Advertisement

ನಗರದ ಮಧ್ಯದಲ್ಲೊಂದು ರೋಗ ಉತ್ಪಾದನಾ ಕೇಂದ್ರ

01:13 AM Jul 05, 2019 | Team Udayavani |

ವಿದ್ಯಾನಗರ: ಮಳೆಗಾಲ ಪ್ರಾರಂಭವಾದಂತೆ ಎಲ್ಲೆಡೆ ಸ್ವಚ್ಛತಾ ಕಾರ್ಯ, ಮಾಹಿತಿ ಶಿಬಿರಗಳನ್ನು ಆಯೋಜಿಸಿ ಜನತೆಗೆ ಜಾಗೃತಿ ಮೂಡಿಸುವ ಮತ್ತು ಮಳೆಗಾಲದ ರೋಗಗಳು ಬಾರದಂತೆ ತಡೆಯಲು ನೆರವಾಗುವ ಸಲಹೆ-ಸೂಚನೆಗಳನ್ನು ಕೊಡುವತ್ತ ಪಂಚಾಯತ್‌ಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹೆಚ್ಚು ಪ್ರಾಮುಖ್ಯವನ್ನು ನೀಡುತ್ತಿದ್ದರೆ ಕಾಸರಗೋಡು ನಗರಸಭೆ ನಗರ ಮಧ್ಯದಲ್ಲೇ ರೋಗ ಉತ್ಪಾದನಾ ಕೇಂದ್ರ ಸೃಷ್ಟಿಯಾಗಿದ್ದರೂ ಮೌನವಾಗಿರುವುದು ಜನರ ಆತಂಕ ಮತ್ತು ಸಿಟ್ಟಿಗೆ ಕಾರಣವಾಗಿದೆ. ನಗರದ ಮೀನು ಮಾರುಕಟ್ಟೆ ಇಂದು ಮೀನಿನೊಂದಿಗೆ ಹತ್ತು ಹಲವು ಕಾಯಿಲೆಗಳನ್ನು ಉಚಿತವಾಗಿ ನೀಡುವ ತಾಣವಾಗಿ ಬದಲಾಗಿದೆ. ಡೆಂಗ್ಯೂ, ಚಿಕೂನ್‌ಗುನ್ಯ ಮುಂತಾದ ಭೀಕರ ರೋಗಗಳು ಮನುಷ್ಯನ ಜೀವಕ್ಕೆ ಸವಾಲಾಗಿರುವ ಸಮಯದಲ್ಲಿ ಸೊಳ್ಳೆಗಳ ಉತ್ಪಾದನಾ ಕೇಂದ್ರವಾದ ಕಾಸರಗೋಡು ಮೀನು ಮಾರುಕಟ್ಟೆ ನೂರಾರು ಸಮಸ್ಯೆಗಳ ತಾಣವಾಗಿದೆ.

Advertisement

ಎಲ್ಲೆಲ್ಲೂ ಮೀನು ತೊಳೆದ‌ ನೀರು

ಮಾರುಕಟ್ಟೆಗೆ ಮೀನು ಹೇರಿ ಬರುವ ಲಾರಿಗಳಿಂದ ಹರಿದುಬರುವ ನೀರು ಮಾರುಕಟ್ಟೆಯಲ್ಲಿ ಹರಿದುಹೋಗುತ್ತದೆ. ಮಾರುಕಟ್ಟೆ ಎತ್ತರದ ಪ್ರದೇಶದಲ್ಲಿದ್ದು ಕೆಳ ಭಾಗದ ರಸ್ತೆಯಲ್ಲಿ ಸಾಗಿ ತಳಭಾಗದಲ್ಲಿ ಸಂಗ್ರಹವಾಗುತ್ತದೆ. ಮಾರಾಟಗಾರರು ಇದರ ನಡುವೆ ಕುಳಿತು ಮೀನು ಮಾರಾಟ ಮಾಡುತ್ತಾರೆ. ಮೀನು ಕೊಳ್ಳಲು ಹೋಗುವವರಿಗೂ ಮೀನಿನ ನೀರು ಉಂಟು ಮಾಡುವ ಸಮಸ್ಯೆ ಅಷ್ಟಿಷ್ಟಲ್ಲ.

ಶೇಖರಣೆಗೊಂಡ ನೀರಿನ ಬಗ್ಗೆ ವ್ಯಾಪಾರಿಗಳು ಮಾತೆತ್ತಿದ್ದರೆ ಎದ್ದು ಹೋಗುವಂತೆ ಹೇಳುವ ದಲ್ಲಾಳಿಗಳ ದರ್ಪದ ಮಾತಿಗೆ ಹೆದರಿ ಅವರೂ ಸುಮ್ಮನಾಗುತ್ತಾರೆ. ಮಾರುಕಟ್ಟೆಯ ಬಳಿ ನೀರು ಹಾದುಹೋಗುವಂತೆ ಚರಂಡಿ ವ್ಯವಸ್ಥೆ ಮಾಡಲಾಗಿದೆ ಯಾದರೂ ಪ್ಲಾಸ್ಟಿಕ್‌ ಮತ್ತಿತರ ತ್ಯಾಜ್ಯಗಳಿಂದ ಈ ಚರಂಡಿಗಳು ಮುಚ್ಚಿ ಹೋಗಿ ಕೊಳಚೆ ನೀರು ಮಾರ್ಗದಲ್ಲಿಯೇ ತುಂಬಿ ತಗ್ಗು ಪ್ರದೇಶಗಳಲ್ಲಿ, ಹಾದಿಬದಿಯಲ್ಲಿ ಸಂಗ್ರಹವಾಗುತ್ತದೆ. ಈ ನೀರಿನ ತುಂಬಾ ಕಿ‌್ರಮಿಕೀಟಗಳ ನರ್ತನ ಸಾಮಾನ್ಯ ಜನರಲ್ಲಿ ಭಯ ಹುಟ್ಟಿಸುತ್ತದೆ.

ಮಾರ್ಗದಲ್ಲೇ ಮೀನು ಮಾರಾಟ

Advertisement

ವ್ಯವಸ್ಥಿತವಾದ ನಗರಸಭಾ ಮಾರುಕಟ್ಟೆ ಇದ್ದರೂ ಗ್ರಾಹಕರು ಮಾರುಕಟ್ಟೆಯೊಳಗೆ ಬರಲು ಹಿಂದೇಟು ಹಾಕುತ್ತಾರೆ. ಮೀನು ಮಾರಾಟವಾಗುವುದಿಲ್ಲ ಎಂಬ ಆರೋಪ ಹೊರಿಸಿ ಮಾರ್ಗದ ಬದಿಯಲ್ಲೇ ಮೀನು ಮಾರಾಟ ಮಾಡಲಾಗುತ್ತದೆ. ಈ ಮಾರಾಟಗಾರರ ಸುತ್ತಮುತ್ತೆಲ್ಲ ಮೀನಿನ ನೀರು ಹಾಗೂ ಪ್ಲಾಸ್ಟಿಕ್‌ ಪೊಟ್ಟಣಗಳು ಕೆಟ್ಟ ವಾಸನೆಗೆ ಕಾರಣವಾಗಿವೆ. ಮಾತ್ರವಲ್ಲದೆ ಪಕ್ಕದಲ್ಲಿರುವ ಶೌಚಾಲಯದ ಸುತ್ತ ಮಾಲಿನ್ಯ ರಾಶಿ ಹಾಕಲಾಗಿರುವುದರಿಂದ ಸೊಳ್ಳೆಗಳು ತುಂಬಿ ಶೌಚಾಲಯವನ್ನು ಉಪಯೋಗಿಸಲಾಗದ ಸ್ಥಿತಿ ಉಂಟಾಗಿದೆ.

ತುಕ್ಕುಹಿಡಿದ ನೀರು ಶುದ್ಧೀಕರಣ ಟ್ಯಾಂಕ್‌
ವರ್ಷಗಳೇ ಕಳೆದರೂ ಲಕ್ಷಾಂತರ ರೂಪಾಯಿ ವ್ಯಯಿಸಿ ಮಾರುಕಟ್ಟೆಯ ಮೀನಿನ ನೀರನ್ನು ಶುದ್ಧೀಕರಿಸಿ ಹೊರಬಿಡುವ ಪದ್ಧತಿಗಾಗಿ ಸ್ಥಾಪಿಸಿದ ಟ್ಯಾಂಕ್‌ಗಳ ಉದ್ಘಾಟನೆ ನಡೆಯದಿರುವುದು ಮಾತ್ರವಲ್ಲ ಟ್ಯಾಂಕ್‌ಗಳು ಹಾಗೂ ಇತರ ಉಪಕರಣಗಳು ತುಕ್ಕು ಹಿಡಿದು ನಶಿಸಿಹೋಗಿವೆ. ಕಳೆದ ನಗರಸಭೆ ಆಡಳಿತ ಸಮಿತಿಯ ಆಡಳಿತಾವಧಿಯಲ್ಲಿ ಅಳವಡಿಸಿದ ಯೋಜನೆ ಇದಾಗಿತ್ತು. ಒಟ್ಟಿನಲ್ಲಿ ವ್ಯವಸ್ಥೆಗಳಿದ್ದರೂ ಉಪಯೋಗಶೂನ್ಯವಾಗಿರುವುದು ನಗರ ಸಭೆಯ ಅನಾಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ. ಈ ನಾಡಲ್ಲಿ ನಗರಸಭೆ ಇದೆಯೇ ಎನ್ನುವುದು ನಮ್ಮ ಸಂಶಯ. ನಮ್ಮ ಕಷ್ಟಗಳನ್ನು ಕೇಳುವವರೇ ಇಲ್ಲ. ಸೂಕ್ತ ಪರಿಹಾರಕ್ಕಾಗಿ ಯಾರ ಮುಂದೆಯೂ ಕೈಚಾಚಿ ಪ್ರಯೋಜನವಿಲ್ಲದಂತಾಗಿದೆ. ಭದ್ರತೆ ಇಲ್ಲದ ಬದುಕು ನಮ್ಮದು.
– ಮೀನು ಮಾರಾಟಗಾರರು
Advertisement

Udayavani is now on Telegram. Click here to join our channel and stay updated with the latest news.

Next