ಬೆಂಗಳೂರು: ಅಖೀಲ ಭಾರತ ವೀರಶೈವ ಲಿಂಗಾಯಿತ ಮತ್ತು ಕ್ರಾಂತಿ ಯೋಗಿ ಬಸವಣ್ಣ ಜಂಟಿ ಪ್ರಚಾರ ಸಮಿತಿ ಪದಾಧಿಕಾರಿಗಳು, ಸದಸ್ಯರು ದಾಸರಹಳ್ಳಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ಮುನಿರಾಜು ಅವರಿಗೆ ಲಿಖೀತ ಪತ್ರದ ಮೂಲಕ ಬೆಂಬಲ ವ್ಯಕ್ತಪಡಿಸಿದ್ದಾರೆ.
ಈ ಮೂಲಕ ಮೇ 12ರಂದು ನಡೆಯಲಿರುವ ಚುನಾವಣೆಯಲ್ಲಿ ಪ್ರಚಾರ ಸಮಿತಿಯು ಮುನಿರಾಜು ಅವರ ಗೆಲುವಿಗೆ ಶ್ರಮಿಸಲಿದೆ ಎಂದು ಭರವಸೆ ನೀಡಿದ್ದಾರೆ. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಹಾಗೂ ಬಿಜೆಪಿ ಅಭ್ಯರ್ಥಿ ಎಸ್.ಮುನಿರಾಜು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸೋಲಿನ ಭೀತಿ ಕಾಡುತ್ತಿದೆ. ಹೀಗಾಗಿ ಧರ್ಮ, ಜಾತಿಗಳನ್ನು ಒಡೆಯುವ ಮೂಲಕ ಕ್ಷುಲ್ಲಕ ರಾಜಕಾರಣ ಮಾಡುತ್ತಿದ್ದಾರೆ,’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವೀರಶೈವ ಬೇರೆ, ಲಿಂಗಾಯಿತ ಬೇರೆ ಎಂದು ಜಾತಿ ಜಾತಿಗಳ ನಡುವೆ ಒಡಕು ತಂದೊಡ್ಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂದ್ರೆಸ್ ಮುಖಂಡರು, ಹಿಂದುಗಳಲ್ಲೇ ವೈಷಮ್ಯದ ಬೀಜ ಬಿತ್ತಿದ್ದಾರೆ. ಅವರಿಗೆ ರಾಜ್ಯದ ಮತದಾರು ಈ ಬಾರಿಯ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರ ಉತ್ತಮ ಆಡಳಿತ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರ ಸಮರ್ಥ ನಾಯಕತ್ವವನ್ನು ಬೆಂಬಲಿಸಿ ಕ್ಷೇತ್ರದಲ್ಲಿ ಎಲ್ಲ ಸಮುದಾಯದ ಜನತೆ ನನಗೆ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಇದುವೇ ನನ್ನ ಗೆಲುವಿಗೆ ಶ್ರೀರಕ್ಷೆಯಾಗಲಿದೆ,’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜಂಟಿ ಪ್ರಚಾರ ಸಮಿತಿ ಅಧ್ಯಕ್ಷ ಹುಲಿಕಲ್ ಶಿವಲಿಂಗಯ್ಯ ಮಾತನಾಡಿ, ವೀರಶೈವ ಲಿಂಗಾಯಿತ ಬೇರೆ ಬೇರೆ ಎನ್ನದೇ ಎಲ್ಲರೂ ಒಗ್ಗೂಡಿ ಮುನಿರಾಜು ಅವರ ಗೆಲುವಿಗೆ ಶ್ರಮಿಸಿ, ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡುವುದೇ ನಮ್ಮ ಗುರಿ. ಮುನಿರಾಜು ಅವರು ಈಗಾಗಲೇ ಎರಡೂ ಬಾರಿ ಶಾಸಕರಾಗಿ ಕ್ಷೇತ್ರದ ಜನತೆಗೆ ಚಿರಪರಿಚಿತರಾಗಿದ್ದಾರೆ. ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿ ಎಲ್ಲ ಸಮುದಾಯದ ಜನರ ವಿಶ್ವಾಸ ಗಳಿಸಿದ್ದಾರೆ.
ಹೀಗಾಗಿ ಮುನಿರಾಜು ಅವರಿಗೆ ಬೆಂಬಲ ವ್ಯಕ್ತಪಡಿಸುತ್ತಿದ್ದೇವೆ ಎಂದು ತಿಳಿಸಿದರು. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭಾರತ ಇಡೀ ವಿಶ್ವದ ಗಮನ ಸೆಳೆದಿದೆ. ಅವರ ಪಕ್ಷಕ್ಕೆ ಬೆಂಬಲ ಸೂಚಿಸಿದರೆ ಮುಂದಿನ ದಿನಗಳಲ್ಲೂ ರಾಜ್ಯದಲ್ಲಿ ಉತ್ತಮ ಕೆಲಸಗಳು ನಡೆಯುತ್ತವೆ ಎಂದರು.