Advertisement

CCB: ಇನ್‌ಸ್ಪೆಕ್ಟರ್‌ ಶಂಕರ್‌ ನಾಯಕ್‌ವಿರುದ್ದ ಕೇಸ್‌ ಸಿಸಿಬಿಗೆ ವರ್ಗ 

10:11 AM Nov 26, 2023 | Team Udayavani |

ಬೆಂಗಳೂರು: ಉದ್ಯಮಿಯೊಬ್ಬರ ಬಳಿ ಕಳ್ಳತನ ಮಾಡಿದ್ದ ಆತನ ಕಾರು ಚಾಲಕನ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿಕೊಂಡು 72 ಲಕ್ಷ ರೂ. ವಸೂಲಿ ಮಾಡಿ, ದುರುಪಯೋಗ ಪಡಿಸಿಕೊಂಡಿದ್ದ ಬಿಡದಿ ಠಾಣಾಧಿಕಾರಿ ಜಿ.ಕೆ. ಶಂಕರ್‌ ನಾಯಕ್‌ ವಿರುದ್ಧ ದಾಖಲಾಗಿರುವ ಪ್ರಕರಣವನ್ನು ಸಿಸಿಬಿಗೆ ವರ್ಗಾವಣೆ ಮಾಡಲಾಗಿದೆ.

Advertisement

ಕೆಂಗೇರಿ ಗೇಟ್‌ ಉಪವಿಭಾಗ ಎಸಿಪಿ ಭರತ್‌ ಎಸ್‌. ರೆಡ್ಡಿ ನೀಡಿದ ದೂರಿನ ಮೇರೆಗೆ ಇನ್‌ಸ್ಪೆಕ್ಟರ್‌ ಜಿ.ಕೆ.ಶಂಕರ್‌ ನಾಯಕ್‌, ದಲ್ಲಾಳಿ ಲೋಕನಾಥ್‌ ಸಿಂಗ್‌ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಬ್ಯಾಟರಾಯನಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಶಂಕರ್‌ ನಾಯ್ಕ ಬ್ಯಾಟರಾಯನಪುರ ಠಾಣೆಯಲ್ಲಿ 2022ರಲ್ಲಿ ಇನ್‌ಸ್ಪೆಕ್ಟರ್‌ ಆಗಿದ್ದರು. ಈ ವೇಳೆ ಹರೀಶ್‌ ಎಂಬುವವರ 75 ಲಕ್ಷ ರೂ.ಗಳನ್ನು ಅವರದ್ದೇ ಕಾರು ಚಾಲಕ ಸಂತೋಷ್‌ ಕಳವು ಮಾಡಿದ್ದ. ಈ ವಿಚಾರವಾಗಿ ಹಣವನ್ನು ಪತ್ತೆ ಮಾಡಿಕೊಡುತ್ತೇನೆ ಎಂದು ಮಧ್ಯವರ್ತಿ ಲೋಕನಾಥ್‌ ಎಂಬಾತ ಹರೀಶ್‌ಗೆ ಹಣಕ್ಕೆ ಬೇಡಿಕೆ ಇಟ್ಟಿದ್ದ. ಬಳಿಕ ಲೋಕನಾಥ್‌ ಈ ವಿಷಯವನ್ನು ಶಂಕರ್‌ ನಾಯಕ್‌ಗೆ ತಿಳಿಸಿದ್ದ.

ಹೀಗಾಗಿ ಹಣದ ಆಸೆಗೆ ಬಿದ್ದ ಶಂಕರ್‌ ನಾಯಕ್‌, ತನ್ನ ವ್ಯಾಪ್ತಿಗೆ ಬರದ ಪ್ರಕರಣದಲ್ಲಿ ಪ್ರಕರಣ ದಾಖಲಿಸಿಕೊಂಡು, ಬಳಿಕ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿ 72 ಲಕ್ಷ ರೂ. ರಿಕವರಿ ಮಾಡಿದ್ದರು. ಸುರಕ್ಷತೆ ದೃಷ್ಟಿಯಿಂದ 75 ಲಕ್ಷ ರೂ. ಅನ್ನು ಸರ್ಕಾರಿ ಖಜಾನೆಯಲ್ಲಿ ಇಡಲು ಹಿರಿಯ ಅಧಿಕಾರಿಗಳು ಸೂಚಿಸಿದ್ದರು. ಆದರೆ, ಈ ಹಣವನ್ನು ದುರುಪಯೋಗ ಪಡಿಸಿಕೊಂಡಿದ್ದರು. ಈ ಮಧ್ಯೆ 2023ರ ಜನವರಿ 27ರಂದು ಬ್ಯಾಟರಾಯನಪುರ ಠಾಣೆಯಿಂದ ಬಿಡದಿ ಠಾಣೆಗೆ ಶಂಕರ್‌ ನಾಯಕ್‌ ವರ್ಗಾವಣೆಗೊಂಡಿದ್ದರು.

ಆಗ ಬ್ಯಾಟರಾಯನಪುರ ಠಾಣೆಗೆ ನಿಂಗನಗೌಡ ಪಾಟೀನ್‌ ಇನ್‌ಸ್ಪೆಕ್ಟರ್‌ ಆಗಿ ನೇಮಕಗೊಂಡಿದ್ದರು. ರಿಕವರಿ ಆಗಿದ್ದ 75 ಲಕ್ಷ ರೂ. ನಾಪತ್ತೆಯಾದಾಗ ಶಂಕರ್‌ ನಾಯಕ್‌ಗೆ ನೋಟಿಸ್‌ ಜಾರಿ ಮಾಡಲಾಗಿತ್ತು. ಹೀಗಾಗಿ ಫೆ.26ರಂದು ಶಂಕರ್‌ ನಾಯಕ್‌ ಚೀಲದಲ್ಲಿ ಹಣ ತುಂಬಿಸಿ ಠಾಣೆಯಲ್ಲಿಟ್ಟು ತೆರಳಿದ್ದರು. ಈ ಸಂಬಂಧ ಎಸಿಪಿ ಭರತ್‌ ರೆಡ್ಡಿ, ಶಂಕರ್‌ ನಾಯಕ್‌ ವಿರುದ್ಧ ಪ್ರಕರಣ ದಾಖಲಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next