Advertisement

“ಗುಹಾಂತರ’ದೇಗುಲಕ್ಕೆ ಬೇಕಿದೆ ಸೂಕ್ತ ಸಂಪರ್ಕ ವ್ಯವಸ್ಥೆ

02:41 AM Apr 10, 2021 | Team Udayavani |

ಕೆರಾಡಿ: ಕೆರಾಡಿ ಗ್ರಾಮದ ಮೂಡುಗಲ್ಲು ಎಂಬಲ್ಲಿ ಅಪರೂಪದ ಗುಹಾಂತರ ದೇಗುಲವಿದ್ದು, ಗುಹೆಯ ಪ್ರವೇಶ ದ್ವಾರದಿಂದ ಅಂದಾಜು 20 ಅಡಿ ಒಳಗಡೆ ಶ್ರೀ ಕೇಶವನಾಥೇಶ್ವರ ದೇವರ ಲಿಂಗವಿದೆ. ಭಕ್ತರು ಗುಹೆಯೊಳಗೆ ಪ್ರವೇಶಿಸಿ ಪೂಜೆ ಸಲ್ಲಿಸಬಹುದು. ಆದರೆ ಈ ದೇವಸ್ಥಾನವನ್ನು ಸಂಪರ್ಕಿಸುವ ಹಾದಿ ಮಾತ್ರ ದುರ್ಗಮವಾಗಿದೆ.

Advertisement

ಮೂಡುಗಲ್ಲು ದೇವಸ್ಥಾನವನ್ನು ಸಂಪರ್ಕಿಸುವ ಸುಮಾರು 4 ಕಿ.ಮೀ. ಉದ್ದದ ಮಣ್ಣಿನ ರಸ್ತೆಯು ಮೀಸಲು ಅರಣ್ಯ ಪ್ರದೇಶದಲ್ಲಿ ಹಾದು ಹೋಗುತ್ತದೆ. ಈಗ ಬೇಸಗೆಯಲ್ಲಿ ಈ ರಸ್ತೆ ಧೂಳುಮಯವಾಗಿದ್ದರೆ, ಮಳೆಗಾಲದಲ್ಲಿ ಕೆಸರುಮಯವಾಗಿ ಮಾರ್ಪಾಡಾಗುತ್ತದೆ. ಇದರಿಂದ ಇಲ್ಲಿಗೆ ದೂರ- ದೂರದ ಊರುಗಳಿಂದ ಬರುವ ಭಕ್ತರು ಹರಸಾಹಸ ಪಡುವಂತಾಗಿದೆ.

ರಮಣೀಯ ತಾಣ
ದೇವಸ್ಥಾನದ ಎದುರು ನೂರಾರು ಎಕರೆಯ ಮ್ಯಾಂಗನೀಸ್‌ ನಿಕ್ಷೇಪ ಹೊಂದಿರುವ ಪ್ರದೇಶವಿದೆ. ಇಲ್ಲಿ ನಿಂತು ಸೂರ್ಯಾಸ್ತ, ಸೂರ್ಯೋದಯ ನೋಡ ಬಹುದು. ಇಲ್ಲಿ ಒಂದೂವರೆ ಕಿ.ಮೀ. ವ್ಯಾಪ್ತಿಯಲ್ಲಿ ಗತಕಾಲದಲ್ಲಿ ಕರಿಕಲ್ಲುಗಳಿಂದ ನಿರ್ಮಿಸಿದ ಕೋಟೆ ಈಗಲೂ ಇದೆ. ಮ್ಯಾಂಗನೀಸ್‌ ನಿಕ್ಷೇಪಿತ ಕಲ್ಲುಗಳಿಂದ ಈ ಕೋಟೆ ನಿರ್ಮಿಸಲಾಗಿದೆ. ಇದೊಂದು ಧಾರ್ಮಿಕ ಸ್ಥಳ ಮಾತ್ರವಲ್ಲದೆ, ಅತ್ಯಂತ ಸುಂದರವೂ, ರಮಣೀಯವಾದ ಪ್ರವಾಸಿ ತಾಣವೂ ಆಗಬಹುದು.

ಮೂಲಸೌಕರ್ಯ ವಂಚಿತ
ಕುಂದಾಪುರದಿಂದ 40 ಕಿ.ಮೀ., ಕೆರಾಡಿಯಿಂದ ಸುಮಾರು 4 ಕಿ.ಮೀ. ದೂರದಲ್ಲಿ ಈ ಮೂಡುಗಲ್ಲು ಗುಹಾಂರ್ತ ಗಾಮಿ ದೇವಸ್ಥಾನವಿದೆ. ಕೆರಾಡಿಯಿಂದ ಶಾಡೆಬೇರು ದೇವಸ್ಥಾನಕ್ಕೆ ಹೋಗುವ ಮಾರ್ಗವಾಗಿ ಅಥವಾ ಹಳ್ಳಿಹೊಳೆಯಿಂದ ವಾಟೆಬಚ್ಚಲು ಮೂಲಕವಾಗಿ ಇಲ್ಲಿಗೆ ತೆರಳಬಹುದು. ಆದರೆ ಕಾಡಿನೊಳಗಿನ ಈ ರಸ್ತೆಯಲ್ಲಿ ಸಂಚರಿಸುವುದು ಸಾಹಸಮಯ ಕಾರ್ಯ. ಅದರಲ್ಲೂ ಸುಮಾರು ಮೂರು ಕಿ.ಮೀ. ದೂರ ಕ್ರಮಿಸಬೇಕಿದ್ದರೆ ಜೀವ ಕೈಯಲ್ಲಿ ಹಿಡಿದುಕೊಂಡೇ ಸಂಚರಿಸ ಬೇಕು. ರಸ್ತೆ ಅಭಿವೃದ್ಧಿಯ ಜತೆಗೆ ವಿದ್ಯುತ್‌ ಸಂಪರ್ಕಕ್ಕೂ ಮೀಸಲು ಅರಣ್ಯ ಪ್ರದೇಶ ನಿಯಮ ಅಡ್ಡಿಯಾಗಿದೆ.

ವಿಶಿಷ್ಟ ಧಾರ್ಮಿಕ ಕ್ಷೇತ್ರ
ಅತ್ಯಂತ ಎತ್ತರದ ಸ್ಥಳದಲ್ಲಿ ಕಾನನದ ನಡುವೆ ಕಾಣುವ ಮೂಡುಗಲ್ಲು ಶ್ರೀ ಕೇಶವನಾಥೇಶ್ವರ ಕ್ಷೇತ್ರವು ಜನಮಾನಸದಿಂದ ಬಹು ದೂರನೇ ಇದೆ. ಇಂತಹ ಒಂದು ಅದ್ಭುತವಾದ, ಸೃಷ್ಟಿದತ್ತವಾದ ಕ್ಷೇತ್ರವಿದೆ ಎನ್ನುವು ದರ ಅರಿವು ಬಹುತೇಕರಿಗೆ ಗೊತ್ತಿಲ್ಲ. ಗುಹೆಯೊಳಗೆ ಸುಮಾರು 20 ಅಡಿಗಳಷ್ಟು ವಿಶಾಲ ಜಾಗದಲ್ಲಿ ಹರಡಿ ರುವ ನೀರು, ಆ ನೀರಿನಲ್ಲಿ ಹಲವು ಬಗೆಯ ವಿಶೇಷ ಮೀನುಗಳು, ಕತ್ತಲು ತುಂಬಿದ ಗುಹೆಯೊಳಗೆ ಕೇವಲ ದೇವರ ದೀಪದ ಬೆಳಕು ಬಿಟ್ಟರೆ ಬೇರೆ ಬೆಳಕಿನ ವ್ಯವಸ್ಥೆ ಇಲ್ಲ. ನೀರಿನಲ್ಲಿ ನಿಂತುಕೊಂಡು ದೇವರ ದರ್ಶನ ಪಡೆಯುವುದೇ ಅದ್ಭುತ, ಅನೂಹ್ಯ, ಅನುಪಮ ಅನುಭವ ನೀಡುತ್ತದೆ. ಇನ್ನು ಎಲ್ಲ ಕಾಲದಲ್ಲಿಯೂ ಮೊಣಕಾಲಿನಷ್ಟು ಪನ್ನೀರಿನಂತಹ ನೀರು ಇಲ್ಲಿ ಹರಿಯುತ್ತಿರುತ್ತದೆ. ಪ್ರತಿ ವರ್ಷ ಎಳ್ಳಮಾವಾಸ್ಯೆಯಂದು ಜಾತ್ರೆ ನಡೆಯುತ್ತದೆ. ವಿವಿಧೆಡೆಗಳಿಂದ ನೂರಾರು ಮಂದಿ ಭಕ್ತರು ಬರುತ್ತಾರೆ.

Advertisement

ನಿಯಮ ಅಡ್ಡಿ
ಈಗಾಗಲೇ ಕೆರಾಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಶಾಡೆಬೇರು ದೇವಸ್ಥಾನ, ಚಪ್ಪರಮಕ್ಕಿ ಸೇತುವೆ ಸಹಿತ 19 ಕೋ.ರೂ. ವೆಚ್ಚದ ಕಾಮಗಾರಿಗಳನ್ನು ನಡೆಸಲಾಗಿದೆ. ಮೂಡುಗಲ್ಲು ದೇವಸ್ಥಾನವನ್ನು ಸಂಪರ್ಕಿಸುವ ರಸ್ತೆ ಅಭಿವೃದ್ಧಿಯ ಬಗ್ಗೆ ಚಿಂತನೆಯಿದ್ದು, ಆದರೆ ಮೀಸಲು ಅರಣ್ಯ ನಿಯಮ ಅಡ್ಡಿಯಾಗಿದೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಪ್ರಯತ್ನ ಮಾಡಲಾಗುವುದು. ದೇವಸ್ಥಾನದ ಅಭಿವೃದ್ಧಿಗೆ 5 ಲಕ್ಷ ರೂ. ಅನುದಾನ ಮಂಜೂರಾಗಿದೆ.
– ಬಿ.ಎಂ. ಸುಕುಮಾರ್‌ ಶೆಟ್ಟಿ, ಬೈಂದೂರು ಶಾಸಕರು

ಅನೇಕ ವರ್ಷಗಳ ಬೇಡಿಕೆ
ಮೂಡುಗಲ್ಲು ದೇವಸ್ಥಾನವೊಂದು ಪುರಾತನ, ಪವಿತ್ರ, ಐತಿಹಾಸಿಕ ಹಿನ್ನೆಲೆಯ ಧಾರ್ಮಿಕ ಕ್ಷೇತ್ರವಾಗಿದ್ದು, ನಾನಿಲ್ಲಿ ಕಳೆದ 13-14 ವರ್ಷಗಳಿಂದ ಅರ್ಚಕನಾಗಿದ್ದೇನೆ. ಇಲ್ಲಿಗೆ ನಿತ್ಯ ಪೂಜೆ ಮಾಡಲು ಹೋಗಿ ಬರುವುದೇ ಒಂದು ದೊಡ್ಡ ಸಾಹಸ. ಮಳೆಗಾಲದಲ್ಲೂ ಒಂದು ದಿನ ಪೂಜೆ ತಪ್ಪಿಸಿಲ್ಲ. ಈ ರಸ್ತೆಯ ಅಭಿವೃದ್ಧಿ ಅನೇಕ ವರ್ಷದ ಬೇಡಿಕೆಯಾಗಿದ್ದು, ಶಾಸಕರು, ಸಂಸದರು ಎಲ್ಲರಿಗೂ ಮನವಿ ಕೊಟ್ಟಿದ್ದೇವೆ. ರಸ್ತೆ ಕಾಂಕ್ರೀಟ್‌ ಕಾಮ ಗಾ ರಿ ಯಾದರೆ ಇಲ್ಲಿಗೆ ಬರುವವರಿಗೆ ಅನುಕೂಲವಾಗಲಿದೆ.
– ವೇ| ಮೂ| ರಾಘವೇಂದ್ರ ಕುಂಜತ್ತಾಯ, ಅರ್ಚಕರು, ಮೂಡುಗಲ್ಲು ದೇವಸ್ಥಾನ

Advertisement

Udayavani is now on Telegram. Click here to join our channel and stay updated with the latest news.

Next