Advertisement

2ನೇ ದಿನವೂ ನಡೆದ ಚಪಾತಿ ತಯಾರಿ ಕಾರ್ಯ

04:22 PM Aug 13, 2019 | Suhan S |

ಕೋಲಾರ: ರಾಜ್ಯದ ನೆರೆ ಪೀಡಿತ ಜಿಲ್ಲೆಗಳ ಸಂತ್ರಸ್ತರಿಗೆ ಆಹಾರ ಒದಗಿಸುವ ಕಾರ್ಯಕ್ಕೆ ನಗರದ ಜನತೆ ಸ್ವಯಂ ಪ್ರೇರಿತರಾಗಿ ಎರಡನೇ ದಿನವಾದ ಸೋಮವಾರವೂ ಬಂದು ಸಹಕಾರ ನೀಡಿದರು. ನಗರದ ದೊಡ್ಡಪೇಟೆಯ ಶಾರದಾಂಬ ಛತ್ರದಲ್ಲಿ ಭಾನುವಾರ ಬೆಳಗ್ಗೆಯಿಂದಲೇ ಚಪಾತಿ ಮಾಡುವ ಕಾರ್ಯ ಆರಂಭವಾಗಿ, ಸೋಮವಾರವು ಮುಂದುವರಿದು ಈ ಕಾರ್ಯದಲ್ಲಿ ನೂರಕ್ಕೂ ಹೆಚ್ಚು ಮಂದಿ ಸ್ವಯಂ ಸೇವಕರಾಗಿ ಆಗಮಿಸಿ ದುಡಿದರು. ಈ ಕಾರ್ಯದಲ್ಲಿ ನಾಗರಾಜ್‌, ಎಸ್‌.ವಿ.ವಿಜಯಕುಮಾರ್‌, ನಗರಸಭಾ ಮಾಜಿ ಸದಸ್ಯ ಮಂಜುನಾಥ್‌, ಸೋಮಶೇಖರ್‌, ಮಹೇಂದ್ರ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರ್ರಾಮಾಭಿವೃದ್ಧಿ ಯೋಜನೆಯ ಮಹಿಳಾ ಸಂಘ ಹಾಗೂ ವಾಸವಿ ಮಹಿಳಾ ಮಂಡಳಿಯ ಸದಸ್ಯರು, ನಾಗರಿಕರು ತಮ್ಮನ್ನು ತೊಡಗಿಸಿಕೊಂಡಿದ್ದರು.

Advertisement

ನಗರದಲ್ಲಿ ಬಿಜೆಪಿ ಕಾರ್ಯಕರ್ತರು ನಡೆಸುತ್ತಿರುವ ನೆರೆ ಸಂತ್ರಸ್ತರಿಗಾಗಿ ಪರಿಹಾರ ಸಂಗ್ರಹ ಕಾರ್ಯ ಎರಡನೇ ದಿನವೂ ಮುಂದುವರಿದಿದ್ದು, ಸೋಮವಾರ ಮಾತ್ರವೇ ಲಕ್ಷ ರೂ. ಹೆಚ್ಚು ಹಣ, ಬಟ್ಟೆ, ಹೊದಿಕೆ, ಔಷಧಿಗಳು, ಗುಡ್‌ಲೈಫ್‌ ಹಾಲು ಮತ್ತಿತರ ವಸ್ತುಗಳು ಸಂಗ್ರಹವಾದವು.

ಬಿಜೆಪಿ ರಾಜ್ಯ ಯುವಮೋರ್ಚಾ ಉಪಾಧ್ಯಕ್ಷ ಓಂಶಕ್ತಿ ಚಲಪತಿ ಈ ಸಂಬಂಧ ಮಾಹಿತಿ ನೀಡಿ, ಸೋಮವಾರ ಸಂತ್ರಸ್ತರ ಪರಿಹಾರ ನಿಧಿಗೆ ಜನತೆ ಒಂದು ಲಕ್ಷ ರೂ. ಹೆಚ್ಚಿನ ಹಣ ನೀಡಿದ್ದಾರೆ. ಜತೆಗೆ ತಲಾ 25 ಕೆ.ಜಿ.ಯ 50 ಚೀಲ ಅಕ್ಕಿ, 300 ಲೀಟರ್‌ ಗುಡ್‌ಲೈಫ್‌ ಹಾಲು, ಶುದ್ಧನೀರು, ಅಡುಗೆ ಎಣ್ಣೆ, ಬ್ರೆಡ್‌, 400 ಹೊಸ ಹೊದಿಕೆಗಳು, ಬಟ್ಟೆ, ಮಹಿಳೆಯರ ದಿನಬಳಕೆ ವಸ್ತುಗಳು ಸಂಗ್ರಹವಾಗಿದೆ ಎಂದು ತಿಳಿಸಿದರು.

ನೆರವಿನ ಮಹಾಪೂರ: ಅನೇಕ ಮಂದಿ ದಾನಿಗಳು ಸ್ವಯಂಪ್ರೇರಿತರಾಗಿ ನೆರವು ನೀಡುತ್ತಿದ್ದು, ದಿನಬಳಕೆ ವಸ್ತುಗಳು, ಆಹಾರ ಸಾಮಗ್ರಿಗಳನ್ನು ನೀಡುತ್ತಿದ್ದಾರೆ, ಬರ ಜಿಲ್ಲೆಯ ಜನತೆ ನೆರೆಪೀಡಿತರಿಗೆ ನೆರವಿನ ಮಹಾಪೂರ ಹರಿಸುತ್ತಿದ್ದಾರೆ ಎಂದು ತಿಳಿಸಿ ಕೃತಜ್ಞತೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಎಸ್‌.ಬಿ.ಮುನಿವೆಂಕಟಪ್ಪ, ನಮ್ಮ ನಾಡಿನ ಸೋದರರು ಸಂಕಷ್ಟದಲ್ಲಿದ್ದಾರೆ, ನಾವೆಲ್ಲಾ ಮಾನವೀಯತೆಯಿಂದ ನೆರವಾಗೋಣ, ಪ್ರತಿಯೊಬ್ಬರೂ ಕೈಜೋಡಿಸಿದರೆ ಹೆಚ್ಚಿನ ನೆರವು ಹರಿಸಲು ಸಾಧ್ಯ ಎಂದರು.

Advertisement

ಸಹೋದರರ ಕೈಹಿಡಿಯೋಣ: ಇತರೆ ಬಿಜೆಪಿ ಮುಖಂಡರು ಮಾತನಾಡಿ, ಜಿಲ್ಲೆಯಿಂದ ಹೆಚ್ಚಿನ ನೆರವನ್ನು ಸಂತ್ರಸ್ತರಿಗೆ ನೀಡೋಣ, ಪ್ರತಿಯೊಬ್ಬರೂ ತಮ್ಮ ಕೈಲಾದಷ್ಟು ಹಣ, ಹೊಸ ಬಟ್ಟೆ, ದವಸ ಧಾನ್ಯಗಳು, ಬಿಸ್ಕತ್‌, ಔಷಧಿಗಳು, ಕುಡಿಯುವ ನೀರು ನೀಡೋಣ, ನಮ್ಮ ಸಹೋದರರ ಕೈಹಿಡಿಯೋಣ ಎಂದು ಕರೆ ನೀಡಿದರು.

ಮಾನವೀಯತೆ ಮೆರೆದವರಿಗೆ ಧನ್ಯವಾದ: ಬಿಜೆಪಿ ಮುಖಂಡ ಮಾಗೇರಿ ನಾರಾಯಣಸ್ವಾಮಿ, ಕೋಲಾರ ನಗರದಲ್ಲಿ ಅನೇಕರು ಸಹಾಯ ಹಸ್ತ ಚಾಚುತ್ತಿದ್ದಾರೆ, ಸಂತ್ರಸ್ತರ ನೆರವಿಗೆ ಸ್ವಯಂಪ್ರೇರಿತರಾಗಿ ನೆರವಾಗಲು ಮುಂದೆ ಬರುತ್ತಿದ್ದು, ನೆರವು ನೀಡುತ್ತಿರುವ ಮಾನವೀಯ ಹೃದಯಗಳಿಗೆ ಧನ್ಯವಾದ ಸಲ್ಲಿಸಿದ ಅವರು, ಜನತೆಯಿಂದ ನೆರೆ ಸಂತ್ರಸ್ತರಿಗಾಗಿ ಸಂಗ್ರಹಿಸುವ ಈ ಹಣ, ವಸ್ತುಗಳನ್ನು ಪ್ರಾಮಾಣಿಕವಾಗಿ ಅವರಿಗೆ ತಲುಪಿಸುವ ಕಾರ್ಯವನ್ನು ಬಿಜೆಪಿ ನಿರ್ವಹಿಸಲಿದೆ ಎಂದು ತಿಳಿಸಿದರು.

ಪರಿಹಾರ ಸಂಗ್ರಹ ಕಾರ್ಯದಲ್ಲಿ ಮುಖಂಡರಾದ ಸತ್ಯನಾರಾಯಣ, ಸುರೇಶ್‌, ಬೈಚಪ್ಪ, ಸಿ.ಡಿ.ರಾಮಚಂದ್ರಗೌಡ, ಬಿಜೆಪಿ ಎಸ್ಟಿ ಮೋರ್ಚಾದ ತಿಮ್ಮರಾಯಪ್ಪ, ಮುಖಂಡರಾದ ವಿಜಯಕುಮಾರ್‌, ಸಾಮಾ. ಅನಿಲ್ಕುಮಾರ್‌, ಸುರೇಶ್‌, ಪ್ರಕಾಶ್‌, ರಮೇಶ್‌, ಯುವಮೋರ್ಚಾ ಜಿಲ್ಲಾಧ್ಯಕ್ಷ ಬಾಲಾಜಿ, ಹಿಂದುಳಿದ ಮೋರ್ಚಾದ ಮಂಜು, ಮಂಜುನಾಥ್‌, ವೇಣುಗೋಪಾಲ್, ವೆಂಕಟೇಶ್‌, ಸಂದೀಪ್‌, ನಟರಾಜ್‌, ಕಿಟ್ಟಿ,ಸುನೀಲ್ ಮತ್ತಿತರರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next