Advertisement
ಸಾಲ ಮನ್ನಾ ಘೋಷಣೆಯನ್ನು ಹಂತ ಹಂತವಾಗಿ ಜಾರಿಗೊಳಿಸುತ್ತಿರುವ ಜತೆಗೆ ದೀನಬಂಧು, ಹಿರಿಯ ನಾಗರಿಕರಿಗೆ ನೀಡುವ ಮಾಸಾಶನ ಹೆಚ್ಚಿಸುವಂತಹ ಸಾಮಾಜಿಕ ಭದ್ರತಾ ಕಾರ್ಯಕ್ರಮಗಳನ್ನು ಆದ್ಯತೆ ಮೇರೆಗೆ ಜಾರಿಗೊಳಿಸುವಂತೆ ಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾರೆ. ಜತೆಗೆ ಕಲ್ಯಾಣ ಕಾರ್ಯಕ್ರಮಗಳನ್ನು ತ್ವರಿತವಾಗಿ ಜಾರಿಗೊಳಿಸುತ್ತಲೇ ಅಭಿವೃದ್ಧಿ ಕಾರ್ಯಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
Related Articles
Advertisement
ಕಳೆದ ಫೆಬ್ರುವರಿಯಲ್ಲಿ ಮಂಡನೆಯಾದ ಬಜೆಟ್‌ನಲ್ಲಿ 321 ಹಾಗೂ ಜುಲೈನಲ್ಲಿ ಮಂಡಿಸಿದ ಬಜೆಟ್‌ನಲ್ಲಿ 139 ಘೋಷಣೆ ಸೇರಿದಂತೆ ಸರ್ಕಾರ ಒಟ್ಟು 460 ಘೋಷಣೆ ಮಾಡಿದೆ. ಈ ಪೈಕಿ 230 ಘೊಷಣೆ ಸಂಬಂಧ ಆದೇಶ ಹೊರಡಿಸಲಾಗಿದೆ. 117 ಘೋಷಣೆ ಸಂಬಂಧಪಟ್ಟಂತೆ ಆರ್ಥಿಕ ಇಲಾಖೆ ಪರಿಶೀಲನೆ ಹಂತದಲ್ಲಿದೆ. 18 ಘೋಷಣೆ ಕುರಿತಂತೆ ಸಚಿವ ಸಂಪುಟದ ಮುಂದೆ ಕರಡು ಸಲ್ಲಿಕೆಗೆ ಸಿದ್ಧತೆ ಹಂತದಲ್ಲಿದೆ. 11 ಘೋಷಣೆಗಳು ನಿರೂಪಣಾ ಘೋಷಣೆ ಹಂತದಲ್ಲಿವೆ. ಎಲ್ಲ ಘೋಷಣೆಗಳ ಅನುಷ್ಠಾನವು ನಾನಾ ಹಂತದಲ್ಲಿ ಪ್ರತಿಯಲ್ಲಿವೆ ಎಂದು ತಿಳಿಸಿದರು.
ಕೆಲವರು ಸರ್ಕಾರ ಇನ್ನೂ ಟೇಕ್ ಆಫ್ ಆಗಿಲ್ಲ ಎನ್ನುತ್ತಿದ್ದಾರೆ. ವಾಸ್ತವವಾಗಿ ಹಿಂದಿನ ಸರ್ಕಾರಗಳಿಗೆ ಹೋಲಿಸಿದರೆ ಕಾರ್ಯಕ್ರಮಗಳನ್ನು ಆದ್ಯತೆ ಮೇರೆಗೆ ಸಮರ್ಪಕವಾಗಿ ಕಾಲಮಿತಿಯೊಳಗೆ ಜಾರಿಗೊಳಿಸುವ ಕಾರ್ಯದಲ್ಲಿ ಮುನ್ನಡೆಯುತ್ತಿದ್ದೇವೆ. ಆಗಸ್ಟ್ ಅಂತ್ಯದವರೆಗೆ ಶೇ.26ರಷ್ಟು ಆರ್ಥಿಕ ಪ್ರಗತಿ ಸಾಧಿಸಿದ್ದೇವೆ. ಕಳೆದ ವರ್ಷ ಇದೇ ಅವಧಿಗೆ ಶೇ.27ರಷ್ಟು ಆರ್ಥಿಕ ಪ್ರಗತಿ ಸಾಧನೆಯಾಗಿತ್ತು. ಚುನಾವಣೆ ಹಿನ್ನೆಲೆಯಲ್ಲಿ ಸ್ವಲ್ಪ ವಿಳಂಬವಾಗಿದ್ದರೂ ನಂತರ ಘೋಷಣೆಗಳ ಜಾರಿ ಪ್ರಕ್ರಿಯೆ ಚುರುಕಾಗಿ ನಡೆದಿದೆ ಎಂದು ಹೇಳಿದರು.
ತೆರಿಗೆ ಸಂಗ್ರಹದಲ್ಲಿ ಶೇ.34ರಷ್ಟು ಬೆಳವಣಿಗೆ ಸಾಧಿಸಲಾಗಿದೆ. ಜಿಎಸ್‌ಟಿ ಜಾರಿ ಬಳಿಕ ರಾಜ್ಯ ಸರ್ಕಾರಕ್ಕೆ ಕೇವಲ ನಾಲ್ಕು ತೆರಿಗೆ ಮೂಲಗಳಷ್ಟೇ ಇದ್ದು, ಆಗಸ್ಟ್ 1ರಿಂದ ತೆರಿಗೆ ಸಂಗ್ರಹ ಹೆಚ್ಚಾಗಿದೆ. ಸಾಲ ಮನ್ನಾಗೂ ಆಯವ್ಯಯ ಕಾರ್ಯಕ್ರಮಗಳ ಅನುದಾನಕ್ಕೂ ಸಂಬಂಧವಿಲ್ಲ. ರಾಷ್ಟ್ರೀಕೃತ ಬ್ಯಾಂಕ್‌ಗಳ ಸಾಲ ಮನ್ನಾಗೆಂದು ಬಜೆಟ್‌ನಲ್ಲಿ 6,500 ಕೋಟಿ ರೂ. ಕಾಯ್ದಿರಿಸಲಾಗಿದೆ. ಪೂರ್ಣಗೊಂಡ ಕಾಮಗಾರಿಗಳಿಗೆ ಸುಮಾರು 2,000- 3,000 ಕೋಟಿ ರೂ. ಬಿಲ್ ಪಾವತಿ ಬಾಕಿ ಇದ್ದು, ಹಿಂದಿನಿಂದಲೂ ನಡೆದುಬಂದಿದೆ. ತ್ವರಿತವಾಗಿ ಬಾಕಿ ಬಿಲ್ ಪಾವತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರತಿಕ್ರಿಯಿಸಿದರು.
ಉದ್ಯೋಗ ಮೇಳಜನತಾ ದರ್ಶನದಲ್ಲಿ 2335 ತಾಂತ್ರಿಕೇತರ ಉದ್ಯೋಗಾಕಾಂಕ್ಷಿಗಳು, 863 ತಾಂತ್ರಿಕ ಉದ್ಯೋಗಕಾಂಕ್ಷಿಗಳು ಸೇರಿದಂತೆ ಒಟ್ಟು 3,198 ಉದ್ಯೋಗಾಕಾಂಕ್ಷಿಗಳು ಮನವಿ ಸಲ್ಲಿಸಿದ್ದಾರೆ. ಬೆಂಗಳೂರು ನಗರ ಜಿಲ್ಲಾಧಿಕಾರಿ ಹಾಗೂ ಗ್ರಾಮಾಂತರ ಜಿಲ್ಲಾಧಿಕಾರಿಗಳು ಶನಿವಾರ ಹಾಗೂ ಭಾನುವಾರ ಬೆಂಗಳೂರಿನಲ್ಲಿ ಉದ್ಯೋಗ ಮೇಳ ಆಯೋಜಿಸಿದ್ದಾರೆ. ಮೇಳದಲ್ಲಿ 3,198 ಮಂದಿಗೆ ಮೊದಲ ಹಂತದಲ್ಲಿ ಉದ್ಯೋಗ ಕಲ್ಪಿಸಲು ಒಡಂಬಡಿಕೆ ಮಾಡಿಕೊಳ್ಳಲಾಗುವುದು. ಜತೆಗೆ ಮೇಳದಲ್ಲಿ ಅರ್ಜಿ ಸಲ್ಲಿಸುವವರಿಗೆ ಕೌಶಲ್ಯಾಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಉದ್ಯೋಗ ಕಲ್ಪಿಸಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.