Advertisement
ಹೌದು, ರಾಜ್ಯದ ಅತ್ಯುನ್ನತ ಹುದ್ದೆಯ ಹೊಣೆಗಾರಿಕೆ ವಹಿಸಿಕೊಂಡಿರುವ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ಅವರ ತಾಯಿ ಕಾರ್ಕಳದವರು. ಸರ್ಕಾರದ ಅಧಿಕೃತ ವೆಬ್‌ಸೈಟ್‌ನಲ್ಲಿ ದಾಖಲಾಗಿರುವ ರತ್ನಪ್ರಭ ಅವರ ವೈಯಕ್ತಿಕ ವಿವರದ ಪೈಕಿ ಅವರಿಗೆ ಗೊತ್ತಿರುವ ಭಾಷೆಗಳಲ್ಲಿ ಕೊಂಕಣಿಯೂ ಸೇರಿದೆ.
Related Articles
Advertisement
ಕರಾವಳಿಯ ನಿಕಟ ಸಂಪರ್ಕ: ತಾಯಿ ವಿಮಲಾ ಅವರು ಮಂಗಳೂರು, ಪುತ್ತೂರು, ಕಾರ್ಕಳ ಮೊದಲಾದ ಕಡೆ ವೈದ್ಯೆಯಾಗಿ ಸೇವೆ ಸಲ್ಲಿಸಿದ್ದರಿಂದ ಆ ಊರುಗಳ ಸಂಪರ್ಕವೂ ರತ್ನಪ್ರಭಾ ಅವರಿಗಿದೆ. ವಿಮಲಾ ಅವರು ಮಂಗಳೂರಿನ ಲೇಡಿ ಗೋಶನ್‌ನಲ್ಲಿಯೂ ವೈದ್ಯೆಯಾಗಿ ಸೇವೆ ಸಲ್ಲಿಸಿದ್ದು ಸ್ಕಿನ್ ಸ್ಪೆಷಲಿಸ್ಟ್ ಆಗಿದ್ದರು.
2016 ರಲ್ಲಿ ತಾಯಿ ತೀರಿಕೊಂಡಾಗ ಕೊನೆಯ ಬಾರಿ ರತ್ನಪ್ರಭಾ ಅವರು ಕಾರ್ಕಳಕ್ಕೆ ಭೇಟಿ ನೀಡಿದ್ದರು. ರತ್ನಪ್ರಭಾ ಅವರಿಗೆ ಕಾರ್ಕಳ ಇಷ್ಟವಾದ ತಾಣ, ಕಾರ್ಕಳದಲ್ಲಿರುವ ಪೂರ್ವಜರ ಮನೆ, ವಾತಾವರಣ ಎಲ್ಲವೂ ಅವರಿಗೆ ಅಚ್ಚು-ಮೆಚ್ಚು ಎಂದು ಪ್ರಸ್ತುತ ಬೆಂಗಳೂರಿನಲ್ಲಿರುವ ಕಾರ್ಕಳದ ದಿ|ಸದಾನಂದ ಕಾಮತ್ ಕುಟುಂಬ ಸದಸ್ಯರು ತಿಳಿಸುತ್ತಾರೆ.
ಕೊಂಕಣಿ ಅಂದ್ರೆ ಇಷ್ಟ: ರತ್ನಪ್ರಭಾ ಅವರಿಗೆ ಕೊಂಕಣಿ ಎಂದರೆ ಇಷ್ಟ .ಮನೆ ಭಾಷೆ ಕೊಂಕಣಿಯಾದ್ದರಿಂದ ಭಾಷೆಯ ಮೇಲೆ ಅಭಿಮಾನ ಜಾಸ್ತಿ. ಆಂಧ್ರಮೂಲದ ಹುಡುಗನನ್ನು ವರಿಸಿದ್ದರೂ, ಕೊಂಕಣಿ ಭಾಷೆ ಹಾಗೂ ಊರಿನ ವ್ಯಾಮೋಹದಿಂದ ತಮ್ಮ ಮಗ, ಮಗಳಿಗೂ ಕೊಂಕಣಿ ಕಲಿಸಿದ್ದಾರೆ. ಭಾಷಾ ಪ್ರೇಮವನ್ನೂ ಉಳಿಸಿಕೊಂಡಿದ್ದಾರೆ. ಅಲ್ಲದೇ ಟೆನ್ನಿಸ್‌ನಲ್ಲಿಯೂ ಅವರು ಪ್ರವೀಣೆಯಾಗಿದ್ದರು ಎಂದು ಸದಾನಂದ ಕಾಮತ್ ಕುಟುಂಬ ಸದಸ್ಯರು ಹೇಳುತ್ತಾರೆ.
ಮಹಿಳಾ ಕಾಳಜಿ ಹಾಗೂ ಜನಸ್ನೇಹಿ ಅಧಿಕಾರಿ: ಸಾಮಾನ್ಯವಾಗಿ ನೂತನ ಮುಖ್ಯ ಕಾರ್ಯದರ್ಶಿಯಾಗಿ ನೇಮಕಗೊಂಡರೆ ಐಐಎಸ್ ಹಾಗೂ ಐಪಿಎಸ್ ಅಧಿಕಾರಿಗಳು ಶುಭ ಕೋರುವುದು ಸಹಜ. ಆದರೆ, ರತ್ನಪ್ರಭಾ ಅವರು ಮುಖ್ಯ ಕಾರ್ಯದರ್ಶಿ ಹುದ್ದೆಗೆ ನೇಮಕಗೊಂಡ ಆದೇಶ ಹೊರಬೀಳುತ್ತಿದ್ದಂತೆ ಮಹಿಳಾ ಸಂಘಟನೆಗಳು, ನಾಗರಿಕ ಸಂಘಟನೆಗಳು, ಸೇವಾ ಸಂಸ್ಥೆಗಳ ಪ್ರತಿನಿಧಿಗಳು ವಿಧಾನಸೌಧಕ್ಕೆ ಆಗಮಿಸಿ ರತ್ನಪ್ರಭಾ ಅವರಿಗೆ ಶುಭಕೋರುತ್ತಿರುವುದು ವಿಶೇಷ.
ಜಿಲ್ಲಾಧಿಕಾರಿಗಳಾಗಿದ್ದ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಸಾಕ್ಷರತೆ ಬಗ್ಗೆ ಹೆಚ್ಚು ಒತ್ತು ನೀಡಿದ್ದ ರತ್ನಪ್ರಭಾ ಅವರು ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿಯೂ ಸೈ ಎನಿಸಿಕೊಂಡವರು. ಐಎಎಸ್ ವಲಯದಲ್ಲಿಯೂ ರತ್ನಪ್ರಭಾ ಅವರು ದಕ್ಷತೆ, ಸರಳ ಹಾಗೂ ಜನಸ್ನೇಹಿ ಅಧಿಕಾರಿ ಎಂದೇ ಗುರುತಿಸಿಕೊಂಡಿದ್ದಾರೆ.
* ಪ್ರಸಾದ್ ಶೆಣೈ ಕಾರ್ಕಳ