ಬೆಂಗಳೂರು: ಅತ್ಯಾಚಾರಕ್ಕೆ ಒಳಾಗದ ಸಂತ್ರಸ್ತೆಯನ್ನೇ ಮದುವೆಯಾಗುವುದಾಗಿ ಆರೋಪಿ ಭರವಸೆ ನೀಡಿದ ಮತ್ತು ಮದುವೆಗೆ ಸಂತ್ರಸ್ತೆ ಒಪ್ಪಿದ ಕಾರಣ ವ್ಯಕ್ತಿಯೋರ್ವನ ವಿರುದ್ಧ ದಾಖಲಾಗಿದ್ದ ಅಪ್ರಾಪ್ತೆ ಮೇಲಿನ ಅತ್ಯಾಚಾರ ಪ್ರಕರಣವನ್ನು ಹೈಕೋರ್ಟ್ ರದ್ದುಪಡಿಸಿದೆ.
ತನ್ನ ವಿರುದ್ಧದ ಅತ್ಯಾಚಾರ ಆರೋಪ ಪ್ರಕರಣ ರದ್ದುಪಡಿಸುವಂತೆ ಕೋರಿ ಚಿಕ್ಕಬಳ್ಳಾಪುರ ಜಿಲ್ಲೆ ನಿವಾಸಿಯಾದ ಆರೋಪಿ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಮೂರ್ತಿ ಹೇಮಂತ್ ಚಂದನ್ ಗೌಡರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ನೀಡಿದೆ.
“ಒಂದು ತಿಂಗಳಲ್ಲಿ ಸಂತ್ರಸ್ತೆಯೊಂದಿಗೆ ಮದುವೆ ಆಗಿ, ಆ ಮದುವೆಯನ್ನು ಸಂಬಂಧಪಟ್ಟ ಪ್ರಾಧಿ ಕಾರ ದಲ್ಲಿ ನೋಂದಣಿ ಮಾಡಿಸಬೇಕು ಎಂದು ಆರೋ ಪಿಗೆ ನಿರ್ದೇಶನ ನೀಡಿರುವ ನ್ಯಾಯಪೀಠ, ಆತನ ವಿರುದ್ದ ಪ್ರಕರಣವನ್ನು ರದ್ದುಪಡಿಸಿ ಆದೇಶಿಸಿದೆ.
ಅತ್ಯಾಚಾರ ಘಟನೆ ನಡೆದಾಗ ಸಂತ್ರಸ್ತೆಯು ಅಪ್ರಾಪೆ¤ಯಾಗಿದ್ದರು. ಸಂತ್ರಸ್ತೆ ಲೈಂಗಿಕ ಸಂಪರ್ಕಕ್ಕೆ ಗುರಿಯಾಗಿದ್ದಾಳೆ ಎಂಬುದಾಗಿ ವೈದ್ಯಕೀಯ ದಾಖಲೆಗಳು ಬಹಿರಂಗಪಡಿಸುತ್ತವೆ. ಇದೀಗ ವಿಚಾರಣೆಗೆ ಹಾಜರಾಗಿರುವ ಸಂತ್ರಸ್ತೆ, ಆರೋಪಿಯನ್ನು ಮದುವೆಯಾಗುವುದಾಗಿ ದೃಢೀಕರಿಸಿ ಪ್ರಮಾಣ ಪತ್ರ ಸಲ್ಲಿಸಿದ್ದಾರೆ. ಮತ್ತೂಂದೆಡೆ ಆರೋಪಿ ಸಹ ಸಂತ್ರಸ್ತೆಯನ್ನು ಮದುವೆಯಾಗುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ನ್ಯಾಯಪೀಠ ಆದೇಶದಲ್ಲಿ ವಿವರಿಸಿದೆ.
ಅಲ್ಲದೆ, ವಿಚಾರಣಾ ನ್ಯಾಯಾಲಯದ ವಿಚಾರಣೆ ವೇಳೆ ಪ್ರಕರಣದ ಸಾಕ್ಷಿಯಾಗಿರುವ ಸಂತ್ರಸ್ತೆ ಪ್ರತಿಕೂಲ ಸಾಕ್ಷ್ಯ ನುಡಿದ್ದಾರೆ. ಪ್ರಾಸಿಕ್ಯೂಷನನ್ನು ಬೆಂಬಲಿಸುವ ಯಾವೊಂದು ಸಾಕ್ಷ್ಯವನ್ನೂ ಪಾಟಿ ಸವಾಲಿನಲ್ಲಿ ಸಂತ್ರಸ್ತೆ ದಾಖಲಿಸಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಆರೋಪಿ ವಿರುದ್ಧದ ಕ್ರಿಮಿನಲ್ ವಿಚಾರಣಾ ಪ್ರಕ್ರಿಯೆ ಮುಂದುವರಿದರೆ, ಆತ ಸೆರೆಮನೆ ವಾಸದಲ್ಲಿ ಮುಂದುವರಿಯಲಿದ್ದು, ಹೆಚ್ಚಿನ ಸಂಕಟ ಅನುಭವಿಸುತ್ತಾನೆ. ಜೊತೆಗೆ, ಸಂತ್ರಸ್ತೆಗೆ ನ್ಯಾಯ ಸಿಗುವುದಕ್ಕಿಂತ ಹೆಚ್ಚಿನ ಸಂಕಷ್ಟ ಎದುರಾಗುತ್ತದೆ ಎಂದು ಅಭಿಪ್ರಾಯಪಟ್ಟಿರುವ ನ್ಯಾಯಾಲಯ ಆರೋಪಿ ಮೇಲಿನ ಅತ್ಯಾಚಾರ ಪ್ರಕರಣ ರದ್ದುಪಡಿಸಿದೆ.
ಪ್ರಕರಣವೇನು?: ಸಂತ್ರಸ್ತೆ ಆರೋಪಿ ವಿರುದ್ಧ ಅತ್ಯಾಚಾರ ಆರೋಪ ಮಾಡಿದ್ದಳು. ಈ ಸಂಬಂಧ 2021ರಲ್ಲಿ ಆತನ ವಿರುದ್ಧ ಚಿಂತಾಮಣಿ ಟೌನ್ ಠಾಣಾ ಪೊಲೀಸರು ದೂರು ದಾಖಲಿಸಿದ್ದರು.