ನಿರ್ದೇಶಕ ರಘುಶಿವಮೊಗ್ಗ ಈ ಹಿಂದೆ “ಚೌಕಾಬಾರ’ ಎಂಬ ಚಿತ್ರ ಮಾಡಿದ್ದರು. ಈಗ ಹೊಸ ಚಿತ್ರವೊಂದನ್ನು ಸದ್ದಿಲ್ಲದೆಯೇ ಮಾಡಿ ಮುಗಿಸಿದ್ದಾರೆ. ಅದರ ಹೆಸರು “ಚೂರಿಕಟ್ಟೆ’. ಇತ್ತೀಚೆಗೆ ನಟ ರಕ್ಷಿತ್‌ಶೆಟ್ಟಿ ಚಿತ್ರದ ಟೀಸರ್ ಬಿಡುಗಡೆ ಮಾಡುವ ಮೂಲಕ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. ನಯಾಜ್ ಮತ್ತು ತುಳಸಿರಾಮುಡು ನಿರ್ಮಾಣದ ಈ ಚಿತ್ರಕ್ಕೆ ಕೈಲಾಶ್ ಕಥೆ ಬರೆದಿದ್ದಾರೆ. ಅರವಿಂದ್ ಚಿತ್ರಕಥೆ ಬರೆದಿದ್ದಾರೆ.
ಪ್ರವೀಣ್ ಮತ್ತು ಪ್ರೇರಣಾ ಚಿತ್ರದ ನಾಯಕ, ನಾಯಕಿಯಾಗಿ ನಟಿಸಿದ್ದಾರೆ. ಉಳಿದಂತೆ ಚಿತ್ರದಲ್ಲಿ ಅಚ್ಯುತ್, ದತ್ತಣ್ಣ, ಮಂಜುನಾಥ್ ಹೆಗಡೆ,ಬಾಲಾಜಿ ಸೇರಿದಂತೆ ಅನೇಕ ರಂಗಭೂಮಿ ಕಲಾವಿದರು ನಟಿಸಿದ್ದಾರೆ. ಮಾರ್ಚ್‌ನಲ್ಲಿ ಶುರುವಾದ “ಚೂರಿಕಟ್ಟೆ’ ಈಗ ಬಿಡುಗಡೆಗೆ ರೆಡಿಯಾಗಿದೆ. ಮಲೆನಾಡ ಭಾಗದಲ್ಲಿ ಸುಮಾರು 30 ದಿನಗಳ ಕಾಲ ಚಿತ್ರೀಕರಣವಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಗಡಿ ಭಾಗದ ಕಥೆ ಇದು. ಅಲ್ಲೊಂದು ಚೂರಿಕಟ್ಟೆ ಎಂಬ ಗ್ರಾಮವಿದೆ. ಬ್ರಿಟಿಷರ ಕಾಲದಲ್ಲಿ ಆ ಗ್ರಾಮಕ್ಕೆ ಸರ್ಕಲ್ ಎಂಬ ಹೆಸರಿತ್ತು. ಆಗೆಲ್ಲಾ ತಾಳಗುಪ್ಪ ಮೂಲಕ ಚೆನ್ನೈವರೆಗೆ ರೈಲು ಓಡಾಡುತ್ತಿತ್ತು. ಆ ಸಂದರ್ಭದಲ್ಲಿ ಪರವಾನಗಿ ಇಲ್ಲದೆಯೇ ಕಳುವ ಮರದ ತುಂಡುಗಳನ್ನು ಸಾಗಿಸಲಾಗುತ್ತಿತ್ತು. ಆಗ ಅಂತಹ ಕಳ್ಳರನ್ನು ಹಿಡಿದು, ಸುಂಕ ವಸೂಲಿ ಮಾಡೋಕೆ ಅಧಿಕಾರಿಗಳು ಸರ್ಕಲ್‌ನಲ್ಲಿರುತ್ತಿದ್ದರು.
ಕಳ್ಳರು ಆ ಸಂದರ್ಭದಲ್ಲಿ ಕೈಯಲ್ಲಿ ಚೂರಿ ಹಿಡಿದು ಟಿಂಬರ್ ಮಾಫಿಯಾದಲ್ಲಿ ತೊಡಗಿಕೊಳ್ಳುತ್ತಿದ್ದರು. ಹಾಗಾಗಿ ಆ ಸರ್ಕಲ್‌ನಲ್ಲಿದ್ದ ಕಟ್ಟೆ ಬಳಿ ನಡೆಯುತ್ತಿದ್ದ ಆ ಮಾಫಿಯಾಗೆ “ಚೂರಿಕಟ್ಟೆ’ ಎಂದು ಹೆಸರು ಬಂತು. ಅದೇ ಹೆಸರನ್ನಿಟ್ಟುಕೊಂಡು ಟಿಂಬರ್ ಮಾಫಿಯಾ ಕುರಿತು ಚಿತ್ರ ಮಾಡಿದ್ದಾರೆ ರಘು ಶಿವಮೊಗ್ಗ. ಚಿತ್ರಕ್ಕೆ ವಾಸುಕಿ ವೈಭವ್ ಸಂಗೀತ ನೀಡಿದ್ದಾರೆ. ನೊಬಿನ್‌ಪಾಲ್ ಹಿನ್ನೆಲೆ ಸಂಗೀತವಿದೆ. ಅದ್ವೈತ ಗುರುಮೂರ್ತಿ ಕ್ಯಾಮೆರಾ ಹಿಡಿದಿದ್ದಾರೆ.