Advertisement

ಕರ್ಫ್ಯೂ ಮೋಡ ಕವಿದು

06:00 AM Dec 04, 2018 | |

ಮಿಲಿಟರಿಯಿಂದ ಹತನಾದ ಅಣ್ಣನ ನೆನಪಿನಲ್ಲಿಯೇ ಇನ್ನೂ ತೇಲುತ್ತಿರುವ ಫ‌ಲಕ್‌ಳನ್ನು ಹೊರತರಲೆಂದು ಮಾತು ಬದಲಿಸಿದೆ. “ಸರಿ, ಎಂಜಿನಿಯರಿಂಗ್‌ ಆದ ಮೇಲೆ ಮುಂದೆ..?’ ಅಂತ ಕೇಳಿದೆ. ಅರ್ಧ ನಿಮಿಷ ಮೌನಿಯಾಗಿ, “ಪತಾ ನಹೀಂ ದೇಖ್‌ನಾ ಹೋಗಾ..’ ಅಂದಳು…

Advertisement

ಇನ್ನೇನು ಶ್ರೀನಗರದಿಂದ ಬಸ್‌ ಹೊರಡಬೇಕಿತ್ತು. ಮತ್ತೂಮ್ಮೆ ಮೋಡಗಳ ಚಾದರ ಹೊದ್ದ ಬೆಟ್ಟಗಳ, ಬಳುಕುವ ಝೀಲಂ ನದಿಯ ಫೋಟೋಗಳನ್ನು ಸೆರೆಹಿಡಿಯಲು, ಕಿಟಕಿಯ ಪಕ್ಕದ ಸೀಟ್‌ಗಾಗಿ ರಾಜಕೀಯದವರಿಗಿಂತ ಬಲವಾದ ಹೋರಾಟ ನಡೆಸಿದ್ದೆವು. ಸೀಟಿನಲ್ಲಿ ಕುಳಿತು ಯಾಕೋ, ಆಚೆ ತೋರುತ್ತಿದ್ದ ಮಣ್ಣನ್ನು ಆದ್ರತೆಯಿಂದ ನೋಡುತ್ತಿದ್ದೆ. ಅದೆಷ್ಟು ರಕ್ತದ ಕಲೆಗಳನ್ನು ಆ ಮಳೆ ತೊಳೆಯುತ್ತದೋ, ಮತ್ತೂಂದು ರಕ್ತಸಿಂಚನಕ್ಕೆ ಹಸನು ಮಾಡಿಕೊಡುತ್ತದೋ… ಈ ಮಣ್ಣಿಗೆ ಮಳೆಯೊಂದಿಗೆ ರಕ್ತದರ್ಪಣೆಯೂ ರೂಢಿಯಾದ ಪರಿಗೆ ಒಳಗೊಳಗೇ ಬೆಚ್ಚಿ ಬೀಳುತ್ತಿದ್ದೆ. ಇದ್ದ ನಾಲ್ಕಾರು ದಿನಗಳಲ್ಲಿ, ದೂರದಿಂದ ನೋಡಿದ ಮೂರು ಫೈರಿಂಗ್‌ಗಳು ಕಣ್ಣಲ್ಲೇ ಕರ್ಫ್ಯೂ ಜಾರಿಮಾಡಿಬಿಟ್ಟಿದ್ದವು. “ಹಾಲಿನೊಂದಿಗೆ ಮೊಸರು ತರಲು ಮರೆತೆ’ ಎಂದು ಮತ್ತೆ ಅಂಗಡಿಗೆ ಮರಳುವಷ್ಟರಲ್ಲಿ, ಅಲ್ಲೆಲ್ಲೋ ಗಲಾಟೆ ಎಂದು ಅಂಗಡಿಯನ್ನು ಮುಚ್ಚಿದ್ದ ದೃಶ್ಯಗಳು. ಆ ಗಲಾಟೆಗಳೆಲ್ಲ ತಣ್ಣಗಾಗಿ, ಈಗಷ್ಟೇ ಜನಜಂಗುಳಿಯಿಂದ ನಳನಳಿಸುವ ರಸ್ತೆಗಳ ಮೇಲೆ ನಮ್ಮ ಬಸ್ಸು ಹೊರಟಿತ್ತು.

ರಾತ್ರಿಯಿಂದ ಯಾರಿಗೂ ನಿದ್ದೆಯಿರದ ಕಾರಣ, ನಮ್ಮ ತಂಡದಲ್ಲಿದ್ದ ಎಲ್ಲರೂ ಒಂದು ಸುತ್ತು ನಿದ್ರೆಗೆ ಬಿದ್ದೆವು. ಯಾರ ಪಕ್ಕ ಕೂತಿದ್ದೇನೆ ಎಂಬುದರ ಅರಿವೂ ಇರಲಿಲ್ಲ. ಎಚ್ಚರಾದಾಗ ಅದೇ ಮೋಡಗಳ ಮಧ್ಯೆ ತೇಲುವಂತೆ ಬಸ್ಸು ಸಾಗುತ್ತಿತ್ತು. ಪಕ್ಕದಲ್ಲಿ ಬುರ್ಕಾಧಾರಿಯಾಗಿದ್ದ ಹುಡುಗಿ, ಮುಗುಳ್ನಗುತ್ತಾ ಕೇಳಿದಳು: “ಆಪ್‌ ಕಹಾಂಸೇ ಹೋ..?’.ಇಲ್ಲಿನ ಎಲ್ಲಾ ಮನುಷ್ಯರ ಬಣ್ಣ ನಿಷ್ಪಕ್ಷಪಾತವೇ, ಆ್ಯಪಲ್‌ನಂತೆಯೇ… ಆಕೆಯ ಪ್ರಶ್ನೆಗೆ ಉತ್ತರಿಸದೇ, “ಆಪ್‌ ಕಾ ನೂರ್‌ ತೋಡಾ ಬೇಂಟ್‌ ದೀಜಿಯೇ… (ನಿಮ್ಮ ಹೊಳಪನ್ನಷ್ಟೂ ನನಗೆ ಕೊಡುಗೆ ನೀಡಿ)’ ಎಂದೆ. ಹುಣ್ಣಿಮೆಯಂತೆ ನಕ್ಕಳು.

ಅಲ್ಲಿಂದ ಜಮ್ಮುವಿನ ತನಕ ಆಕೆಯ ಸ್ಟಾಪ್‌ ಬರುವ ವರೆಗೂ ಮಾತು ನಿಲ್ಲಲಿಲ್ಲ. ಅವಳ ಹೆಸರು “ಫ‌ಲಕ್‌’. ಅದರರ್ಥ, “ಉನ್ನತವಾದ’, “ಎತ್ತರಕ್ಕೆ ಬೆಳೆದ’ ಅಂತ. ಉರ್ದು ಹೆಸರುಗಳ ಆಕರ್ಷಣೆಯೇ ಅಂಥದ್ದು. ಗಾಢಾರ್ಥ, ವಿಶಿಷ್ಟಾರ್ಥ. ಆಕೆಯಾದರೂ ಈ ಗೋಜಲುಗಳ ಮಧ್ಯೆ ಎತ್ತರಕ್ಕೆ ಬೆಳೆಯಲಿ ಎಂಬುದು ಅವಳ ಅಜ್ಜಿಯ ಕನಸು. 10 ಜನರಿದ್ದ ಕೂಡು ಕುಟುಂಬದ ಮಗಳು. ಜಮ್ಮುವಿನಲ್ಲಿ ಎಂಜಿನಿಯರಿಂಗ್‌ ಎರಡನೇ ವರ್ಷ ಕಲಿಯುತ್ತಿದ್ದಾಳೆ. ಯಥಾ ಪ್ರಕಾರ ಶ್ರೀನಗರದ ವಾತಾವರಣದ ಬಗ್ಗೆ ಪರಿ ಪರಿಯಾಗಿ ಪ್ರಶ್ನಿಸುತ್ತಲೇ ಹೋದೆ. ಇವರ ಬಳಿ ಆ ಸೂಕ್ಷ್ಮ ವಿಚಾರವನ್ನು ಮಾತಿಗೆಳೆಯುವುದೇ ಕಷ್ಟ. ಆದರೂ, ಈಕೆ ಬಾಯಿಬಿಟ್ಟಳು. “ಇಲ್ಲಿ ಮಿಲಿಟರಿಯವರೇ ಭಯೋತ್ಪಾದಕರಿಗೆ ಸಹಕರಿಸುತ್ತಿದ್ದಾರೆ. ಅಮಾಯಕ ಸಾರ್ವಜನಿಕರನ್ನು ಕೊಲ್ಲುತ್ತಿದ್ದಾರೆ. ಇದೇ ಹೋರಾಟಕ್ಕೆ ಮೂಲಕ ಕಾರಣ’ ಎಂದಳು. ಅವಳ ಉತ್ತರ, ನಾನು ಇದುವರೆಗೆ ಸಂದರ್ಶಿಸಿದ ಎಲ್ಲ ಕಾಶ್ಮೀರಿ ಹುಡುಗರ ದನಿಯಂತೆಯೇ ಇತ್ತು. 

“ಮಿಲಿಟರಿಯವರು ಸಾರ್ವಜನಿಕರನ್ನು ಯಾಕೆ ಕೊಲ್ಲುತ್ತಾರೆ..?’, ನಾನು ಕೇಳಿದೆ. “ಬುರ್ಹಾನ್‌ವಾನಿಯನ್ನು ಮಿಲಿಟರಿಯವರು ಹೊಡೆದು ಉರುಳಿಸಿದಾಗ, ಕಾಶ್ಮೀರದಲ್ಲಿ ಆಜಾದಿ ಕೂಗು ಮುಗಿಲು ಮುಟ್ಟಿತ್ತು. 1800 ಜನ ಗಾಯಗೊಂಡು, 40ಕ್ಕೂ ಹೆಚ್ಚು ಸಾರ್ವಜನಿಕರು ಬಲಿಯಾದರು. ಅದು ಕಾಶ್ಮೀರ ಕಂಡ ಸುದೀರ್ಘ‌ ಕರ್ಫ್ಯೂಗಳಲ್ಲಿ ಒಂದು. ಯಾವುದೇ ಮೊಬೈಲ್‌ ನೆಟ್‌ವರ್ಕ್‌ ಕೂಡ 30 ದಿನಗಳವರೆಗೆ ಚಾಲ್ತಿ ಇರುತ್ತಿರಲಿಲ್ಲ. ಜನ ಮನೆಯಿಂದ ಹೊರಗೇ ಬರುತ್ತಿರಲಿಲ್ಲ. ಶಾಲಾ- ಕಾಲೇಜುಗಳು ಬಾಗಿಲನ್ನೇ ತೆರೆಯುತ್ತಿರಲಿಲ್ಲ. ಆ ವೇಳೆ ನನ್ನ ಅಣ್ಣ ಫ‌ರೀದ್‌, ಒಂದು ಬೆಳಗ್ಗೆ ಹಾಲು ತರಲು ಹೋದವನು ಮಿಲಿಟರಿಯವರ ಗುಂಡಿಗೆ ಬಲಿಯಾಗಿ, ಹೆಣವಾಗಿ ಮನೆಗೆ ಬಂದ’ ಎನ್ನುವಾಗ, ಅವಳ ಕಂಗಳಲ್ಲಿ ನೀರಾಡಿತು.

Advertisement

ಆಗ ನನಗೆ, ಬಶರತ್‌ ಪೀರ್‌ ಅವರ “ಕರ್ಫ್ಯೂಡ್‌ ನೈಟ್‌’ ಪುಸ್ತಕ ಸಾಲುಗಳೇ ದೃಶ್ಯವಾದಂತೆ ಅನ್ನಿಸಿತು. ಇಷ್ಟೇ ಅಲ್ಲ, 2010ರಲ್ಲಿ ತಫೇಲ್‌ ಅಹಮದ್‌ ಮಟ್ಟೂ, 1993ರಲ್ಲಿ ಯಾಕೂಬ್‌ ಮೆನನ್‌, 2013ರಲ್ಲಿ ಅಫ‌jಲ್‌ ಫ‌ಜಲ…, ಹತ್ಯೆಯಾದಾಗಲೂ ಇಷ್ಟೇ ದೊಡ್ಡ ಮಟ್ಟದ ದಂಗೆ ಆಗಿದ್ದನ್ನು ಕೇಳಿದ್ದೆ.

ಇಲ್ಲಿ ಯಾರು ಸಾರ್ವಜನಿಕರು? ಯಾರು ಉಗ್ರರು? ಗುರುತಿಸುವುದೇ ಕಷ್ಟ. ಮಾಲ್‌ ಮಾಲೀಕನಿಂದ ಹಿಡಿದು ಹೋಟೆಲ್‌ ಕ್ಲೀನರ್‌ವರೆಗೂ, ಗೇಟ್‌ ಕೀಪರ್‌, ಕೌÒರಿಕ… ಹೀಗೆ ಯಾರು ಬೇಕಾದರೂ ಇನ್‌ಫಾರ್ಮರ್‌ಗಳು ಇದ್ದಿರಬಹುದು. ಇಂಥವರನ್ನು ಸೈನಿಕರು ಹೊಡೆದುರುಳಿಸಿದರೆ, “ಸಾರ್ವಜನಿಕರ ಹತ್ಯೆ’ ಎಂದು ಬಿಂಬಿಸಲಾಗುತ್ತದೆ ಎನ್ನುತ್ತದೆ ಮಿಲಿಟರಿ.

ಅಣ್ಣನ ನೆನಪಿನಲ್ಲಿ ಕಳೆದುಹೋದ ಫ‌ಲಕ್‌ಳನ್ನು ಹೊರತರಲೆಂದು ಮಾತು ಬದಲಿಸಿದೆ. “ಸರಿ, ಎಂಜಿನಿಯರಿಂಗ್‌ ಆದ ಮೇಲೆ ಮುಂದೆ..?’ ಅಂತ ಕೇಳಿದೆ. ಈ ಪ್ರಶ್ನೆಗೆ ಅಲ್ಲಿನ ಸಾಕಷ್ಟು ವಿದ್ಯಾರ್ಥಿಗಳ ಬಳಿ ಉತ್ತರವೇ ಇರಲಿಲ್ಲ. ಅರ್ಧ ನಿಮಿಷ ಮೌನಿಯಾಗಿ, “ಪತಾ ನಹೀಂ ದೇಖನಾ ಹೋಗಾ..’ ಅಂದಳು. ಆ ಧ್ವನಿಯಲ್ಲಿ ದುಃಖದ ತೇವವಿತ್ತು.

ಅಲ್ಲಿ ಯಾವುದೇ ಫ್ಯಾಕ್ಟರಿ, ಸಾಫ್ಟ್ವೇರ್‌, ಇತ್ಯಾದಿ ಉದ್ಯಮಗಳಿಲ್ಲ. ಹೆಚ್ಚಿನವರು ಕೃಷಿ, ಡ್ರೈಫ‌ೂಟ್ಸ್‌ ವ್ಯಾಪಾರ, ಪ್ರವಾಸೋದ್ಯಮಗಳನ್ನೇ ನೆಚ್ಚಿಕೊಂಡಿದ್ದಾರೆ. ಇವೆಲ್ಲವೂ ಕುಲ ಕಸುಬಿನಂತೆಯೇ ನಡೆಯುತ್ತದೆಯೇ ಹೊರತು, ಪದವಿ ಓದಿದ ವಿದ್ಯಾರ್ಥಿಗಳಿಗೆ ಅಲ್ಲಿ ಕೆಲಸವೇ ಹುಟ್ಟುವುದಿಲ್ಲ. ಇನ್ನು ಹೆಣ್ಣು ಮಕ್ಕಳಿಗೆ?

ಅಲ್ಲೊಂದು ಕ್ರೀಡಾಕೂಟ ನಡೆದರೂ, ಹೆಣ್ಣುಮಕ್ಕಳು ನ್ಪೋರ್ಟ್ಸ್ ಶಾರ್ಟ್ಸ್ ಧರಿಸುವಂತಿಲ್ಲ. ಉದ್ದ ಪ್ಯಾಂಟ್‌, ಸ್ಕಾಫ್ì ಧರಿಸಿಯೇ, ಅಲ್ಲಿ ಟ್ಯಾಲೆಂಟ್‌ ಪ್ರದರ್ಶಿಸಬೇಕು. ಇನ್ನು ಹೊರರಾಜ್ಯಗಳಿಗೆ ಕೆಲಸಕ್ಕೆ ಕಳುಹಿಸುವ ಮಾತೆಲ್ಲಿ? ಹಾಗಾದರೆ, ಇವಳು ಕಲಿಯುತ್ತಿರುವ ಉದ್ದೇಶ? ಅವಳೇಕೋ ಮತ್ತೆ ಮೂಕಳಾದಳು. ಉದ್ದೇಶವೇ ಇರದ ಓದು… ಇದು ಅಲ್ಲಿನ ಎಲ್ಲಾ ಯುವಜನತೆಯ ಪರಿಸ್ಥಿತಿ. ಆದರೂ, ಮುಂದಿನ ಐದು ವರ್ಷದಲ್ಲಿ ತಾನೇನಾಗಬೇಕು ಎಂಬುದರ ಗುರಿ, ಕನಸುಗಳನ್ನು ಬೆನ್ನಿಗೆ ಕಟ್ಟಿಕೊಳ್ಳದ ಫ‌ಲಕ್‌, ತರಗತಿಗೇ ಮೊದಲಿಗಳಾಗಿ ಓದುತ್ತಿದ್ದಾಳೆ.  ಅವಳ ಈ ಓಟದ ಅರ್ಥವೇನು? ಅವಳ ಪಯಣ ಎಲ್ಲಿಗೆ? ಇವರ ಎದೆಯಲ್ಲಿ ದೇಶಪ್ರೇಮ ಚಿಗುರುವುದು ಯಾವಾಗ? ಎಂದುಕೊಳ್ಳುವಾಗಲೇ, ಬಸ್ಸಿನಲ್ಲಿ ಅವಳ ಸ್ಟಾಪ್‌ ಬಂದಾಗಿತ್ತು!

Advertisement

Udayavani is now on Telegram. Click here to join our channel and stay updated with the latest news.

Next