Advertisement

ಸಾಂವಿಧಾನಿಕ ಅಂಶಗಳ ಮಥನ; ಹಾಲಾಹಲ-ಅಮೃತಕ್ಕೆ ಅವಕಾಶ

11:32 PM Jul 19, 2019 | Team Udayavani |

ಬೆಂಗಳೂರು: ಸರ್ಕಾರ ಉಳಿಸುವ ಮತ್ತು ಉರುಳಿಸುವ ರಾಜಕೀಯ ಕಸರತ್ತಿನಿಂದ ರಾಜಕಾರಣಿಗಳ ಮೇಲೆ ಜನಸಾಮಾನ್ಯನಿಗೆ ಬೇಸರಿಕೆ ಮೂಡಿರಬಹುದು ಅಥವಾ ಇವರೆಂಥಹ ಜನಪ್ರತಿನಿಧಿಗಳೆಂಬ ಅಭಿಪ್ರಾಯವೂ ಮೂಡಿರಬಹುದು. ಆದರೆ, ಇದೊಂದು ಜನತಂತ್ರಕ್ಕೆ ಸಂಬಂಧಿಸಿದಂತೆ ಮಥನ ಎನ್ನಬಾರದೇಕೆ! ಪುರಾಣದಲ್ಲಿ ಅಮೃತಕ್ಕಾಗಿ ದೇವತೆಗಳು ಮತ್ತು ರಕ್ಕಸರು ಸಮುದ್ರದಲ್ಲಿ ಮಂದಾರ ಪರ್ವತವನ್ನಿಟ್ಟು ಸರ್ಪರಾಜ ವಾಸುಕಿಯ ಮೂಲಕ ಮಂಥನ ನಡೆಸಿದರಂತೆ. ಆಗ ಹಾಲಾಹಲ ಹುಟ್ಟಿಕೊಂಡಿತಂತೆ. ಜತೆಗೆ ಲಕ್ಷ್ಮಿ, ರತ್ನಾದಿಗಳು, ಐರಾವತ ಮತ್ತಿತರ ವಿಷಯಗಳ ಹುಟ್ಟಿಗೂ ಕಾರಣವಾಯಿತಂತೆ.

Advertisement

ಇದೇ ಕತೆಯನ್ನು ರೂಪಕವಾಗಿ ಬಳಸಿದರೆ ಕ್ಷೀರಸಾಗರ ಎನ್ನುವುದು ಆರು ಕೋಟಿ ಕನ್ನಡಿಗರನ್ನೂ, ಮಂದಾರ ಪರ್ವತವನ್ನು ವಿಧಾನಸೌಧಕ್ಕೂ, ವಾಸುಕಿಯನ್ನು ವಿಧಾನಸಭೆಗೂ, ಮಂಥನದ ಬಳಿಕ ಸಿಕ್ಕ ವಸ್ತುಗಳಲ್ಲಿ ಹಾಲಾಹಲವನ್ನು ಭ್ರಷ್ಟ ಮತ್ತು ನಾಚಿಕೆಗೇಡಿನ ರಾಜಕಾರಣಕ್ಕೂ, ಉಳಿದ ಉತ್ತಮ ಎಂಬ ಅಂಶಗಳನ್ನು ಉಳಿದಿರುವ ನೈತಿಕತೆ, ಕಾನೂನು, ಪ್ರಜಾಸತ್ತೆಯನ್ನು ಇನ್ನೂ ಜೀವಂತ ಉಳಿಸಿಕೊಂಡಿರುವ ಸಾಂವಿಧಾನಿಕ ಹುದ್ದೆಗಳಾದ ರಾಜ್ಯಪಾಲರು, ಸ್ಪೀಕರ್‌, ನ್ಯಾಯಾಲಯ..ಹೀಗೆ ಹೋಲಿಸಬಹುದು.

ಮಂಥನದ ಕೊನೆಗೆ ಮತ್ತೂಂದು ಮೈಲಿಗಲ್ಲಿನಂತಹ ಸಾಂವಿಧಾನಿಕ ಐತಿಹಾಸಿಕ ಘಟ್ಟ ನಿರ್ಮಾಣ ವಾಗಬಹುದು! ಸ್ಪೀಕರ್‌ ರಮೇಶ್‌ ಕುಮಾರ್‌ ಅವರೊಂದು ಬಾರಿ ಹೇಳಿದಂತೆ ಘಟನಾವಳಿಗಳ ಕೊನೆ ಇತಿಹಾಸವನ್ನಂತೂ ನಿರ್ಮಿಸುತ್ತದೆ. ನಮ್ಮ ವಿಧಾನಸಭೆಯಲ್ಲಿ ನಡೆಯುತ್ತಿರುವ ಘಟನೆಗಳು, ಅಧಿಕಾರಕ್ಕಾಗಿ ಆಳುವ ಮತ್ತು ಪ್ರತಿಪಕ್ಷಗಳ ನಡುವಿನ ರಂಪ ರಾಮಾಯಣ, ಮಧ್ಯದಲ್ಲಿ ಅತೃಪ್ತರ ಮುಂಬೈ ಯಾತ್ರೆ ಕರ್ನಾಟಕದ ಮಟ್ಟಿಗೆ ಕಪ್ಪು ಚುಕ್ಕೆಗಳನ್ನಂತೂ ಇಟ್ಟಿದೆ.

ನಾ ಕೊಡೆ, ನೀ ಬಿಡೆ ಎಂಬ ಪರಿಸ್ಥಿತಿಯಲ್ಲಿ ಆಳುವ ಮೈತ್ರಿ ಪಕ್ಷಗಳು, ಅಧಿಕಾರ ವಹಿಸಿಕೊಳ್ಳಲು ತುದಿಗಾಲಲ್ಲಿ ನಿಂತಿರುವ ವಿರೋಧ ಪಕ್ಷ ಹಾಗು ವಿಚಿತ್ರ ರೀತಿಯಲ್ಲಿ ಸರ್ಕಾರವನ್ನು ಬೀಳಿಸ ಹೊರಟಿರುವ ಅತೃಪ್ತರ ಬಗ್ಗೆ ಮತದಾರ ಹೇಸಿಗೆ ಪಡುವಂತಹ ವಾತಾವರಣ ಸೃಷ್ಟಿಯಾಗಿದೆ. ಪರಸ್ಪರ ಭ್ರಷ್ಟತೆಗಳ ಆರೋಪ ಪ್ರತ್ಯಾರೋಪಗಳು, ಕುದುರೆ ವ್ಯಾಪಾರದ ವಹಿವಾಟುಗಳ ಬಗ್ಗೆ ಸ್ಫೋಟಗೊಳ್ಳುತ್ತಿರುವ ಮಾಹಿತಿಗಳು, ಪ್ರಜಾತಂತ್ರದ ಒಂದು ಮಗ್ಗಲನ್ನು ಆವರಿಸಿಕೊಂಡಿರುವ ಅನೈತಿಕ ರಾಜಕಾರಣದ ಕರಾಳತೆಯನ್ನು ತೋರಿಸುತ್ತಿದೆ.

ಇದನ್ನೇ ಒಂದರ್ಥದಲ್ಲಿ ಪ್ರಜಾಸತ್ತೆಯ ಹಾಲಾಹಲ ಎನ್ನಬಹುದು. ಆದರೆ, ಒಟ್ಟಾರೆ ಪ್ರಕರಣದಲ್ಲಿ ನಡೆದ ಕಾನೂನು ಜಿಜ್ಞಾಸೆ ಮತ್ತು ಸಾಂವಿಧಾನಿಕ ವಿಶ್ಲೇಷಣೆಗಳು, ಸಾಂವಿಧಾನಿಕ ಹುದ್ದೆಗಳಾದ ಸ್ಪೀಕರ್‌, ರಾಜ್ಯಪಾಲರು, ಸುಪ್ರೀಂಕೋರ್ಟ್‌ ನ್ಯಾಯಮೂರ್ತಿಗಳು… ಇವರೆಲ್ಲರೂ ಘಟನಾವಳಿಗಳ ಭಾಗಗಳಾಗಿದ್ದು, ಅವುಗಳನ್ನು ವಿಧಾನಸಭೆಯಲ್ಲಿ ಶಾಸಕರು, ಸ್ಪೀಕರ್‌ ವಿಶ್ಲೇಷಿಸಿದ ವಿಧಾನ, ಮಾತುಗಳ ಹೂರಣ ಪ್ರಜಾತಂತ್ರದ ಮಹತ್ವದ ಬಗ್ಗೆಯೂ ಮಾಹಿತಿಗಳನ್ನು ನೀಡಿತು.

Advertisement

ಅತೃಪ್ತರು ತಮ್ಮ ಶಾಸಕ ಸ್ಥಾನಗಳಿಗೆ ರಾಜೀನಾಮೆಗಳನ್ನು ಕೊಡುತ್ತಾ ಹೋಗಿದ್ದು, ಅವುಗಳು ಕ್ರಮ ಬದ್ಧ ಹೌದು/ಅಲ್ಲ ಎಂಬ ಸ್ಪೀಕರ್‌ ವಿಶ್ಲೇಷಣೆ, ಆ ಬಗ್ಗೆ ಅತೃಪ್ತರು ರಾಜ್ಯಪಾಲರಿಗೂ ಮಾಹಿತಿ ನೀಡಿದ್ದು, ಕೊನೆಗೆ ರಾಜೀನಾಮೆ ಅಂಗೀಕರಿಸಬೇಕೆಂದು ಸುಪ್ರೀಂಕೋರ್ಟ್‌ ಮೊರೆ ಹೋಗಿದ್ದು ಒಂದು ಹಂತ. ಸಂವಿಧಾನವನ್ನು ರಕ್ಷಿಸಬೇಕೆಂದ ಸುಪ್ರೀಂಕೋರ್ಟ್‌, ಸ್ಪೀಕರ್‌ ಪರಮಾಧಿಕಾರದ ಪಾವಿತ್ರ್ಯತೆಗೆ ಭಂಗ ತರದೆ, ಶಾಸಕರ ರಾಜೀನಾಮೆಯನ್ನು (ಕ್ರಮಬದ್ಧವೋ, ಅಲ್ಲವೋ ಎಂಬ ಜಿಜ್ಞಾಸೆ ಮುಂಚಿತವಾಗಿ) ಸ್ಪೀಕರ್‌ ಮನ್ನಿಸಬಹುದು

ಹಾಗೂ ಸದನದಲ್ಲಿ ಆ ಅತೃಪ್ತರು ಪಾಲ್ಗೊಳ್ಳಲೇಬೇಕೆಂದು ಒತ್ತಡ ಹೇರುವ ಹಾಗಿಲ್ಲ ಎಂಬ ಜಾಣ ನಿಲುವು ವ್ಯಕ್ತಪಡಿಸಿರುವುದು ಪ್ರಜಾಸತ್ತೆಯನ್ನು ಮತ್ತೆ ಎತ್ತಿ ಹಿಡಿಯಿತು. ಅದನ್ನು ಅಷ್ಟೇ ಜಾಣತನದಿಂದ ಸ್ಪೀಕರ್‌ ನಿರ್ವಹಿಸಿದ ರೀತಿ ನಮ್ಮ ಸಂವಿಧಾನದದಲ್ಲಿ ಅಡಕವಾಗಿರುವ ಅಂಶಗಳ ಮತ್ತೂಂದು ಮಗ್ಗುಲನ್ನು ಪರಿಚಯಿಸಿತು. ಜತೆಗೆ ಸಂವಿಧಾನದ ಹಿತಾಸಕ್ತಿಯನ್ನು ಹೇಗೆ ರಕ್ಷಿಸಬಹುದು ಎಂಬ ಹೊಸ ವಿಚಾರ ಮಂಥನಕ್ಕೂ ಎಡೆ ಮಾಡಿಕೊಟ್ಟಿದೆ.

ಅಥವಾ ಅತೃಪ್ತ ಶಾಸಕರ ರಾಜೀನಾಮೆ ಸ್ವಯಂಪ್ರೇರಿತ ಹಾಗೂ ರಾಜಕೀಯ ಅದರಲ್ಲಿಲ್ಲವೇ? ಅವರ ರಾಜೀನಾಮೆಗೆ ಸರ್ಕಾರದ ನಡೆ ನಡಾವಳಿ ಕಾರಣವೇ ಅಥವಾ ವಿರೋಧ ಪಕ್ಷದ ಆಮಿಷ ಕಾರಣವೇ ಎಂಬುದನ್ನು ಜನಸಾಮಾನ್ಯರೂ ಚರ್ಚಿಸುವಂತೆಯೂ ಈ ಘಟನಾವಳಿ ವಾತಾವರಣವೊಂದನ್ನು ಸೃಷ್ಟಿಸಿತು. ಸುಪ್ರೀಂಕೋರ್ಟ್‌ ಅಭಿಪ್ರಾಯದ ಬಗ್ಗೆ ನಿಷ್ಕರ್ಷೆ, ಶಾಸಕರು ಸದನದಲ್ಲಿ ಪಾಲ್ಗೊಳ್ಳುವ ಸಂಬಂಧ ಕಾನೂನು ಜಿಜ್ಞಾಸೆ, ಪಕ್ಷಾಂತರ ನಿಷೇಧಿಸುವ ಸಂವಿಧಾನದ 10ನೇ ಶೆಡ್ನೂಲ್‌ನ್ನು ಅತೃಪ್ತರು ಧಿಕ್ಕರಿಸಿ ತಮಗೆ ಲಾಭ ಇರುವ ಪಕ್ಷಕ್ಕೆ ಹಾರಲು ತಂತ್ರ ರೂಪಿಸಿದ್ದಾರೆಯೇ,

ಇಂತಹ ವಿಚಾರಗಳ ಬಗ್ಗೆ ಸುಪ್ರೀಂಕೋರ್ಟ್‌, ರಾಜಭವನ ಮತ್ತು ಸ್ಪೀಕರ್‌ ಕಚೇರಿಗಳು ಹಾಗು ಶಾಸಕಾಂಗ ಪಕ್ಷ ನಾಯಕರಿಗೆ ಇರುವ ಜವಾಬ್ದಾರಿ… ಈ ಎಲ್ಲಾ ವಿಚಾರಗಳು ಚರ್ಚೆಗೆ ಬಂದಿವೆ. ಕರ್ನಾಟಕ ರಾಷ್ಟ್ರಮಟ್ಟದಲ್ಲೆ ಅನೇಕ ರಾಜಕೀಯ ಆಂದೋಲನಗಳಿಗೆ, ರಾಜಕೀಯ ಮೌಲ್ಯ ಉಳಿಸಿಕೊಳ್ಳುವ ನಿರ್ಧಾರಗಳಿಗೆ ಹೆಸರುವಾಸಿಯಾಗಿತ್ತು. ಆದರೆ, ಇತ್ತೀಚಿಗಿನ ಸಮ್ಮಿಶ್ರ ಘಟನಾವಳಿಗಳು, ರಾಜಕಾರಣಿಗಳ ಅಭಿಪ್ರಾಯ ಸ್ಥಿತ್ಯಂತರಗಳು ರಾಜ್ಯಕ್ಕೆ ಕೆಟ್ಟ ಹೆಸರು ಮತ್ತು ದೇಶದ ರಾಜಕಾರಣಕ್ಕೆ ಕೆಟ್ಟ ಸಂದೇಶ ರವಾನಿಸುವಂತಿದೆ.

ಆದರೆ, ಮಥನದಲ್ಲಿ ಹುಟ್ಟಿದ ಅಂತಹ ಹಾಲಾಹಲವನ್ನು ಅರಗಿಸಿಕೊಳ್ಳುವ ಶಕ್ತಿ ನಮ್ಮ ಸಂವಿಧಾನಕ್ಕೆ ಇದೆ ಹಾಗೂ ಜಿಜ್ಞಾಸೆ, ತರ್ಕಗಳ ಮೂಲಕ ಒಂದು ತಾರ್ಕಿಕ ಅಂತ್ಯ ನೀಡಿ ಅಮೃತ ಕುಡಿಸುವ ಶಕ್ತಿಯೂ ಸಂವಿಧಾನಕ್ಕೆ ಇದೆ. ರಾಜ್ಯಪಾಲರ ಆದೇಶಗಳನ್ನು ಮುಖ್ಯಮಂತ್ರಿ ಕಡೆಗಣಿಸುವುದು, ಸಂವಿಧಾನದ ಅಂಶಗಳನ್ನೇ ಬಳಸಿಕೊಂಡು ಕಾಲಹರಣ ಮಾಡುತ್ತಾ ಬಿಜೆಪಿಗೆ ಅಧಿಕಾರ ಸಿಗದಂತೆ ನಡೆಸುತ್ತಿರುವ ಮೈತ್ರಿ ಪ್ರಯತ್ನ,

ಈ ನಡುವೆ ರಾಜಕೀಯಕ್ಕೆ ರಾಜಕೀಯ ಪಕ್ಷಗಳು ಹಚ್ಚಿದ ಮಸಿ ಬಣ್ಣದ ವಿಶ್ಲೇಷಣೆಯನ್ನೂ ನಮ್ಮ ವಿಧಾನಸಭೆ ಕಳೆದೆರಡು ದಿನಗಳಿಂದ ದಾಖಲಿಸಿದೆ. ಈ ನಡುವೆ, ಪ್ರಜಾತಂತ್ರವನ್ನು ಉಳಿಸುವತ್ತ ಸ್ಪೀಕರ್‌, ರಾಜ್ಯಪಾಲರು, ಸುಪ್ರೀಂಕೊರ್ಟ್‌ ಮತ್ತು ಕೇಂದ್ರ ಸರ್ಕಾರದ ನಿರ್ಧಾರಗಳು ಇರಲಿವೆ, ಅವು ಸಂವಿಧಾನದ ಆಶಯಗಳನ್ನು ಇನ್ನಷ್ಟು ಗಟ್ಟಿ ಮಾಡಲಿವೆ ಎಂಬುದು ಸತ್ಯ. ಯಾಕೆಂದರೆ ನಮ್ಮ ಪ್ರಜಾತಂತ್ರ ಗಟ್ಟಿಯಾಗಿದೆ. ನಮ್ಮ ಸಂಸದೀಯ ರೀತಿ- ರಿವಾಜುಗಳು ಶ್ರೀಮಂತವಾಗಿವೆ.

* ನವೀನ್‌ ಅಮ್ಮೆಂಬಳ

Advertisement

Udayavani is now on Telegram. Click here to join our channel and stay updated with the latest news.

Next