾಧನ. ಒಂದು ಕಾಲದಲ್ಲಿ ತಯಾರಾಗುತ್ತಿದ್ದ ಚಲನಚಿತ್ರಗಳು ಸಮಾಜಕ್ಕೆ ಏನಾದರೊಂದು ಘನ ಸಂದೇಶವನ್ನು ಹೊತ್ತಿರುತ್ತಿದ್ದವು. ಆದರೆ ಇಂದು ಸಿನಿಮಾ ನಿರ್ಮಾಣ ಬಹುತೇಕ ಒಂದು ವ್ಯಾಪಾರವಾಗಿದೆ ಎನ್ನುವುದು ನಿಷ್ಠುರ ಸತ್ಯ. ಇಂತಿಷ್ಟು ಕೋಟಿ ರೂಪಾಯಿಗಳ ಭಾರೀ ಖರ್ಚಿನಲ್ಲಿ ಸಿದ್ಧವಾಗುತ್ತಿದೆ, ಹಿಂದೆ ಯಾರೂ ಬಳಸಿರದ ದೊಡ್ಡ ಹಡಗು, ವಿಮಾನ ಬಳಸಲಾಗುತ್ತಿದೆ ಎಂದೇ ಚಲನಚಿತ್ರಗಳು ಪ್ರಚಾರ ಆರಂಭಿಸಿರುತ್ತವೆ!
Related Articles
Advertisement
ಸಿನೆಮಾ ಕ್ಷೇತ್ರದಲ್ಲಿ ಅಧ್ಯಯನದ ಕೊರತೆಯಿದೆ. ಸಾವಧಾನವಾಗಿ ಎಲ್ಲ ಘಟಕದವರೂ ಒಂದೇ ಸೂರಿನಲ್ಲಿ ಕುಳಿತು ಚರ್ಚಿಸುವ, ಸಂವಾದಿಸುವ ಪರಿಪಾಠವಿಲ್ಲ. ಅಹಾ! ಎಲ್ಲವೂ ಪಸಂದಾ ಗಿದೆ, ಅದ್ಭುತ ಎನ್ನುವ (ಕೃತಕ!) ಸಮಾಧಾನ. ಹಾಗಾಗಿ ಪ್ರಯೋಗಗಳು ಬೆರಳೆಣಿಕೆಯಷ್ಟೂ ಇಲ್ಲ. ಪುನರಾವಲೋಕನ ಶಿಬಿರ, ಕಮ್ಮಟಗಳು ಸಾಗಿ ವಿಚಾರ ವಿನಿಮಯವಾಗದಿದ್ದರೆ ಹೇಗೆ? ಸಾಂಸ್ಕೃತಿಕ ವಲಯ ಬೆಳೆಯುವುದು ಹೊಗಳಿಕೆಗಿಂತಲೂ ಹೆಚ್ಚಾಗಿ ತೆಗಳಿಕೆಯಿಂದ. ಆದರೆ ಅದು ರಚನಾತ್ಮಕ ವಾಗಿರಬೇಕಷ್ಟೆ. ಇಂಥದ್ದು ಬೇಕಿತ್ತೆ ಎನ್ನಿಸುವ ಅಲೆಯೊಂದು ಇತ್ತೀಚೆಗೆ ಪ್ರಾರಂಭವಾಗಿದೆ.
ನಾಲ್ಕೆದು ದಶಕಗಳ ಹಿಂದೆ ಒಂದು ಸಿನೆಮಾ ಭರ್ಜರಿ ಜನಪ್ರಿಯತೆ ಗಳಿಸಿರುತ್ತದೆ. ಅದು ಬಿಂಬಿಸುವ ಸಮಾಜಪರ ಸಂದೇಶದ ಬಗ್ಗೆ ಎರಡು ಮಾತಿಲ್ಲ. ಅದರ ಸಂಭಾಷಣೆಗಳು, ಹಾಡುಗಳು ಇಂದಿಗೂ ಮಾತಾಗಿವೆ. ಯಶಸ್ವೀ ಚಿತ್ರವೆಂದರೆ ಇದಪ್ಪ ಎಂಬ ಪ್ರಶಂಸೆಯಿದೆ. ಎಲ್ಲ ಸರಿಯೆ. ಆದರೆ ಅದೇ ಚಿತ್ರವನ್ನು ಹಿಂದೆ ಎಂದೂ ಇಲ್ಲದ ಬಗೆಯಲ್ಲಿ ಇಂದು ಪುನರ್ನಿಮಿಸಲಾಗುತ್ತದೆ. ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಆ ಚಿತ್ರದ ನಾಯಕ ನಟರು ಕೀರ್ತಿಶೇಷರಾಗಿದ್ದರೂ ತೆರೆಯ ಮೇಲೆ ಕಾಣಿಸಿಕೊಳ್ಳುತ್ತಾರೆ! ಇಂಥ ಚಿತ್ರ ಬಿಡುಗಡೆಯಾದ ದಿನ ಅಭಿಮಾನಿಯೊಬ್ಬ ಭಾವೋದ್ವೇಗಕ್ಕೆ ಜೀವವೊಪ್ಪಿಸಿದ್ದು ಎಂಥ ವಿಪರ್ಯಾಸ? ಚಿತ್ರ ಮರುನಿರ್ಮಿತಿಯ ಉದ್ದೇಶ ತಾನೆ ಏನು? ಆ ಪ್ರತಿಭಾಶಾಲಿ ಗತಿಸಿಲ್ಲ, ನಮ್ಮೊಳಗೇ ಇದ್ದಾರೆಂಬ ನಿರೂಪಣೆಯೋ ಅಥವಾ ಅವರ ಅಗಲಿಕೆ ಸ್ವಲ್ಪಮಟ್ಟಿಗಾದರೂ ಈ ಮೂಲಕ ಭರಿಸುವ ಯೋಜನೆಯೋ? ಪ್ರೇಕ್ಷಕರಿಗೆ ಅವರದೇ ಗ್ರಹಿಕೆ, ಸ್ವಂತಿಕೆ, ವಿಚಾರಶೀಲತೆಯಿರುತ್ತದೆ. ಒಂದು ಚಿತ್ರವನ್ನು ಪುನರ್ ಸೃಷ್ಟಿಸಿ ಅಂಥ ಪ್ರಬುದ್ಧ ಅಭಿನಯ ಪಟುವನ್ನು ಮರೆಯಲಾಗದು, ಮರೆಯಬೇಡಿ ಎಂದು ಸಂವಹಿಸುವ ಅಗತ್ಯವಿಲ್ಲ. ಆತ ಪ್ರೇಕ್ಷಕರ ಮನೋನೆಲೆಯಲ್ಲಿ ಅವರವರ ಒಳಕಾಣೆಗೆ ತಕ್ಕಂತೆ ಸಲ್ಲುತ್ತಾನೆ. ಒಬ್ಬ ಒಳ್ಳೆಯ ನಟನೇ/ನಟಿಯೇ ತಾನು ಚೆನ್ನಾಗಿ ನಿರ್ವಹಿಸಿದ ಪಾತ್ರವನ್ನೇ ಪುನಃ ನಿರ್ವಹಿಸಬಯಸುವುದಿಲ್ಲ. ಮತ್ತೂ ಉತ್ತಮವಾಗಿ ತಾನು ಮಾಡಬಹುದಾದ ಪಾತ್ರಗಳನ್ನು ಅರಸುವ ಇರಾದೆ ನಟ, ನಟಿಯರಿಗಿರುತ್ತದೆ..
ಆಯಿತು, ಇನ್ನು ಪುನರ್ನಿಮಿತಿಯ ಸಾಧಕ ಬಾಧಕಗಳನ್ನು ಅವಲೋಕಿಸೋಣ. ಅರೆದ ಗಂಧವನ್ನೇ ಮತ್ತೆ ಮತ್ತೆ ಅರೆಯುವ ಅಗತ್ಯವಿರದು. ಪಾಕಪಟುವೊಬ್ಬ ತಾನು ಸಿದ್ಧಪಡಿಸುವ ಹೊಸ ರುಚಿಯ ಹದದ ಮೇಲೆ ಹತೋಟಿ ಸಾಧಿಸಿರುತ್ತಾನೆ. ಅದೇ ಪಾಕಕ್ಕಂಟಿಕೊಳ್ಳದೆ ಮುಂದೆ ಹೊಸ ಪಾಕವೈವಿಧ್ಯದ ಪರಿಣತಿಯತ್ತ ದಾಪುಗಾಲಿಡುತ್ತಾನೆ. ಒಂದು ಚಲನ ಚಿತ್ರ, ಶಿಲ್ಪ, ನೃತ್ಯ, ನಾಟಕ, ವರ್ಣಚಿತ್ರ, ಕಟ್ಟಡ, ಯಂತ್ರ, ಕಸೂತಿ….ಯಾವುದೇ ಸಂರಚನೆ ಸೊಗಸಾಗಿದೆಯೆಂದು ಎಷ್ಟು ಕಾಲ ಅದನ್ನು ಹೊಗಳುತ್ತಿರಬೇಕು? ಅದರ ನಿಜವಾದ ಶ್ಲಾಘನೆ ಅಂತರ್ಗತ ವಾಗಿರುವುದು ಅಂಥದ್ದರ ಪ್ರಭಾವದಿಂದ ಇನ್ನೊಂದು, ಮತ್ತೂಂದು ಕಲಾ ಕೃತಿಯ ರೂಪಣೆಯ ಯತ್ನದಲ್ಲಿ, ಹೊಸ ಚಿಂತನೆಯಲ್ಲಿ, ಹೊಸ ಹಾದಿಯಲ್ಲಿ, ಶೈಲಿಯಲ್ಲಿ. ಈ ಹಿನ್ನೆಲೆಯಲ್ಲೇ ಮೆಕ್ಸಿಕೋದ ಪ್ರಖ್ಯಾತ ಸಿನೆಮಾ ನಿರ್ದೇಶಕ ಅಲೆಜಾಂಡ್ರೊ ಇನಾರಿಟೊ ನುಡಿಯುತ್ತಾರೆ; “”ಸಿನೆಮಾ ನಮ್ಮನ್ನು ನಾವೇ ಆಗಿಂದಾಗ್ಗೆ ನೋಡಿಕೊಳ್ಳುವ ಕನ್ನಡಿ”. ನಮ್ಮಲ್ಲಿ ಅವಕಾಶಗಳಿಗಾಗಿ ಹಂಬಲಿಸುವ ಉದಯೋನ್ಮುಖ ಕಲಾವಿದರು ಧಾರಾಳವಾಗಿದ್ದಾರೆ. “ಮರುಸೃಷ್ಟಿ’ಯ ಸಾಹಸದ ಬದಲು ಸಂದ ಪ್ರತಿಭಾವಂತ ನಟರ ಹೆಸರಿನಲ್ಲಿ ಹೊಸ ಸಿನೆಮಾ ತಯಾರಿಸುವ ಯೋಜನೆ ಕೈಗೊಂಡು ಅದರಲ್ಲಿ ಆಕಾಂಕ್ಷಿಗಳಿಗೆ ಅವಕಾಶ ಒದಗಿಸಬಹು ದಲ್ಲವೇ? ಅಂದಕಾಲತ್ತಲಿನ ಸಿನಿಮಾಕರ್ತರು ಆ ದಿನಗಳಿಗೆ ಹಳೆಯದಾದ ಚಿತ್ರಗಳಿಗೇ ಜೋತು ಬಿದ್ದಿದ್ದರೆ ಸೃಜನಶೀಲತೆ ಅಷ್ಟರಮಟ್ಟಿಗೆ ಸ್ಥಗಿತಗೊಳ್ಳುತ್ತಿತ್ತು. ಗತದ ಅತಿ ವೈಭವೀಕರಣ ವರ್ತಮಾನದ ಚಿಗುರನ್ನು ಉಪೇಕ್ಷಿಸಿದಂತೆ.
ಬಿಂಡಿಗನವಿಲೆ ಭಗವಾನ್