ಸಾಗರ: ಕೆಎಫ್‌ಡಿ ಆರಂಭದ ಹಂತದಲ್ಲೇ ಅಧಿಕಾರಿಗಳು ಸೂಕ್ತ ನಿಗಾ ವಹಿಸದೆ ಇರುವುದೇ ಕಾಯಿಲೆ ಉಲ್ಬಣಗೊಳ್ಳಲು ಹಾಗೂ ಸಾವು- ನೋವು ಹೆಚ್ಚಾಗಲು ಕಾರಣವಾಗಿದೆ ಎಂದು ರಾಜ್ಯ ಸರ್ಕಾರ ನಿಯೋಜಿಸಿರುವ ಕೆಎಫ್‌ಡಿ ವಿಶೇಷ ತನಿಖಾ ಸಮಿತಿ ಅಧ್ಯಕ್ಷ ಮದನ್ ಗೋಪಾಲ್ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಉಪ ವಿಭಾಗೀಯ ಆಸ್ಪತ್ರೆಯಲ್ಲಿ ಗುರುವಾರ ಕೆಎಫ್‌ಡಿ ಮಂಗನ ಕಾಯಿಲೆ ನಿಯಂತ್ರಣ ಕುರಿತು ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ವೈದ್ಯಾಧಿಕಾರಿಗಳೊಂದಿಗೆ ಚರ್ಚೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅರಳಗೋಡು ಗ್ರಾಪಂ ವ್ಯಾಪ್ತಿಯಲ್ಲಿ ಮಂಗಗಳ ಸಾವು ಸಂಭವಿಸಿದ ಸಂದರ್ಭದಲ್ಲಿ ತಕ್ಷಣ ನಿಗಾ ವಹಿಸಿದ್ದರೆ ಇಷ್ಟು ದೊಡ್ಡ ಮಟ್ಟದ ಅನಾಹುತ ಆಗುತ್ತಿರಲಿಲ್ಲ. ಯಾಕೆ ಹೀಗೆ ಆಗಿದೆ ಎನ್ನುವುದರ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದ್ದು, ಸರ್ಕಾರಕ್ಕೆ ವರದಿ ಸಲ್ಲಿಸಲಾಗುತ್ತದೆ ಎಂದು ತಿಳಿಸಿದರು.
ಬುಧವಾರ ಅರಳಗೋಡು ಗ್ರಾಮಕ್ಕೆ ಭೇಟಿ ನೀಡಿ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಗ್ರಾಮಸ್ಥರ ಜೊತೆ ಚರ್ಚಿಸಿದ ಸಂದರ್ಭದಲ್ಲಿ ಮೆಗ್ಗಾನ್ ಆಸ್ಪತ್ರೆ ಬಗ್ಗೆ ಸಾಕಷ್ಟು ದೂರುಗಳನ್ನು ಹೇಳಿದ್ದಾರೆ. ಜೊತೆಗೆ ಶಂಕಿತ ಮಂಗನ ಕಾಯಿಲೆಯಿಂದ ಬಳುತ್ತಿರುವವರನ್ನು ಮೆಗ್ಗಾನ್ ಆಸ್ಪತ್ರೆಯಿಂದ ಮ್ಯಾಕ್ಸ್ ಆಸ್ಪತ್ರೆಗೆ ಕರೆದೊಯ್ಯುವಂತೆ ಶಿಫಾರಸು ಮಾಡಿದ ವಿವರಗಳು ಸಹ ಲಭ್ಯವಾಗಿದೆ. ವ್ಯವಸ್ಥೆಯಲ್ಲಿ ಆಗಿರುವ ಲೋಪದೋಷವನ್ನು ಸರಿಪಡಿಸುವ ನಿಟ್ಟಿನಲ್ಲಿ ಸಹ ಸರ್ಕಾರಕ್ಕೆ ತಿಳಿಸಲಾಗುತ್ತದೆ ಎಂದು ಹೇಳಿದರು.
ಜನ ಸತ್ತ ನಂತರ ವ್ಯಾಕ್ಸಿನೇಷನ್ ನೀಡುವುದು, ಡಿಎಂಪಿ ಆಯಿಲ್ ವಿತರಣೆ ಕಾರ್ಯವನ್ನು ಚುರುಕು ಮಾಡಲಾಗಿದೆ. ಮೊದಲೇ ಏಕೆ ಈ ಕ್ರಮ ತೆಗೆದುಕೊಂಡಿಲ್ಲ ಎನ್ನುವುದರ ಬಗ್ಗೆ ಕಾರಣ ಕೇಳಲಾಗಿದೆ. 2018ರ ನ. 23ರಂದು ಮೊದಲ ಪ್ರಕರಣ ದಾಖಲಾಗಿದ್ದರೂ, ಐಡಿಎಸ್‌ಪಿ ಅಧಿಕಾರಿಗಳು ನಮಗೆ ಇದರ ಬಗ್ಗೆ ಮಾಹಿತಿಯೇ ಇಲ್ಲ ಎಂದು ಹೇಳುತ್ತಿದ್ದಾರೆ. ಆಗಲೇ ಸಂಬಂಧಪಟ್ಟ ಅಧಿಕಾರಿ ಅಗತ್ಯ ಕ್ರಮ ಕೈಗೊಂಡಿದ್ದರೆ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗಿ ಕಾಯಿಲೆ ನಿಯಂತ್ರಣ ಕಾರ್ಯ ಇನ್ನಷ್ಟು ಚುರುಕು ಆಗುತಿತ್ತು ಎಂದು ಹೇಳಿದರು.
ಮಂಗಗಳು ಸಾಯುತ್ತಿರುವ ಎಲ್ಲ ಭಾಗಗಳಿಗೆ ಭೇಟಿ ನೀಡಲಾಗುತ್ತಿದೆ. ಅಲ್ಲಿನ ಪರಿಸರ, ಸ್ಥಳೀಯರ ಅಭಿಪ್ರಾಯ ಎಲ್ಲವನ್ನೂ ಸಂಗ್ರಹಿಸಿ ಮುಂದೆ ಕಾಯಿಲೆ ಹರಡದಂತೆ ತೆಗೆದುಕೊಳ್ಳಬೇಕಾದ ಅಗತ್ಯ ಕ್ರಮಗಳ ಬಗ್ಗೆ ಮತ್ತು ಶಾಶ್ವತವಾಗಿ ಮಂಗನ ಕಾಯಿಲೆಯನ್ನು ನಿಯಂತ್ರಿಸುವ ಕುರಿತು ಯೋಜನೆಯೊಂದನ್ನು ತಯಾರಿಸಿ ಸರ್ಕಾರಕ್ಕೆ ನೀಡಲಾಗುತ್ತದೆ ಎಂದರು.
ಮಂಗಗಳು ವ್ಯಾಪಕವಾಗಿ ಸಾಯುತ್ತಿವೆ. ಮನುಷ್ಯರಿಗಿಂತ ಮಂಗಗಳು ಜಾಸ್ತಿ ಸಾಯುತ್ತಿರುವುದರಿಂದ ಕಾಯಿಲೆ ಪ್ರಮಾಣ ಜಾಸ್ತಿಯಾಗುತ್ತಿದೆ ಎನ್ನುವುದು ನಮ್ಮ ಕಲ್ಪನೆಯಾಗಿದೆ. ಜನರು ಆತಂಕಗೊಳ್ಳುವ ಅಗತ್ಯವಿಲ್ಲ. ಈಗಾಗಲೇ ಸರ್ಕಾರ ಕಾಯಿಲೆ ನಿಯಂತ್ರಣಕ್ಕೆ ಸಂಬಂಧಪಟ್ಟಂತೆ ಎಲ್ಲ ಹಂತದಲ್ಲೂ ಅಗತ್ಯ ಕ್ರಮ ಕೈಗೊಂಡಿದೆ. ಕಾಯಿಲೆ ನಿಯಂತ್ರಣಕ್ಕೆ ಅಗತ್ಯವಾಗಿರುವ ವ್ಯಾಕ್ಸಿನೇಷನ್ ಹಾಗೂ ಮುಂಜಾಗ್ರತೆಗಾಗಿ ಲೇಪಿಸಿಕೊಳ್ಳುವ ಡಿಎಂಪಿ ಆಯಿಲ್ ಸರಬರಾಜು ಬಗ್ಗೆ ಸಹ ಗಮನ ಹರಿಸಲಾಗುತ್ತದೆ ಎಂದು ಹೇಳಿದರು.
ಸಮಿತಿಯ ಡಾ| ಶಿವಕುಮಾರ್ ವೀರಯ್ಯ, ಜಿಲ್ಲಾ ಆರೋಗ್ಯಾಧಿಕಾರಿ ಡಾ| ರಾಜೇಶ್ ಸುರಗಿಹಳ್ಳಿ, ಸಹಾಯಕ ಆಯುಕ್ತ ದರ್ಶನ್ ಎಚ್.ವಿ., ಸಿವಿಲ್ ಸರ್ಜನ್ ಡಾ| ಪ್ರಕಾಶ್ ಬೋಸ್ಲೆ, ಡಾ| ಕೆ.ಪಿ.ಅಚ್ಚುತ್, ಡಾ| ಮುನಿವೆಂಕಟರಾಜು, ಡಾ| ಸಜ್ಜನ್ ಶೆಟ್ಟಿ, ಡಾ| ಜಗದೀಶ್, ಡಾ| ಕಿರಣ್, ಡಾ| ಕಾವ್ಯ, ಡಾ| ಹರೀಶ್ ಇನ್ನಿತರರು ಇದ್ದರು.