Advertisement

ಮುಂದಿನ ಮಳೆಗಾಲದ ಮುಂಜಾಗ್ರತೆಗೆ ಸೂಚನೆ

02:56 PM Aug 07, 2020 | Suhan S |

ಯಲ್ಲಾಪುರ: ಶಿರಸಿ ಉಪ ವಿಭಾಗಾಧಿಕಾರಿ ಈಶ್ವರ ಉಳ್ಳಾಗಡ್ಡಿ ಅಧ್ಯಕ್ಷತೆಯಲ್ಲಿ ಮಳೆಗಾಲ ತುರ್ತುಸಭೆ ಪಟ್ಟಣದ ತಹಶೀಲ್ದಾರ್‌ ಕಚೇರಿಯಲ್ಲಿ ಗುರುವಾರ ನಡೆಯಿತು. ವಿವಿಧ ಇಲಾಖೆಗಳ ಪ್ರಮುಖರಿಗೆ

Advertisement

ಮಳೆಗಾಲದಲ್ಲಿ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಕುರಿತು ಅವರು ಸೂಚನೆ ನೀಡಿದರು. ಆರೋಗ್ಯ ಇಲಾಖೆ ಅಧಿಕಾರಿಗಳಲ್ಲಿ ಕೊರೊನಾದಪ್ರಸ್ತುತ ಪರಿಸ್ಥಿತಿ ಕುರಿತು ಮಾಹಿತಿ ಕೇಳಿ, ಮುಂಬರುವ ದಿನಗಳಲ್ಲಿ ಹಿರಿಯ ಆಟೋ ಚಾಲಕರು, ತರಕಾರಿ ಮಾರುವವರು ಹಾಗೂ ಇನ್ನಿತರ ಕೆಲಸಗಾರರನ್ನು ಗುರುತಿಸಿ ಎಲ್ಲರಿಗೂ ಗಂಟಲು ದ್ರವ ಪರೀಕ್ಷೆ ಮಾಡಿಸಬೇಕು. ಕೋವಿಡ್ ತೀವ್ರವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ರೋಗವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಸಹಾಯವಾಗುವಂತೆ ಹೆಚ್ಚಿನ ಜನರ ಗಂಟಲುದ್ರವ ಪರೀಕ್ಷೆ ಮಾಡಿಸಬೇಕು ಎಂದು ಹೇಳಿದರು.

ಮಳೆಗಾಲದಲ್ಲಿ ಅರಬೈಲ್‌ ಘಟ್ಟ ಪ್ರದೇಶವು ಅತ್ಯಂತ ಸೂಕ್ಷ್ಮ ಪ್ರದೇಶವಾಗಿದ್ದು, ಹೆಚ್ಚಿನ ಸಮಸ್ಯೆಗಳನ್ನು ತಂದೊಡ್ಡಬಹುದಾದ್ದರಿಂದ ಆರಕ್ಷಕ ಇಲಾಖೆ ಸಿಬ್ಬಂದಿ ಜಾಗೃತ ವಹಿಸಿ ಅರಣ್ಯ ಇಲಾಖೆಯವರ ಸಹಕಾರದೊಂದಿಗೆ ಗುಡ್ಡ ಕುಸಿತವಾದ ಪ್ರದೇಶಗಳಲ್ಲಿ ಜೆಸಿಬಿ ಬಳಸಿ ಕೂಡಲೇ ಮಣ್ಣನ್ನು ತೆರವುಗೊಳಿಸಬೇಕು. ಹೆದ್ದಾರಿ ಸಂಚಾರ ಮುಕ್ತವಾಗಿರುವಂತೆ ಎಚ್ಚರಿಕೆ ವಹಿಸಬೇಕು ಎಂದು ಆರಕ್ಷಕ ಇಲಾಖೆಗೆ ತಿಳಿಸಿದರು.

ಪಿಡಿಒಗಳು ಆದಷ್ಟು ನಿಯೋಜಿತ ಪ್ರದೇಶಗಳನ್ನು ಬಿಟ್ಟು ತೆರಳಬಾರದು. ಮಳೆ ಹಾನಿಯಾದಂತಹ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿ ಪರಿಹಾರ ದೊರಕಿಸಿಕೊಡುವಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ತಾಪಂ ಇಒಗೆ ಸೂಚಿಸಿದರು.

ರಸ್ತೆ ಬದಿಯ ಅಪಾಯಕಾರಿ ಮರಗಳು, ಮರದ ರೆಂಬೆಗಳು ಬಿದಿರಿನ ಹಿಂಡನ್ನು ತೆರವುಗೊಳಿಸಿ ವಾಹನ ಸಂಚಾರದಲ್ಲಿ ವ್ಯತ್ಯಯವಾಗದಂತೆ ಎಚ್ಚರ ವಹಿಸಬೇಕೆಂದು ಅರಣ್ಯ ಇಲಾಖಾ ಸಿಬ್ಬಂದಿಗೆ ತಿಳಿಸಿದರು. ಹವಾಮಾನ ಇಲಾಖೆ ವರದಿಯಂತೆ ಮುಂಬರುವ ದಿನಗಳಲ್ಲಿ ಹೆಚ್ಚಿನ ಮಳೆಯಾಗಲಿದ್ದು, ಎಲ್ಲ ಇಲಾಖೆ ಅಧಿಕಾರಿಗಳು ಅತ್ಯಂತ ಜಾಗೃತರಾಗಿ ಕೆಲಸ ನಿರ್ವಹಿಸಬೇಕೆಂದು ತಿಳಿಸಿದರು.

Advertisement

ಆರಕ್ಷಕ ಇಲಾಖೆ, ಪಟ್ಟಣ ಪಂಚಾಯತ್‌, ತಾಲೂಕು ಪಂಚಾಯತ್‌, ತೋಟಗಾರಿಕೆ ಮತ್ತು ಕೃಷಿ, ಅರಣ್ಯ ಇಲಾಖೆ, ಆರೋಗ್ಯ ಇಲಾಖೆ, ಹೆಸ್ಕಾಂ, ಜಿಲ್ಲಾ ಪಂಚಾಯತ್‌ ಅಭಿಯಂತರ ವಿಭಾಗದ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next