Advertisement

ಸಿನಿ ಮಂದಿ ಕನಸಲ್ಲಿ ಸೆನ್ಸಾರ್‌ ಗುಮ್ಮ

06:00 AM Nov 02, 2018 | |

1. ಪ್ರಾದೇಶಿಕ ಸೆನ್ಸಾರ್‌ ಮಂಡಳಿಯಿಂದ ಅನ್ಯಾಯವಾಗುತ್ತಿದೆ.
2. ಅಗತ್ಯವಿರದಿದ್ದರೂ ಕೆಲ ಚಿತ್ರಗಳಿಗೆ “ಎ’ ಪ್ರಮಾಣ ಪತ್ರ ನೀಡಲಾಗುತ್ತಿದೆ.
3. ಸೆನ್ಸಾರ್‌ ಮಂಡಳಿ ನಡೆಯಿಂದ ವ್ಯಾಪಾರ- ವಹಿವಾಟಕ್ಕೂ ಸಮಸ್ಯೆ

Advertisement

– ಹೀಗೆ ಒಂದೇ ಸಮನೆ ಆರೋಪ ಮಾಡುತ್ತಿರೋದು ಕನ್ನಡ ಚಿತ್ರ ನಿರ್ದೇಶಕ, ನಿರ್ಮಾಪಕರು. ಅದಕ್ಕೆ ಕಾರಣ, ಸೆನ್ಸಾರ್‌ ಮಂಡಳಿ! ಹೀಗೆಂದರೆ, ಒಂದಷ್ಟು ಪ್ರಶ್ನೆಗಳು ಹುಟ್ಟಿಕೊಳ್ಳುವುದು ಸಹಜ. ಸೆನ್ಸಾರ್‌ ಮಂಡಳಿಯಲ್ಲಿ ಎಲ್ಲವೂ ಕಾನೂನಿನಡಿ ಸರಿಯಾಗಿ ಕೆಲಸ ನಡೆಯುತ್ತಿವೆಯಾ ಎಂದು ಪ್ರಶ್ನಿಸುತ್ತಲೇ, ಸೆನ್ಸಾರ್‌ ಮಂಡಳಿ ನಿಲುವನ್ನು ಖಂಡಿಸುತ್ತಿದ್ದಾರೆ ಚಿತ್ರರಂಗದ ಮಂದಿ. ಎಲ್ಲಾ ಸರಿ, ಕನ್ನಡ ನಿರ್ದೇಶಕ, ನಿರ್ಮಾಪಕರಿಗೆ ಸೆನ್ಸಾರ್‌ ಮಂಡಳಿ ಮೇಲೆ ಅಷ್ಟೊಂದು ಕೋಪ ಯಾಕೆ ಎಂದರೆ ಅದಕ್ಕೆ ಸಿಗುವ ಉತ್ತರ “ಎ’ ಪ್ರಮಾಣ ಪತ್ರ.

ಹೌದು, ಈಗ ಗಾಂಧಿನಗರದ ಗಲ್ಲಿಯಲ್ಲಿ ಕೇಳಿಬರುತ್ತಿವ ಮಾತೆಂದರೆ, “ಆ ಚಿತ್ರಕ್ಕೆ “ಎ’ ಸರ್ಟಿಫಿಕೆಟ್‌ ಸಿಕ್ತಂತೆ, ಈ ಚಿತ್ರಕ್ಕೆ ಸಿಕ್ತಂತೆ’. ಇದು ನಿರ್ಮಾಪಕರನ್ನು ಇರುಸುಮುರುಸು ಮಾಡಿರೋದು ಸುಳ್ಳಲ್ಲ. ಕೆಲ ಚಿತ್ರಗಳಲ್ಲಿನ ದೃಶ್ಯಗಳಿಗೆ ವಿನಾಕಾರಣ ಕತ್ತರಿಗೆ ಸೂಚಿಸುವುದಲ್ಲದೇ, ಒಪ್ಪದ ಚಿತ್ರಗಳಿಗೆ “ಎ’ ಸರ್ಟಿಫಿಕೆಟ್‌ ಕೊಡುವ ಮೂಲಕ ತನ್ನ ನಿರ್ಧಾರ ಇದು ಅನ್ನುತ್ತಲೇ ಸೆನ್ಸಾರ್‌ ಮಂಡಳಿ ಕನ್ನಡ ನಿರ್ಮಾಪಕ, ನಿರ್ದೇಶಕರನ್ನು ಸಂಕಷ್ಟಕ್ಕೆ ಸಿಲುಕಿಸಲಾಗುತ್ತಿದೆ ಎಂಬುದು ಈಗ ಚಿತ್ರರಂಗದ ಅನೇಕರು ಮಾಡುತ್ತಿರುವ ಆರೋಪ. ಅಷ್ಟಕ್ಕೂ “ಎ’ ಸರ್ಟಿಫಿಕೆಟ್‌ ಕೊಡುವುದರ ಹಿಂದೆ ಯಾವುದಾದರೂ ಉದ್ದೇಶವಿದೆಯಾ? ಇಂಥದ್ದೊಂದು ಅನುಮಾನ ಕಾಡಿದರೂ, ಸೆನ್ಸಾರ್‌ ಮಂಡಳಿ ಕಾನೂನಿನಡಿ ತನ್ನ ಕಾರ್ಯ ನಿರ್ವಹಿಸುತ್ತಿದೆ ಎಂಬ ಒಂದೇ ಒಂದು ಮಾತು ಕೇಳಿಬರುತ್ತದೆಯೇ ವಿನಃ ಅದರಿಂದಾಚೆಗೆ ಕನ್ನಡ ಚಿತ್ರಗಳ ಸಾಧಕ-ಬಾಧಕಗಳ ಬಗ್ಗೆ ಯೋಚಿಸುತ್ತಿಲ್ಲ ಎಂಬುದು ಗಾಂಧಿನಗರಿಗರ ಬೇಸರದ ಮಾತು.

ಹೊರ ರಾಜ್ಯದಿಂದ ಬರುವ ಅದೆಷ್ಟೋ ಚಿತ್ರಗಳಿಗೆ ಅಲ್ಲಿನ ಪ್ರಾದೇಶಿಕ ಸೆನ್ಸಾರ್‌ ಮಂಡಳಿ “ಯು/ಎ’ ಪ್ರಮಾಣ ಪತ್ರ ನೀಡಿದೆ. ಆ ಭಾಷೆಯ ಕೆಲ ಚಿತ್ರಗಳನ್ನು ಗಮನಿಸಿದರೆ, ಕನ್ನಡ ಚಿತ್ರಗಳಿಗಿಂತ ಹೆಚ್ಚು ರೊಮ್ಯಾನ್ಸ್‌, ಕ್ರೌರ್ಯ ರಾರಾಜಿಸಿರುತ್ತದೆ. ಅವುಗಳಿಗೆ ಇಲ್ಲದ “ಎ’ ಪ್ರಮಾಣ ಪತ್ರ. ಕನ್ನಡ ಚಿತ್ರಗಳಿಗೇಕೆ? ಇದರಿಂದ ಕ್ರಿಯಾಶೀಲ ನಿರ್ದೇಶಕರ ಕನಸಿಗೆ, ಶ್ರಮಕ್ಕೆ ಧಕ್ಕೆಯಾಗುವುದಿಲ್ಲವೇ? ಇದು ಕನ್ನಡ ನಿರ್ದೇಶಕ, ನಿರ್ಮಾಪಕರ ಪ್ರಶ್ನೆ. ಸಿನಿಮಾ ನೋಡುಗರು ಎಲ್ಲಾ ಭಾಷೆ ಚಿತ್ರಗಳನ್ನೂ ಒಂದೇ ಮನಸ್ಸಿನಲ್ಲೇ ನೋಡುತ್ತಾರೆ. ಅವರಿಗೆ ಯಾವುದು ಸರಿ, ಯಾವುದು ತಪ್ಪು ಎಂಬುದು ಬೇಕಿಲ್ಲ. ಪ್ರಾದೇಶಿಕ ಸೆನ್ಸಾರ್‌ ಮಂಡಳಿ ಇಲ್ಲಿನ ಚಿತ್ರಗಳಿಗೆ ಸಹಕರಿಸದೇ ಇದ್ದರೆ, ಕನ್ನಡ ಸಿನಿಮಾಗಳು ಸ್ಪರ್ಧೆಯಲ್ಲಿ ಹಿಂದುಳಿಯುವುದಿಲ್ಲವೇ ಎಂಬುದು ಅನೇಕ ನಿರ್ದೇಶಕರ ಅಳಲು.

ಹಾಗಾದರೆ, ಸೆನ್ಸಾರ್‌ ಮಂಡಳಿ ಮಾಡುವ ತಪ್ಪಾದರೂ ಏನು? ಈ ಪ್ರಶ್ನೆಗೆ ಮತ್ತದೇ ಉತ್ತರ, ವಿನಾಕಾರಣ “ಎ’ ಸರ್ಟಿಫಿಕೆಟ್‌ ನಿಲುವು. ವಾಸ್ತವವಾಗಿ ನೋಡಿದರೆ, ಭಾರತದ ಸೆನ್ಸಾರ್‌ ಮಾರ್ಗಸೂಚಿಯಲ್ಲಿ ಎಲ್ಲರಿಗೂ ಇರೋದು ಒಂದೇ ಕಾನೂನು. ಆದರೆ, ಪ್ರಾದೇಶಿಕ ಸೆನ್ಸಾರ್‌ ಮಂಡಳಿಗೆ ಕೆಲವೊಂದು ಅಧಿಕಾರ ಇರುತ್ತದೆ. ಪ್ರಾದೇಶಿಕತೆ ವಿಷಯಕ್ಕೆ ಬಂದಾಗ, ಆಯಾ ಪ್ರಾದೇಶಿಕ ಸೆನ್ಸಾರ್‌ ಮಂಡಳಿ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು. ಆದರೆ, ರೊಮ್ಯಾನ್ಸ್‌ ಮತ್ತು ಕ್ರೌರ್ಯ ಅನ್ನೋದು ಯುನಿರ್ವಸಲ್‌. ಅದು ಕನ್ನಡ ಸಿನಿಮಾದಲ್ಲೂ ಒಂದೇ, ತೆಲುಗು, ತಮಿಳು, ಮಲಯಾಳಂ ಹಾಗು ಹಿಂದಿ ಸೇರಿದಂತೆ ಯಾವುದೇ ಭಾಷೆಯ ಚಿತ್ರದಲ್ಲಾದರೂ ಒಂದೇ. 

Advertisement

ಸೆನ್ಸಾರ್‌ ಬೈಲಾದಲ್ಲಿ ಕನ್ನಡಕ್ಕೇ ಒಂದು ಕಾನೂನು, ಬೇರೆ ಭಾಷೆಗಳಿಗೆ ಇನ್ನೊಂದು ಕಾನೂನು ಅಂತೇನಿಲ್ಲ. ಆದರೆ, ಆಯಾ ಸೆನ್ಸಾರ್‌ ಮಂಡಳಿ ಅಧಿಕಾರಿಯ ದೃಷ್ಟಿಕೋನ ಬೇರೆ ಇರುತ್ತದೆ. ಇದನ್ನೆಲ್ಲ ಸೂಕ್ಷ್ಮವಾಗಿ ಗಮನಿಸಿದರೆ, ಅದು ವೈಯಕ್ತಿಕವಾಗಿ ಬದಲಾಗುತ್ತಿದೆಯಾ ಎಂಬ ಪ್ರಶ್ನೆಯೂ ಎದುರಾಗುತ್ತಿದೆ. ಒಬ್ಬ ಅಧಿಕಾರಿಗೆ ಸ್ವತಂತ್ರ ಬೇಕು. ಅದು ಇರುತ್ತದೆ ಕೂಡ. ಅವರಿಗೆ ಸರಿ ಎನಿಸಿದ ನಿರ್ಧಾರವನ್ನು ತೆಗೆದುಕೊಳ್ಳುವ ಹಕ್ಕು ಆ ಅಧಿಕಾರಿಗೆ ಮಾತ್ರ ಇರುತ್ತದೆ. ಅದನ್ನು ಪ್ರಶ್ನಿಸುವ ಮತ್ತು ದೂರುವ ಹಕ್ಕು ಯಾರಿಗೂ ಇಲ್ಲ. ಆದರೆ, ನೈತಿಕವಾಗಿಯೂ ಆ ಅಧಿಕಾರಿಗೆ ಜವಾಬ್ದಾರಿ ಇರಬೇಕಷ್ಟೇ. ಕಾನೂನು ರೀತಿ ಕೆಲಸ ಮಾಡುವುದು ತಪ್ಪಲ್ಲ. ಅದರ ಜೊತೆಗೆ ಯಾರೇ, ಅಧಿಕಾರಿಯಾಗಿರಲಿ, ಆ ಪ್ರಾದೇಶಿಕತೆಗೆ ಹೊಂದಿಕೊಳ್ಳಬೇಕು. ಹೊರಗಡೆಯಿಂದ ಬರುವ ಬೇರೆ ಭಾಷೆ ಸಿನಿಮಾಗಳು ಹೇಗಿವೆ, ಅದನ್ನು ಜನರು ಹೇಗೆ ಸ್ವೀಕರಿಸುತ್ತಿದ್ದಾರೆ ಎಂಬುದನ್ನು ಅರಿಯಬೇಕಿದೆ. ಅದರೊಂದಿಗೆ ನಮ್ಮ ಭಾಷೆ, ನಮ್ಮ ನಾಡಿನ ಸಿನಿಮಾ ಇದು ಎಂಬ ನಿಟ್ಟಿನಲ್ಲೂ ಜವಾಬ್ದಾರಿಯಿಂದ ಕೆಲಸ ಮಾಡಬೇಕಿದೆ. ಕನ್ನಡ ನಿರ್ದೇಶಕ, ನಿರ್ಮಾಪಕ ಮತ್ತು ತಂತ್ರಜ್ಞರು ಪರಭಾಷೆ ಸಿನಿಮಾಗೆ ಸಡ್ಡು ಹೊಡೆದು, ಅವರ ಸಮನಾಂತರ ನಿಲ್ಲಬೇಕು ಎಂದು ಹೇಗೆಲ್ಲಾ ಒದ್ದಾಡಿ, ಹೋರಾಡುತ್ತಾರೋ, ಅವರಿಗೂ ಸಾಥ್‌ ಕೊಡುವಂತಹ ಕೆಲಸ ಪ್ರಾದೇಶಿಕ ಸೆನ್ಸಾರ್‌ ಮಂಡಳಿಯಿಂದಲೂ ಆಗಬೇಕು ಎಂಬುದು ಚಿತ್ರ ನಿರ್ದೇಶಕರ, ನಿರ್ಮಾಪಕರ ಮಾತು. 

ಇಲ್ಲಿ ಸೆನ್ಸಾರ್‌ ಮಂಡಳಿ ಅಧಿಕಾರಿ ಪ್ರತಿಯೊಂದನ್ನು ವೈಯಕ್ತಿಕವಾಗಿ ತೆಗೆದುಕೊಳ್ಳುತ್ತಿದ್ದಾರೆ ಎಂಬ ಪ್ರಶ್ನೆಯಾಗಲಿ, ಆರೋಪವಾಗಲಿ ಮಾಡುತ್ತಿಲ್ಲ. ಆ ಸ್ಥಾನದಲ್ಲಿ ಇರುವ ಅಧಿಕಾರಿಗೆ ಅನಿಸಿದ್ದನ್ನು ಹೇಳುವ ಹಕ್ಕು ಇದೆ. ಆದರೆ, ನಿಯಮಿತವಾಗಿ ಸೆನ್ಸಾರ್‌ ಬೈಲಾದಲ್ಲಿ, ಕಾನೂನು ಪುಸ್ತಕದಲ್ಲಿ ಹೀಗೇ ಇರಬೇಕು, ಹಾಗೆಯೇ ಮಾಡಬೇಕು ಎಂಬುದೆಲ್ಲ ಬರೆದಿರುತ್ತಾ? ಉದಾಹರಣೆಗೆ ಹಿಂಸೆಯನ್ನು ವೈಭವೀಕರಿಸಬಾರದು, ಹೆಣ್ಣನ್ನು ಹಿಂಸಿಸಬಾರದು, ಅಶ್ಲೀಲತೆ ತೋರಿಸಬಾರದು, ಮಾತುಗಳೂ ಇರಬಾರದು ಎಂಬುದೆಲ್ಲಾ ಇದ್ದರೂ, ಎಷ್ಟು ಇರಬೇಕೆಂಬುದರ ಬಗ್ಗೆ ನಿಖರವಾಗಿರುವುದಿಲ್ಲ. ಆದರೆ, ಅಲ್ಲಿ ಎಷ್ಟರಮಟ್ಟಿಗೆ ವೈಭವೀಕರಿಸಲಾಗಿದೆ. ಅದನ್ನು ಪರಿಗಣಿಸಬೇಕೋ, ಬೇಡವೋ ಎಂಬ ಅಧಿಕಾರ ಆ ಸೆನ್ಸಾರ್‌ ಅಧಿಕಾರಿಗೆ ಇರುತ್ತದೆ. ಆದರೂ, ಸುತ್ತಮುತ್ತ ಏನೆಲ್ಲಾ ನಡೆಯುತ್ತಿದೆ. ಇವತ್ತಿನ ಜನರೇಷನ್‌ ಹೇಗಿದೆ, ಯೂಥ್‌ ಹೇಗೆಲ್ಲಾ ಚಿತ್ರವನ್ನು ನೋಡುತ್ತಿದ್ದಾನೆ. ಟ್ರೆಂಡ್‌ಗೆ ತಕ್ಕಂತೆ ಸಿನಿಮಾ ಇದೆಯಲ್ಲವೇ? ಎಂಬುದನ್ನು ಮನಗಂಡು ತಮ್ಮ ದೃಷ್ಟಿಕೋನ ಬದಲಿಸಿಕೊಳ್ಳಬೇಕಿದೆ ಎಂಬುದು ಸೆನ್ಸಾರ್‌ನಿಂದ ಬೇಸರಿಸಿಕೊಂಡವರ ನುಡಿ.

ಇನ್ನು, ನಿರ್ದೇಶಕ, ನಿರ್ಮಾಪಕ ತಮ್ಮ ಚಿತ್ರಕ್ಕೆ “ಎ’ ಸರ್ಟಿಫಿಕೆಟ್‌ ಕೊಡುವ ಮಾತು ಬಂದರೆ, ರಿವೈಸಿಂಗ್‌ ಕಮಿಟಿಗೆ ಹೋಗುವ ಮನಸ್ಸು ಮಾಡುತ್ತಾನೆ. ಆದರೆ, ಬಹಳಷ್ಟು ಮಂದಿಗೆ ಗೊತ್ತಿರಲಿಕ್ಕಿಲ್ಲ, ರಿವೈಸಿಂಗ್‌ ಕಮಿಟಿ ಕೂಡ ಬೆಂಗಳೂರಲ್ಲೇ ಇದೆ. ಅದೇ ಅಧಿಕಾರಿ ಇಲ್ಲೂ ಇರುತ್ತಾರೆ. ಆದರೆ, ಸಮಿತಿ ಸದಸ್ಯರು ಮಾತ್ರ ಬದಲಾಗಿರುತ್ತಾರಷ್ಟೇ. ಸೆಷನ್‌ ಕೋರ್ಟ್‌ನಲ್ಲಿ ನ್ಯಾಯ ಸಿಗದಿದ್ದರೆ, ಹೈಕೋರ್ಟ್‌ಗೆ ಮೊರೆ ಹೋಗುವಂತೆ, ಪ್ರಾದೇಶಿಕ ಸೆನ್ಸಾರ್‌ ಮಂಡಳಿಯಲ್ಲಿ “ಎ’ ಸರ್ಟಿಫಿಕೆಟ್‌ ಸಿಕ್ಕರೆ, ರಿವೈಸಿಂಗ್‌ ಕಮಿಟಿ ಮೊರೆ ಹೋಗುತ್ತಾರಷ್ಟೇ. ಆದರೆ, ಅಲ್ಲೂ ಅದೇ ರಾಗ, ಅದೇ ಹಾಡು ಅಂದಾಗ, ಟ್ರಿಬ್ಯುನಲ್‌ಗೆ ಹೋಗಬೇಕು. ಅದೊಂಥರಾ ಸುಪ್ರೀಂ ಕೋರ್ಟ್‌ ಇದ್ದಂತೆ. ಅಲ್ಲಿಗೂ ಹೋಗುವ ನಿರ್ದೇಶಕ, ನಿರ್ಮಾಪಕರಿದ್ದಾರೆ. ಅಲ್ಲಿ ನ್ಯಾಯ ಪಡೆದುಕೊಂಡವರೂ ಇದ್ದಾರೆ. ಆದರೆ, ಸಮಯ ಮತ್ತು ಹಣ ಯಾರು ಕೊಡ್ತಾರೆ? ಸಿನಿಮಾ ಮಾಡಿ ಹೈರಾಣಗುವ ನಿರ್ಮಾಪಕ, ಇನ್ನಷ್ಟು ಖರ್ಚು ಮಾಡಿಕೊಂಡು ದೆಹಲಿಗೆ ಅಲೆದಾಡಬೇಕಾ ಎಂಬ ಪ್ರಶ್ನೆಯೂ ಗಾಂಧಿನಗರದಿಂದ ಕೇಳಿಬರುತ್ತಿದೆ. 

ಸೆನ್ಸಾರ್‌ “ಎ’ ಸರ್ಟಿಫಿಕೆಟ್‌ ಕೊಡುವುದಕ್ಕೂ ಕಾರಣವಿರುತ್ತೆ. ಅದಕ್ಕೆ ಸರಿಯಾದ ಸ್ಪಷ್ಟನೆ ಕೊಟ್ಟರೆ ಮಾತ್ರ “ಯು/ಎ’ ಸಿಗಬಹುದೇ ವಿನಃ, ಅದು ಬಿಟ್ಟರೆ, ಮೊದಲ ತೀರ್ಪು ಬದಲಾಗುವುದಿಲ್ಲ. ಇಲ್ಲಿ ಸಂಭಾಷಣೆ, ರೊಮ್ಯಾನ್ಸ್‌, ಕ್ರೌರ್ಯ ಅದೇನೆ ಇರಲಿ, ಅದನ್ನು ಪಕ್ಕಕ್ಕಿಟ್ಟು ಮಾತಾಡುವುದಾದರೆ, ಇತ್ತೀಚೆಗೆ “ಪ್ರಸ್ತ’ ಎಂಬ ಚಿತ್ರದ ಶೀರ್ಷಿಕೆಯೇ ಹೀಗಿದೆ ಎಂಬ ಕಾರಣಕ್ಕೂ “ಎ’ ಸರ್ಟಿಫಿಕೆಟ್‌ ಕೊಡಲಾಗುತ್ತಿದೆ ಅನ್ನೋದು ಎಷ್ಟು ಸರಿ? ಹಿಂದೆ “ಆದಿ ಪುರಾಣ’,”ರವಿ ಹಿಸ್ಟರಿ’ “ಮೂರ್ಕಲ್‌ ಎಸ್ಟೇಟ್‌’ ಸೇರಿದಂತೆ “ದಿ ವಿಲನ್‌’ ಚಿತ್ರಕ್ಕೂ “ಎ’ ಸರ್ಟಿಫಿಕೆಟ್‌ ಸಿಕ್ಕಿದ್ದರ ವಿರುದ್ಧ ಸಂಬಂಧಿಸಿದವರು ಗರಂ ಆಗಿದ್ದು ಇನ್ನೂ ಮಾಸಿಲ್ಲ.

ಅದೇನೆ ಇರಲಿ, ಅಗತ್ಯವಿರದ ದೃಶ್ಯಗಳಿಗೆ ಕತ್ತರಿ ಹಾಕಬೇಕು, ಇಲ್ಲವಾದಲ್ಲಿ “ಎ’ ಸರ್ಟಿಫಿಕೆಟ್‌ ಕೊಡುವುದಾಗಿ ಸೆನ್ಸಾರ್‌ ಅಧಿಕಾರಿಗಳು ಸೂಚಿಸುವ ಮೂಲಕ ನಿರ್ಮಾಪಕರನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿದ್ದಾರೆ ಎಂಬ ಗಂಭೀರ ಆರೋಪವಂತೂ ನಿತ್ಯ ನಿರಂತರ. 

ಕೋರ್ಟ್‌ ಮೆಟ್ಟಿಲೇರುವ ಚಿಂತನೆ ಇದೆ
“ಕನ್ನಡ ಚಿತ್ರಗಳಿಗೆ ಯಾವ ಮಾನದಂಡದ ಮೇಲೆ ಸೆನ್ಸಾರ್‌ ಪ್ರಮಾಣಪತ್ರ ನೀಡುತ್ತಾರೆ ಎಂಬ ಬಗ್ಗೆ ಸ್ಪಷ್ಟತೆಯೇ ಇಲ್ಲದಂತಾಗಿದೆ. ಕನ್ನಡ ಚಿತ್ರಗಳಿಗಿಂತ ದುಪ್ಪಟ್ಟು ಆ್ಯಕ್ಷನ್‌, ರೊಮ್ಯಾನ್ಸ್‌, ಹಾರರ್‌ ಎಲ್ಲಾ ಇರುವ ತಮಿಳು, ತೆಲುಗು, ಹಿಂದಿ ಚಿತ್ರಗಳಿಗೇ ಅಲ್ಲಿನ ಸೆನ್ಸಾರ್‌ ಬೋರ್ಡ್‌ಗಳು ಯು/ಎ ಪ್ರಮಾಣಪತ್ರ ಕೊಡುತ್ತವೆ. ಆದರೆ, ಅದೇನೂ ಇರದ ನಮ್ಮ ಚಿತ್ರಗಳಿಗೆ ಮಾತ್ರ ಇಲ್ಲಿ “ಎ’ ಪ್ರಮಾಣಪತ್ರ ಸಿಗುತ್ತಿದೆ. ಇದನ್ನು ಪ್ರಶ್ನಿಸಿದರೆ, ಗೈಡ್‌ಲೈನ್‌, ಕಾನೂನು ಅಂತ ಸಬೂಬು ಹೇಳುತ್ತಾರೆ. ಇಡೀ ದೇಶಕ್ಕೆ ಸೆನ್ಸಾರ್‌ ನಿಯಮಾವಳಿಗಳು ಒಂದೇ ಎನ್ನುವುದಾದರೆ, ಕನ್ನಡಕ್ಕೆ ಮಾತ್ರ ಅದು ಬೇರೆ ಹೇಗಾಗುತ್ತದೆ..? ಸೆನ್ಸಾರ್‌ ನಿಯಮಾವಳಿಗಳಲ್ಲಿ ಸಾಕಷ್ಟು ಮಾರ್ಪಡುಗಳು ಆಗಬೇಕಾದ ಅಗತ್ಯತೆ ಇದೆ. ಈ ಬಗ್ಗೆ ಕೋರ್ಟ್‌ ಮೆಟ್ಟಿಲೇರುವ ಚಿಂತನೆ ನಡೆಸುತ್ತಿದ್ದೇನೆ’
ಶಶಾಂಕ್‌, ನಿರ್ದೇಶಕ, ನಿರ್ಮಾಪಕ

ಸೆನ್ಸಾರ್‌ ಅಧಿಕಾರಿಯಿಂದ ಬಾರದ ಪ್ರತಿಕ್ರಿಯೆ
ಪ್ರಾದೇಶಿಕ ಸೆನ್ಸಾರ್‌ ಮಂಡಳಿ ಮೇಲೆ ಹಲವು ಚಿತ್ರಗಳ ನಿರ್ದೇಶಕ, ನಿರ್ಮಾಪಕರು ಮಾಡುತ್ತಿರುವ ಗಂಭೀರ ಆರೋಪ ಕುರಿತಾದ ಪ್ರತಿಕ್ರಿಯೆಗೆ ಸೆನ್ಸಾರ್‌ ಮಂಡಳಿ ಅಧಿಕಾರಿ ಶ್ರೀನಿವಾಸಪ್ಪ ಅವರಿಗೆ ಹಲವು ಬಾರಿ ಕರೆ ಮಾಡಿ, ಸಂದೇಶ ಕಳುಹಿಸಿದರೂ, ಅವರಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ.

ವಿಜಯ್‌ ಭರಮಸಾಗರ

Advertisement

Udayavani is now on Telegram. Click here to join our channel and stay updated with the latest news.

Next