Advertisement
ಸಾವಿರಾರು ಜನರಿಗೆ ಮೂರು ವರ್ಷ ಉದ್ಯೋಗ ಕೊಟ್ಟ ಈ ಕಟ್ಟಡ ಯಾರೋ ಮಾಡಿದ ತಪ್ಪಿಗೆ 19 ಜನರನ್ನು ಬಲಿ ಪಡೆದುಕೊಂಡು ಧಾರಾನಗರಿಯ ಜನರಿಂದ ವಿಲನ್ ಎನಿಸಿಕೊಂಡಿತು. ಸುಂದರ ವಿನ್ಯಾಸ, ಒಳ್ಳೆಯ ವಸ್ತುಗಳ ಬಳಕೆಯಲ್ಲಿಯೇ ಕಟ್ಟಡ ನಿರ್ಮಾಣಗೊಂಡಿದ್ದರೂ, ಪಿಲ್ಲರ್ಗಳಶಕ್ತಿಯನ್ನು ಹೆಚ್ಚಿಸಲು ಹೋಗಿ ಆಗಿರುವ ಎಡವಟ್ಟಿನಿಂದಾಗಿ ಕಟ್ಟಡ ತಿರುಗಿ ಬಿದ್ದು, ಅನೇಕರ ಬದುಕಿನ ದಿಕ್ಕನ್ನೇ ಬದಲಿಸಿ ಒಗೆದಿದೆ. ತುತ್ತಿನ ಚೀಲ ತುಂಬಿಸಿಕೊಳ್ಳಲು ಬಂದವರನ್ನೇ ಆಹುತಿ ಪಡೆದು ಅವಶೇಷವಾಗಿ ಹೋಗಿದೆ.
Related Articles
Advertisement
ಧಾರವಾಡ ಇತಿಹಾಸದಲ್ಲಿಯೇ ದೊಡ್ಡ ದುರಂತ ಕಟ್ಟಡ ದುರಂತ ಇಡೀ ಧಾರಾನಗರಿಯನ್ನೇ ತಲ್ಲಣಗೊಳಿಸಿದ್ದು ಸತ್ಯ. 1989ರಲ್ಲಿ ಲೈನ್‌ಬಜಾರ್ ನಲ್ಲಿ ಮಳೆಗಾಲದಲ್ಲಿ ಹಳೆಯ ಅಂಗಡಿಯೊಂದು ಕುಸಿದುಬಿದ್ದು ಇಬ್ಬರು ಸಾವನ್ನಪ್ಪಿ, ಹತ್ತು ಜನರು ಗಾಯಗೊಂಡಿದ್ದರು. ಅದನ್ನು ಬಿಟ್ಟರೆ ಇಲ್ಲಿನ ಮಾರುಕಟ್ಟೆ ಪ್ರದೇಶದಲ್ಲಿ ವ್ಯಾಪಾರಿ ಮಳಿಗೆಗಳಲ್ಲಿ ನಡೆದ ದುರಂತಗಳಿಗೆ ಉದಾಹರಣೆ ಕೂಡ ಇಲ್ಲ. ಇದೀಗ ಬರೋಬ್ಬರಿ 19 ಜನರನ್ನು ಒಂದೇ ಕಟ್ಟಡ ಬಲಿ ಪಡೆದುಕೊಂಡಿದ್ದನ್ನು ನೋಡಿ ಜನರು ಆತಂಕಗೊಂಡಿದ್ದಾರೆ.
ಕಿಲ್ಲರ್ ಕಟ್ಟಡದ ಜೊತೆ ಜೊತೆಯಲ್ಲೇ ನಗರದ ಆಯಕಟ್ಟಿನ ಪ್ರದೇಶದಲ್ಲಿ ಇನ್ನಷ್ಟು ವಾಣಿಜ್ಯ ಮಳಿಗೆಗಳು ಮತ್ತು ವಸತಿ ಅಪಾರ್ಟ್‌ಮೆಂಟ್‌ಗಳು ಹುಟ್ಟಿಕೊಂಡಿವೆ. ಇದೀಗ ಅವುಗಳಲ್ಲಿ ಮನೆ ಮತ್ತು ಮಳಿಗೆ ಕೊಳ್ಳುವುದಕ್ಕೆ ಜನ ಹಿಂದೇಟು ಹಾಕುವಂತಾಗಿದೆ. ಜಯನಗರ, ಶ್ರೀನಗರ, ಹೊಸ ಬಸ್‌ನಿಲ್ದಾಣ, ರೈಲ್ವೆ ನಿಲ್ದಾಣದ ಸುತ್ತ, ಕಲ್ಯಾಣ ನಗರ, ಶಿವಗಿರಿ ಸೇರಿದಂತೆ ಅನೇಕ ಕಡೆಗಳಲ್ಲಿ ಇಂತಹುದೇ ಮಾದರಿಯ ದೈತ್ಯ ಕಟ್ಟಡಗಳು ತಲೆ ಎತ್ತುತ್ತಿದ್ದು, ಕಟ್ಟಡ ಮಾಲೀಕರು ಮತ್ತು ಎಂಜಿನಿಯರ್‌ಗಳು ಈ ದುರಂತದಿಂದ ಪಾಠ ಕಲಿಯಬೇಕಿದೆ ಎನ್ನುತ್ತಿದ್ದಾರೆ ಪ್ರಜ್ಞಾವಂತ ನಾಗರಿಕರು.
17 ಜನರನ್ನು ಉಳಿಸಿದ ತ್ರಿಮೂರ್ತಿಗಳು ಮೊದಲ ದಿನದ ಗೋಲ್ಡನ್ ಅವರ್‌ನಲ್ಲಿಯೇ ಧಾರವಾಡದ ಮೂವರು ಯುವಕರು 17 ಜನರನ್ನು ರಕ್ಷಣೆ ಮಾಡಿದ್ದಾರೆ. ಧಾರವಾಡದ ಬಸವರಾಜ ಜಾಧವ, ಸದ್ದಾಂ ತಹಶೀಲ್ದಾರ್ ಮತ್ತು ಕಿರಣ ಕಣವಿ ಒಂದೇ ಸಮಯಕ್ಕೆ ದಕ್ಷಿಣ ದಿಕ್ಕಿನಲ್ಲಿರುವ ಕುಸಿದ ಕಟ್ಟಡದ ಪ್ಯಾಸೇಜ್ ಒಳಗಡೆ ನುಗ್ಗಿ, ಕಿಂಡಿಯೊಂದನ್ನು ಕೊರೆದುಕೊಂಡು ಅಲ್ಲಿಂದಲೇ 17 ಜನರನ್ನು ಪಾರು ಮಾಡಿದ್ದರು. ಅವರ ಧೈರ್ಯಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದು, ರಕ್ಷಣಾ ಕಾರ್ಯದಲ್ಲಿದ್ದ ಸಿಬ್ಬಂದಿ ಸಹ ಅವರನ್ನು ಅಭಿನಂದಿಸಿದ್ದಾರೆ.
ಮಾನವೀಯತೆ ಸ್ಪಂದನೆ ರಕ್ಷಣಾ ಕಾರ್ಯಾಚರಣೆ ಭರದಿಂದ ನಡೆದಿದ್ದು ಎಷ್ಟು ಸತ್ಯವೋ, ಅವರಿಗೆ ಪೂರಕವಾಗಿ ಸಾರ್ವಜನಿಕರು, ಸಂಘ-ಸಂಸ್ಥೆಗಳು ಮಾನವೀಯ ನೆಲೆಯಲ್ಲಿ ಸ್ಪಂದಿಸಿದ್ದು ಅಷ್ಟೇ ಸತ್ಯ. ಕಟ್ಟಡ ಕುಸಿತದಲ್ಲಿ ಸಿಲುಕಿದವರ ರಕ್ಷಣೆಗೆ ನಿಂತವರಿಗೆ ಅನ್ನ, ಆಹಾರ, ಹಣ್ಣು, ಮಜ್ಜಿಗೆ, ನೀರನ್ನು ತಂದು ಕೊಟ್ಟವರು ಸಾರ್ವಜನಿಕರು. ಅವರು ತೋರಿದ ಮಾನವೀಯತೆಯಿಂದಾಗಿ ರಕ್ಷಣಾ ಕಾರ್ಯಾಚರಣೆ ಇನ್ನಷ್ಟು ಚುರುಕಾಗಿ ನಡೆಯಿತು. ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಮಠ ಪ್ರತಿದಿನ ಸಾವಿರಕ್ಕೂ ಅಧಿಕ ಜನರಿಗೆ ಊಟದ ವ್ಯವಸ್ಥೆ ಮಾಡಿ ನೆರವಿನ ಹಸ್ತ ಚಾಚಿತು.
132 ಗಂಟೆ ಕಾರ್ಯಾಚರಣೆಮಾ.19ರಂದು ಸಂಜೆಯಿಂದಲೇ ಆರಂಭಗೊಂಡು 132 ಗಂಟೆ ಕಾಲ ಜರುಗಿದ ರಕ್ಷಣಾ ಕಾರ್ಯಾಚರಣೆ ಕೂಡ ಅತೀ ದೀರ್ಘ ಸಮಯದ ಕಾರ್ಯಾಚರಣೆಯಾಗಿದೆ. ಇಡೀ ರಾಜ್ಯದಲ್ಲಿ 1980ರ ದಶಕದಲ್ಲಿ ಬೆಂಗಳೂರಿನ ಗಂಗಾರಾಮ ಕಟ್ಟಡ ದುರಂತ ಸಂಭವಿಸಿದ್ದನ್ನು ಬಿಟ್ಟರೆ, ಈ ರೀತಿ ಕಟ್ಟಡ ದುರಂತ ಮತ್ತೆಲ್ಲಿಯೂ ಸಂಭವಿಸಿಲ್ಲ. ಎನ್‌ಡಿಆರ್‌ಎಫ್, ಎಸ್‌ಡಿಆರ್ ಎಫ್ ಮತ್ತು ಅಗ್ನಿ ಶಾಮಕದಳ ಸಿಬ್ಬಂದಿ ತೋರಿದ ಧೈರ್ಯ ಮತ್ತು ಸತತ ಕಾರ್ಯಾಚರಣೆ ಪರಿಣಾಮ 57 ಜನರು ರಕ್ಷಣೆಯಾಗಿದ್ದಾರೆ. ಅಷ್ಟೇಯಲ್ಲ, ಕಟ್ಟಡ ಬೀಳುತ್ತಿದ್ದಂತೆಯೇ ಸಾರ್ವಜನಿಕರು ಮಾಡಿದ ಕೆಲಸವನ್ನು ಇಡೀ ನಗರವೇ ಕೊಂಡಾಡುತ್ತಿದೆ. ಕಟ್ಟಡ ಕುಸಿದ ನಂತರ ಮೊದಲ ಮೂರು ತಾಸಿನ ಚಿನ್ನದ ಸಮಯ (ಗೋಲ್ಡನ್ ಅವರ್)ದಲ್ಲಿಯೇ 37ಕ್ಕೂ ಹೆಚ್ಚು ಜನರನ್ನು ರಕ್ಷಣೆ ಮಾಡಲಾಯಿತು. ಇದಕ್ಕೆ
ಸಾರ್ವಜನಿಕರು ತೋರಿದ ಸಹಕಾರವೇ ಕಾರಣ ಎನ್ನುತ್ತಿದ್ದಾರೆ ರಕ್ಷಣಾ ಕಾರ್ಯಾಚರಣೆ ಸಿಬ್ಬಂದಿ. ಥೂ.. ಇಲ್ಲೂ ರಾಜಕೀಯವೇ
ಕಟ್ಟಡ ಕುಸಿತ ದುರಂತ ಕೈ-ಕಮಲ ಪಡೆ ರಾಜಕೀಯ ಬೇಳೆ ಬೇಯಿಸಿಕೊಳ್ಳುವುದಕ್ಕೂ ವೇದಿಕೆಯಾಗಿದ್ದು
ದುರ್ದೈವ. ಕಟ್ಟಡದ ಪಾಲುದಾರರಲ್ಲಿ ನಾಲ್ಕು ಜನರು ಬಿಜೆಪಿ ಪಕ್ಷದ ನಿಷ್ಠಾವಂತ ಕಾರ್ಯಕರ್ತರು.
ಗಂಗಾಧರ್ ಶಿಂತ್ರಿ, ಬಸವರಾಜ ನಿಗದಿ, ರವಿ ಸಬರದ, ಮಹಾಬಳೇಶ್ವರ ಪುರದಗುಡಿ ಈ ಎಲ್ಲರೂ ಸವದತ್ತಿ ಮೂಲದವರು ಮತ್ತು ಎಲ್ಲರೂ ಬಿಜೆಪಿ ಪಕ್ಷದ ಕಟ್ಟಾಳುಗಳು. ಆದರೆ, ಗಂಗಾಧರ್ ಶಿಂತ್ರಿ ಅವರು
ಮಾಜಿ ಸಚಿವ ವಿನಯ ಕುಲಕರ್ಣಿ ಅವರ ಮಾವ. ಇನ್ನು ಸಂಸದ ಪ್ರಹ್ಲಾದ ಜೋಶಿ ಸಂಬಂಧಿ ಮುಕುಂದ ಜೋಶಿ ಕಟ್ಟಡಕ್ಕೆ ಸಿಸಿ ಪರವಾನಗಿ ಕೊಟ್ಟವರು. ಈ ವಿಚಾರವನ್ನು ಬಿಜೆಪಿಯೇ ಮೊದಲು ರಾಜಕೀಯಕ್ಕೆ ಬಳಸಿಕೊಳ್ಳಲು ಮುಂದಾಯಿತು. ಇದಕ್ಕೆ ಕಾಂಗ್ರೆಸ್ ತಿರುಗೇಟು ನೀಡಿತು. ಒಟ್ಟಿನಲ್ಲಿ ಕಟ್ಟಡ ದುರಂತದಲ್ಲಿ ಕೈ-ಕಮಲ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಪ್ರಯತ್ನ ಮಾಡಿದರೂ ಹೆಚ್ಚು ಫಲಕಾರಿಯಾಗಲಿಲ್ಲ ಬಸವರಾಜ ಹೊಂಗಲ್