Advertisement

ಅರಣ್ಯ ವಿಚಾರದಲ್ಲಿ ಕೇಂದ್ರದ ಮಾತೇ ಅಂತಿಮ

01:05 AM Mar 31, 2021 | Team Udayavani |

ಹೊಸದಿಲ್ಲಿ: ಇನ್ನು ಮುಂದೆ ಅರಣ್ಯ ಪ್ರದೇಶಗಳಲ್ಲಿ ಕೇಂದ್ರ ಸರಕಾರದಿಂದ ಅನುಮತಿ ಪಡೆದ ಯೋಜನೆಗಳಿಗೆ ರಾಜ್ಯ ಸರಕಾರಗಳು ಹೆಚ್ಚುವರಿ ನಿಯಮ ಹೇರುವಂತಿಲ್ಲ.

Advertisement

ಈ ಬಗ್ಗೆ ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯ ಎಲ್ಲ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಅರಣ್ಯ ಇಲಾಖೆ ಕಾರ್ಯದರ್ಶಿಗಳಿಗೆ ಮಾ. 22ರಂದು ಬರೆದ ಪತ್ರದಲ್ಲಿ ಉಲ್ಲೇಖೀಸಲಾಗಿದೆ. ಆದರೆ ಕೇಂದ್ರದ ಅನುಮತಿ ಪಡೆದು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು ಅತ್ಯಂತ ಅಪರೂಪದ ಸಂದರ್ಭಗಳಲ್ಲಿ ಅರಣ್ಯ ಸಂರಕ್ಷಣೆ ಮತ್ತು ಪರಿಸರ ನಿಯಮಗಳನ್ನು ವಿಧಿಸಲು ಅವಕಾಶ ಇದೆ.

ಇಂಥ ನಿರ್ಧಾರದಿಂದಾಗಿ ಅರಣ್ಯ ಮತ್ತು ಪರಿಸರ ವಿಚಾರದಲ್ಲಿ ರಾಜ್ಯ ಸರಕಾರಗಳಿಗೆ ನಿರ್ಧಾರ ಕೈಗೊಳ್ಳುವ ಅಧಿಕಾರ ಕಡಿಮೆಯಾಗಲಿದೆ. ಅದರ ಪರಮಾಧಿಕಾರ ಕೇಂದ್ರದ ಬಳಿಯೇ ಇರಲಿದೆ ಎಂದು ಕಾನೂನು ತಜ್ಞರು ಮತ್ತು ಅರಣ್ಯ ವಿಚಾರಗಳ ತಜ್ಞರು ಅಭಿಪ್ರಾಯಪಟ್ಟಿರುವುದಾಗಿ ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ.

ಹೊಸ ಕಾನೂನು ಅಲ್ಲ
ಕೇಂದ್ರ ಅರಣ್ಯ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರ ಪ್ರಕಾರ ಇದು ಹೊಸ ಕಾನೂನು ಅಲ್ಲ. ಜಾರಿಯಲ್ಲಿರುವ ನಿಯಮಗಳ ಬಗ್ಗೆ ಮತ್ತೂಮ್ಮೆ ವಿವರಣೆ ನೀಡಲಾಗಿದೆಯಷ್ಟೆ. ಅರಣ್ಯ ಭೂಮಿಯನ್ನು ಬದಲಿ ಉದ್ದೇಶಕ್ಕಾಗಿ ಬಳಸಲು ಕೇಂದ್ರದ ಅನುಮತಿ ಬೇಕು. ಒಂದು ಬಾರಿ ಅನುಮತಿ ಪಡೆದ ಬಳಿಕ ರಾಜ್ಯಗಳು ಹೆಚ್ಚುವರಿ ನಿಯಮ ಹೇರಿದರೆ, ಯೋಜನೆಯ ನಿರ್ವಹಣೆ ಮತ್ತು ಪ್ರಗತಿಗೆ ಅಡ್ಡಿಯಾಗುತ್ತದೆ. ಈ ಅಂಶವನ್ನು ಪತ್ರದಲ್ಲಿ ಸ್ಪಷ್ಟಪಡಿಸಲಾಗಿದೆ ಎಂದಿದ್ದಾರೆ ಅವರು.

ಅನುಮತಿ ನೀಡಿವೆ
ಇಂಥ ನಿಯಮ ಇದ್ದರೂ ರಾಜ್ಯ ಸರಕಾರಗಳು ಅರಣ್ಯದಲ್ಲಿ ಗಣಿಗಾರಿಕೆಗೆ ಅನುಮತಿ ನೀಡಿದ್ದಿದೆ. ಛತ್ತೀಸ್‌ಗಢ ಸರಕಾರ 2019ರಲ್ಲಿ ಭಾರತೀಯ ಅರಣ್ಯ ಸಂಶೋಧನೆ ಮತ್ತು ಶಿಕ್ಷಣ ಪರಿಷತ್ತು (ಐಸಿಎಫ್ಆರ್‌ಇ) ನೀಡಿದ ವರದಿ ಆಧಾರದಲ್ಲಿ ಅರಣ್ಯದಲ್ಲಿ ಗಣಿಗಾರಿಕೆಗೆ ಅನುಮತಿ ನೀಡಿತ್ತು. ಆದರೆ ಇಂಥ ನಿರ್ಧಾರಕ್ಕೆ ಮುನ್ನ ಕೇಂದ್ರ-ರಾಜ್ಯ ಸರಕಾರಗಳು ಪರಸ್ಪರ ಸಮಾಲೋಚಿಸಬೇಕು.

Advertisement

439 ಯೋಜನೆಗಳಿಗೆ ಅನುಮತಿ
ಲಾಕ್‌ಡೌನ್‌ ನಡುವೆ ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯ 439 ಯೋಜನೆಗಳಿಗೆ ಅನುಮೋದನೆ ನೀಡಿದೆ. ಈ ಪೈಕಿ ಗುಜರಾತ್‌ನಲ್ಲಿ 120, ಮಹಾರಾಷ್ಟ್ರದಲ್ಲಿ 64, ದಿಲ್ಲಿಯಲ್ಲಿ 45, ಕರ್ನಾಟಕದಲ್ಲಿ 34, ರಾಜಸ್ಥಾನದಲ್ಲಿ 30 ಯೋಜನೆಗಳು ಸೇರಿವೆ.

Advertisement

Udayavani is now on Telegram. Click here to join our channel and stay updated with the latest news.

Next