Advertisement

ಕೇಂದ್ರದ್ದು ಇವೆಂಟ್‌ ಮ್ಯಾನೇಜ್‌ಮೆಂಟ್‌ ಸರ್ಕಾರ

06:00 AM Mar 18, 2018 | |

ಬೆಂಗಳೂರು: ನರೇಂದ್ರ ಮೋದಿ ಕೇಂದ್ರದಲ್ಲಿ ಇವೆಂಟ್‌ ಮ್ಯಾನೇಜ್‌ಮೆಂಟ್‌ ಹಾಗೂ ಪಬ್ಲಿಕ್‌ ರಿಲೇಶನ್‌ ಏಜೆನ್ಸಿ ರೀತಿಯಲ್ಲಿ ಸರ್ಕಾರ ನಡೆಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದಾರೆ.

Advertisement

ದೆಹಲಿಯಲ್ಲಿ ನಡೆಯುತ್ತಿರುವ ಎಐಸಿಸಿ ಮಹಾಧೀವೇಶನದಲ್ಲಿ ಭಾಷಣ ಮಾಡಿದ ಅವರು, ರೈತರು, ಮಹಿಳೆಯರು, ಅಲ್ಪಸಂಖ್ಯಾತರು ಹಾಗೂ ಕಾರ್ಮಿಕರ ಸಮಸ್ಯೆಗೆ ಸ್ಪಂದಿಸದ ಪ್ರಧಾನಿ ಮನ್‌ಕಿಬಾತ್‌ ಎಂದು ತೋರಿಕೆಗೆ ಮಾತನಾಡುತ್ತಾರೆ ಎಂದು ದೂರಿದರು.

ಮಾಜಿ ಪ್ರಧಾನಿ ದಿವಂಗತ ಇಂದಿರಾಗಾಂಧಿಯವರು ಬ್ಯಾಂಕ್‌ಗಳ ರಾಷ್ಟ್ರೀಕರಣದ ಮೂಲಕ ಬಡವರಿಗೆ ಬ್ಯಾಂಕಿಂಗ್‌ ಅನುಕೂಲ ಮಾಡಿಕೊಟ್ಟಿದ್ದರು. ಆದರೆ, ಈಗಿನ  ಕೇಂದ್ರ ಸರ್ಕಾರ ಕೆಲವೊಂದು ಕಳ್ಳರಿಗೆ ಬಡವರ ಹಣ ಲೂಟಿ ಮಾಡಿಕೊಂಡು ವಿದೇಶಕ್ಕೆ ಹಾರಲು ಅನುಕೂಲ ಮಾಡಿಕೊಟ್ಟಿದೆ ಎಂದು ಹೇಳಿದರು.

ಕೇಂದ್ರ ಸರ್ಕಾರದ ಕ್ರಮಗಳು ಆರ್ಥಿಕ ಪರಿಸ್ಥಿತಿಯ ಮೇಲೂ ಪರಿಣಾಮ ಬೀರುತ್ತಿದ್ದು, ಜನ ಸಾಮಾನ್ಯರಿಗೆ ಬ್ಯಾಂಕಿನ ಬಗ್ಗೆ ಇರುವ ನಂಬಿಕೆ ಹೋಗುವಂತಾಗಿದೆ ಎಂದು ತಿಳಿಸಿದರು.ಇದೇ ಸಂದರ್ಭದಲ್ಲಿ ರಾಹುಲ್‌ ಗಾಂಧಿ ನಾಯಕತ್ವ ಹೊಗಳಿದ ಸಿದ್ದರಾಮಯ್ಯ, ರಾಹುಲ್‌ಗಾಂಧಿ ಕೆಲವರ ಹಾಗೆ ಮನ್‌ ಕಿ ಬಾತ್‌ ಹೇಳದೆ ರೈತರು, ಬಡವರು, ತುಳಿತಕ್ಕೊಳಗಾದವರ ಸಮಸ್ಯೆಗಳನ್ನು ಆಲಿಸುತ್ತಾರೆ.

ರಾಹುಲ್‌ ಗಾಂಧಿ ನಾಯಕತ್ವದಲ್ಲಿ ಪಕ್ಷ ಮತ್ತೆ ಪುಟಿದೇಳಿದೆ. ರಾಹುಲ್‌ಗಾಂಧಿ  ಈ ದೇಶದ ಪ್ರಧಾನಿಯಾಗುವುದನ್ನು ಯಾರಿಂದಲೂ ತಪ್ಪಿಸಲಾಗದು.  ದೇಶವನ್ನು ಆತಂಕಕ್ಕೆ ತಳ್ಳುತ್ತಿರುವವರ ವಿರುದ್ಧ ನಾವು ಹೋರಾಟ ನಡೆಸಬೇಕಿದೆ ಎಂದು ಹೇಳಿದರು.

Advertisement

ಭಾರತ ಈಗ ಸಂದಿಗªತೆಯಲ್ಲಿದ್ದು, ಒಂದು ದೇಶ, ಒಂದು ಭಾಷೆ, ಒಂದೇ ಧರ್ಮ ಮನಸ್ಥಿತಿ ವಿರುದ್ಧ ಹೋರಾಡಿ ಭಾರತದ ಬಹು ಸಂಸ್ಕೃತಿ, ಬಹು ಭಾಷೆಯ ತತ್ವವನ್ನು ಎತ್ತಿ ತೋರಿಸುವ ಕೆಲಸವಾಗಬೇಕಿದೆ. ಬಹು ಸಂಸ್ಕೃತಿಯ ಸಿದ್ದಾಂತ ಪ್ರತಿಪಾದಿಸಲು ಕಾಂಗ್ರೆಸ್‌ ಎದ್ದು ನಿಲ್ಲಬೇಕಿದೆ ಎಂದರು.

ಆಧುನಿಕ ಭಾರತದ ಇತಿಹಾಸ ಕಾಂಗ್ರೆಸ್‌ ಇತಿಹಾಸ. ಸದ್ಯ ದೇಶದಲ್ಲಿ ಕಾಂಗ್ರೆಸ್‌ ಹಿನ್ನಡೆ ಅನುಭವಿಸಿದ್ದು, ಅದಕ್ಕೆ ಎದೆಗುಂದುವ ಅಗತ್ಯವಿಲ್ಲ. ಇತಿಹಾಸದಲ್ಲಿ ಕಾಂಗ್ರೆಸ್‌ ಹಿನ್ನಡೆ ಅನುಭವಿಸಿದಾಗಲೆಲ್ಲ ಹೊಸ ಶಕ್ತಿಯಾಗಿ ಹೊರ ಹೊಮ್ಮಿದೆ. ದೇಶದಲ್ಲಿ ಕಾಂಗ್ರೆಸ್‌ ಶಕ್ತಿ ಕಳೆದುಕೊಂಡರೆ, ಬಡವರು, ರೈತರು, ದಲಿತರು, ಅಲ್ಪ ಸಂಖ್ಯಾತರು, ಮಹಿಳೆಯರು ಹಾಗೂ ಕಾರ್ಮಿಕ ವರ್ಗ ತನ್ನ ಧ್ವನಿ ಕಳೆದುಕೊಳ್ಳುತ್ತದೆ. ಅಲ್ಲದೆ ಅವರು ನಿರ್ಲಕ್ಷಕ್ಕೊಳಗಾಗುತ್ತಾರೆ ಎಂದು ಹೇಳಿದರು.

ಕಾಂಗ್ರೆಸ್‌ ನಾಯಕರ ತ್ಯಾಗ ಬಲಿದಾನದಿಂದ ನಿರ್ಮಾಣವಾದ ಭಾರತ ಧರ್ಮದ ಹೆಸರಿನಲ್ಲಿ ಒಡೆದು ಹೋಗುತ್ತಿದೆ. ಭಾರತದ ಸಂವಿಧಾನವನ್ನೇ ಬದಲಾಯಿಸುವ ಮಾತು ಕೇಳಿ ಬರುತ್ತಿವೆ. ಅಂಬೇಡ್ಕರ್‌ ನೀಡಿರುವ ಸಂವಿಧಾನ ರಕ್ಷಣೆಗೆ ಎರಡನೇ ಸ್ವಾತಂತ್ರ್ಯ ಸಂಗ್ರಾಮ ನಡೆಸುವ ಅಗತ್ಯವಿದೆ ಎಂದು ತಿಳಿಸಿದರು.

ಕರ್ನಾಟಕದಲ್ಲಿ ರಾಜ್ಯ ಸರ್ಕಾರ 12 ನೇ ಶತಮಾನದ ಸಾಮಾಜಿಕ ಕ್ರಾಂತಿ ಪುರುಷ ಬಸವಣ್ಣ , ಮಹಾತ್ಮಾಗಾಂಧಿ ಮತ್ತು ಅಂಬೇಡ್ಕರ್‌ ಅವರು ಹಾಕಿದ ಮಾರ್ಗದಲ್ಲಿಯೇ ನಡೆಯುತ್ತಿದೆ. ರಾಜಕಾರಣಿಗಳು ನುಡದಿಂತೆ ನಡೆಯುವುದಿಲ್ಲ ಎಂಬ ಮಾತಿದೆ. ಆದರೆ, ಯುಪಿಎ ಸರ್ಕಾರ ಜಾರಿಗೆ ತಂದ ಆಹಾರ ಭದ್ರತೆ ಕಾಯ್ದೆಯ ಪರಿಣಾಮ ನಾನು ಅಧಿಕಾರ ವಹಿಸಿಕೊಂಡ ಮರು ಕ್ಷಣವೇ ಪ್ರತಿಯೊಬ್ಬರಿಗೂ ಏಳು ಕೆಜಿ ಅಕ್ಕಿ ನೀಡುವ ಅನ್ನಭಾಗ್ಯ ಯೋಜನೆ ಜಾರಿಗೆ ತಂದಿದ್ದೇನೆ.

ಗ್ರಾಹಕರ ಖಾತೆಗೆ 15 ಲಕ್ಷ ಹಣ ಹಾಕುತ್ತೇವೆ,  ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಠಿಸುತ್ತೇವೆ ಎಂದು ನಮ್ಮ ಸರ್ಕಾರ ಯಾವತ್ತೂ ಸುಳ್ಳು ಭರವಸೆಗಳನ್ನು ನೀಡಿಲ್ಲ. ಪ್ರಣಾಳಿಕೆಯಲ್ಲಿ ನೀಡಿದ ಶೇಕಡಾ 90 ರಷ್ಟು ಭರವಸೆಗಳನ್ನು ಈಡೇರಿಸಿದ್ದೇವೆ. ಅಲ್ಲದೇ ಪ್ರಣಾಳಿಕೆಯಲ್ಲಿ ಘೋಷಿಸದೇ ಇರುವ ಇಂದಿರಾ ಕ್ಯಾಂಟೀನ್‌ , ರೈತರ ಸಾಲ ಮನ್ನಾ, ಗರ್ಭಿಣಿ ಮಹಿಳೆಯರು ಹಾಗೂ ತಾಯಂದಿರಿಗೆ ಮಾತೃ ಪೂರ್ಣ ಯೋಜನೆ, ರೈತ ಬೆಳಕು ಯೋಜನೆಗಳನ್ನು ಜಾರಿಗೆ ತಂದಿದ್ದೇವೆ ಎಂದು ತಮ್ಮ ಸರ್ಕಾರದ ಸಾಧನೆಗಳನ್ನು ವಿವರಿಸಿದರು.

ರಾಹುಲ್‌ಗಾಂಧಿ ಕೆಲವರ ಹಾಗೆ ಮನ್‌ ಕಿ ಬಾತ್‌ ಹೇಳದೆ ರೈತರು, ಬಡವರು,ತುಳಿತಕ್ಕೊಳಗಾದವರ ಸಮಸ್ಯೆಗಳನ್ನು
ಆಲಿಸುತ್ತಾರೆ. ಅವರ ನಾಯಕತ್ವದಲ್ಲಿ ಪಕ್ಷ ಮತ್ತೆ ಪುಟಿದೇಳಲಿದೆ. ರಾಹುಲ್‌ ಈ ದೇಶದ ಪ್ರಧಾನಿ
ಯಾಗುವುದನ್ನು 
ಯಾರಿಂದಲೂ ತಪ್ಪಿಸಲಾಗದು. ದೇಶವನ್ನು ಆತಂಕಕ್ಕೆ ತಳ್ಳುತ್ತಿರುವವರ ವಿರುದ್ಧ ನಾವು ಹೋರಾಟ ನಡೆಸಬೇಕಿದೆ.
– ಸಿದ್ದರಾಮಯ್ಯ, ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next