Advertisement

ಕಾರ್ಮಿಕರೊಂದಿಗೆ ಉದ್ಯಮವನ್ನು ಉಳಿಸುವ ಸವಾಲು ಸಂಕಷ್ಟದಲ್ಲಿ ಹೊಟೇಲ್‌ ಉದ್ಯಮ

01:12 PM Apr 09, 2020 | Sriram |

 ವಿಶೇಷ ವರದಿ-ಉಡುಪಿ: ಲಾಕ್‌ಡೌನ್‌ ನಿಂದಾಗಿ ಉಡುಪಿ ಜಿಲ್ಲೆಯ ಸುಮಾರು 4ರಿಂದ 5 ಸಾವಿರದಷ್ಟು ಹೊಟೇಲ್‌ಗ‌ಳು ಮುಚ್ಚುಗಡೆಯಾಗಿವೆ. ಕಾರ್ಮಿಕ ರನ್ನು ಉಳಿಸುವುದು, ನಷ್ಟ ಸರಿದೂಗಿಸುವ ಸವಾಲು ಈಗ… ಮಾಲಕರ ಮುಂದಿದೆ.
ಜಿಲ್ಲೆಯ ಬಹುತೇಕ ಎಲ್ಲ ಹೊಟೇಲ್‌ ಮುಚ್ಚಿದ್ದರೂ ಶೇ.5ರಷ್ಟು ಹೊಟೇಲ್‌ಗ‌ಳು ಗ್ರಾಹಕರಿಗೆ ಪಾರ್ಸೆಲ್‌ ಸೌಲಭ್ಯ ನೀಡುತ್ತಿವೆ. ಹೊಟೇಲ್‌ನಲ್ಲಿ ತಿನ್ನುವುದಕ್ಕೆ ಅನುಮತಿ ಇಲ್ಲ. ಆನ್‌ಲೈನ್‌ ಆಹಾರ ಡೆಲಿವರಿ ಸಂಸ್ಥೆಗಳಿಗೆ ಬೇಡಿಕೆ ಕುದುರಿದೆ.
ಇಡೀ ಜಿಲ್ಲೆ ಲಾಕ್‌ಡೌನ್‌ ಆಗಿರುವುದರಿಂದ ಬಹುತೇಕ ಹೊಟೇಲ್‌ಗ‌ಳು ಸೇವೆ ಸ್ಥಗಿತ ಗೊಳಿಸಿವೆ.

Advertisement

ಬೆಳಗ್ಗೆ, ಮಧ್ಯಾಹ್ನ, ಸಂಜೆ ಹಾಗೂ ರಾತ್ರಿ ವೇಳೆಯಲ್ಲಿ ಮಾತ್ರ ಕೆಲವು ಹೊಟೇಲ್‌ಗ‌ಳಲ್ಲಿ ಆಹಾರವನ್ನು ಪಾರ್ಸೆಲ್‌ ಮೂಲಕ ಕೊಂಡುಹೋಗಲಾಗುತ್ತಿದೆ. ಉಳಿದಂತೆ ಯಾರಿಗೂ ಹೊಟೇಲ್‌ನಲ್ಲಿ ಆಹಾರ ಇಲ್ಲ.

ಮಾಲಕರಿಂದಲೇ ಊಟ
ಜಿಲ್ಲೆಯ ಪ್ರತಿಷ್ಠಿತ ಹೊಟೇಲ್‌ಗ‌ಳಲ್ಲಿ ದೇಶದ ವಿವಿಧ ಭಾಗಗಳ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಸೌತ್‌ ಇಂಡಿಯನ್‌,
ನಾರ್ತ್‌ ಇಂಡಿಯನ್‌, ಚೈನೀಸ್‌ ಸಹಿತ ಹಲವು ರೀತಿಯ ವೈವಿಧ್ಯಮಯ ತಿನಿಸು ಮಾಡುವ ಪರಿಣತರಿದ್ದಾರೆ. ಇವರೆಲ್ಲರಿಂದ ತಿಂಡಿಗಳ ಜತೆಗೆ ಹೊಟೇಲ್‌ಗ‌ೂ ಖ್ಯಾತಿ ಬಂದಿರುವುದರಿಂದ ಇವರಿಗೆ ವೇತನ ನೀಡಲೇಬೇಕಾಗುತ್ತದೆ.

ಜತೆಗೆ 21 ದಿನಗಳವರೆಗೆ ಊಟವನ್ನೂ ನಮ್ಮ ಕೈಯಿಂದಲೇ ನೀಡುತ್ತೇವೆ ಎನ್ನುತ್ತಾರೆ ಹೊಟೇಲ್‌ ಮಾಲಕರೊಬ್ಬರು.

ಕೋಟ್ಯಾಂತರ ರೂ.ನಷ್ಟ
ಜಿಲ್ಲೆಯಲ್ಲಿ ದಿನವೊಂದಕ್ಕೆ 10 ಸಾವಿರದಿಂದ 2 ಲಕ್ಷ ರೂ.ವರೆಗೆ ವ್ಯವಹಾರ ನಡೆಸುವ ಹೊಟೇಲ್‌ಗ‌ಳಿವೆ. 21 ದಿನಗಳ ಲಾಕ್‌ಡೌನ್‌ನಿಂದಾಗಿ ಈಗ ಹೊಟೇಲ್‌ ಮಾಲಕರೆಲ್ಲ ಕಂಗಾಲಾಗಿದ್ದಾರೆ. ಹೊಟೇಲು ಬಾಡಿಗೆ, ನಿರ್ವಹಣೆ, ದಾಸ್ತಾನು ಸಾಮಗ್ರಿ ಸಹಿತ ಹಲವಾರು ರೀತಿಯ ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ. 21 ದಿನಗಳ ಲಾಕ್‌ಡೌನ್‌ನಿಂದಾಗಿ ಜಿಲ್ಲೆಯಲ್ಲಿ ಹೊಟೇಲ್‌ ಉದ್ಯಮಕ್ಕೆ ದೊಡ್ಡ ಹೊಡೆತ ಬಿದ್ದಿದ್ದು, ಸುಮಾರು 250ಕೋ.ರೂ.ನಷ್ಟು ನಷ್ಟ ಉಂಟಾಗಿದೆ ಎನ್ನುತ್ತಾರೆ ಜಿಲ್ಲಾ ಹೊಟೇಲ್‌ ಮಾಲಕರ ಸಂಘದ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ.

Advertisement

ಸ್ಥಳೀಯ ಕಾರ್ಮಿಕರಿಗೆ ತೊಂದರೆ
ಸ್ಥಳೀಯವಾಗಿರುವ ಸಣ್ಣಪುಟ್ಟ ಹೊಟೇಲ್‌ಗ‌ಳಲ್ಲಿ ಸಿಬಂದಿಗೆ ವೇತನ ದಿನನಿತ್ಯ ನೀಡಲಾಗುತ್ತದೆ. ತಿಂಗಳಾಂತ್ಯಕ್ಕೆ ನೀಡುವುದು ಕಡಿಮೆ. ದಿನದ ವೇತನವನ್ನೇ ನಂಬಿರುವ ಅದೆಷ್ಟೋ ಕಾರ್ಮಿಕರು ಈಗ ಕಂಗಾಲಾಗಿದ್ದಾರೆ. ಖರ್ಚುವೆಚ್ಚಗಳನ್ನೆಲ್ಲ ತೆಗೆದರೆ ತಕ್ಕಮಟ್ಟಿಗಾಗುವಷ್ಟು ಮಾತ್ರ ವ್ಯಾಪಾರವಾಗುತ್ತದೆ. 21 ದಿನಗಳಲ್ಲಿ ಯಾವುದೇ ವ್ಯವಹಾರ ಇಲ್ಲದಿರುವುದರಿಂದ ಕಾರ್ಮಿಕರಿಗೆ ಪೂರ್ಣ ಪ್ರಮಾಣದ ವೇತನ ನೀಡುವುದು ಕಷ್ಟ. ಅವರ ಜೀವನ ನಿರ್ವಹಣೆಗೆ ಬೇಕಿರುವಷ್ಟು ನೆರವು, ಹಣ ನೀಡಬಹುದಷ್ಟೇ ಎನ್ನುತ್ತಾರೆ ಶಿರಿಬೀಡು ಕ್ಯಾಂಟೀನ್‌ ಮಾಲಕ ಶಂಕರ್‌.

ಬಹುದೊಡ್ಡ ಹೊಡೆತ
ಲಾಕ್‌ಡೌನ್‌ನಿಂದ ಹೊಟೇಲ್‌ ಉದ್ಯಮಕ್ಕೆ ಬಹುದೊಡ್ಡ ಹೊಡೆತ ಬಿದ್ದಿದೆ. ಕಾರ್ಮಿಕರನ್ನು ಉಳಿಸಬೇಕೆಂದರೆ ವೇತನ ನೀಡುವುದು ಅನಿವಾರ್ಯವಾಗಿಬಿಟ್ಟಿದೆ. ಹೊಟೇಲ್‌ ಮಾಲಕರೆಲ್ಲ ತಮ್ಮ ಕೈಯಿಂದಲೇ ಕಾರ್ಮಿಕರಿಗೆ ವೇತನದ ಜತೆಗೆ ವಸತಿ ಸೌಲಭ್ಯ ನೀಡುತ್ತಿದ್ದಾರೆ. 21 ದಿನಗಳ ಲಾಕ್‌ಡೌನ್‌ನಿಂದಾಗಿ ಸುಮಾರು 250 ಕೋ.ರೂ.ನಷ್ಟು ನಷ್ಟ ಜಿಲ್ಲೆಯ ಹೊಟೇಲ್‌ ಉದ್ದಿಮೆಗಳಿಗೆ ಉಂಟಾಗಿದೆ.
-ತಲ್ಲೂರು ಶಿವರಾಮ ಶೆಟ್ಟಿ,, ಜಿಲ್ಲಾ ಹೊಟೇಲ್‌ ಮಾಲಕರ ಸಂಘದ ಅಧ್ಯಕ್ಷರು, ಉಡುಪಿ.

Advertisement

Udayavani is now on Telegram. Click here to join our channel and stay updated with the latest news.

Next