Advertisement

ಬಂಡವಾಳಶಾಹಿಗಳಿಗೆ ಕೇಂದ್ರ ಸರ್ಕಾರ ಮಣೆ: ಜಗನ್ನಾಥ್‌

06:27 AM Jan 09, 2019 | Team Udayavani |

ಹಗರಿಬೊಮ್ಮನಹಳ್ಳಿ: ಪಟ್ಟಣದಲ್ಲಿ ಕೇಂದ್ರ ಸರಕಾರದ ವಿರೋಧಿ ನೀತಿ ಖಂಡಿಸಿ ವಿವಿಧ ಸಂಘಟನೆಗಳು ನಡೆಸಿದ ಬೃಹತ್‌ ಪ್ರತಿಭಟನೆಗೆ ಸಂಪೂರ್ಣ ಬೆಂಬಲ ವ್ಯಕ್ತವಾಯಿತು.

Advertisement

ಆರಂಭದಲ್ಲಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಿಐಟಿಯುನ ನಾನಾ ಸಂಘಟನೆ ಮುಖಂಡರು ಮೆರವಣಿಗೆ ನಡೆಸಿದರು. ಕಾರ್ಮಿಕ ವಿರೋಧಿ ನೀತಿ ಖಂಡಿಸಿ ಸಿಐಟಿಯು ಸಂಘಟನೆ ನೀಡಿದ್ದ ಬಂದ್‌ ಕರೆಗೆ ಎಲ್ಲಾ ಸಂಘಟನೆಯ ಪದಾಧಿಕಾರಿಗಳು ವ್ಯಾಪಕ ಬೆಂಬಲ ನೀಡಿದರು. ಬಂದ್‌ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಬಸ್‌ಸಂಚಾರ ಸ್ಥಗಿತಗೊಂಡು, ಬಸ್‌ನಿಲ್ದಾಣ ಪ್ರಯಾಣಿಕರಿಲ್ಲದೆ ಬಿಕೋ ಎನ್ನುವಂತಿತ್ತು. ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು.

ಪಟ್ಟಣದ ಬಸವೇಶ್ವರ ಬಜಾರ್‌ ಅಂಗಡಿ ಮುಂಗಟ್ಟುಗಳು ಮುಚ್ಚುವ ಮೂಲಕ ಬಂದ್‌ ಕರೆಗೆ ಬೆಂಬಲ ವ್ಯಕ್ತಪಡಿಸಿದವು. ಬಳಿಕ ಬಸವೇಶ್ವರ ಬಜಾರದ ಪ್ರಮುಖ ರಸ್ತೆಯಲ್ಲಿ ಸಂಚಾರ ತಡೆ ನಡೆಸಿದರು. ಸಿಐಟಿಯು ತಾಲೂಕು ಅಧ್ಯಕ್ಷ ಎಸ್‌.ಜಗನ್ನಾಥ್‌ ಮಾತನಾಡಿ, ಸಾರ್ವಜನಿಕ ಉದ್ದಿಮೆಗಳಲ್ಲಿ ಷೇರು ವಿಕ್ರಯ ಬೇಡ, ವಿದೇಶಿ ಬಂಡವಾಳ ಹೂಡಿಕೆಗೆ ಅವಕಾಶ ಕಲ್ಪಿಸಬಾರದು. 

ಕೇಂದ್ರ ಸರಕಾರ ಬಂಡವಾಳಶಾಹಿಗಳ ಏಜೆಂಟ್‌ ರಂತೆ ಕಾರ್ಯನಿರ್ವಹಿಸುತ್ತಿದೆ. ಗುತ್ತಿಗೆ ಪದ್ಧತಿ ನಿಯಂತ್ರಿಸಿ, ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು. ಗುತ್ತಿಗೆ ನೌಕರರನ್ನು ಕೂಡಲೇ ಕಾಯಂಗೊಳಿಸಬೇಕು. ರೈತರು ಬೆಳೆದ ಬೆಳೆಗಳಿಗೆ ಕಾಯಂ ಬೆಂಬಲ ಬೆಲೆ ನೀಡಬೇಕು ಎಂದು ಆಗ್ರಹಿಸಿದರು. 

ನೌಕರರ ಒಕ್ಕೂಟದ ತಾಲೂಕು ಅಧ್ಯಕ್ಷ ಈ.ಕೃಷ್ಣಮೂರ್ತಿ ಮಾತನಾಡಿ, ಉದ್ದೇಶಿತ ಎನ್‌ ಪಿಎಸ್‌ ಪಿಂಚಣಿ ಬದ್ಧತಿಯನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು. ರಾಜ್ಯ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಗೋಣಿಬಸಪ್ಪ ಜಿಪಂ ಮಾಜಿ ಸದಸ್ಯರಾದ ಅಕ್ಕಿ ತೋಟೇಶ್‌, ಹೆಗ್ಗಾಳ್‌ ರಾಮಣ್ಣ, ದೇವದಾಸಿ ವಿಮೋಚನಾ ಸಂಘದ ರಾಜ್ಯಧ್ಯಕ್ಷೆ ಬಿ.ಮಾಳಮ್ಮ, ಕಾಂಗ್ರೆಸ್‌ ಬ್ಲಾಕ್‌ ಅಧ್ಯಕ್ಷ ಸೋಮಲಿಂಗಪ್ಪ, ಮಾಜಿ ಅಧ್ಯಕ್ಷ ಮುಟುಗನಹಳ್ಳಿ ಕೊಟ್ರೇಶ್‌, ಮುಖಂಡ ಬಸವರಾಜ, ಸಿಐಟಿಯು ತಾಲೂಕು ಕಾರ್ಯದರ್ಶಿ ಸಿ.ಎಂ. ಮಹೇಶ್ವರ ಮಾತನಾಡಿದರು. ಸಂಘಟನೆಗಳ ಮುಖಂಡರಾದ ರಂಗನಾಥ ಹವಾಲ್ದಾರ್‌, ಕೊಟಿಗೆ ಮಲ್ಲಿಕಾರ್ಜುನ, ಗೌರಮ್ಮ,
ಸೌಭಾಗ್ಯಮ್ಮ, ಶರಣಪ್ಪ, ರವಿಕಿರಣ, ಮಂಜುಳಾ, ಶ್ರೀಶೈಲ ಇನ್ನಿತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next