Advertisement

ರಾಜಶೇಖರಾನಂದ ಸ್ವಾಮೀಜಿ ವಿರುದ್ಧದ ಪ್ರಕರಣ ರದ್ದು

04:36 PM Feb 09, 2019 | |

ಬೆಂಗಳೂರು: ಮಂಗಳೂರು ಗ್ರಾಮಾಂತರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ 2014ರಲ್ಲಿ ನಡೆದ ಕೋಮು ಗಲಭೆ ಪ್ರಕರಣ ಸಂಬಂಧ ಗುರುಪುರದ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ಗುರುವಾರ ಹೈಕೋರ್ಟ್‌ ರದ್ದುಗೊಳಿಸಿದೆ.

Advertisement

ತಮ್ಮ ವಿರುದ್ಧದ ಪ್ರಕರಣದ ರದ್ದುಗೊಳಿಸುವಂತೆ ಕೋರಿ ರಾಜಶೇಖರಾನಂದ ಸ್ವಾಮೀಜಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾ. ಅರವಿಂದ ಕುಮಾರ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಾನ್ಯ ಮಾಡಿ, ಪ್ರಕರಣವನ್ನು ರದ್ದುಗೊಳಿಸಿ ಆದೇಶಿಸಿತು. ಅರ್ಜಿದಾರರ ಪರ ವಕೀಲ ಎಂ. ಅರುಣ್‌ ಶ್ಯಾಮ್‌ ವಾದ ಮಂಡಿಸಿದರು.

ಘಟನೆ ಸಂಬಂಧ ಮಂಗಳೂರು ಗ್ರಾಮಾಂತರ ಠಾಣಾ ಪೊಲೀಸರು 2014ರ ಡಿ.6ರಂದು ರಾಜಶೇಖರಾನಂದ ಸ್ವಾಮೀಜಿ ಹಾಗೂ ಇತರರ ವಿರುದ್ಧ ದೂರು ದಾಖಲಿಸಿಕೊಂಡು ಮಂಗಳೂರು ಜೆಎಂಎಫ್ಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ದೂರನ್ನು ವಿಚಾರಣೆಗೆ ಅಂಗೀಕರಿಸಿದ್ದ ಜೆಎಂಎಫ್ಸಿ ನ್ಯಾಯಾಲಯ ಸ್ವಾಮೀಜಿ ವಿರುದ್ಧ ಸಮನ್ಸ್‌ ಜಾರಿಗೊಳಿಸಿತ್ತು. ಪೊಲೀಸರು ದಾಖಲಿಸಿದ ದೂರು, ಚಾರ್ಜ್‌ಶೀಟ್‌ ಹಾಗೂ ಅಧೀನ ನ್ಯಾಯಾಲಯದ ವಿಚಾರಣೆಯನ್ನು ರದ್ದುಗೊಳಿಸುವಂತೆ ಕೋರಿ ಸ್ವಾಮೀಜಿ ಹೈಕೋರ್ಟ್‌ ಮೆಟ್ಟಿಲೇರಿದ್ದರು. 

ಸ್ವಾಮೀಜಿ ಓರ್ವ ಕಾನೂನು ಪಾಲಕ ಪ್ರಜೆಯಾಗಿದ್ದಾರೆ. ಅವರ ವಿರುದ್ಧದ ದೂರು ಮತ್ತು ವಿಚಾರಣೆ ಅಧಿಕಾರದ ದುರ್ಬಳಕೆಯಾಗಿದೆ. ವಿಚಾರಣೆಗೆ ಅನುಮತಿ ನೀಡಿದ ಹಾಗೂ ಸಮನ್ಸ್‌ ಜಾರಿಗೊಳಿಸಿದ ಮ್ಯಾಜಿಸ್ಟ್ರೇಟ್‌ ಕೋರ್ಟ್‌ನ ಕ್ರಮ ಏಕಪಕ್ಷೀಯ ಮತ್ತು ಕಾನೂನಿಗೆ ವ್ಯತಿರಿಕ್ತವಾಗಿದೆ.

Advertisement

ಚಾರ್ಜ್‌ಶೀಟ್‌ನಲ್ಲಿ ಸ್ವಾಮೀಜಿ ವಿರುದ್ಧದ ಅಪರಾಧ ಸಾಬೀತುಪಡಿಸುವ ಯಾವ ಅಂಶಗಳೂ ಇಲ್ಲ. ಅಲ್ಲದೇ ಸೆಕ್ಷನ್‌ 153 (ಎ)ರಡಿ ದೂರು ದಾಖಲಿಸಬೇಕಾದರೆ ಸಕ್ಷಮ ಪ್ರಾಧಿಕಾರದಿಂದ ಪೂರ್ವಾನುಮತಿ ಪಡೆದುಕೊಂಡಿಲ್ಲ. ಸ್ವಾಮೀಜಿಗೆ ಕಿರುಕುಳ ನೀಡಲು, ಗೌರವಕ್ಕೆ ಧಕ್ಕೆ ತರಲು ಹಾಗೂ ಸಮಾಜದಲ್ಲಿ ಅವರು ಹೊಂದಿರುವ ಘನತೆಗೆ ಕುಂದು ತರಲು ಈ ಸುಳ್ಳು ಪ್ರಕರಣ ದಾಖಲಿಸಲಾಗಿದೆ. ಈ ಕ್ರಮ ಸಂವಿಧಾನದ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಅರ್ಜಿಯಲ್ಲಿ ದೂರಲಾಗಿದೆ.

ಪ್ರಕರಣವೇನು?: ಮಂಗಳೂರು ಗ್ರಾಮಾಂತರ ಠಾಣಾ ವ್ಯಾಪ್ತಿಯ ಉಳಾಯಿಬೆಟ್ಟು ಪ್ರದೇಶದಲ್ಲಿ 2014ರ ಡಿ.5ರಂದು ರಾತ್ರಿ ವೇಳೆ ಮುಸ್ಲಿಂ ಸಮುದಾಯ ಅಪರಿಚಿತ ವ್ಯಕ್ತಿಗಳ ಗುಂಪೊಂದು ಹಿಂದೂಗಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಹತ್ಯೆಗೆ ಪ್ರಯತ್ನಿಸಿತ್ತು.

ಈ ಸಂಬಂಧ ದೂರು ಪ್ರತಿ ದೂರು ದಾಖಲಾಗಿತ್ತು. ಈ ಮಧ್ಯೆ ಡಿ.6ರಂದು ಬೆಳಗ್ಗೆ 11.30ಕ್ಕೆ ವಾಮಂಜೂರು ಜಂಕ್ಷನ್‌ನಲ್ಲಿ ಸ್ವಾಮೀಜಿ ಸೇರಿ ನೂರಕ್ಕೂ ಹೆಚ್ಚು ಹಿಂದೂಗಳು ರಸ್ತೆ ತಡೆದು ಪ್ರತಿಭಟನೆ ನಡೆಸಿ, ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿದ್ದಲ್ಲದೇ ಮುಸ್ಲಿಮರ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದರು.

ಈ ವೇಳೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪ್ರತಿಭಟನೆ ವಾಪಸ್‌ ಪಡೆಯುವಂತೆ ಮನವಿ ಮಾಡಿಕೊಂಡರು. ಕೇಳದಿದ್ದಾಗ ಸ್ವಾಮೀಜಿ ಸೇರಿದಂತೆ ಹಲವರ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಂಡಿದ್ದರು. 2017ರ ಮೇ 3ರಂದು ಜಾರ್ಜ್‌ಶೀಟ್‌ ಸಲ್ಲಿಕೆಯಾಗಿತ್ತು. ಆ. 19ರಂದು ವಿಚಾರಣಾ ನ್ಯಾಯಾಲಯ ಸಮನ್ಸ್‌ ಜಾರಿಗೊಳಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next