ಆಟೋದಿಂದ ಜಿಗಿದು, ಶರವೇಗದಲ್ಲಿ ರೈಲು ನಿಲ್ದಾಣದ ಟಿಕೆಟ್ ಕೌಂಟರ್ ತಲುಪಿದೆ. ತುಮಕೂರಿಗೆ ಟಿಕೆಟ್ ಕೊಡಿ ಎಂದು ಏದುಸಿರು ಬಿಡುತ್ತಾ ಹೇಳಿ, ಕಡೆಗೂ ಟಿಕೆಟ್ ಪಡೆದು ಪ್ಲಾಟ್‌ಫಾರಂಗೆ ಓಡಿ ಬಂದರೆ, ಜೋರಾಗಿ ಶಿಳ್ಳೆ ಹಾಕುತ್ತಾ ರೈಲು ಹೋಗಿಯೇಬಿಟ್ಟಿತು…
ಏಳು ವರ್ಷಗಳ ಹಿಂದಿನ ಮಾತು. ನಾನಾಗ ವಿಜಯಪುರದಲ್ಲಿ ಪಿಯುಸಿ ಓದುತ್ತಿದ್ದೆ. ಒಂದು ದಿನ ಕಾಲೇಜಿನಿಂದ ಮನೆಗೆ ಬಂದಾಗ ನನ್ನ ತಂದೆ, “ನಿಮ್ಮ ಹೈಸ್ಕೂಲಿನ ಮುಖ್ಯೋಪಾಧ್ಯಾಯರು ಫೋನ್ ಮಾಡಿದ್ದರು. ನೀನು ಬಂದ ತಕ್ಷಣ ವಾಪಸ್ಸು ಕರೆಮಾಡಬೇಕೆಂದು ತಿಳಿಸಿದ್ದಾರೆ’ ಎಂದರು. ನಾನು ಹೈಸ್ಕೂಲು ಮುಗಿಸಿದ್ದು ತುಮಕೂರಿನ ಸಿದ್ಧಗಂಗಾಮಠದಲ್ಲಿ. ತಂದೆಯ ನಂಬರ್ ಮುಖ್ಯೋಪಾಧ್ಯಯರಿಗೆ ಹೇಗೆ ಸಿಕ್ಕಿತು ಎಂದು ಆಶ್ಚರ್ಯದಿಂದ ಅವರಿಗೆ ಕರೆ ಮಾಡಿದಾಗ ಅವರು ನನಗೊಂದು ಸಿಹಿಸುದ್ದಿ ನೀಡಿದರು. ಹೈಸ್ಕೂಲಿನಲ್ಲಿ ಡಿಸ್ಟಿಂಕ್ಷನ್‌ನಲ್ಲಿ ಪಾಸಾಗಿದ್ದರಿಂದ ಯಾವುದೋ ಸಂಘ ಸಂಸ್ಥೆಯವರು ಒಂದು ಸಾವಿರ ರೂ.ಗಳ ಚೆಕ್ ನೀಡಿದ್ದಾರೆಂದು ತಿಳಿಸಿದರು. ಅದನ್ನು ಕೇಳಿ ನನಗೆ ಲಡ್ಡು ಬಂದು ಬಾಯಿಗೆ ಬಿದ್ದಷ್ಟೇ ಖುಷಿಯಾಯಿತು.
ನಮ್ಮ ಗುರುಗಳು ಮಾತು ಮುಂದುವರಿಸುತ್ತಾ, “ಕಳೆದ ಮೂರು ತಿಂಗಳಿಂದ ನಿನ್ನನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದೆವು. ಆದರೆ ನಮ್ಮ ಹತ್ತಿರ ನಿನ್ನ ಮೊಬೈಲ್ ನಂಬರ್ ಇರಲಿಲ್ಲ. ನಿನ್ನೆ ಅಚಾನಕ್ಕಾಗಿ ಶಾಲೆಗೆ ಬಂದಿದ್ದ ನಿನ್ನ ಗೆಳೆಯನಿಂದ ನಿನ್ನ ತಂದೆಯ ನಂಬರ್ ಸಿಕ್ಕಿತು. ಸಂಘದವರು ನಿನಗೆ ಕೊಟ್ಟಿರುವ ಚೆಕ್ ಶಾಲೆಗೆ ಬಂದು ಸುಮಾರು ಮೂರು ತಿಂಗಳಾದವು. ನಾಳೆಯೇ ಚೆಕ್‌ನ ಅವಧಿಯ ಕೊನೆಯ ದಿನ. ನೀನು ನಾಳೆಯೇ ಬಂದು ಚೆಕ್ ತೆಗೆದುಕೊಂಡು ಹೋಗು’ ಎಂದಾಗ ಒಂದು ಕ್ಷಣ ಏನು ಮಾತನಾಡಬೇಕೆಂದು ಗೊತ್ತಾಗದೇ ಬೆಪ್ಪನಾಗಿ “ಆಯ್ತು ಸರ್’ ಅಂತ ಹೇಳಿ ಫೋನ್ ಕಟ್ ಮಾಡಿದೆ.
ಈ ವಿಷಯವನ್ನು ತಂದೆಗೆ ತಿಳಿಸಿದೆ. ನನ್ನ ಪ್ರಕಾರ ಇದು ಅಸಾಧ್ಯದ ಮಾತಾಗಿತ್ತು. ಏಕೆಂದರೆ ವಿಜಯಪುರದಿಂದ ತುಮಕೂರಿಗೆ ಹೋಗಲು ಸುಮಾರು 15 ಗಂಟೆ ರೈಲುಪ್ರಯಾಣ ಮಾಡಬೇಕಿತ್ತು. ಅಷ್ಟೇ ಅಲ್ಲದೆ ಅಲ್ಲಿಗೆ ಹೋಗಿ ಬರಲು ಪ್ರಯಾಣ ದರ, ಊಟ ಸೇರಿದಂತೆ ಸುಮಾರು 600 ರೂಪಾಯಿ ಖರ್ಚಾಗುತ್ತಿತ್ತು. ಅದರಲ್ಲೂ ದೀರ್ಘಪ್ರಯಾಣ ಬೇರೆ. ನಾನು ಅಲ್ಲಿಗೆ ಹೋಗುವುದರಿಂದ ಯಾವುದೇ ಪ್ರಯೋಜನವಿಲ್ಲ ಎಂದು ಸಮಜಾಯಿಷಿ ನೀಡಿದೆ. ಆದರೆ ಹಣದ ವಿಷಯದಲ್ಲಿ ನಮ್ಮ ತಂದೆ ತುಂಬಾ ಕಟ್ಟುನಿಟ್ಟು. ಅಲ್ಲಿ ಹೋಗಿ ನೀನು ಚೆಕ್ ತೆಗೆದುಕೊಂಡರೆ ಕನಿಷ್ಠ 400 ರೂಪಾಯಿಯಾದರೂ ಉಳಿಯುತ್ತದೆ. ಹಾಗೆಯೇ ಮಠದಲ್ಲಿ ದೊಡ್ಡ ಬುದ್ಧಿಯವರನ್ನು (ಡಾ. ಶ್ರೀ ಶಿವಕುಮಾರ ಸ್ವಾಮೀಜಿ) ನೋಡಿಕೊಂಡು ಬಂದಂತಾಗುತ್ತದೆ. ಆದ್ದರಿಂದ ನೀನು ಹೋಗಲೇಬೇಕು ಎಂದು ತಾಕೀತು ಮಾಡಿದರು.
ಆಗ ಸಂಜೆ ನಾಲ್ಕು ಗಂಟೆಯಾಗಿತ್ತು. 5 ಗಂಟೆಗೆ ವಿಜಯಪುರದಿಂದ ತುಮಕೂರಿಗೆ ತಲುಪುವ ಬಸವ ಎಕ್ಸ್ಪ್ರಸ್ ರೈಲಿಗೆ ನಾನು ಹೋಗಬೇಕಿತ್ತು. ಅಪ್ಪನಿಗೆ ಎಷ್ಟು ಹೇಳಿದರೂ ನನ್ನ ಸಂಕಷ್ಟ ಅರ್ಥ ಆಗಲಿಲ್ಲ. ನನಗೆ ಒಂದು ರೀತಿ ಚೆಕ್ ಮೇಟ್ ಆದ ಅನುಭವ. ಕೊನೆಗೆ ಒಲ್ಲದ ಮನಸ್ಸಿನಿಂದಲೇ ಹೊರಡಲು ಅಣಿಯಾದೆ. ಅರ್ಧ ಗಂಟೆಯೊಳಗೆ ನಾನು ರೈಲು ನಿಲ್ದಾಣ ತಲುಪಬೇಕಾಗಿತ್ತು. ತರಾತುರಿಯಲ್ಲಿ ತಯಾರಾಗಿ ಓಡುತ್ತಲೇ ಮುಖ್ಯರಸ್ತೆಗೆ ಹೋದೆ. ಅಲ್ಲಿ ನಿಗದಿತ ಸಮಯಕ್ಕೆ ಬಸ್ ಬರಲಿಲ್ಲ. ತಡಮಾಡಿದರೆ ಟ್ರೈನ್ ಮಿಸ್ಸಾಗುತ್ತದೆ ಅಂತ ಆಟೋ ಹತ್ತಿ ರೈಲು ನಿಲ್ದಾಣಕ್ಕೆ ಹೊರಟೆ. ಆ ಆಟೋದವನಾದರೂ ಅಲ್ಲಲ್ಲಿ ಪ್ರಯಾಣಿಕರು ಸಿಗುತ್ತಾರೆಂದು ಅವರಿಗಾಗಿ ಕಾಯುತ್ತ ವಿಪರೀತ ತಡಮಾಡುತ್ತಿದ್ದ. ನನ್ನ ಸಿಟ್ಟು ನೆತ್ತಿಗೇರುತ್ತಿತ್ತು. ಆದರೆ ನನ್ನ ಸಮಸ್ಯೆಯನ್ನು ಕೇಳುವ ಸ್ಥಿತಿಯಲ್ಲಿ ಅವನಿರಲಿಲ್ಲ.
ಕೊನೆಗೂ ರೈಲು ನಿಲ್ದಾಣ ತಲುಪಿ, ಆಟೋದವನಿಗೆ ದುಡ್ಡು ಕೊಟ್ಟವನೇ ಒಳಗೆ ಓಡಿದೆ. ಅಲ್ಲಿ ನೋಡಿದರೆ ನನ್ನ ಕಣ್ಣ ಮುಂದೆಯೇ ಬಸವ ಎಕ್ಸ್ಪ್ರಸ್ ದೊಡ್ಡದಾಗಿ ಕಿರುಚುತ್ತಾ ಹೊರಟೇ ಬಿಟ್ಟಿತು. ಅಸಹಾಯಕನಾಗಿ ರೈಲು ಹೋಗುವುದನ್ನೇ ನೋಡುತ್ತಾ ನಿಂತೆ. ನಂತರ ಮನೆಯಲ್ಲಿ ಇದನ್ನು ಹೇಳಿದಾಗ, ಹೋಗಲು ಇಷ್ಟವಿಲ್ಲದೇ ಇದ್ದಿದ್ದರಿಂದ ಬೇಕಂತಲೇ ಹೀಗೆ ಮಾಡಿದ್ದೀಯ ಎಂದು ಮಂಗಳಾರತಿ ಮಾಡಿದರು. ಸ್ವಲ್ಪ ದಿನಗಳ ನಂತರ ಬೌನ್ಸ್ ಆಗಿದ್ದ ಆ ಚೆಕ್ ನನ್ನ ಮನೆಗೆ ಅಂಚೆಯಲ್ಲಿ ಬಂತು. ಅದನ್ನು ಪ್ರಶಸ್ತಿ ಪತ್ರದಂತೆ ಮನೆಯಲ್ಲಿ ತೆಗೆದಿಟ್ಟಿದ್ದೇನೆ. ಅದನ್ನು ನೋಡಿದಾಗಲೆಲ್ಲ ಟ್ರೈನ್ ಮಿಸ್ ಆದ ಘಟನೆ ನೆನಪಿಗೆ ಬರುತ್ತದೆ.
-ಹನಮಂತ ಕೊಪ್ಪದ