ರಾಮನಗರ: ದೇಶದ ಪ್ರಧಾನ ಮಂತ್ರಿಯಾಗಿ ನರೇಂದ್ರ ಮೋದಿ ಎರಡನೇ ಅವಧಿಗೆ ಪ್ರಮಾಣ ವಚನ ಸ್ವೀಕರಿಸಿದ ಬೆನ್ನೆಲ್ಲೆ ಜಿಲ್ಲಾಧ್ಯಂತ ಬಿಜೆಪಿ ಕಾರ್ಯಕರ್ತರು ಮತ್ತು ಮೋದಿ ಅಭಿಮಾನಿಗಳು ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಿದ ಪಟಾಕಿ ಸಿಡಿಸಿ, ಸಾರ್ವಜನಿಕರಿಗೆ ಸಿಹಿ ವಿತರಿಸಿ ಸಂಭ್ರಮಿಸಿದರು.
ವಿಶೇಷ ಪೂಜೆ, ಸಿಹಿ ವಿತರಣೆ: ರಾಮನಗರದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಎಂ.ರುದ್ರೇಶ್, ಪ್ರಧಾನ ಕಾರ್ಯದರ್ಶಿ ಮುರುಳಿ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಮತ್ತು ಮೋದಿ ಅಭಿಮಾನಿಗಳು ಹಳೇ ಬಸ್ ನಿಲ್ದಾಣದ ಬಳಿ ಇರುವ ಬಸವೇಶ್ವರ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ಪಟಾಕಿ ಸಿಡಿಸಿ, ನೂರಾರು ನಾಗರಿಕರಿಗೆ ಸಿಹಿ ವಿತರಿಸಿ ಸಂಭ್ರಮಿಸಿದರು.
ಪ್ರಧಾನಿ ಮೋದಿಗೆ ಜನರ ಆಶೀರ್ವಾದ: ಈ ವೇಳೆ ಮಾತನಾಡಿದ ಜಿಲ್ಲಾ ಬಿಜೆಪಿ ಅಧ್ಯಕ್ಷ ಎಂ.ರುದ್ರೇಶ್, ದೇಶದ ಜನತೆ ನರೇಂದ್ರ ಮೋದಿ ಅವರ ಆಡಳಿತವನ್ನು ಮೆಚ್ಚಿ ಮತ್ತೂಮ್ಮೆ ಪ್ರಧಾನಿಯಾಗುವಂತೆ ಆಶೀರ್ವದಿಸಿದ್ದಾರೆ. ಮೋದೀಜಿ ಎರಡನೇ ಬಾರಿಗೆ ಪ್ರಧಾನಿ ಸ್ಥಾನವನ್ನು ಅಲಂಕರಿಸಿದ್ದಾರೆ. ದೇಶದ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ವಿಶ್ವಾಸವಿದೆ. ಆರ್ಥಿಕ ಸುಧಾರಣೆ ಮುಂದುವರೆಯಲಿದೆ ಎಂದರು.
ಪ್ರಮಾಣ ವಚನದ ನೇರ ಪ್ರಸಾರ ವೀಕ್ಷಣೆ ವ್ಯವಸ್ಥೆ: ಕನಕಪುರ ತಾಲೂಕಿನ ಹಾರೋಹಳ್ಳಿಯಲ್ಲಿ ಪಕ್ಷದ ಕಾರ್ಯ ಕರ್ತರು ಅಲ್ಲಿನ ಚಾಮುಂಡೇಶ್ವರಿ ಅಮ್ಮನವರ ದೇವಾಲಯದಲ್ಲಿ ವಿಶೇಷ ಪೂಜೆ ಮಾಡಿ ಸಂಭ್ರಮಿಸಿದ್ದಾರೆ. ಕನಕಪುರ ಪಟ್ಟಣದಲ್ಲಿ ಎಲ್. ಇ.ಡಿ ವಾಹನದಲ್ಲಿ ಮೋದಿ ಅವರ ಪ್ರಮಾಣ ವಚನ ಸಮಾರಂಭದ ನೇರ ಪ್ರಸಾರದ ವ್ಯವಸ್ಥೆ ಮಾಡಿದ್ದಾರೆ. ಅಲ್ಲಿ ಪೊಲೀಸರು ಮತ್ತು ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದಿದೆ. ತಾವು ಖುದ್ದು ಭೇಟಿ ಕೊಟ್ಟು ಪೊಲೀಸ್ ಅಧಿಕಾರಿಗಳ ಬಳಿ ಮಾತನಾಡಿ ವಾತಾವ ರಣವನ್ನು ತಿಳಿಗೊಳಿಸಿದ್ದಾಗಿ ಸುದ್ದಿಗಾರರಿಗೆ ಮಾಹಿತಿ ನೀಡಿದರು.
ಜಿಲ್ಲೆಯ ಚನ್ನಪಟ್ಟಣ, ಮಾಗಡಿ ತಾಲೂಕುಗಳು ಸೇರಿದಂತೆ ಜಿಲ್ಲೆಯಲ್ಲಿ ವಿವಿಧೆಡೆ ನಾಗರೀಕರು ಮೋದಿ ಅವರ ಎರಡನೇ ಅವಧಿಗೆ ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದನ್ನು ಸಂಭ್ರಮಿಸಿದ್ದಾರೆ ಎಂದರು. ಈ ವೇಳೆ ಬಿಜೆಪಿ ಪ್ರಮುಖರಾದ ಪ್ರವೀಣ್ ಗೌಡ, ಬಿ.ನಾಗೇಶ್, ಬಿಜೆಪಿ ಮಂಜು, ಪತಿ, ವಿನೋದ್, ಪಿ.ವಿ.ವಿವೇಕಾನಂದ, ಶಿವಲಿಂಗಯ್ಯ, ಚಂದ್ರಕಲಾ, ಆರ್.ಎಸ್.ದೇವಿಕಾ, ಹೇಮಾವತಿ ಮುಂತಾದವರು ಹಾಜರಿದ್ದರು.
ಕೆಂಪೇಗೌಡ ವೃತ್ತ: ನಗರದ ಕೆಂಪೇಗೌಡ ವೃತ್ತದಲ್ಲಿಯೂ ಬಿಜೆಪಿ ಮುಖಂಡ ರಮೇಶ್ ನೇತೃತ್ವದಲ್ಲಿ ಕಾರ್ಯಕರ್ತರು ಮೋದಿ ಅವರು ಎರಡನೇ ಬಾರಿಗೆ ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಸಂದರ್ಭವನ್ನು ಆಚರಿಸಿದರು. ಪಟಾಕಿ ಸಿಡಿಸಿ, ಸಿಹಿ ವಿತರಿಸಿದರು.
ಕಾಮಣ್ಣನಗುಡಿ ವೃತ್ತ: ನಗರದ ಎಂ.ಜಿ.ರಸ್ತೆಯ ಕಾಮಣ್ಣನ ಗುಡಿ ವೃತ್ತದಲ್ಲಿ ಜಮಾಯಿಸಿದ ಮೋದಿ ಅಭಿಮಾನಿಗಳು ಪಟಾಕಿ ಸಿಡಿಸಿ , ಲಾಡು ವಿತರಿಸಿ ಮೋದಿ ಅವರು ಎರಡನೇ ಬಾರಿಗೆ ಪ್ರಧಾನ ಮಂತ್ರಿಗಳಾಗುತ್ತಿರುವುದನ್ನು ಸ್ವಾಗತಿಸಿದರು. ಚಂದ್ರಶೇಖರ ರೆಡ್ಡಿ, ಜಿ.ವಿ.ಪದ್ಮನಾಭ, ಕಾಳಯ್ಯ, ರುಶಿವರುದ್ರಪ್ಪ ಮುಂತಾದವರು ನೇತೃತ್ವವಹಿಸಿದ್ದರು.
ಗಾಂಧಿನಗರ: ನಗರದ ಗಾಂಧಿನಗರದಲ್ಲಿ ಬಿಜೆಪಿ ಮುಖಂಡ ಪಿ.ವಿ.ಬದರಿನಾಥ್ ನೇತೃತ್ವದಲ್ಲಿ ಮೋದಿ ಅಭಿಮಾನಿಗಳು ಸಿಹಿ ವಿತರಿಸಿ ಸಂಭ್ರಮಿಸಿದರು. ಸ್ಥಳೀಯ ಬಿಜೆಪಿ ಕಾರ್ಯಕರ್ತರು ಸಂಭ್ರಮದಲ್ಲಿ ಭಾಗಿಯಾಗಿದ್ದರು.