Advertisement

ಆರ್ಭಟಿಸಿದ್ದ ಚಿತ್ತೆ ಈಗ ಶಾಂತ

01:46 PM Oct 13, 2017 | |

ಹನೂರು: ಒಂದು ವಾರದಿಂದ ಎಡಬಿಡದೆ ಸುರಿದ ಧಾರಾಕಾರ ಮಳೆ ಗುರುವಾರ ಬಿಡುವು ನೀಡಿತ್ತು. ಹೀಗಾಗಿ ಜನಜೀವನ ಸಹಜಸ್ಥಿತಿಗೆ ಮರಳಿದೆ. ಉಕ್ಕಿ ಹರಿಯುತ್ತಿದ್ದ ಹಳ್ಳಗಳಲ್ಲಿ ನೀರು ತಗ್ಗಿದೆ. ಹೀಗಾಗಿ ಬಂದ್‌ ಆಗಿದ್ದ ರಸ್ತೆಗಳಲ್ಲಿ ಸಂಚಾರ ಪುನಾರಂಭಗೊಂಡಿದೆ. 2ನೇ ಬಾರಿಗೆ ಕೊಚ್ಚಿಹೋಗಿದ್ದ ವಡಕೆಹಳ್ಳದ ಸಮೀಪದ ತಾತ್ಕಾಲಿಕ ರಸ್ತೆ ಪುನರ್‌ ನಿರ್ಮಾಣವಾಗಿದ್ದು, ಮಾದಪ್ಪನ ಬೆಟ್ಟಕ್ಕೆ ಹೋಗುವ ವಾಹನ ಸಂಚಾರ ಯಥಾಸ್ಥಿತಿಗೆ ಬಂದಿದೆ.

Advertisement

ಸಂಚಾರ ಆರಂಭ: ಈ ಹಿಂದೆ ತಾತ್ಕಾಲಿಕವಾಗಿ ರಸ್ತೆಗೆ ಅಳವಡಿಸಲಾಗಿದ್ದ ಸಣ್ಣ ಸಿಮೆಂಟು ತೂಬುಗಳಿಗೆ ಬದಲಾಗಿ ದೊಡ್ಡ ಗಾತ್ರದ ತೂಬು ಅಳವಡಿಸಿ, ರಸ್ತೆ ಎತ್ತರಿಸಲಾಗಿದೆ. ಬುಧವಾರ ತಡರಾತ್ರಿಯೇ ರಸ್ತೆ ನಿರ್ಮಾಣವಾದ ಹಿನ್ನೆಲೆಯಲ್ಲಿ ಬುಧವಾರ ರಾತ್ರಿಯಿಂದಲೇ ವಾಹನಗಳು ಮುಖ್ಯ ರಸ್ತೆಯಲ್ಲಿಯೇ ಸಂಚಾರ ಆರಂಭಿಸಿವೆ

ಎಚ್ಚೆತ್ತುಕೊಳ್ಳದ ಅಧಿಕಾರಿಗಳು: ಕಳೆದ ಮೂರು ನಾಲ್ಕು ದಿನಗಳಿಂದ ಸುರಿದ ಧಾರಾಕಾರ ಮಳೆಯಿಂದಾಗಿ ಲೊಕ್ಕನಹಳ್ಳಿ – ಒಡೆಯರಪಾಳ್ಯ, ಮೀಣ್ಯಂ-ರಾಮಾಪುರ, ಹೂಗ್ಯಂ-ಕೊಳ್ಳೇಗಾಲ ಮಾರ್ಗದಲ್ಲಿ ಮುಳುಗು ಸೇತುವೆಗಳು ಮುಳುಗಡೆ ಗೊಂಡು ಗಂಟೆಗಟ್ಟಲೇ ವಾಹನಗಳು ಸಾಲು ಗಟ್ಟಿ ನಿಂತಿದ್ದವು. ಇಷ್ಟಾದರೂ ಪಿಡಬ್ಲೂಡಿ ಅಧಿಕಾರಿಗಳು ಎಚ್ಚೆತ್ತುಕೊಂಡಿಲ್ಲ.

ಕಸ ತೆರವು ಮಾಡಿ: ಮುಳುಗು ಸೇತುವೆಗಳ ಎರಡೂ ಬದಿಯ ಬೊಂಬುಗಳಿಗೆ ಸಿಲುಕಿ ಕೊಂಡಿರುವ ಕಸವನ್ನು ತೆರವುಗೊಳಿಸಿಲ್ಲ. ನೀರು ಸರಾಗವಾಗಿ ಹರಿದುಹೋಗಲು ಅನುವು ಮಾಡಿ ಕೊಟ್ಟಿಲ್ಲ. ಮುಂದಿನ ದಿನಗಳಲ್ಲಿ ಇದೇ ಪ್ರಮಾಣದ ಮಳೆ ಸುರಿದರೆ ಸಮಸ್ಯೆ ಹಿಂದಿನದಕ್ಕಿಂತ ಹೆಚ್ಚಾಗಿರುತ್ತದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಹನೂರು ನಿವಾಸಿ ವಿನೋದ್‌ ಆಗ್ರಹಿಸಿದ್ದಾರೆ.

ಕೃಷಿಯತ್ತ ಮುಖ ಮಾಡಿದ ರೈತರು: ಈ ಬಾರಿ ಹಿಂಗಾರು ಹಂಗಾಮಿನಲ್ಲಿ ಉತ್ತಮ ಮಳೆಯಾದ ಕಾರಣ ನಿರೀಕ್ಷೆಗಿಂತ
ಹೆಚ್ಚಿನ ಪ್ರಮಾಣದಲ್ಲಿಯೇ ರೈತರು ಬಿತ್ತನೆ ಮಾಡಿದ್ದರು. ಆದರೆ, ಎಡಬಿಡದೆ ಸುರಿದ ಮಳೆಯಿಂದಾಗಿ ಕೆಲವೆಡೆ ಬೆಳೆ ಹಾನಿಯಾಗಿದೆ. ಕಾಲಕ್ಕನುಗುಣವಾಗಿ ರಸ ಗೊಬ್ಬರ ನೀಡುವುದು, ಕ್ರಿಮಿನಾಶಕಗಳ ಸಿಂಪಡಣೆ ಮಾಡುವುದು, ಕಳೆ ಕೀಳುವುದು ಸೇರಿದಂತೆ ಹಲವು ಬೇಸಾಯ ಕ್ರಮ ಅನುಸರಿಸಲು ಸಾಧ್ಯವಾಗಿಲ್ಲ. ಇದೀಗ ಬುಧವಾರ ಮತ್ತು ಗುರುವಾರ ಮಳೆ ಬಿಡುವು ಮಾಡಿಕೊಟ್ಟಿರುವ ಹಿನ್ನೆಲೆ ರೈತರು ಬೇಸಾಯದ ಕಡೆ ಮುಖ ಮಾಡಿದ್ದಾರೆ. 

Advertisement

ಆರಂಭ: ಬೆಳೆಗಳಿಗೆ ಅಗತ್ಯವಾದ ಪೋಷಕಾಂಶ, ರಸಗೊಬ್ಬರ ನೀಡಲು ಮತ್ತು ಬೆಳೆಗಳ ಮಧ್ಯೆ ಇರುವ ಕಳೆಗಳನ್ನು ತೆಗೆಸುವ ಕಾರ್ಯ ಪ್ರಾರಂಭಿಸಿದ್ದಾರೆ.

ಚಿತ್ತ ಕೆಡಿಸದಿರಲಿ ಚಿತ್ತೆ ಮಳೆ: ಬೆಳೆಗಳಿಗೆ ಮಳೆಯ ಜೊತೆಗೆ ಸೂರ್ಯನ ಬೆಳಕು ಕೂಡ ಅಷ್ಟೇ ಪ್ರಮುಖವಾಗಿದೆ. ಈಗಾಗಲೇ ಉಂಟಾದ ಅತಿವೃಷ್ಟಿ ಪರಿಸ್ಥಿತಿಯಿಂದಾಗಿ ಕೆಲ ಬೆಳೆಗಳ ಇಳುವರಿಯಲ್ಲಿ ಏರಿಳಿತ ಉಂಟಾಗಿದೆ. ಮಂಗಳವಾರ ಸಂಜೆ 7.30 ಗಂಟೆಗೆ ಚಿತ್ತ ಮಳೆ ಉದಯವಾಗಿದ್ದು, ಒಮ್ಮೆ ಸುರಿಯಲು ಪ್ರಾರಂಭಿಸಿದರೆ ಬಿಡುವುದಿಲ್ಲ ಎಂಬ ಪ್ರತೀತಿ ಇದೆ. ಅಲ್ಲದೆ ದೀಪಾವಳಿ
ಸಂದರ್ಭದಲ್ಲಿ ಈ ಚಿತ್ತ ಮಳೆಯ ಜೆಡಿ ಪ್ರಾರಂಭವಾದರೆ ದಿನಗಟ್ಟಲೆ ಬಿಡುವುದಿಲ್ಲ ಎಂಬ ನಂಬಿಕೆಯೂ ಇದೆ. ಒಟ್ಟಾರೆ ಈಗಾಗಲೇ ಸಾಕಷ್ಟು ಮಳೆ ಆಗಿರುವ ಹಿನ್ನೆಲೆ ಚಿತ್ತ ಮಳೆಯು ಈ ಹಿಂದಿನಂತೆ ತನ್ನ ಪ್ರಭಾವ ಬೀರುವುದು ಬೇಡವೆಂಬುದು ರೈತರ ಆಶಯವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next