Advertisement

ಶತಮಾನಗಳಷ್ಟು ಹಳೆಯ ಬ್ರಿಟಿಷ್ ರಸ್ತೆ ಬಂದ್ : ಸಾರ್ವಜನಿಕರಿಂದ  ವ್ಯಾಪಕ ಆಕ್ರೋಶ, ಪ್ರತಿಭಟನೆ

09:45 AM Dec 07, 2021 | Team Udayavani |

ದಾಂಡೇಲಿ: ನಗರದ ಹಳೆದಾಂಡೇಲಿಯ ಸ್ವಾಮಿಲ್ ಹತ್ತಿರದ ಶತಮಾನಗಳಷ್ಟು ಹಳೆಯದಾದ ರಸ್ತೆಗೆ ಅರಣ್ಯಾಧಿಕಾರಿಗಳು ಏಕಾಏಕಿ ತಡೆಗೋಡೆ ನಿರ್ಮಿಸಿರುವುದನ್ನು ವಿರೋಧಿಸಿ ಹಳೆ ದಾಂಡೇಲಿ ಭಾಗದ ಸಾರ್ವಜನಿಕರು ಮಂಗಳವಾರ ಬೆಳಿಗ್ಗೆ ಪ್ರತಿಭಟನೆ ನಡೆಸಿ, ಅರಣ್ಯ ಅಧಿಕಾರಿಗಳ ನಡೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.

Advertisement

ಬ್ರಿಟಿಷ್ ಕಾಲದ ಈ ರಸ್ತೆ ಅರಣ್ಯ ಇಲಾಖೆಯ ವ್ಯಾಪ್ತಿಗೆ ಬರುತ್ತದೆ ಎನ್ನುವ ಕಾರಣಕ್ಕೆ ರಸ್ತೆಗೆ ಕೇವಲ ಪಾದಚಾರಿಗಳಿಗೆ ಮತ್ತು ದ್ವಿಚಕ್ರ ವಾಹನಗಳಿಗೆ ಹೋಗಲು ದಾರಿ ಬಿಟ್ಟು, ತಡೆಗೋಡೆಯನ್ನು ನಿರ್ಮಿಸಲಾಗಿದೆ. ಈ ಬಗ್ಗೆ ಕೆರಳಿದ ಹಳೆದಾಂಡೇಲಿಯ ಸಾರ್ವಜನಿಕರು ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಸ್ಥಳಕ್ಕಾಗಮಿಸಿದ ವಲಯಾರಣ್ಯಾಧಿಕಾರಿ ರಶ್ಮಿ ದೇಸಾಯಿ, ಮೇಲಾಧಿಕಾರಿಗಳ ಆದೇಶದಂತೆ ತಡೆ ಗೋಡೆ ನಿರ್ಮಿಸಿದ್ದೇವೆ ಎಂದು ಹೇಳಿದ್ದಾರೆ.

ಅನಾದಿ ಕಾಲದಿಂದಲೂ ಇದ್ದ ರಸ್ತೆಯನ್ನು ಏಕಾಏಕಿ ಬಂದ್ ಮಾಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಕೇಳಿದಾಗ ವಲಯಾರಣ್ಯಾಧಿಕಾರಿ ರಶ್ಮಿ ಬಳಿ ಸಮರ್ಪಕ ಉತ್ತರವಿರಲಿಲ್ಲ. ತುರ್ತು ಸಂದರ್ಭದಲ್ಲಿ, ಆಸ್ಪತ್ರೆಗೆ ಹೋಗಬೇಕಾದ ಅನಿವಾರ್ಯ ಸಂದರ್ಭಗಳಲ್ಲಿ ವಾಹನ ಹೋಗಲು ಸಾಧ್ಯವಾಗದೆ ಇರುವುದರಿಂದ ಕೂಡಲೆ ತಡೆಗೋಡೆಯನ್ನು ತೆರವುಗೊಳಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಸ್ಥಳೀಯ ನಾಗರೀಕರ ದೈನಂದಿನ ಬದುಕಿಗೆ ಕೊಂಡಿಯಾಗಿದ್ದ ಈ ರಸ್ತೆಯನ್ನು ಬಂದ್ ಮಾಡಿ ಅರಣ್ಯ ಇಲಾಖೆಯವರು ಸಾಧಿಸುವುದಾದರೂ ಏನು? ಎನ್ನುವ ಪ್ರಶ್ನೆ ಅರಣ್ಯ ಇಲಾಖೆಯ ಮೇಲಿದೆ. ಅರಣ್ಯದಲ್ಲಿ ಮರ ಕಳ್ಳತನ ಚಟುವಟಿಕೆಗಳನ್ನು ನಿಯಂತ್ರಿಸಲಾಗದ ಅರಣ್ಯ ಇಲಾಖೆ ಸಾರ್ವಜನಿಕರಿಗೆ ಈ ರೀತಿ ತೊಂದರೆ ಕೊಡುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

Advertisement

ಇದನ್ನೂ ಓದಿ:ಕರಾವಳಿಯ ವಾಜಪೇಯಿ, ಬಿಜೆಪಿಯ ಭೀಷ್ಮ ರಾಮ ಭಟ್‌ ನಿಧನ : ಬೊಮ್ಮಾಯಿ ಸಂತಾಪ

ಸ್ಥಳಕ್ಕೆ ಪೌರಾಯುಕ್ತರಾದ ಆರ್.ಎಸ್.ಪವಾರ್ ಅವರು ಭೇಟಿ ನೀಡಿ ನಾವು ಈಗಾಗಲೆ ಸಾರ್ವಜನಿಕ ರಸ್ತೆಯನ್ನು ಬಂದ್ ಮಾಡಬಾರದು ಎಂದು ಲಿಖಿತವಾಗಿ ಅರಣ್ಯ ಇಲಾಖೆಗೆ ತಿಳಿಸಿದ ನಂತರದಲ್ಲಿ ಕಾಲು ದಾರಿಗಷ್ಟೆ ಅವಕಾಶ ನೀಡಿದ್ದಾರೆ. ಆದರೆ ಯಾವುದೇ ಕಾರಣಕ್ಕೂ ಅನಾಧಿಕಾಲದಿಂದಲೂ ರೂಢಿಗತವಾಗಿ ಬಂದಿರುವ ರಸ್ತೆಯನ್ನು ಬಂದ್ ಮಾಡಬಾರದು. ಕೂಡಲೆ ತಡೆಗೋಡೆಯನ್ನು ತೆರವುಗೊಳಿಸಲು ನಗರ ಸಭೆಯಿಂದ ಲಿಖಿತ ಪತ್ರ ಬರೆದು ಸಮಸ್ಯೆ ಬಗೆ ಹರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದೆಂದು ಭರವಸೆ ನೀಡಿದ ನಂತರ ಪ್ರತಿಭಟನಾಕಾರರು ಪ್ರತಿಭಟನೆಯನ್ನು ನಿಲ್ಲಿಸಿದರು.

ಈ ಸಂದರ್ಭದಲ್ಲಿ ಮುಖಂಡರುಗಳಾದ ದಿವಾಕರ ನಾಯ್ಕ, ರಾಮಲಿಂಗ ಜಾಧವ, ಪ್ರತಾಪ್ ಸಿಂಗ್ ರಜಪೂತ್, ದಾಂಡೇಲಿ ತಾಲೂಕು ಸಮಗ್ರ ಅಭಿವೃದ್ಧಿ ಹೋರಾಟ ಸಮಿತಿಯ ಅಧ್ಯಕ್ಷ ಅಕ್ರಂ ಖಾನ್, ಮುಖಂಡರುಗಳಾದ ಕರೀಂ ಅಜ್ರೇಕರ, ಸಲೀಂ ಸೈಯದ್, ಶಿವಾನಂದ ಗಗ್ಗರಿ, ಅನ್ವರ್ ಪಠಾಣ್, ಗೌರೀಶ ನಾಯ್ಕ, ಪ್ರವೀಣ ಕೊಠಾರಿ, ಸಲೀಂ ಕಾಕರ್, ಮಂಜು ಪಂಥೋಜಿ, ಲಕ್ಷ್ಮಣ ಸಂದಂ, ಮೆಹಬೂಬು ಮೊದಲಾದವರು ಉಪಸ್ಥಿತರಿದ್ದರು.

ವಲಯಾರಣ್ಯಾಧಿಕಾರಿ ಬಸವರಾಜ, ಅರಣ್ಯ ಇಲಾಖೆಯ ಮತ್ತೇಸಾಬ ನದೀಮುಲ್ಲಾ ಹಾಜರಿದ್ದರು. ಸ್ಥಳೀಯ ಮಹಿಳೆಯರು, ನಾಗರೀಕರು ಈ ಸಂದರ್ಭದಲ್ಲಿ ಹಾಜರಿದ್ದು, ತಡೆಗೋಡೆ ತೆರವಿಗಾಗಿ ಆಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next