Advertisement

ರಾಜೀ ಸಂಧಾನದಿಂದ ಪ್ರಕರಣ ಇತ್ಯರ್ಥ: ಖಾಸಿಂ ಚೂರಿಖಾನ್‌

05:50 PM Sep 09, 2018 | Team Udayavani |

ಬಳ್ಳಾರಿ: ಪ್ರತಿ ಎರಡು ತಿಂಗಳಿಗೊಮ್ಮೆ ಆಯೋಜಿಸಲಾಗುವ ರಾಷ್ಟ್ರೀಯ ಲೋಕ್‌ ಅದಾಲತ್‌ ಈ ಬಾರಿಯೂ ಆಯೋಜಿಸಿದ್ದು, ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಒಟ್ಟು 1206 ಪ್ರಕರಣಗಳನ್ನು ಅದಾಲತ್‌ನಲ್ಲಿ ಕೈಗೊಂಡಿದ್ದು, ಅದರಲ್ಲಿ ಶೇ.60ರಷ್ಟು ಪ್ರಕರಣಗಳು ಇತ್ಯರ್ಥವಾಗಿವೆ ಎಂದು 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ
ನ್ಯಾಯಾಧೀಶರಾದ ಖಾಸಿಂ ಚೂರಿಖಾನ್‌ ತಿಳಿಸಿದರು.

Advertisement

ನಗರದ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಪರ್ಯಾಯ ವ್ಯಾಜ್ಯಗಳ ಭವನದಲ್ಲಿ ಶನಿವಾರ ನಡೆದ ರಾಷ್ಟ್ರೀಯ
ಲೋಕ ಅದಾಲತ್‌ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಪ್ರೀಂ ಕೋರ್ಟ್‌ ನಿರ್ದೇಶನದ ಮೇರೆಗೆ ಪ್ರತಿ
2 ತಿಂಗಳಿಗೊಮ್ಮೆ ರಾಷ್ಟ್ರೀಯ ಲೋಕ ಅದಾಲತ್‌ ಆಯೋಜಿಸಲಾಗುತ್ತದೆ. ಅದರಂತೆ ಈ ಬಾರಿಯೂ ಹಮ್ಮಿಕೊಳ್ಳಲಾಗಿದೆ. 

ನ್ಯಾಯಾಲಯದಲ್ಲಿ ನೋಂದಣಿಯಾಗಿ ದೀರ್ಘಾವಧಿಯಿಂದ ಇತ್ಯರ್ಥವಾಗದೆ ಉಳಿದ 959 ಪ್ರಕರಣಗಳು ಮತ್ತು ನ್ಯಾಯಾಲಯಕ್ಕೆ ಬಾರದ 247 ಸೇರಿದಂತೆ ಒಟ್ಟು 1206 ಪ್ರಕರಣಗಳನ್ನು ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಕೈಗೆತ್ತಿಕೊಳ್ಳಲಾಗಿತ್ತು. ಇದರಲ್ಲಿ ವಾದಿ, ಪ್ರತಿವಾದಿಗಳೊಂದಿಗೆ ಚರ್ಚಿಸಿ, ಅವರ ಒಪ್ಪಿಗೆಯ ಮೇರೆಗೆ ಸಂಧಾನದ ಮೂಲಕ ರಾಜೀಪಡಿಸಿ, ಪ್ರಕರಣವನ್ನು ಇತ್ಯರ್ಥ ಪಡಿಸಲಾಗಿದೆ ಎಂದು ತಿಳಿಸಿದರು. 

ಚೆಕ್‌ಬೌನ್ಸ್‌ ಪ್ರಕರಣ ಸೇರಿ ಬ್ಯಾಂಕ್‌ಗೆ ಸಂಬಂಧಿಸಿದ 268, ಕ್ರಿಮಿನಲ್‌ ಮೊಕದ್ದಮೆ 145, ವಿದ್ಯುತ್‌ ಕಳವು 100, ಕಾರ್ಮಿಕರಿಗೆ ಸಂಬಂಧಿಸಿದ (ಕೆಎಸ್‌ಆರ್‌ಟಿಸಿ ಇನ್ನಿತರೆ ಸಂಸ್ಥೆಗಳಲ್ಲಿ ಕಾರ್ಮಿಕರಿಗೆ ರಜೆ ಸಮಸ್ಯೆ, ಕಾರ್ಮಿಕರ ವಜಾ ಇತರೆ) ಪ್ರಕರಣಗಳು 1, ರಸ್ತೆ ಅಪಘಾತ 205, ಕೌಟುಂಬಿಕ ವಿವಾದ 11, ಸಿವಿಲ್‌ ಪ್ರಕರಣ 231, ಇತರೆ ಪ್ರಕರಣಗಳು 82 ಸೇರಿ ಒಟ್ಟು 1206 ಪ್ರಕರಣಗಳನ್ನು ಅದಾಲತ್‌ ನಲ್ಲಿ ಇತ್ಯರ್ಥಪಡಿಸಲು ಪ್ರಯತ್ನಿಸಲಾಯಿತು ಎಂದರು.

ಜನತಾ ನ್ಯಾಯಾಲಯವಿದ್ದಂತೆ: ಲೋಕ ಅದಾಲತ್‌ ಎನ್ನುವುದು ಜನತಾ ನ್ಯಾಯಾಲಯವಿದ್ದಂತೆ. ವೈಯಕ್ತಿಕ ಭಿನ್ನಮತ, ದ್ವೇಷ ಸೇರಿ ಇನ್ನಿತರೆ ಸಮಸ್ಯೆಗಳಿಂದ ಒಡೆದು ಹೋಗಿದ್ದ ಮನಸ್ಸುಗಳನ್ನು ಒಗ್ಗೂಡಿಸಿ ರಾಜೀ ಸಂಧಾನದ ಮೂಲಕ ಒಂದುಗೂಡಿಸುವುದೇ ಜನತಾ ನ್ಯಾಯಾಲಯದ ಮುಖ್ಯ ಉದ್ದೇಶವಾಗಿದೆ. ಇದರಲ್ಲಿ ಯಾವುದೇ ಶುಲ್ಕವಿಲ್ಲ.
ಉಚಿತವಾಗಿ ಇತ್ಯರ್ಥ ಪಡಿಸಲಾಗುತ್ತದೆ. 

Advertisement

ನ್ಯಾಯಾಲಯದಲ್ಲಿ ಗೆದ್ದವರು ಸೋತರು, ಸೋತವರು ಸತ್ತರು ಎಂಬ ಮಾತನ್ನು ಜನತಾ ನ್ಯಾಯಾಲಯ ಹುಸಿಗೊಳಿಸುತ್ತದೆ. ಬಡವರು ಸಹ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಲ್ಲಿ ನೋಂದಾಯಿಸಿದರೆ ಉಚಿತವಾಗಿ ಲೋಕ ಅದಾಲತ್‌ನಲ್ಲಿ ಪ್ರಕರಣವನ್ನು ಕೈಗೆತ್ತಿಕೊಂಡು ಇತ್ಯರ್ಥಪಡಿಸಲಾಗುವುದು ಎಂದು ತಿಳಿಸಿದರು. 

ಈ ಸಂದರ್ಭದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಸ್‌.ಬಿ.ಹಂದ್ರಾಳ್‌, ಎರಡೇ ಜಿಲ್ಲಾ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ರಾಜ ಸೋಮಶೇಖರ್‌, ಕುಟುಂಬ ನ್ಯಾಯಾಧೀಶರಾದ ವಿಪುಲಾ ಪೂಜಾರಿ, 1ನೇ ಹೆಚ್ಚುವರಿ ಹಿರಿಯ ಸಿವಿಲ್‌ ನ್ಯಾಯಾಧೀಶರಾದ ವೀಣಾ ನಾಯ್ಕರ್‌, 3ನೇ ಹೆಚ್ಚುವರಿ ಸಿವಿಲ್‌ ನ್ಯಾಯಾಧೀಶರಾದ ಅಶ್ವಿ‌ನಿ ಕೋರೆ, 5ನೇ ಹೆಚ್ಚುವರಿ ಸಿವಿಲ್‌ ನ್ಯಾಯಾಧೀಶರಾದ ಮುರುಗೇಂದ್ರ ತುಬಾಕೆ,
ವಕೀಲರ ಸಂಘದ ಜಿಲ್ಲಾ ಕಾರ್ಯದರ್ಶಿ ಜಿ.ಎಂ. ರವಿರಾಜಶೇಖರರೆಡ್ಡಿ ಇನ್ನಿತರರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next