ತುಮಕೂರು: ತಮ್ಮ ವಿವಿಧ ಬೇಡಿಕೆ ಈಡೇರಿಸಬೇಕೆಂದು ಒತ್ತಾಯಿಸಿ ಬಿಎಸ್‌ಎನ್‌ಎಲ್ ಸಂಸ್ಥೆಯ ನೂರಾರು ನೌಕರರು ಸೋಮವಾರ ಬಿಎಸ್‌ಎನ್‌ಎಲ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ಕೇಂದ್ರ ಸರ್ಕಾರದ ಧೋರಣೆ ಖಂಡಿಸಿ, ನೌಕರರು ಘೋಷಣೆ ಕೂಗುತ್ತಾ ಪ್ರತಿಭಟನಾ ಧರಣಿ ನಡೆಸಿದರು.
ಮುಷ್ಕರ ಆರಂಭ: ಈ ವೇಳೆ ಮಾತನಾಡಿದ ಎಯುಎಬಿ ಜಿಲ್ಲಾ ಸಂಚಾಲಕ ಎಚ್.ನರೇಶ್‌ರೆಡ್ಡಿ, ಕೇಂದ್ರ ಸರ್ಕಾರ ನಿರ್ಲಕ್ಷದಿಂದಾಗಿ ಬಿಎಸ್‌ಎನ್‌ಎಲ್ ಸಂಸ್ಥೆ ತನ್ನ ಅಸ್ತಿತ್ವ ಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾಗಿದ್ದು, 3 ಲಕ್ಷ ನೌಕರರರು ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಬಿಎಸ್‌ಎನ್‌ಎಲ್ ಸಂಸ್ಥೆಯನ್ನು ಲಾಭದಾಯಕವಾಗಿಸುವ ನಿಟ್ಟಿನಲ್ಲಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ರಾಷ್ಟ್ರಾದ್ಯಂತ ಬಿಎಸ್‌ಎನ್‌ಎಲ್ ನೌಕರರು ಮುಷ್ಕರ ಆರಂಭಿಸಿದ್ದಾರೆ ಎಂದು ತಿಳಿಸಿದರು.
ಸಂಸ್ಥೆ ಮುಚ್ಚಲು ಹುನ್ನಾರ: ಕೇಂದ್ರ ಸರ್ಕಾರ ಬಿಎಸ್‌ಎನ್‌ಎಲ್ ಸಂಸ್ಥೆಗೆ 4ಜಿ ಸೇವೆ ನೀಡದೇ, ಖಾಸಗಿ ಜಿಯೋ ಸಂಸ್ಥೆಯನ್ನು ಕೇಂದ್ರ ಸರ್ಕಾರ ಪ್ರಚಾರ ಮಾಡುತ್ತಿದ್ದು, ಕಡಿಮೆ ತಂತ್ರಾಂಶದಿಂದ ಗುಣಮಟ್ಟದ ಸೇವೆ ನೀಡಲು ಬಿಎಸ್‌ಎನ್‌ಎಲ್ ಸಿಬ್ಬಂದಿ ಪ್ರಯತ್ನ ಮಾಡುತ್ತಿದ್ದರೂ, ನಷ್ಟದಲ್ಲಿದೆ ಎಂದು ಸಂಸ್ಥೆ ಮುಚ್ಚಲು ಹುನ್ನಾರ ನಡೆಸಲಾಗುತ್ತಿದೆ ಎಂದು ಆರೋಪಿಸಿದರು.
ದೇಶದ ಅಭಿವೃದ್ಧಿಗೆ ಪೂರಕ: ಬಿಎಸ್‌ಎನ್‌ಎಲ್ ಬೆಳವಣಿಗೆಗೆ ಅವಶ್ಯಕವಾಗಿರುವ 4ಜಿ ಸೇವೆ ನೀಡಿದರೆ ಖಾಸಗಿ ಸಂಸ್ಥೆಗಳಿಗೆ ಪೈಪೋಟಿ ನೀಡಲು ಶಕ್ತವಾಗಲಿದೆ. ಸಂಸ್ಥೆಗೆ ಸೇರಿದ ಆಸ್ತಿ ಮತ್ತು ಭೂಮಿ ನಿರ್ವಹಿಸುವ ಅಧಿಕಾರ ನೀಡಿದರೆ, ವಾರ್ಷಿಕ 10,000 ಕೋಟಿ ರೂ. ಆದಾಯ ಗಳಿಸಬಹುದಾಗಿದೆ. ಸಂಸ್ಥೆಯನ್ನು ಆರ್ಥಿಕವಾಗಿ ಮುನ್ನಡೆಸಬೇಕಾದರೆ, ಕೇಂದ್ರ ಸರ್ಕಾರ ಟ್ರಾಯ್ ನಿಯಮ ಪಾಲಿಸಬೇಕು. ನೆಹರೂ ಅವರು ಕೇಂದ್ರ ಸಂಸ್ಥೆಗಳು ದೇಶದ ಅಭಿವೃದ್ಧಿಗೆ ಪೂರಕ ಎಂದರೆ, ಈಗಿನ ಕೇಂದ್ರ ಸರ್ಕಾರ ಅವನ್ನು ಮುಚ್ಚಿಸಲು ಪ್ರಯತ್ನ ನಡೆಸುತ್ತಿದೆ ಎಂದರು.
ವೇತನ ಪರಿಷ್ಕರಣೆ ಮಾಡಿ: ಬಿಎಸ್‌ಎನ್‌ಎಲ್ ನೌಕರರಿಗೆ 3ನೇ ವೇತನ ಆಯೋಗದ ಶಿಫಾರಸ್ಸಿನನ್ವಯ ವೇತನ ಪರಿಷ್ಕರಣೆ ಮಾಡಬೇಕು. ಪಿಂಚಣಿ ಪರಿಷ್ಕರಣೆ ಮಾಡಬೇಕು. 2ನೇ ವೇತನ ಆಯೋಗದ ತಾರತಮ್ಯ ನಿವಾರಣೆ ಮಾಡುವಂತೆ ಒತ್ತಾಯಿಸಿ, ರಾಷ್ಟ್ರಾದ್ಯಾಂತ ಬಿಎಸ್‌ಎನ್‌ಎಲ್ ನೌಕರರು ಮುಷ್ಕರಕ್ಕೆ ಮುಂದಾಗಿದ್ದಾರೆ. ಮೂರು ದಿನವೂ ನೌಕರರು ಕೆಲಸವನ್ನು ಬಹಿಷ್ಕರಿಸಲಿದ್ದು, ಕೇಂದ್ರ ಸರ್ಕಾರ ತ್ವರಿತವಾಗಿ ಬಿಎಸ್‌ಎನ್‌ಎಲ್ ನೌಕರರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.
ನೌಕರರು ಮುಷ್ಕರಕ್ಕೆ ಮುಂದಾದಾಗ ವದಂತಿ ಹಬ್ಬಿಸುವ ಮೂಲಕ ಮುಷ್ಕರ ನಿರತರ ಸ್ಥೈರ್ಯ ಕುಗ್ಗಿಸುವ ಕೆಲಸ ಮಾಡುತ್ತಿದ್ದು, ನೌಕರರು ಅಂಥ ವದಂತಿಗಳಿಗೆ ಕಿವಿಗೊಡಬಾರದು ಎಂದು ಮನವಿ ಮಾಡಿದರು. ಪ್ರತಿಭಟನೆಯಲ್ಲಿ ಬಿಎಸ್‌ಎನ್‌ಎಲ್ ಆಲ್ ಯೂನಿಯನ್ ಅಸೋಸಿಯೇಷನ್ ಮುಖಂಡರು, ಎಸ್‌ಎನ್‌ಇಎ ಜಿಲ್ಲಾ ಕಾರ್ಯದರ್ಶಿ ಬಿ.ಕೆ.ಉಮೇಶ್, ಎಐಬಿಎಸ್‌ಎನ್‌ಎಲ್‌ಇಎ ಜಿಲ್ಲಾ ಕಾರ್ಯದರ್ಶಿ ಎಸ್.ಭರತ್ ಸೇರಿದಂತೆ ಇತರರು ಪಾಲ್ಗೊಂಡಿದ್ದರು.