Advertisement
ಶನಿವಾರ ಭದ್ರಾ ಅಣೆಕಟ್ಟು ಐಬಿ ಆವರಣದಲ್ಲಿ ಭಾರತೀಯ ರೈತ ಒಕ್ಕೂಟ ಹಾಗೂ ಬಿಜೆಪಿ ದಾವಣಗೆರೆ ಘಟಕದಿಂದ ನಡೆದ ಬಾಗಿನ ಅರ್ಪಣೆ ಕಾರ್ಯಕ್ರಮದಲ್ಲಿ ಭದ್ರೆಗೆ ಬಾಗಿನ ಅರ್ಪಿಸಿ ಅವರು ಮಾತನಾಡಿದರು.ವೋಟಿಗೂ ಅಭಿವೃದ್ಧಿ ಕಾರ್ಯಕ್ಕೂ ಸಂಬಂಧವಿಲ್ಲ. ಒಂದು ಬಾರಿ ಬಿಜೆಪಿಗೆ ಅಧಿಕಾರ ಕೊಟ್ಟು ನಂತರ ಮನೆಯಲ್ಲಿ ಕೂರಿಸಿದ್ದರು. ಈ ಬಾರಿ ಬೇರೆ ಪಕ್ಷದವರನ್ನು ಮನೆಯಲ್ಲಿ ಕೂರಿಸಿದ್ದಾರೆ. ಹೀಗಾಗಿ ಜನರಿಗೆ ಸ್ಪಂದಿಸುವ ಕೆಲಸ ಮಾಡಿದರೆ ಭಗವಂತ ಮೆಚ್ಚುತ್ತಾನೆ. ಜನರು ಗೆಲ್ಲಿಸುತ್ತಾರೆ ಎಂದರು.
Related Articles
Advertisement
2013ರಲ್ಲಿ ಮಳೆಯಲ್ಲೇ ನೆನೆದುಕೊಂಡು ಬಾಗಿನ ಅರ್ಪಿಸಲಾಗಿತ್ತು. ಆಗ ಬಿಜೆಪಿಯ 7 ಮಂದಿ ಶಾಸಕರು ಮಾಜಿಗಳಾಗಿದ್ದರು, ಅದರಲ್ಲಿ ಆರು ಜನ ಮತ್ತೆ ಈಗ ಹಾಲಿ ಶಾಸಕರಾಗಿದ್ದಾರೆ. ಮುಂದಿನ ಬಾರಿ ದಾವಣಗೆರೆಯ ಎಂಟು ಕ್ಷೇತ್ರಗಳಲ್ಲೂ ಬಿಜೆಪಿ ಗೆಲ್ಲುವಂತೆ ತಾಯಿ ಭದ್ರೆ ಆಶೀರ್ವಾದ ಮಾಡಲಿ. ಆಗ ಎಲ್ಲರೂ ಬಂದು ಬಾಗಿನ ಅರ್ಪಿಸುತ್ತೇವೆ ಎಂದರು.
ಚನ್ನಗಿರಿ ಶಾಸಕ ಮಾಡಾಳ್ ವಿರುಪಾಕ್ಷಪ್ಪ ಮಾತನಾಡಿ, ಕರೆಂಟ್ ಇದ್ದಾಗ ನೀರು ಇರಲ್ಲ, ನೀರು ಇದ್ದಾಗ ಕರೆಂಟ್ ಇರಲ್ಲ, ಎರಡೂ ಇದ್ದಾಗ ಮೋಟಾರ್ ಕೆಟ್ಟಿರುತ್ತೆ. ಇಂತಹ ಪರಿಸ್ಥಿತಿಯಲ್ಲಿ ಭದ್ರಾ ಮೇಲ್ದಂಡೆ ಯೋಜನೆಯಡಿ ನಡೆಯುತ್ತಿರುವ ಉಬ್ರಾಣಿ, ಸಾಸ್ವೆಹಳ್ಳಿ ಏತ ನೀರಾವರಿಯ ಕಾಮಗಾರಿ ಹೇಗೆ ನಡೆಯುತ್ತದೆ ಗೊತ್ತಿಲ್ಲ. ಎಲ್ಲ ಸಮಸ್ಯೆಗಳನ್ನು ನಿಭಾಯಿಸುವ ಶಕ್ತಿ ಸರಕಾರಕ್ಕೆ ಬರಲಿ. ಆ ಭಾಗದ ಜನರೂ ಸಂತೋಷದಿಂದ ಇರಲಿ ಎಂದರು.
ಜಗಳೂರು ಶಾಸಕ ಎಸ್.ವಿ. ರಾಮಚಂದ್ರ ಮಾತನಾಡಿ, ದಾವಣಗೆರೆ ಜಿಲ್ಲೆಯ ಏಳು ತಾಲೂಕಿಗೂ ಭದ್ರಾ ನೀರು ಹೋಗುತ್ತೆ. ಆದರೆ ನನ್ನ ತಾಲೂಕಿಗೆ ಬರಲ್ಲ. ನಾನು ಏನಾದರೂ ಮಾಡಿ ನೀರು ತರುತ್ತೇನೆ ಎಂದು ಜನ ನನ್ನನ್ನು ಗೆಲ್ಲಿಸಿದ್ದಾರೆ. ನನ್ನ ಹೋರಾಟಕ್ಕೆ ಎಲ್ಲ ಶಾಸಕರೂ ಬೆಂಬಲ ಕೊಡಬೇಕು. ಭದ್ರಾ, ತುಂಗಭದ್ರಾ ನೀರಾದರೂ ಕೊಡಿ, ಹೋಗಲಿ ಕಾವೇರಿ ನೀರಾದರೂ ಕೊಡಿ. ಒಟ್ಟಿನಲ್ಲಿ ತಾಲ್ಲೂಕಿಗೆ ನೀರು ಬರಲು ಸಹಕರಿಸಿ ಎಂದು ಮನವಿ ಮಾಡಿದರು.
ಮಾಜಿ ಶಾಸಕ ಬಿ.ಪಿ.ಹರೀಶ್ ಮಾತನಾಡಿ, ಭದ್ರೆ ತುಂಬಿದರೂ ಕೊನೆ ಭಾಗಕ್ಕೆ ಇನ್ನೂ ನೀರು ಮುಟ್ಟಿಲ್ಲ. ಇದಕ್ಕೆ ನೀರಾವರಿ ಇಲಾಖೆ ಅಧಿಕಾರಿಗಳೇ ಹೊಣೆ. ಬಿಜೆಪಿ ಅವಧಿಯಲ್ಲಿ ಇಲಾಖೆ ತುಂಬಾ ಅಧಿಕಾರಿಗಳಿದ್ದರು. ಈಗ ಒಬ್ಬೊಬ್ಬರೇ ಇದ್ದಾರೆ. ಎಲ್ಲರೂ ಹಣ ಸಿಗುವ ಇಲಾಖೆಗಳಿಗೆ ಹೋಗಿದ್ದಾರೆ. ಭತ್ತಕ್ಕೆ ಬೇಡ ಕೊನೆ ಪಕ್ಷ ಮೆಕ್ಕೆಜೋಳಕ್ಕಾದರೂ ನೀರು ಕೊಡಿ ಎಂದು ಆಗ್ರಹಿಸಿದರು.
ಮುಖಂಡ ಶಿವಯೋಗಿಸ್ವಾಮಿ ಮಾತನಾಡಿ, ದಾವಣಗೆರೆ ನಗರಕ್ಕೆ ವಾರಕ್ಕೆ ಎರಡು ದಿನ ನೀರು ಕೊಡಲಾಗುತ್ತಿದೆ. ನದಿ ಹಾಗೂ ಚಾನಲ್‌ನಲ್ಲೂ ನೀರು ಹರಿಯುತ್ತಿದೆ. ಅದಕ್ಕಾಗಿ ಕೆರೆಗಳನ್ನು ತುಂಬಿಸುವ ಮೂಲಕ ಎರಡು ದಿನಕ್ಕೊಮ್ಮೆ ನೀರು ಕೊಡುವ ಕೆಲಸವಾಗಬೇಕು ಎಂದರು.
ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಎ.ರವೀಂದ್ರನಾಥ್ ಮಾತನಾಡಿ, ರೈತ ಒಕ್ಕೂಟದಿಂದ ಮೊದಲ ಬಾರಿಗೆ ಭದ್ರೆಗೆ ಬಾಗಿನ ಅರ್ಪಿಸುವ ಕೆಲಸ ಮಾಡಲಾಯಿತು. ನಂತರ ಇದು ರಾಜ್ಯಾದ್ಯಂತ ಪ್ರಚಾರ ಪಡೆಯಿತು. ಈಗ ಎಲ್ಲ ರಾಜಕಾರಣಿಗಳು ಬಾಗಿನ ಬಿಡುತ್ತಿದ್ದಾರೆ ಎಂದರು.
ಮಾಯಕೊಂಡ ಶಾಸಕ ಪ್ರೊ| ಲಿಂಗಣ್ಣ, ಜಿಪಂ ಪ್ರಭಾರ ಅಧ್ಯಕ್ಷೆ ಕವಿತಾ ಕಲ್ಲೇಶಪ್ಪ, ರೈತ ಒಕ್ಕೂಟದ ಎಚ್.ಆರ್. ಲಿಂಗರಾಜು ಮಾತನಾಡಿದರು. ಬಿಜೆಪಿ ಜಿಲ್ಲಾಧ್ಯಕ್ಷ ಯಶವಂತರಾವ್ ಜಾದವ್, ಶಿವಮೊಗ್ಗ ಶಾಸಕ ಕೆ.ಎಸ್. ಈಶ್ವರಪ್ಪ ಇತರರಿದ್ದರು.
ಲೋಕಸಭೆ ಚುನಾವಣೆಗೆ ತಯಾರಿ ವೇದಿಕೆ ಮೇಲೆ ಮಾತನಾಡಿದ ಎಲ್ಲ ಶಾಸಕರು 2019ರ ಲೋಕಸಭೆಗೆ ಚುನಾವಣೆಗೆ ಸಿದ್ದೇಶ್ವರ್ ಅವರಿಗೆ ಬೆಂಬಲ ವ್ಯಕ್ತಪಡಿಸಿದರು. ನೀವೇ ನಿಲ್ಲಬೇಕು. ಗೆದ್ದು ಮತ್ತೆ ಸಚಿವರಾಗಬೇಕು ಎಂದು ಹಾರೈಸಿದರು. 2013ರಲ್ಲಿ ನಾನು ಕೆಜಿಪಿಯಲ್ಲಿದ್ದೆ. ಆಗ ಬಿಜೆಪಿ ಬಾಗಿನ ಅರ್ಪಣೆ ಕಾರ್ಯಕ್ರಮಕ್ಕೆ ಬಂದಿದ್ದೆವು. ಆಗ ನಾನು ರಾಮಚಂದ್ರ, ರೇಣುಕಾಚಾರ್ಯ ಎಲ್ಲರೂ ಸೇರಿ ನಾವು ಕೆಜೆಪಿಯಲ್ಲಿದ್ದರೂ ಒಂದಾಗಿ ನಿಮಗೆ ಬೆಂಬಲಿಸುತ್ತೇವೆ ಎಂದು ಹೇಳಿದ್ದೆವು. ಅದೇ ರೀತಿ ಸಿದ್ದೇಶಣ್ಣ ಅವರು ಗೆದ್ದರು. ಈಗಲೂ ನಾವೆಲ್ಲ ಅವರಿಗೆ ಬೆಂಬಲ ಕೊಡುತ್ತೇವೆ ಎಂದು ಹರೀಶ್ ಹೇಳಿದರು.
ರೇಣುಕಾಚಾರ್ಯ ಗೈರು ತಪ್ಪು ತಿಳಿಯಬೇಡಿ ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಗೈರಾಗಿದ್ದಕ್ಕೆ ಪ್ರತಿಕ್ರಿಯೆನೀಡಿದ ಸಂಸದ ಜಿ.ಎಂ.ಸಿದ್ದೇಶ್, ರೇಣುಕಾಸ್ವಾಮಿ ಅವರು ತಮ್ಮ ಮಗನನ್ನು ಅಮೆರಿಕಾಕ್ಕೆ ಕಳುಹಿಸುತ್ತಿರುವುದರಿಂದ ಬಂದಿಲ್ಲ. ಯಾರೂ ತಪ್ಪು ತಿಳಿಯಬೇಡಿ. ನೀರಾವರಿ ತಜ್ಞ ಪ್ರೊ| ನರಸಿಂಹಪ್ಪ ಕೂಡ ಅವರ ತಂಗಿ ತೀರಿಕೊಂಡಿರುವುದರಿಂದ ಬಂದಿಲ್ಲ. ಅವರು ಮುಂದಿನ ವಾರ ಬಂದು ಬಾಗಿನ ಅರ್ಪಿಸಲಿದ್ದಾರೆ ಎಂದರು.