ಯಾದಗಿರಿ: ನೀವು ನಂಬಲೇ ಬೇಕು. ಇಲ್ಲಿ ಎಷ್ಟೇ ಶ್ರೀಮಂತರಿದ್ದರೂ ಈ ಊರಿನಲ್ಲಿ ಯಾರೊಬ್ಬರೂ ಮಂಚ ಬಳಸಲ್ಲ, ಕೋಳಿಯನ್ನೂ ಸಾಕಲ್ಲ, ಆಜಾನ್ ಕೇಳಲ್ಲ, ಹೆಣಕ್ಕೆ ಶೃಂಗಾರ ಮಾಡಲ್ಲ, ಇನ್ನು ಕುಂಬಾರರು ಗಡಿಗೆ ಮಾಡುವ ಸಪ್ಪಳವೂ ಊರಿನಿಂದಾಚೆಗಷ್ಟೆ….! ಹೌದು, ಇಷ್ಟೆಲ್ಲ ಕಟ್ಟುನಿಟ್ಟಿನ ಆಚರಣೆ ಇರುವುದು ರಾಜ್ಯದ ಗಡಿ ಯಾದಗಿರಿ ಜಿಲ್ಲಾ ಕೇಂದ್ರದಿಂದ 15 ಕಿ.ಮೀ. ದೂರದ ಮೈಲಾಪೂರದಲ್ಲಿ.
ಯಾದಗಿರಿ ತಾಲೂ ಕಿನ ಮೈಲಾಪೂರದ ಗ್ರಾಮಸ್ಥರು ಇಂದಿಗೂ ಪೂರ್ವಜರ ಸಂಪ್ರದಾ ಯವನ್ನು ಪಾಲಿಸು ತ್ತಿರುವುದು ವಿಶೇಷ. ಗ್ರಾಮದ ಅಧಿಪತಿ ಮೈಲಾರ ಲಿಂಗೇಶ್ವರನು ಗದ್ದುಗೆ ಮೇಲೆ ಕೂತಿರುವುದರಿಂದ ಇಲ್ಲಿ ಅದೆಷ್ಟೇ ಶ್ರೀಮಂತರು, ಬಡವರೇ ಇರಲಿ, ಮಂಚ ಬಳಸುವುದನ್ನು ನಿಷೇಧಿಸಲಾಗಿದೆ.
ಮೈಲಾರಲಿಂಗಪ್ಪನೇ ಅಧಿಪತಿಯಾಗಿ ಮೊದಲು ಪೂಜಿಸಲ್ಪಡುವ ಗ್ರಾಮದಲ್ಲಿ ಇತರೆ ದೇವರ ದೇವಸ್ಥಾನಗಳೂ ಗ್ರಾಮದಲ್ಲಿಲ್ಲ. ಮಲ್ಲಯ್ಯನ ತಾಯಿ ಬನ್ನಿ ಮಾಳಮ್ಮ, ಮಡದಿಯರಾದ ತುರಂಗಿ ಬಾಲಮ್ಮ, ಗಂಗಿ ಮಾಳಮ್ಮರ ದೇವಸ್ಥಾನಗಳು ಮೈಲಾರಲಿಂಗೇಶ್ವರ ದೇವಸ್ಥಾನದ ಆವರಣಲ್ಲಿಯೇ ಇವೆ. ಗ್ರಾಮದ ಹೊರವಲಯದಲ್ಲಿ ಆಂಜನೇಯ ದೇವಸ್ಥಾನ ಒಂದಿದೆ ಎನ್ನುತ್ತಾರೆ ಗ್ರಾಮಸ್ಥರು.
ಕೋಳಿ ಸಾಕಲ್ಲ: ಇನ್ನು ಗ್ರಾಮದಲ್ಲಿ ಯಾರೂ ಕೋಳಿ ಸಾಕಲ್ಲ, ಗ್ರಾಮದಲ್ಲಿ ಕುಂಬಾರರಿದ್ದರೂ ಗ್ರಾಮದ ಸೀಮೆ ಹೊರಗಡೆ ಗಡಿಗೆ ತಯಾರಿಸುತ್ತಾರೆ. ಅದೇಕೆ ಹಾಗೇ ಎಂದು ವಿಚಾರಿಸಿದರೆ, ಮೈಲಾರಲಿಂಗೇಶ್ವರನಿಗೆ ಕೋಳಿ ಕೂಗುವ ಕೂಗು ಕೇಳಬಾರದು. ಹೀಗಾಗಿ ಇಲ್ಲಿ ಕೋಳಿ ಸಾಕದೇ ಇರುವುದು ಪೂರ್ವಜರಿಂದ ನಡೆದು ಬಂದ ವಾಡಿಕೆಯಾಗಿದೆ ಎನ್ನುವ ಉತ್ತರ ಸಿಗುತ್ತದೆ. ಇನ್ನು ಗಡಿಗೆ ಶಬ್ದವೂ ದೇವರಿಗೆ ಕೇಳಬಾರದು ಎಂದು ಗಡಿಗೆಯನ್ನು ಗ್ರಾಮದ ಹೊರಗಡೆ ತಯಾರಿಸುತ್ತಾರೆ.
ಗ್ರಾಮದಲ್ಲಿ ಯಾರಾದರೂ ಸತ್ತರೂ ಕೂಡ ಶ್ರೀಮಂತರು, ಬಡವರು ಎನ್ನುವ ಭೇದವಿಲ್ಲದೇ ಹೆಣಕ್ಕೆ ಶೃಂಗಾರ ಮಾಡುವ ನಿಯಮವೂ ಇಲ್ಲ. ತೀರಿ ಹೋದರೆ ಸರಳವಾಗಿ ಕಟ್ಟಿಗೆಗಳನ್ನು ಕಟ್ಟಿ ಅದರ ಮೇಲೆ ಗೋಣಿ ಚೀಲ ಹಾಕಿ ಶವಸಂಸ್ಕಾರ ಮಾಡುವುದು ಇಲ್ಲಿ ನಡೆದು ಬಂದ ಪದ್ಧತಿ. ಅಲ್ಲದೇ ದೇವರಿಗೆ ಅಜಾನ್ ಶಬ್ದವೂ ಕೇಳಬಾರದು ಎಂಬ ನಿಯಮವೂ ಪಾಲನೆಯಲ್ಲಿರುವುದರಿಂದ ಇಲ್ಲಿ ಮುಸ್ಲಿಂ ಕುಟುಂಬಗಳೇ ವಾಸವಾಗಿಲ್ಲ.
ನಮ್ಮ ಗ್ರಾಮದಲ್ಲಿ ಹಿಂದಿನಿಂದಲೂ ಯಾರೂ ಮಂಚ ಬಳಸಲ್ಲ, ಕೋಳಿಯನ್ನೂ ಸಾಕಲ್ಲ, ಆಜಾನ್ ಶಬ್ಧ, ಗಡಿಗೆ ಮಾಡುವ ಸಪ್ಪಳವೂ ಮೈಲಾರಲಿಂಗೇಶ್ವರನಿಗೆ ಕೇಳಬಾರದು ಎಂದು ಪೂರ್ವಜರಿಂದ ನಡೆದು ಬಂದ ಸಂಪ್ರದಾಯವನ್ನು ಪಾಲಿಸುತ್ತಿದ್ದೇವೆ.
-ನರಸಮ್ಮ, ಸ್ಥಳೀಯ ಅಜ್ಜಿ
* ಅನೀಲ ಬಸೂದೆ