ಉಡುಪಿ: ಬಿಜೆಪಿಯವರು 2014ರಲ್ಲಿ ನಾವು ಅಧಿಕಾರಕ್ಕೆ ಬಂದರೆ 1 ವರ್ಷದಲ್ಲಿ ಉದ್ಯೋಗವನ್ನು ಸೃಷ್ಟಿ ಮಾಡುತ್ತೇವೆ ಎಂದಿದ್ದರು. ಆದರೆ ಇದೀಗ 10 ವರ್ಷ ಕಳೆದರೂ ಉದ್ಯೋಗ ಸೃಷ್ಟಿಯಾಗಲಿಲ್ಲ. ಆದರೆ ಖಾಸಗಿ ಕಂಪೆನಿಯರು ಇಲ್ಲಿನ ಜನತೆಗೆ ಉದ್ಯೋಗ ನೀಡುತ್ತಿದ್ದಾರೆ ಹೊರತೂ ಸರಕಾರ ಈ ನಿಟ್ಟಿನಲ್ಲಿ ವಿಫಲವಾಗಿದೆ ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಅಭ್ಯರ್ಥಿ ಕೆ. ಜಯಪ್ರಕಾಶ್ ಹೆಗ್ಡೆೆ ಹೇಳಿದರು.
ಹಿರಿಯಡಕ ಸಮೀಪದಲ್ಲಿರುವ ಜಿನೆಸಿಸ್ ಕಂಪನೆಯಲ್ಲಿ ಗುರುವಾರ ಮತದಾರರೊಂದಿಗೆ ಅವರು ಮಾತಯಾಚನೆ ಮಾಡುತ್ತಾ ಮಾತನಾಡಿದರು.
ಸಕ್ಕರೆ ಕಾರ್ಖಾನೆಯ ಅವಶೇಷವೇ ಇಲ್ಲ
ನಾನು ಸಚಿವನಾಗಿದ್ದಾಗ ಬ್ರಹ್ಮಾವರ ಸಕ್ಕರೆ ಕಾರ್ಖಾನೆಯ ಅಧ್ಯಕ್ಷನೂ ಆಗಿದ್ದೆ. ಆಗ ಕಾರ್ಖಾನೆಯ ಜಾಗದ ಮೇಲೆ ಸಾಲ ತೆಗೆದುಕೊಳ್ಳಲಾಗಿತ್ತು. ಸಕ್ಕರೆ ಮಾರಾಟ ಮಾಡಿ ಸಾಲ ತೀರಿಸಲಾಗಿದೆ. ಅನಂತರ ಬಂದ ಸರಕಾರದಿಂದ ಸಾಲ ಕೇಳಿದಾಗ ಎಸ್.ಎಂ. ಕೃಷ್ಣ ಅವರು ಸ್ವಲ್ಪಮಟ್ಟಿನ ಸಾಲ ಬಿಡುಗಡೆ ಮಾಡಿದರು. ಉಳಿದ ಸಾಲ ಬಿಡುಗಡೆ ಮಾಡುವಾಗ ನನ್ನಲ್ಲಿ ರಾಜೀನಾಮೆ ಕೊಡಬೇಕೆಂದು ತಿಳಿಸಿದರು. ಆಗ ನಾನು ಬೇರೆ ಕಡೆಯಿಂದ ಸಾಲ ಮಾಡಿ ತಂದ 45 ಲ.ರೂ. ಹಣವನ್ನು ಕೊಡುವಂತೆ ಕೇಳಿದ್ದೆನು. ಅಂತಹ ಕಷ್ಟ ಪರಿಸ್ಥಿತಿಯಲ್ಲಿಯೂ ಕಾರ್ಖಾನೆಯಲ್ಲಿ ನಡೆಸಿದ್ದೇವೆ. ಆದರೆ ಪ್ರಸ್ತುತ ಕಾರ್ಖಾನೆಯಲ್ಲಿರುವ ಕಬ್ಬಿಣ ಮತ್ತು ಕಲ್ಲನ್ನು ಮಾರುವ ಮೂಲಕ ಸಕ್ಕರೆ ಕಾರ್ಖಾನೆಯ ಅವಶೇಷವೇ ಇಲ್ಲದಂತೆ ಮಾಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಉದ್ಯೋಗ ಸೃಷ್ಟಿ ಮಾಡಬೇಕಾದ ನಾವೇ ಉದ್ಯೋಗ ಕಳೆದುಕೊಳ್ಳುವ ಪರಿಸ್ಥಿತಿಗೆ ತಲುಪಿದ್ದೇವೆ. ಈ ಬಾಗದಲ್ಲಿ ಇನ್ನೂ ಹೆಚ್ಚು ಉದ್ದಿಮೆಗಳು ಸ್ಥಾಪನೆಯಾಗುವುದರೊಂದಿಗೆ ಯುವಜನತೆಗೆ ಉದ್ಯೋಗ ದೊರಕಬೇಕಾದಂತಹ ಸ್ಥಿತಿ ನಿರ್ಮಾಣವಾಗಬೇಕಾಗಿದೆ. ಕಪ್ಪು ಹಣ ತರುವ ಮೂಲಕ ದೇಶದ ಪ್ರತಿಯೊಬ್ಬರ ಖಾತೆಗೆ 15 ಲ.ರೂ. ಪಾವತಿಸಲಾಗುವುದು ಎಂದಿದ್ದರು ಬಂದಿದೆಯೇ? ಎಂದು ಪ್ರಶ್ನಿಸಿದರು.
ಜನ್‌ಧನ್ ಖಾತೆ ತೆರೆದಿದ್ದಾರೆ ಹೊರತೂ ಯಾವ ಹಣವೂ ಬಂದಿಲ್ಲ ಎಂದು ಸರಕಾರದ ಲೋಪ ದೋಷಗಳ ಬಗ್ಗೆೆ ಲೇವಡಿ ಮಾಡಿದರು. ಕಾಂಗ್ರೆಸ್ ಪಕ್ಷಕ್ಕೆ ಮತದಾನ ಮಾಡುವ ಮೂಲಕ ಈ ಬಾರಿ ಒಂದು ಅವಕಾಶ ಕೊಡುವಂತೆ ಮತದಾರರಲ್ಲಿ ವಿನಂತಿಸಿದರು. ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಪ್ರಮುಖರಾದ ಎಂ.ಎ. ಗಫೂರ್, ಭಾಸ್ಕರ ರಾವ್ ಕಿದಿಯೂರು ಉಪಸ್ಥಿತರಿದ್ದರು.