1991ರ ಜೂ.25ರಂದು ತಮಿಳುನಾಡಿಗೆ ವಾರ್ಷಿಕ ಇಂತಿಷ್ಟು ನೀರು ಬಿಡಬೇಕೆಂದು ಕಾವೇರಿ ನ್ಯಾಯಾಧಿಕರಣ ಆದೇಶಿಸಿತ್ತು. ಇದನ್ನು ವಿರೋಧಿಸಿ ಅಂದಿನ ಸಿಎಂ ಎಸ್. ಬಂಗಾರಪ್ಪ ನೇತೃತ್ವದ ಸರಕಾರ ಅಧ್ಯಾದೇಶ ಮೂಲಕ ಕರ್ನಾಟಕದ ರಕ್ಷಣೆಗೆ ನಿಂತರು. ಕರ್ನಾಟಕ ಮೂಲದವರೇ ಆದ ಅಂದಿನ ತಮಿಳುನಾಡು ಸಿಎಂ ಜಯಲಲಿತಾ ನೇತೃತ್ವದ ಸರಕಾರ ಇದರ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದಾಗ ಕರ್ನಾಟಕಕ್ಕೆ ಹಿನ್ನಡೆ ಆಗಿತ್ತು. ನ್ಯಾಯಾಧಿಕರಣ ಕೊಟ್ಟ ತೀರ್ಪನ್ನು 1991 ಡಿ.11ರಂದು ಕೇಂದ್ರ ಸರಕಾರ ಅಧಿಸೂಚಿಸಿದ್ದರಿಂದ ಹೋರಾಟಗಾರರು ಕೆರಳಿ ಕೆಂಡವಾಗಿದ್ದರು. ಬೆಂಗಳೂರಿನಲ್ಲಂತೂ ಹೋರಾಟದ ಕಿಚ್ಚು ಹೆಚ್ಚಿತ್ತಲ್ಲದೆ, ಕನ್ನಡಿಗರು ಹಾಗೂ ತಮಿಳಿಗರ ನಡುವಿನ ಸಂಘರ್ಷಕ್ಕೆ ಕಾರಣವಾಗಿ ಕರ್ನಾಟಕ ಬಂದ್ ಆಗಿತ್ತು.
Advertisement
ಎಸ್.ಎಂ. ಕೃಷ್ಣ2002ರಲ್ಲಿ ಮಳೆ ಕೊರತೆಯಿಂದ ರಾಜ್ಯದಲ್ಲಿ ಬರಗಾಲವೂ ಇತ್ತು. ಕಾವೇರಿ ಸಂಘರ್ಷವೂ ಜೋರಾಗಿತ್ತು. 2002ರ ಆ.27 ರಂದು ನಡೆದಿದ್ದ ಕಾವೇರಿ ನದಿ ಪ್ರಾಧಿಕಾರದ ಸಭೆಯಿಂದ ತಮಿಳುನಾಡಿನ ಅಂದಿನ ಸಿಎಂ ಜಯಲಲಿತಾ ಹೊರನಡೆದಿದ್ದರಿಂದ ಪ್ರಕರಣ ಸುಪ್ರೀಂ ಕೋರ್ಟ್ ಮುಂದೆ ಬಂದಿತ್ತು. ನಿತ್ಯ 1.25 ಟಿಎಂಸಿ ನೀರು ಬಿಡುವಂತೆ ಸುಪ್ರೀಂ ಕೋರ್ಟ್ ಆದೇಶಿಸಿತ್ತು. 9 ಸಾವಿರ ಕ್ಯುಸೆಕ್ ನೀರು ತಮಿಳುನಾಡಿಗೆ ಹರಿದಿತ್ತು. ಇದರ ವಿರುದ್ಧವೂ ಹೋರಾಟ ನಡೆದಿತ್ತಲ್ಲದೆ, ಮೈಸೂರು ಜಿಲ್ಲೆ ಬೋಚನಹಳ್ಳಿ ಗ್ರಾ.ಪಂ. ಸದಸ್ಯ ಗುರುಸ್ವಾಮಿ ಅವರು ಕಬಿನಿ ನದಿಗೆ ಹಾರಿ ಪ್ರಾಣತ್ಯಾಗ ಮಾಡಿದ್ದರು. ಹೋರಾಟಗಾರರು ಪಾದಯಾತ್ರೆ ನಡೆಸುವ ವೇಳೆ ಕಲ್ಲು ತೂರಾಟವಾಗಿ ಹಿಂಸೆಯ ರೂಪ ಪಡೆದಿತ್ತು.
ಸಿದ್ದರಾಮಯ್ಯ ಅವರು ಮೊದಲ ಬಾರಿಗೆ ಸಿಎಂ ಆಗಿದ್ದಾಗಲೂ ಇಂತ ಹುದೇ ಸವಾಲು ಎದುರಾಗಿತ್ತು. 2016ರ ಆಗಸ್ಟ್‌ನಲ್ಲಿ ನೀರಿಗಾಗಿ ಸುಪ್ರೀಂ ಕೋರ್ಟ್‌ನಲ್ಲಿ ತಮಿಳು
ನಾಡು ಸಲ್ಲಿಸಿದ್ದ ಅರ್ಜಿ ಪುರಸ್ಕೃತ ಗೊಂಡು ನಿತ್ಯ 15 ಸಾವಿರ ಕ್ಯುಸೆಕ್ ನೀರು ಬಿಡಲು ಆದೇಶವಾಗಿತ್ತು. ರಾತೋರಾತ್ರಿ ನೀರು ಹರಿದಿದ್ದರಿಂದ ಹೋರಾಟ ಹಿಂಸೆಗೆ ತಿರುಗಿತ್ತು. ಕೆಆರ್‌ಎಸ್ ಬಳಿ ಹಾಕಿದ್ದ ಬ್ಯಾರಿಕೇಡ್‌ಗಳನ್ನು ಜಲಾಶಯ, ನದಿಗೆ ಎಸೆದು ಪ್ರತಿಭಟಿಸಿದ್ದರು. ಕಂಡಕಂಡಲ್ಲಿ ತಮಿಳುನಾಡಿನ ವಾಹನಗಳಿಗೆ ಕಲ್ಲೆಸೆಯಲಾಗಿತ್ತು. ತಮಿಳುನಾಡಿನಲ್ಲೂ ಕರ್ನಾಟಕದ ವಾಹನಗಳಿಗೆ ತೊಂದರೆಯಾಗಿತ್ತು.