Advertisement

Puttur: ಮಹಿಳೆಯನ್ನು ಕೂಡಿಹಾಕಿದ್ದ ಪ್ರಕರಣ- ಆರೈಕೆ ಅಸಾಧ್ಯ: ತವರು ಮನೆಯವರ ಹೇಳಿಕೆ

11:54 PM Jan 04, 2024 | Team Udayavani |

ಪುತ್ತೂರು: ಕೆಮ್ಮಿಂಜೆ ಗ್ರಾಮದ ಇಡಬೆಟ್ಟು ಬಳಿಯ ಕರೆಜ್ಜದಲ್ಲಿ ಮೂರು ತಿಂಗಳಿಂದ ವಿವಾಹಿತ ಮಹಿಳೆಯನ್ನು ಕನಿಷ್ಠ ಸೌಲಭ್ಯವೂ ಇಲ್ಲದ ಕೊಠಡಿಯಲ್ಲಿ ಕೂಡಿಟ್ಟ ಪ್ರಕರಣಕ್ಕೆ ಸಂಬಂಧಿಸಿ ಆಕೆಯ ತವರು ಮನೆಯವರು ಗುರುವಾರ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಆದರೆ ಮಹಿಳೆಯನ್ನು ಮನೆಗೆ ಕೊಂಡೊಯ್ಯಲು ತವರು ಮನೆಯವರು ನಿರಾಕರಿಸಿದ್ದಾರೆ.

Advertisement

ಆಶ್ರಮಕ್ಕೆ ಸೇರಿಸಲು ಮನವಿ
ವಿಟ್ಲದವರಾದ‌ ಆಶಾಲತಾ ಅವರ ಮನೆಯವರು ಗುರುವಾರ ಆಸ್ಪತ್ರೆಗೆ ಭೇಟಿ ನೀಡಿ ಬಳಿಕ ಸಿಡಿಪಿಒ ಕಚೇರಿಗೆ ಬಂದಿದ್ದರು. ನಮ್ಮ ಪರಿಸ್ಥಿತಿಯೇ ಸರಿಯಿಲ್ಲ. ಹಾಗಾಗಿ ಆಕೆಯ ಪೋಷಣೆ ನಮ್ಮಿಂದ ಸಾಧ್ಯವಿಲ್ಲ. ಇಲಾಖೆಯೇ ಯಾವುದಾದರೂ ಆಸರೆ ಕೇಂದ್ರಕ್ಕೆ ಸೇರಿಸಬೇಕು ಎಂದು ಮನವಿ ಮಾಡಿದರು. ಈ ಬಗ್ಗೆ ಲಿಖೀತ ಹೇಳಿಕೆ ನೀಡುವುದಾಗಿ ತಿಳಿಸಿದ್ದಾರೆ.

ಹೀಗಾಗಿ ಮಹಿಳೆಯ ಆರೋಗ್ಯ ದಲ್ಲಿ ಚೇತರಿಕೆ ಕಂಡುಬಂದ ಮೇಲೆ ಆಕೆಯನ್ನು ಮಂಗಳೂರಿನ ಸ್ವಾಧಾರ ಕೇಂದ್ರಕ್ಕೆ ಸೇರಿಸಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಚಿಂತನೆ ನಡೆಸಿದೆ. ಇದಕ್ಕೆ ಸಂಬಂಧಿಸಿದ ಪ್ರಕ್ರಿಯೆಗಳ ಬಗ್ಗೆ ಕುಟುಂಬಕ್ಕೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪತಿಯ ವಿಚಾರಣೆ
ಘಟನೆ ನಡೆದು ಎರಡು ದಿನಗಳ ಬಳಿಕ ಪೊಲೀಸರು ಮಹಿಳೆಯ ಪತಿ ಶ್ರೀಪತಿ ಹೆಬ್ಟಾರ್‌ ಅವರನ್ನು ಕರೆಸಿ ವಿಚಾರಣೆ ನಡೆಸಿ ದಿಗ್ಬಂಧನದಲ್ಲಿ ಇರಿಸಲಾದ ಬಗ್ಗೆ ಪೂರ್ಣ ಮಾಹಿತಿ ಪಡೆಯುತ್ತಿದ್ದಾರೆ.

ಪತಿ ಮನೆಯವರ ವಿರುದ್ಧ ದೂರು?
ಪ್ರಕರಣಕ್ಕೆ ಸಂಬಂಧಿಸಿ ಆಶಾಲತಾರ ಪತಿ ಮನೆಯವರ ವಿರುದ್ಧ ತವರು ಮನೆಯವರು ದೂರು ದಾಖಲಿಸಲು ಮುಂದಾಗಿದ್ದಾರೆ. ಈ ಎಲ್ಲ ಪ್ರಕ್ರಿಯೆಗಳ ಬಳಿಕ ವಿಚಾರಣೆ ನಡೆಯಲಿದೆ ಎನ್ನುವ ಮಾಹಿತಿ ಲಭಿಸಿದೆ.

Advertisement

ಒಂಬತ್ತು ವರ್ಷಗಳಿಂದ ಸಂಪರ್ಕ ಇಲ್ಲ!
ಆಶಾಲತಾ ಮತ್ತು ಶ್ರೀಪತಿ ಹೆಬ್ಟಾರ್‌ ದಂಪತಿಗೆ ಏಕೈಕ ಪುತ್ರಿ ಇದ್ದಾಳೆ. ಪುತ್ರಿಯ ಜನನದ ಬಳಿಕ ತವರು ಮನೆ ಹಾಗೂ ಆಶಾಲತಾರ ಪತಿ ಮನೆಯ ಮಧ್ಯೆ ಸಂಪರ್ಕ ಕಡಿದು ಹೋಯಿತು. ಸುಮಾರು ಒಂಬತ್ತು ವರ್ಷಗಳಿಂದ ಆಶಾಲತಾರ ಮನೆಯವರು ಬಂದಿಲ್ಲ. ದೂರವಾ ಣಿಯಲ್ಲೂ ಸಂಪರ್ಕಿಸಿಲ್ಲ. ಆಶಾಲತಾರಿಗೆ ಅನಾರೋಗ್ಯ ಇದ್ದದ್ದೇ ಇದಕ್ಕೆ ಕಾರಣ ಎನ್ನಲಾಗಿದೆ.

ಆಶಾಲತಾ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಶುಕ್ರವಾರ ವೆನ್ಲಾಕ್‌ ಆಸ್ಪತ್ರೆಗೆ ದಾಖಲಿಸುವ ಬಗ್ಗೆ ತಾಲೂಕು ಆಸ್ಪತ್ರೆ ವೈದ್ಯರು ಮಾಹಿತಿ ನೀಡಿದ್ದಾರೆ. ಆಶಾಲತಾರ ತವರು ಮನೆಯವರು ಆಸ್ಪತ್ರೆಗೆ ಭೇಟಿ ನೀಡಿದ್ದು, ಮನೆಗೆ ಕರೆದುಕೊಂಡು ಹೋಗಲು ನಿರಾಕರಿಸಿದ್ದಾರೆ. ಹಾಗಾಗಿ ಆಶ್ರಮಕ್ಕೆ ಸೇರಿಸುವ ಚಿಂತನೆ ನಡೆದಿದೆ. ಆಶಾಲತಾ ಅವರ ಪತಿಯನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.
ಮಂಗಳ ಕಾಳೀ, ಎಸಿಡಿಪಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಪುತ್ತೂರು

Advertisement

Udayavani is now on Telegram. Click here to join our channel and stay updated with the latest news.

Next