Advertisement
ಕಾಂಗ್ರೆಸ್‌ನಿಂದ ಬಂಡಾಯವೆದ್ದು ಮುಂಬೈ ಸೇರಿರುವ 15 ಶಾಸಕರ ಕ್ಷೇತ್ರಗಳಿಗೆ ಮುಂದಿನ ಆರು ತಿಂಗಳ ಒಳಗಾಗಿ ಉಪ ಚುನಾವಣೆಗಳು ನಡೆಯುವುದರಿಂದ ಅವರಲ್ಲಿ ಕನಿಷ್ಠ ಹತ್ತು ಜನರನ್ನಾದರೂ ಗೆಲ್ಲಿಸಿಕೊಂಡು ಬರುವ ಪ್ರಮುಖ ಹೊಣೆಗಾರಿಕೆ ಯಡಿಯೂರಪ್ಪ ಮೇಲಿದೆ. 225 ಸಂಖ್ಯಾಬಲದ ರಾಜ್ಯ ವಿಧಾನಸಭೆಯಲ್ಲಿ ಸರಳ ಬಹುಮತಕ್ಕೆ ಅಗತ್ಯವಿರುವ 113 ಶಾಸಕರನ್ನು ಉಳಿಸಿಕೊಂಡು ಹೋಗಲು ಉಪ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲುವುದು ಅನಿವಾರ್ಯವಾಗಿದೆ. ಅಧಿಕಾರ ವಂಚಿತರಾಗಿರುವ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಉಪ ಚುನಾವಣೆಗಳನ್ನು ಜಂಟಿಯಾಗಿಯೇ ಎದುರಿಸುವ ಆಲೋಚನೆಯಲ್ಲಿದ್ದಾರೆ. ಅವರಿಗೆ ಅತೃಪ್ತ ಶಾಸಕರನ್ನು ಹೇಗಾದರೂ ಮಾಡಿ ಸೋಲಿಸಿ, ರಾಜಕೀಯ ಭವಿಷ್ಯವನ್ನು ಅಂತ್ಯಗೊಳಿಸಬೇಕೆನ್ನುವುದೇ ಮುಖ್ಯ ಉದ್ದೇಶವಾಗಿದೆ.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾಗಿದ್ದು, ಈ ಬಾರಿ ಯಾರಿಗೆಲ್ಲಾ ಸಚಿವ ಸ್ಥಾನ ಸಿಗಲಿದೆ ಎಂಬ ಚರ್ಚೆ ಶುರುವಾಗಿದೆ. ಹಿಂದೆ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದವರ ಪೈಕಿ 26ಕ್ಕೂ ಹೆಚ್ಚು ಮಂದಿ ಈಗಲೂ ಶಾಸಕರಾಗಿದ್ದಾರೆ. ಆದರೆ, ಅತೃಪ್ತ ಜೆಡಿಎಸ್-ಕಾಂಗ್ರೆಸ್ ಶಾಸಕರ ಪರೋಕ್ಷ ಬೆಂಬಲದಿಂದ ಸರ್ಕಾರ ರಚನೆಯಾಗುತ್ತಿರುವುದರಿಂದ ಸಂಪುಟದಲ್ಲಿ ಮುಖ್ಯಮಂತ್ರಿ ಸೇರಿ 34 ಸ್ಥಾನವಷ್ಟೇ ಇರುವುದರಿಂದ ಒಂದಷ್ಟು ಬಿಜೆಪಿ ಶಾಸಕರು ‘ತ್ಯಾಗ’ಕ್ಕೂ ಸಿದ್ಧರಾಗಬೇಕಾಗಿದೆ. ಏಕೆಂದರೆ, ಅತೃಪ್ತರ ಪೈಕಿ ಕನಿಷ್ಠ 10 ಮಂದಿಗಾದರೂ ಸಚಿವ ಸ್ಥಾನ ಕೊಡುವ ಒಪ್ಪಂದ ಆಗಿದೆ. ಹೀಗಾಗಿ, ಬಿಜೆಪಿಯವರಿಗೆ 23 ಸ್ಥಾನವಷ್ಟೇ ಸಿಗಲಿದೆ. ಅದರಲ್ಲೂ ಜಾತಿವಾರು, ಪ್ರಾದೇಶಿಕವಾರು, ಜಿಲ್ಲಾವಾರು ಪ್ರಾತಿನಿಧ್ಯ ಸಿಗಬೇಕಿದೆ. ಇದು ಒಂದು ರೀತಿಯಲ್ಲಿ ಸವಾಲೂ ಹೌದು. ಈಗಿನ ಲೆಕ್ಕಾಚಾರದ ಪ್ರಕಾರ ಬೆಂಗಳೂರು ನಗರ, ಗ್ರಾಮಾಂತರ, ಮೈಸೂರು, ಬೆಳಗಾವಿ ಜಿಲ್ಲೆಗಳ ವಿಚಾರದಲ್ಲಿ ಆಕಾಂಕ್ಷಿಗಳು ಹೆಚ್ಚಾಗಬಹುದು ಎಂದು ಹೇಳಲಾಗುತ್ತಿದೆ. ಹೀಗಾಗಿ, ಅಂತಿಮವಾಗಿ ಯಾವ ಮಾನದಂಡದಡಿ ಹಾಗೂ ಲೆಕ್ಕಾಚಾರದಡಿ ಯಾರ್ಯಾರಿಗೆ ಮಂತ್ರಿಗಿರಿ ಭಾಗ್ಯ ಸಿಗಲಿದೆ ಎಂಬುದನ್ನು ಕಾದು ನೋಡಬೇಕಿದೆ. ಸಚಿವ ಸ್ಥಾನ ಸಿಗದವರಿಗೆ ನಿಗಮ-ಮಂಡಳಿ ಅಧ್ಯಕ್ಷಗಿರಿ, ಸಮ್ಮಿಶ್ರ ಸರ್ಕಾರದಲ್ಲಿ ಅವಕಾಶ ಕಲ್ಪಿಸಿದಂತೆ ಸಂಸದೀಯ ಕಾರ್ಯದರ್ಶಿ ಹುದ್ದೆ ನೀಡುವ ಮೂಲಕವೂ ಅವರನ್ನು ಸಮಾಧಾನಪಡಿಸಬಹುದು.