ವಿಧಾನಸಭೆ: “ಕೃಷ್ಣಾ ಕೊಳ್ಳದ ಯೋಜನೆಗಳಿಗೆ ಪ್ರತಿ ವರ್ಷ 10 ಸಾವಿರ ಕೋಟಿ ಕೊಡುತ್ತೇವೆ ಎಂದು ನಾವು
ಹೇಳಿರುವ ಬಗ್ಗೆ ದಾಖಲೆ ಕೊಡಿ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸವಾಲು ಹಾಕಿದ ಪ್ರಸಂಗ ಮಂಗಳವಾರ
ನಡೆಯಿತು.
ಬಜೆಟ್ ಮೇಲಿನ ಚರ್ಚೆ ಸಂದರ್ಭದಲ್ಲಿ ಬಿಜೆಪಿಯ ಗೋವಿಂದ ಕಾರಜೋಳ, ಕೃಷ್ಣಾ ಕೊಳ್ಳದ ಯೋಜನೆಗಳಿಗೆ ಪ್ರತಿ ವರ್ಷ ಹತ್ತು ಸಾವಿರ ಕೋಟಿ ರೂ. ನೀಡುವುದಾಗಿ ಅಧಿಕಾರಕ್ಕೆ ಬಂದು ರಾಜ್ಯ ಸರ್ಕಾರ ಜನರಿಗೆ ಮೋಸ ಮಾಡಿದೆ ಎಂದು ಆರೋಪಿಸಿದಾಗ ಆಕ್ಷೇಪ ವ್ಯಕ್ತಪಡಿಸಿದ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಮುಖ್ಯಮಂತ್ರಿಯವರು ಆ ರೀತಿ ಭರವಸೆ ನೀಡಿರಲಿಲ್ಲ ಎಂದರು.
ಆಗ ಗೋವಿಂದ ಕಾರಜೋಳ, 10 ಸಾವಿರ ಕೋಟಿ ರೂ. ಕೊಡುತ್ತೇನೆಂದು ಸಿದ್ದರಾಮಯ್ಯ ಭರವಸೆ ನೀಡಿದ್ದರು ಈ ಬಗ್ಗೆ ನನ್ನ ಬಳಿ ದಾಖಲೆಗಳಿವೆ ಎಂದರು. ಆಗ ಎದ್ದು ನಿಂತ ಸಿದ್ದರಾಮಯ್ಯ ದಾಖಲೆ ಇದ್ದರೆ ನೀಡಿ ಎಂದು ಸವಾಲು ಹಾಕಿದರು. ನನ್ನ ಬಳಿ ಪೇಪರ್ ಕಟಿಂಗ್ಸ್ ಇದೆ ನೀಡುತ್ತೇನೆ ಎಂದು ಕಾರಜೋಳ ಪ್ರತಿವಾದ ಮಾಡಿದರು. ನಾನು ಮಾತನಾಡಿರುವ ವಿಡಿಯೋ ದಾಖಲೆ ಇದ್ದರೆ ನೀಡಿ, ಸುಮ್ಮನೆ ಸುಳ್ಳಿನ ಮೇಲೆ ಸುಳ್ಳು ಹೇಳುತ್ತ ಜನರನ್ನು ದಾರಿ ತಪ್ಪಿಸುವುದು ಬೇಡ ಎಂದು ಸಿದ್ದರಾಮಯ್ಯ ಹೇಳಿದರು.
ಬಿಜೆಪಿ ಸರ್ಕಾರ ಇದ್ದಾಗ 5 ವರ್ಷದಲ್ಲಿ ನೀರಾವರಿಗಾಗಿ 15 ಸಾವಿರ ಕೋಟಿ ರೂ. ಖರ್ಚು ಮಾಡಿದ್ದರು. ನಮ್ಮ ಸರ್ಕಾರ 5 ವರ್ಷದಲ್ಲಿ 50 ಸಾವಿರ ಕೋಟಿ ರೂ.ಖರ್ಚು ಮಾಡುವುದಾಗಿ ಹೇಳಿದ್ದೆವು. ಅದರಂತೆ ಈಗಾಗಲೇ 46 ಸಾವಿರ ಕೋಟಿ ಖರ್ಚು ಮಾಡಿದೆ. ಅವಧಿ ಮುಗಿಯುವಷ್ಟರಲ್ಲಿ 58 ಸಾವಿರ ಕೋಟಿ ಖರ್ಚು ಮಾಡುತ್ತೇವೆ ಎಂದು ಸಮರ್ಥಿಸಿಕೊಂಡರು.