Advertisement

ಕೇಂದ್ರ ಸರ್ಕಾರಕ್ಕಿಲ್ಲ ನೈತಿಕತೆ: ಪಾಟೀಲ

08:48 PM Jun 15, 2021 | Team Udayavani |

ಹಾವೇರಿ: ದೇಶದಲ್ಲಿ ಕೊರೊನಾ ಹಾಗೂ ಬೆಲೆ ಏರಿಕೆ ನಿಯಂತ್ರಿಸುವಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದ್ದು, ಅ ಧಿಕಾರದಲ್ಲಿ ಮುಂದುವರಿಯಲು ಯಾವ ನೈತಿಕತೆಯೂ ಸರ್ಕಾರಕ್ಕಿಲ್ಲ. ಕೂಡಲೇ ಅಧಿ ಕಾರ ಬಿಟ್ಟು ತೊಲಗಬೇಕು ಎಂದು ಮಾಜಿ ಸಚಿವ, ವಿಜಯಪುರ ಜಿಲ್ಲೆಯ ಬಬಲೇಶ್ವರ ಕ್ಷೇತ್ರದ ಶಾಸಕ ಎಂ.ಬಿ. ಪಾಟೀಲ ವಾಗ್ಧಾಳಿ ನಡೆಸಿದರು.

Advertisement

ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೊನಾದಿಂದ ದೇಶದಲ್ಲಿ ಲಕ್ಷಾಂತರ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಸರ್ಕಾರಿ ಲೆಕ್ಕಕ್ಕಿಂತ 10 ಪಟ್ಟು ಹೆಚ್ಚು ಜನರು ಕೊರೊನಾಕ್ಕೆ ಬಲಿಯಾಗಿದ್ದಾರೆ. ಅನೇಕ ಕುಟುಂಬಗಳು ಬೀದಿ ಪಾಲಾಗಿವೆ. ಮಕ್ಕಳು ಅನಾಥರಾಗಿದ್ದಾರೆ. ಎಲ್ಲ ದೇಶಗಳಲ್ಲಿ ಲಸಿಕೆಗೆ ಆದ್ಯತೆ ನೀಡಲಾಗಿದೆ. ಆದರೆ, ನಮ್ಮಲ್ಲಿ ಕೊರೊನಾ ನಿಯಂತ್ರಣಕ್ಕೆ ವೈಜ್ಞಾನಿಕ ಕ್ರಮ ಕೈಗೊಳ್ಳಲಿಲ್ಲ. ಆಕ್ಸಿಜನ್‌, ರೆಮ್‌ ಡೆಸಿವಿಯರ್‌, ವೆಂಟಿಲೇಟರ್‌ ಇತರ ಅಗತ್ಯ ಔಷಧ , ಮೂಲ ಸೌಕರ್ಯಗಳಿಲ್ಲದೇ ಜನರು ಮೃತಪಟ್ಟಿದ್ದಾರೆ. ಇವೆಲ್ಲದಕ್ಕೂ ಪ್ರಧಾನಿ ಮೋದಿಯವರೇ ನೇರ ಹೊಣೆ ಎಂದು ಆರೋಪಿಸಿದರು.

ಲಸಿಕೆ ನೀಡುವಿಕೆಯಲ್ಲೂ ಕೇಂದ್ರ ಸರ್ಕಾರ ವಿಫಲವಾಗಿದೆ. ಪ್ರಧಾನಿ ಮೋದಿ ವಿಶ್ವಗುರುವಾಗುವ ಆತುರದಲ್ಲಿ ಬೇರೆ ದೇಶಗಳಿಗೆ ಲಸಿಕೆ ಕೊಟ್ಟಿದ್ದಾರೆ. ಆದರೆ, ದೇಶದ ಜನರಿಗೆ ಲಸಿಕೆ ಇಲ್ಲದಂತಾಗಿದೆ. ಅಮೆರಿಕಾ, ಇಸ್ರೇಲ್‌ ಸೇರಿದಂತೆ ಅನೇಕ ದೇಶಗಳಲ್ಲಿ ಲಸಿಕೆ ನೀಡಿದ್ದರಿಂದ ಕೊರೊನಾ ನಿಯಂತ್ರಣಕ್ಕೆ ಬಂದಿದೆ. 18 ವರ್ಷ ಮೇಲ್ಪಟ್ಟ ರಾಜ್ಯದ 5 ಕೋಟಿ ಸೇರಿದಂತೆ ದೇಶದ 100 ಕೋಟಿ ಜನರಿಗೆ ಶೀಘ್ರದಲ್ಲಿ ವ್ಯಾಕ್ಸಿನ್‌ ಹಾಕಿಸಬೇಕು. ಬೇರೆಲ್ಲ ಅಭಿವೃದ್ಧಿ ಕಾರ್ಯ ಬದಿಗಿಟ್ಟಾದರೂ ಲಸಿಕೆ ನೀಡಬೇಕು ಎಂದು ಆಗ್ರಹಿಸಿದರು.

ಬೆಲೆ ಏರಿಕೆ ನಿಯಂತ್ರಣದಲ್ಲೂ ಕೇಂದ್ರ ಸರ್ಕಾರ ವಿಫಲವಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಇಳಿದಾಗಲೂ ಪೆಟ್ರೋಲ್‌-ಡೀಸೆಲ್‌ ಬೆಲೆ ಇಳಿಕೆಯಾಗಲಿಲ್ಲ. ಅಕ್ಕಪಕ್ಕದ ದೇಶಗಳಲ್ಲಿ ಕೂಡ ಇಂಧನ ಬೆಲೆ ನಿಯಂತ್ರಣದಲ್ಲಿದೆ. ಆದರೆ ಇಲ್ಲಿ ಪೆಟ್ರೋಲ್‌ ಬೆಲೆ ನೂರರ ಗಡಿ ದಾಟಿದೆ. ಕೊರೊನಾ ಸಂಕಷ್ಟದೊಂದಿಗೆ ಬೆಲೆ ಏರಿಕೆಯಿಂದ ಎಲ್ಲ ವರ್ಗದ ಜನರೂ ಸಮಸ್ಯೆ ಎದುರಿಸುತ್ತಿದ್ದಾರೆ. ವಿದ್ಯುತ್‌ ದರವನ್ನೂ ಏರಿಸಲಾಗಿದೆ. ಗ್ಯಾಸ್‌ ಸಿಲಿಂಡರ್‌, ಅಡುಗೆ ಎಣ್ಣೆ, ಬೇಳೆ ಕಾಳು ಹೀಗೆ ಎಲ್ಲ ದರ ಗಗನಕ್ಕೇರಿದೆ. 2014ಕ್ಕಿಂತ ಮೊದಲು ಅಮೆರಿಕಾ, ರಷ್ಯಾ ಮುಂತಾದ ಮುಂದುವರಿದ ದೇಶಗಳೊಂದಿಗೆ ಸಮನಾಗಿದ್ದ ದೇಶ ಈಗ ಪಾಕಿಸ್ತಾನ, ಬಾಂಗ್ಲಾ ಇತರ ದೇಶಗಳೊಂದಿಗೆ ಪೈಪೋಟಿ ನಡೆಸುವಂತಾಗಿದೆ. ಕೇಂದ್ರ ಸರ್ಕಾರಕ್ಕೆ ಬಡ ಜನರ ಬಗ್ಗೆ ಕಾಳಜಿಯಿಲ್ಲ. ಅಚ್ಚೇ ದಿನ್‌, ಮನ್‌ ಕಿ ಬಾತ್‌ ಎಂದು ಹೇಳುತ್ತ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ನಮಗೆ ನಿಮ್ಮ ಅಚ್ಚೇ ದಿನ್‌ ಬದಲಾಗಿ ಹಿಂದಿದ್ದ ಕೆಟ್ಟ ದಿನಗಳನ್ನೇ ನೀಡಿ ಎಂದು ಕೇಳುವಂತಾಗಿದೆ ಎಂದು ವ್ಯಂಗ್ಯವಾಡಿದರು.

ಕೇಂದ್ರ ಸರ್ಕಾರ ಎಲ್ಲ ರಂಗಗಳಲ್ಲೂ ವಿಫಲವಾಗಿದೆ. ಆದ್ದರಿಂದ ಈ ಜನ ವಿರೋ ಧಿ ಸರ್ಕಾರ ತೊಲಗಬೇಕು. ಮೊದಲು ಎಲ್ಲರಿಗೂ ವ್ಯಾಕ್ಸಿನ್‌ ಕೊಟ್ಟು ಜನರ ಪ್ರಾಣ ಉಳಿಸುವ ಕೆಲಸ ಸರ್ಕಾರ ಮಾಡಬೇಕು ಎಂದು ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಮಾಜಿ ಸಂಸದ ಐ.ಜಿ. ಸನದಿ, ಪಕ್ಷದ ಮುಖಂಡರಾದ ಎ.ಎಂ. ಹಿಂಡಸಗೇರಿ, ಮಾಜಿ ಸಚಿವರಾದ ರುದ್ರಪ್ಪ ಲಮಾಣಿ, ಮನೋಹರ ತಹಶೀಲ್ದಾರ್‌, ಬಸವರಾಜ ಶಿವಣ್ಣನವರ, ಶ್ರೀನಿವಾಸ ಮಾನೆ, ಸೋಮಣ್ಣ ಬೇವಿನಮರದ, ಜಿಲ್ಲಾಧ್ಯಕ್ಷ್ಯ‌ ಎಂ.ಎಂ. ಹಿರೇಮಠ, ಎಚ್‌. ಜಯಸಿಂಹ, ಎಸ್‌.ಆರ್‌. ಪಾಟೀಲ, ಪ್ರಕಾಶ ಕೋಳಿವಾಡ ಸೇರಿದಂತೆ ಇತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next