ಬೆಂಗಳೂರು: ರಾಜ್ಯದಲ್ಲಿ ನೆರೆ ಸಂತ್ರಸ್ತರಿಗೆ ಪರಿಹಾರ ಮತ್ತು ಪುನರ್ವಸತಿ ಕುರಿತು ಕೂಡಲೇ ಸರ್ವಪಕ್ಷ ಸಭೆ ಕರೆದು ಚರ್ಚಿಸಬೇಕು ಎಂದು ಕೇಂದ್ರದ ಮಾಜಿ ಸಚಿವ, ವಿಧಾನ ಪರಿಷತ್ ಸದಸ್ಯ ಸಿ.ಎಂ.ಇಬ್ರಾಹಿಂ ಆಗ್ರಹಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರಕಾರವು ನೆರೆ ಪರಿಸ್ಥಿತಿ ನಿಭಾಯಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ಕೇಂದ್ರ ಸರಕಾರವು ರಾಜ್ಯಕ್ಕೆ ಕನಿಷ್ಠ 5 ಸಾವಿರ ಕೋಟಿ ರೂ. ನೆರವು ನೀಡಬೇಕಿತ್ತು. ಆದರೆ 1,200 ಕೋಟಿ ರೂ. ಮಾತ್ರ ನೀಡಿದೆ ಎಂದು ಹೇಳಿದರು.
ಕೇಂದ್ರ ಸರಕಾರವು ರಾಜ್ಯಕ್ಕೆ ಪೂರ್ಣ ಪ್ರಮಾಣದಲ್ಲಿ ಕನಿಷ್ಠ 10 ಸಾವಿರ ಕೋಟಿ ರೂ. ನೆರವು ನೀಡಬೇಕು. ಕೃಷಿ, ತೋಟಗಾರಿಕೆ ಬೆಳೆ ನಾಶ, ಆಸ್ತಿ-ಪಾಸ್ತಿ ನಷ್ಟವುಂಟಾಗಿರುವುದರಿಂದ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು. ನಿರ್ಲಕ್ಷ್ಯ ಮಾಡಿದರೆ ರಾಜ್ಯಾದ್ಯಂತ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸನ್ಮಾನ್ಯ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕರ್ನಾಟಕದ ಮೇಲೆ ಯಾಕೆ ಕೋಪ ಎಂಬುದು ಅರ್ಥವಾಗುತ್ತಿಲ್ಲ. ಪಾಪ, ಯಡಿಯೂರಪ್ಪ ಅವರ ಕಷ್ಟ ನನಗೆ ಅರ್ಥವಾಗುತ್ತದೆ. ಅವರು ಮುಖ್ಯಮಂತ್ರಿಯಾದ ಅನಂತರ ಪ್ರಧಾನಿಯವರ ಬಳಿ ಹೋಗಿ ಮಾತನಾಡಲೇ ಇಲ್ಲ ಎಂದು ವ್ಯಂಗ್ಯವಾಡಿದರು.
ಕರ್ನಾಟಕ ಬಿಜೆಪಿ ನಾಯಕರು ದಿಲ್ಲಿಗೆ ಹೋಗಬೇಕಾದರೆ ಅಮಿತ್ ಶಾ ಅವರ ವೀಸಾ ಬೇಕಾಗಿದೆ. ಇವರನ್ನು ಅಲ್ಲಿ ಕೇಳುವವರೂ ಇಲ್ಲದಂತಾಗಿದೆ ಎಂದು ಲೇವಡಿ ಮಾಡಿದರು.ಯಡಿಯೂರಪ್ಪ ಅವರು ಸರ್ವಪಕ್ಷ ನಿಯೋಗವನ್ನು ಪ್ರಧಾನಿ ಬಳಿ ಕರೆದೊಯ್ದರೆ ನಾವೇ ಅವರಿಗೆ ಸಾಥ್ ನೀಡಿ ಪ್ರಧಾನಿಗೆ ಹೆಚ್ಚಿನ ನೆರವು ಕೇಳುತ್ತೇವೆ ಎಂದು ಹೇಳಿದರು.
ಬೈಠಕ್ ಸರಕಾರ
ರಾಜ್ಯದಲ್ಲಿ ಬಿಜೆಪಿಯ ಬೈಠಕ್ ಸರಕಾರ ಇದ್ದು ಇನ್ನೂ ಮೇಲೆ ಎದ್ದಿಲ್ಲ. ಕೇಂದ್ರ ಸರಕಾರಕ್ಕೆ ಒಂದು ರೀತಿಯಲ್ಲಿ ಡೆಂಗ್ಯೂ ಜ್ವರ ಬಂದಿದೆ. ನೆರೆಗೆ ಪರಿಹಾರ ಕೇಳಿದರೆ ಅಥವಾ ಪ್ರಶ್ನಿಸಿದರೆ ಶೋಕಾಸ್ ನೋಟಿಸ್ ನೀಡುತ್ತಾರೆ. ಯಾರೂ ಯಾರನ್ನೂ ಪ್ರಶ್ನಿಸಬಾರದು ಎಂಬ ಮನಃಸ್ಥಿತಿ ಸರಿಯಲ್ಲ ಎಂದರು.
ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟವರು ಪತಿವ್ರತೆಯರಂತಾಗಿದ್ದಾರೆ. ರಾಜೀನಾಮೆ ಕೊಟ್ಟು ಇದೀಗ ಬೀದಿ ಪಾಲಾಗಿದ್ದಾರೆ ಎಂದು ಲೇವಡಿ ಮಾಡಿದರು.