Advertisement

ಸಂಭ್ರಮದ ನಾಗರ ಪಂಚಮಿ

09:26 AM Aug 05, 2019 | Suhan S |

ಗದಗ: ನಾಗರ ಪಂಚಮಿ ಮುನ್ನದಿನವಾದ ರವಿವಾರ ನಾಗ ಚತುರ್ಥಿ ನಿಮಿತ್ತ ಗದಗ- ಬೆಟಗೇರಿ ಸೇರಿದಂತೆ ಜಿಲ್ಲಾದ್ಯಂತ ಸಂಭ್ರಮದಿಂದ ಸಾರ್ವಜನಿಕರು ನಾಗದೇವತೆಗಳಿಗೆ ಹಾಲೆರೆದರು.

Advertisement

ಮಳೆ, ಬೆಳೆ, ಜೀವನ ಸಮೃದ್ಧಗೊಳಿಸುವಂತೆ ಪೂಜೆ ಸಲ್ಲಿಸಿದರು. ಹಬ್ಬದ ಅಂಗವಾಗಿ ಗೋಲ್ ಬೊಗರಿ, ಜೋಕಾಲಿಯಲ್ಲಿ ಜೀಕುವ ಮೂಲಕ ಮಹಿಳೆಯರು, ಮಕ್ಕಳು ಸಂಭ್ರಮದ ಅಲೆಯಲ್ಲಿ ತೇಲಿದರು.

ಬೆಳಗ್ಗೆಯಿಂದಲೇ ಅವಳಿ ನಗರದ ಜನರು ಮನೆಯಲ್ಲಿ ಹಾಗೂ ವಿವಿಧ ದೇವಸ್ಥಾನಗಳಲ್ಲಿ ಪ್ರತಿಷ್ಠಾಪಿಸಿರುವ ನಾಗದೇವತೆಗಳ ಮೂರ್ತಿಗಳು, ಹಾವಿನ ಹುತ್ತಗಳು ಹಾಗೂ ಹಬ್ಬದ ನಿಮಿತ್ತ ಮನೆಯಲ್ಲಿಟ್ಟಿದ್ದ ಮಣ್ಣಿನ ನಾಗದೇವರಿಗೆ ಮನೆ ಮಂದಿ ಹಾಲರೆದು, ಶ್ರದ್ಧಾ ಭಕ್ತಿಯಿಂದ ಪೂಜೆ ಸಲ್ಲಿಸಿದರು.

ಈ ವೇಳೆ ಕೆಲವರು ಇದು ನನ್ನ ಪಾಲು, ಇದು ತಂದೆ, ತಾಯಿ, ಅಜ್ಜ, ಅಜ್ಜಿ, ಅಕ್ಕ ಹಾಗೂ ಅಣ್ಣ ಹಾಗೂ ತಮ್ಮನ ಪಾಲು ಎಂದು ಹೇಳುವ ಮೂಲಕ ಹಾಲೆರೆದು ಧನ್ಯತೆ ಮೆರೆದರು.

ಇದೇ ವೇಳೆ ಮನೆಯಲ್ಲಿ ತಯಾರಿಸಿದ್ದ ಶೇಂಗಾ, ಪುಠಾಣಿ, ರವೆ, ದಾನಿ, ಅಳ್ಳಿಟ್ಟು, ಎಳ್ಳು ಸೇರಿದಂತೆ ಇನ್ನಿತರೆ ಉಂಡಿಗಳನ್ನು ನೈವೇದ್ಯ ವಾಗಿ ಅರ್ಪಿಸಿ, ಬಳಿಕ ಮನೆಯ ಮಂದಿಯೆಲ್ಲ ಒಟ್ಟಿಗೆ ಕುಳಿತು ಭೋಜನ ಸವಿದರು.

Advertisement

ಅಲ್ಲದೇ, ಶ್ರಾವಣ ಮಾಸದ ಅಂಗವಾಗಿ ಮನೆಯಂಗಳದ ಬೃಹತ್‌ ಮರಗಳಿಗೆ ಹಗ್ಗದಿಂದ ಜೋಕಾಲಿ ಕಟ್ಟಿದ್ದು ಅಲ್ಲಲ್ಲಿ ಕಂಡು ಬಂದಿತು. ಮಕ್ಕಳು, ಮಹಿಳೆಯರು, ವಯಸ್ಕರರು ಸರದಿಯಂತೆ ಜೋಕಾಲಿ ಜೀಕಿ ಸಂಭ್ರಮಿಸಿದರು. ಒಬ್ಬರು, ಇಬ್ಬರು ಜೋಕಾಲಿಯಲ್ಲಿ ಜೀಕಿದರೆ, ಇನ್ನುಳಿದವರು ಬದುಕಿನ ಸಾರ ಹೇಳುವ ಜಾನಪದ ಹಾಡುಗಳನ್ನು ಹಾಡಿದರು.

ನಗರದ ರಾಜೀವಗಾಂಧಿ ನಗರ, ಈಶ್ವರ ಬಡಾವಣೆ, ಡಿ.ಸಿ.ಮಿಲ್ ಕಾಂಪೌಂಡ್‌, ಒಕ್ಕಲಗೇರಿ ಓಣಿ ಸೇರಿದಂತೆ ಬೆಟಗೇರಿ ವಿವಿಧ ಭಾಗಗಳಲ್ಲಿ ದೊಡ್ಡ ದೊಡ್ಡ ಮರಗಳಲ್ಲಿ ಹಗ್ಗದ ಜೋಕಾಲಿಗಳು ತೂಗುತ್ತಿರುವ ದೃಶ್ಯ ನೋಡುಗರಿಗೆ ಮುದ ನೀಡಿತು.

Advertisement

Udayavani is now on Telegram. Click here to join our channel and stay updated with the latest news.

Next