ಬೆಂಗಳೂರು: ಸುಳ್ಳು ಭರವಸೆ ನೀಡಿದ್ದೇ ರಾಜ್ಯ ಸರ್ಕಾರದ ಆರು ತಿಂಗಳ ಸಾಧನೆಯಾಗಿದ್ದು, ಆರು ತಿಂಗಳು ಅಸ್ತಿತ್ವದಲ್ಲಿದ್ದುದೇ ಒಂದು ಸಾಧನೆಯಾಗಿದೆ.
ಮುಖ್ಯಮಂತ್ರಿಗಳೇ ಹೇಳಿದಂತೆ ಅವರ ಸರ್ಕಾರ ಸಾಂದಭಿರ್ಕ ಶಿಶುವಾಗಿದ್ದು, ಆ ಕೂಸಿಗೆ ಯಾವುದೇ ಗೊತ್ತು ಗುರಿ ಇಲ್ಲ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ರಾಜ್ಯ ಮೈತ್ರಿ ಸರ್ಕಾರ ಆರು ತಿಂಗಳು ಪೂರ್ಣಗೊಳಿಸಿರುವ ಬಗ್ಗೆ ಶುಕ್ರವಾರ ನಗರದಲ್ಲಿ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಯಡಿಯೂರಪ್ಪ, ರಾಜ್ಯದಲ್ಲಿ ರೈತರ ಆತ್ಮಹತ್ಯೆ ಸರಣಿ ಮುಂದುವರಿದಿದೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸರ್ಕಾರ ಏನಾದರೂ ಕೊಡುಗೆ ನೀಡಿದ್ದರೆ, ಸಾಧನೆ ಮಾಡಿದ್ದರೆ ರೈತರೇಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರು. ರೈತರ ಆತ್ಮಹತ್ಯೆಗೆ ಮುಖ್ಯಮಂತ್ರಿಗಳೇ ಹೊಣೆ. ಮುಖ್ಯಮಂತ್ರಿಗಳ ಹೆಸರು ಬರೆದು ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಸರ್ಕಾರದ ಮೇಲೆ ಮುಖ್ಯಮಂತ್ರಿಗಳಿಗೆ ಹಿಡಿತವೇ ಇಲ್ಲ. ಈವರೆಗಿನ ತಮ್ಮ ಅಧಿಕಾರಾವಧಿಯನ್ನು ಅರ್ಧ ಭಾಗ ದೇವಸ್ಥಾನ ಸುತ್ತುವುದರಲ್ಲಿ ಕಳೆದರೆ, ಇನ್ನರ್ಧ ಭಾಗ ಐಷಾರಾಮಿ ಹೋಟೆಲ್‌ನಲ್ಲಿ ವಿಶ್ರಾಂತಿಗಾಗಿ ಕಳೆದಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಜನರ ಸಮಸ್ಯೆ ಆಲಿಸುವುದಾದರೂ ಎಲ್ಲಿ. ಮುಖ್ಯಮಂತ್ರಿಗಳು ಜನರಿಗೆ ಅದರಲ್ಲೂ ಮಹಿಳೆಯರು, ರೈತರಿಗೆ ಅವಮಾನ ಮಾಡುವುದು ಹಾಗೂ ದರ್ಪದ ಮಾತುಗಳನ್ನಾಡುವುದೇ ಸರ್ಕಾರದ ಸಾಧನೆಯಾಗಿದೆ. ರಾಜೀನಾಮೆ ಬಿಸಾಡುವುದಾಗಿ ಹೇಳಿ ಜನರಿಗೆ ಅಪಮಾನ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಸರ್ಕಾರಕ್ಕೆ ಸಮಸ್ಯೆ ಬಗೆಹರಿಸುವ ಇಚ್ಛಾಶಕ್ತಿ ಇಲ್ಲ. ಸಮಸ್ಯೆ ಬಗೆಹರಿಸಲಾಗದ ಮುಖ್ಯಮಂತ್ರಿಗಳು, ರೈತರ ಕಬ್ಬಿನ ವಾಹನಗಳನ್ನು ತಡೆದರೆ ಒದ್ದು ಒಳಗೆ ಹಾಕಿ, ಹಿಂಡಲಗಾ ಜೈಲಿಗೆ ದಬ್ಬಿ ಎಂದು ಅಧಿಕಾರಿಗಳಿಗೆ ಸೂಚಿಸಿರುವುದು ದುರಂಹಕಾರದ ಪರಮಾವಧಿ. ಕಳೆದ ವರ್ಷ ಕಬ್ಬಿನ ಬೆಲೆ ಬಾಬ್ತು ಪ್ರತಿ ಕ್ವಿಂಟಾಲ್‌ಗೆ 2,500 ರೂ. ಕೊಡುವ ಬದಲಿಗೆ 2,250 ರೂ. ನೀಡಿ ರೈತರನ್ನು ವಂಚಿಸಿದ್ದಾರೆ. ರೈತರ ಸಾಲ ಮನ್ನಾ ಎಂದು ಘೋಷಿಸಿದ್ದರೂ ಅನುಷ್ಠಾನವಾಗಿಲ್ಲ. ಈ ಯೋಜನೆಯಿಂದ ಎಲ್ಲ ಸಹಕಾರ ಸಂಘಗಳು ರೋಗಗ್ರಸ್ಥವಾಗಿದ್ದು, ಮುಚ್ಚುವ ಸ್ಥಿತಿಗೆ ತಲಪಿವೆ. ಇದು ಸರ್ಕಾರದ ಸಾಧನೆ ಎಂದು ವ್ಯಂಗ್ಯವಾಡಿದ್ದಾರೆ.
ಈ ಸರ್ಕಾರ ಎಷ್ಟು ದಿನ ಇರುತ್ತದೆ, ಹೋಗುತ್ತದೆ ಎಂಬುದು ಭಗವಂತನಿಗೆ ಮತ್ತು ಕಾಂಗ್ರೆಸ್ಸಿನವರಿಗೆ ಗೊತ್ತು. ಕಾಂಗ್ರೆಸ್‌ನವರ ಸಹನೆ ಮೆಚ್ಚುವಂತದ್ದು. ರಾಜ್ಯದ ಜನರಿಗೆ ಆಗುತ್ತಿರುವ ಎಲ್ಲ ಅನ್ಯಾಯ, ಸಮಸ್ಯೆಗಳಿಗೆ ಕಾಂಗ್ರೆಸ್ ನೇರ ಹೊಣೆ ಹೊರಬೇಕು. ಮುಂದೆ ಜನ ಕಾಂಗ್ರೆಸ್ ಹಾಗೂ ಅದರ ಮಿತ್ರ ಪಕ್ಷಕ್ಕೆ ಪಾಠ ಕಲಿಸುವುದು ಖಚಿತ ಎಂದು ಹೇಳಿದ್ದಾರೆ.
ಈ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಆರ್ಥಿಕವಾಗಿ ಹಿಂದುಳಿದ ಪರಿಶಿಷ್ಟ ಜಾತಿ, ಪಂಗಡದವರ ಕಲ್ಯಾಣ ಕಾರ್ಯಕ್ರಮ, ಯೋಜನೆಗಳಿಗೆ ಅನುದಾನ ನೀಡಿಲ್ಲ. ಮುಖ್ಯವಾಗಿ ಭೂಮಿ ಖರೀದಿ, ಗಂಗಾ ಕಲ್ಯಾಣ, ಕೃಷಿ ಸಾಮಗ್ರಿ ಅಡಿ ಯಾವುದೇ ಯೋಜನೆಗಳಿಗೆ ಬಿಡಿಗಾಸು ನೀಡದೆ ವಂಚಿಸಿದೆ ಎಂದು ಕಿಡಿ ಕಾರಿದ್ದಾರೆ.