Advertisement
ದೇಶಾದ್ಯಂತ ಬಡತನ ರೇಖೆಗಿಂತ ಕೆಳಗಿರುವ ಆದ್ಯತಾ ಕುಟುಂಬ(ಬಿಪಿಎಲ್ ಕಾರ್ಡ್‌ದಾರರು)ಗಳ ಪ್ರತಿ ಯೂನಿಟ್‌ಗೆ ತಿಂಗಳಿಗೆ ಕೇಂದ್ರ ಸರಕಾರದಿಂದ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಅಡಿ 5 ಕೆಜಿ ಅಕ್ಕಿ ನೀಡಲಾಗುತ್ತದೆ. ಆದರೆ ಇದನ್ನು ಕೆಲವು ರಾಜ್ಯ ಸರಕಾರಗಳು ತಮ್ಮ ಯೋಜನೆ ಎಂಬಂತೆ ಬಿಂಬಿಸುತ್ತಿವೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಬಿಲ್ ಮೂಲಕ ತಾನೇ 5 ಕೆಜಿ ಅಕ್ಕಿ ವಿತರಣೆ ಮಾಡುತ್ತಿದ್ದು, ಇದರಲ್ಲಿ ರಾಜ್ಯ ಸರಕಾರದ ಪಾಲು ಏನೂ ಇಲ್ಲ ಎಂಬ ಸಂದೇಶ ರವಾನಿಸುತ್ತಿದೆ.
Related Articles
“ಈ ಹಿಂದೆ ಮಾನ್ಯುವಲ್ ಆಗಿ ಬಿಲ್ ನೀಡುವ ಪದ್ಧತಿ ಇತ್ತು. ಆದರೆ ಬಯೋಮೆಟ್ರಿಕ್ ಬಂದ ಬಳಿಕ ಕಾರ್ಡ್‌ದಾರರು ಬಂದು ಬಯೋಮೆಟ್ರಿಕ್ ಕೊಟ್ಟ ಬಳಿಕವೇ ಲಾಕ್ ತೆರೆಯುತ್ತದೆ. ಪಡಿತರ ವಿತರಣೆ ವಿವರವೂ ಬಯೋಮೆಟ್ರಿಕ್‌ನಲ್ಲಿ ಕಾಣುತ್ತದೆ. ಹೀಗಾಗಿ ಬಿಲ್ ಅಗತ್ಯ ಇಲ್ಲ. ಇದರ ಹೊರತಾಗಿಯೂ ಆಹಾರ ನಿರೀಕ್ಷಕರು ಈಗ ಗ್ರಾಹಕರಿಗೆ ಬಿಲ್ ನೀಡುವಂತೆ ಒತ್ತಡ ಹಾಕುತ್ತಿದ್ದಾರೆ. ಆದರೆ ಅದಕ್ಕೆ ಪ್ರತ್ಯೇಕ ಪಿಒಎಸ್ ಮಾದರಿಯ ಯಂತ್ರ ಹೊಂದಿರಬೇಕು. ಅದಕ್ಕೆ ಸುಮಾರು 10 ಸಾವಿರ ರೂ. ಆಗುತ್ತದೆ. ಅಲ್ಲದೆ, ಪ್ರತಿ 30-40 ಬಿಲ್ ನೀಡಿದ ಬಳಿಕ ಥರ್ಮಲ್ ಪೇಪರ್ ಬದಲಾಯಿಸಬೇಕು. ಈ ಮಧ್ಯೆ ಸರ್ವರ್ ತುಂಬಾ ನಿಧಾನವಾಗಿರುತ್ತದೆ. ಗ್ರಾಹಕರು ಎರಡೆರಡು ಕಡೆಗಳಲ್ಲಿ ಬಯೋಮೆಟ್ರಿಕ್ ಕೊಡಬೇಕಾಗುತ್ತದೆ. ಈ ಎಲ್ಲ ಜಂಜಾಟದ ಹಿನ್ನೆಲೆಯಲ್ಲಿ ನಾವು ನಿರಾಕರಿಸುತ್ತಿದ್ದೇವೆ’ ಎಂದು ರಾಜ್ಯ ಸರಕಾರಿ ಪಡಿತರ ವಿತರಕರ ಸಂಘ ಅಧ್ಯಕ್ಷ ಹಾಗೂ ರಾಷ್ಟ್ರೀಯ ಕಾರ್ಯದರ್ಶಿ ಟಿ. ಕೃಷ್ಣಪ್ಪ ಸ್ಪಷ್ಟಪಡಿಸಿದರು.
Advertisement
ಸದ್ಯಕ್ಕೆ ಬೆರಳೆಣಿಕೆಯಷ್ಟು ಪಡಿತರ ವಿತರಕರು ಈ ಸೌಲಭ್ಯ ಹೊಂದಿದ್ದಾರೆ. ಆದರೆ ಎಲ್ಲರಿಗೂ ಕಡ್ಡಾಯಗೊಳಿಸಿದರೆ ಕಷ್ಟ ಮತ್ತು ಆರ್ಥಿಕ ಹೊರೆ ಆಗುತ್ತದೆ. ನೆರೆಯ ಗೋವಾದಲ್ಲಿ ಅಲ್ಲಿನ ಸರಕಾರವೇ ಪಿಒಎಸ್ ಮಾದರಿಯ ಯಂತ್ರವನ್ನು ಪಡಿತರ ವಿತರಕರಿಗೆ ನೀಡಿದೆ. ಅದಕ್ಕೆ ಬೇಕಾಗುವ ಥರ್ಮಲ್ ಪೇಪರ್ ಕೂಡ ಪೂರೈಸುತ್ತಿದೆ. ಅದೇ ರೀತಿಯಲ್ಲಿ ನಮ್ಮಲ್ಲೂ ಸರಕಾರವೇ ಯಂತ್ರಗಳನ್ನು ಪೂರೈಸುವುದಾದರೆ ನಮ್ಮ ಅಭ್ಯಂತರ ಇಲ್ಲ. ರಾಜ್ಯದಲ್ಲಿ ಸುಮಾರು 22 ಸಾವಿರ ಪಡಿತರ ವಿತರಕರಿದ್ದೇವೆ. ಎಲ್ಲರಿಗೂ ಇದನ್ನು ನೀಡಬೇಕು ಎಂದು ಆಗ್ರಹಿಸಿದರು.
ವಿಜಯ ಕುಮಾರ ಚಂದರಗಿ