ವಿಜಯಪುರ: ಇಂದ್ರಧನುಷ್ ಯೋಜನೆ ಲಸಿಕಾ ಕಾರ್ಯಕ್ರಮ ಅಭಿಯಾನ ಜು.16ರಿಂದ 20ರ ವರೆಗೆ ನಡೆಯಲಿದೆ. ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಬೇಕು. ನಗರ ಪ್ರದೇಶ, ಸ್ಲಂ ಪ್ರದೇಶಗಳ ಪ್ರತಿ ಮಗುವಿಗೆ ತಪ್ಪದೇ ಲಸಿಕೆ ಹಾಕುವಂತೆ ಜಿಲ್ಲಾಧಿಕಾರಿ ಎಸ್.ಬಿ. ಶೆಟ್ಟೆಣ್ಣವರ ಅಧಿಕಾರಿಗಳಿಗೆ ತಾಕೀತು ಮಾಡಿದರು.
ನಗರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಚೇರಿ ಸಭಾಂಗಣದಲ್ಲಿ ನಡೆದ ಇಂದ್ರಧನುಷ್ ನಗರ ಲಸಿಕಾ ಅಭಿಯಾನ ಕಾರ್ಯಕ್ರಮ ಹಾಗೂ ಡೆಂಘೀ ವಿರೋಧಿ ಮಾಸಾಚರಣೆ ಕುರಿತ ಸಭೆಯಲ್ಲಿ ಮಾತನಾಡಿದ ಅವರು, ಇಂದ್ರಧನುಷ್ ಮೊದಲನೇ ಸುತ್ತಿನ ಲಸಿಕಾ ಕಾರ್ಯಕ್ರಮ ಇದೇ ಇಂದ್ರಧನುಷ್ ಲಸಿಕೆ ಕುರಿತಂತೆ ವದಂತಿಗಳು, ಸುಳ್ಳು ಸುದ್ದಿಗಳು ಮಾಧ್ಯಮಗಳಲ್ಲಿ ಪ್ರಕಟವಾಗದಂತೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಆರೋಗ್ಯ ಇಲಾಖೆ ಸಿದ್ಧಪಡಿಸಿದ ಜಿಲ್ಲಾ ಇಂದ್ರಧನುಷ್ ಲಸಿಕಾ ಅಭಿಯಾನ ಕಾರ್ಯಕ್ರಮದ ಪಟ್ಟಿಗಳ ವಿವರವನ್ನು ಪರಿಶೀಲಿಸಿದ ಅವರು, ನಗರದ ಮಹಾನಗರ ಪಾಲಿಕೆ ವ್ಯಾಪ್ತಿಯ ಎಲ್ಲ ವಾರ್ಡ್‌ಗಳಲ್ಲಿ ಲಸಿಕಾ ಅಭಿಯಾನ ಕಾರ್ಯಕ್ರಮಕ್ಕೆ ಕ್ರಮ ಕೈಗೊಳ್ಳುವಂತೆ ತಿಳಿಸಿ, ಪಾಲಿಕೆ ಸಿಬ್ಬಂದಿಗಳ ಮಕ್ಕಳಿಗೆ ಲಸಿಕೆ ಹಾಕಿಸಲು ಜಾಗೃತಿ ಮೂಡಿಸಲು ಸೂಚನೆ ನೀಡಿದರು. ನಗರದ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಸೇರಿದಂತೆ ಎಲ್ಲರೂ ಲಸಿಕೆ ಹಾಕುವ ಮಹತ್ವದ ಕುರಿತು ಪಾಲಕರಲ್ಲಿ ಲಸಿಕೆ ಕುರಿತಾದ ವದಂತಿ, ಗೊಂದಲ ಬಗೆಹರಿಸಿ ಜಾಗೃತಿ ಮೂಡಿಸಿ ಪ್ರತಿ ಮಗುವಿಗೆ ತಪ್ಪದೇ ಲಸಿಕೆ ಹಾಕಿಸಬೇಕು. ನಗರದ ಪ್ರತಿಷ್ಠಿತ ಆಸ್ಪತ್ರೆಗಳು ಮತ್ತು ವೈದ್ಯಕೀಯ ಕಾಲೇಜುಗಳ ವಿದ್ಯಾರ್ಥಿಗಳು, ನರ್ಸಿಂಗ್ ವಿದ್ಯಾರ್ಥಿಗಳು ತಮ್ಮ ವ್ಯಾಪ್ತಿಗೆ ಬರುವ ಸ್ಲಂ ಪ್ರದೇಶಗಳಿಗೆ ಭೇಟಿ ಅಲ್ಲಿನ ಮಕ್ಕಳಿಗೆ ಲಸಿಕೆ ಹಾಕಿಸುವಂತೆ ಜಾಗೃತಿ ಮೂಡಿಸಬೇಕು ಎಂದು ಸೂಚಿಸಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಗುರುತಿಸಿರುವ ಕ್ಲಿಷ್ಟಕರ್ ಪ್ರದೇಶಗಳಲ್ಲಿ ವೈದ್ಯಕೀಯ ಬಿಎಲ್‌ಡಿಇ ಬಿ.ಎಂ. ಪಾಟೀಲ ಹಾಗೂ ಅಲ್ ಅಮೀನ್ ವೈದ್ಯಕೀಯ ಕಾಲೇಜುಗಳ ಸಹಕಾರ ಪಡೆದು, ಲಸಿಕಾ ಅಭಿಯಾನಕ್ಕೆ ಸಂಬಂಧಿಸಿದಂತೆ ಅರಿವು ಮೂಡಿಸಬೇಕು ಎಂದು ಹೇಳಿದರು.
ಜಿಲ್ಲೆಯ ತಜ್ಞ ವೈದ್ಯರು ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಮಕ್ಕಳಿಗೆ ತಮ್ಮ ಲಸಿಕೆಯ ಜೊತೆ ಕೇಂದ್ರ ಸರ್ಕಾರದ ಲಸಿಕಾ ವೇಳಾಪಟ್ಟಿಯನ್ನು ತಮ್ಮ ಆಸ್ಪತ್ರೆಗಳಲ್ಲಿ ಬಿತ್ತರಿಸಬೇಕು. ತಮ್ಮ ಆಸ್ಪತ್ರೆಗೆ ಬರುವ ಮಕ್ಕಳ ಪಾಲಕರಿಗೆ ಲಸಿಕೆ ಕುರಿತು ಮಾಹಿತಿ ನೀಡಿ, ಅಪಾಯದ ಅಂಚಿನ ಪ್ರದೇಶದ ಮಕ್ಕಳ ಪಾಲಕರಿಗೆ ವಿಶೇಷವಾಗಿ ಮಾಹಿತಿ ನೀಡಬೇಕು. ಎಇಎಫ್‌ಐ ಪ್ರಕರಣಗಳನ್ನು ಅವಶ್ಯಕತೆ ತಕ್ಕಂತೆ ನಿರ್ವಹಿಸಿ ಸದರಿ ಪ್ರಕರಣಗಳನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಾರ್ಯಾಲಯಕ್ಕೆ ಮಾಹಿತಿ ನೀಡಬೇಕು ಎಂದು ಹೇಳಿದರು. ಬಸ್ ನಿಲ್ದಾಣದಲ್ಲಿ ಪ್ರಚಾರ ಕೈಗೊಳ್ಳಬೇಕು. ನಗರದ ಬಸ್‌ಗಳಿಗೆ ಲಸಿಕಾ ಅಭಿಯಾನದ ಭಿತ್ತಿಪತ್ರಗಳನ್ನು ಅಂಟಿಸಬೇಕು. ಎಲ್ಲ ಶಾಲಾ ಕಾಲೇಜಗಳಲ್ಲಿ ಈ ಕುರಿತು ಸೂಕ್ತ ಜಾಗೃತಿ ಮೂಡಿಸುವ ಜೊತೆಗೆ, ಶಾಲೆಗಳಲ್ಲೂ ಕೇಂದ್ರ ತೆರೆಯಲು ಅವಕಾಶ ಕಲ್ಪಿಸಲು ಡಿಸಿಪಿಐ ಅವರು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ಉಳಿದಂತೆ ಸರ್ಕಾರೇತರ ಸಂಘ-ಸಂಸ್ಥೆಗಳು ತಮ್ಮ ವ್ಯಾಪ್ತಿಗೆ ಬರುವಂತಹ ನಗರದ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸಹಕಾರದೊಂದಿಗೆ ಹಾಗೂ ಧಾರ್ಮಿಕ ಮುಖಂಡರು ಒಳಗೊಂಡಂತೆ ಸಭೆ ನಡೆಸಿ ಕಾರ್ಯಕ್ರಮ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸಹಕಾರ ನೀಡುವಂತೆ ತಿಳಿಸಿದರು. ಜಿಪಂ ಸಿಇಒ ಸುಂದೇಶಬಾಬು, ನಗರಪಾಲಿಕೆ ಆಯುಕ್ತ ಹರ್ಷ ಶಟ್ಟಿ ಇದ್ದರು.
ನಗರದ ಎಲ್ಲ ಅಂಗನವಾಡಿ ಮೇಲ್ವಿಚಾರಕರು ಅಭಿಯಾನದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ತಮಗೆ ಸಂಬಂಧಿಸಿದ ಕೇಂದ್ರಗಳಲ್ಲೇ ಲಸಿಕೆ ವಿತರಣೆಗೆ ವ್ಯವಸ್ಥೆ ಮಾಡಿ, ಮಕ್ಕಳನ್ನು ಕೇಂದ್ರಕ್ಕೆ ಕರೆತರಲು ಕಾರ್ಯಕರ್ತೆಯರನ್ನು ನಿಯೋಜಿಸಬೇಕು. ಸಿಡಿಪಿಒ ಅವರು ತಾಲೂಕು ಆರೋಗ್ಯಾ ಧಿಕಾರಿಗಳೊಡನೆ ಸಮಾಲೋಚಿಸಿ ಸದರಿ ಕಾರ್ಯಕ್ರಮಕ್ಕೆ ಮೇಲ್ವಿಚಾರಣೆ ಮಾಡಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಎಸ್.ಬಿ. ಶೆಟ್ಟೆಣ್ಣವರ ಸೂಚನೆ ನೀಡಿದರು.