Advertisement

ಉಸ್ತುವಾರಿ ಸಚಿವ ಜಿಟಿಡಿಗೆ ಸಮಸ್ಯೆಗಳ ದರ್ಶನ

11:49 AM Dec 09, 2018 | Team Udayavani |

ಮೈಸೂರು: ಕುಡಿಯುವ ನೀರು ಸಮರ್ಪಕವಾಗಿ ಬರುತ್ತಿಲ್ಲ, ಜಮೀನಿನ ದುರಸ್ತು ಮಾಡಿಕೊಡುತ್ತಿಲ್ಲ, ಪಿಂಚಣಿ ಬರುತ್ತಿಲ್ಲ, ಎನ್‌ಒಸಿ ಕೊಡಲು ಅಲೆದಾಡಿಸುತ್ತಿದ್ದಾರೆ… ಇವು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಅವರು ಸ್ವಕ್ಷೇತ್ರ ಚಾಮುಂಡೇಶ್ವರಿ ಕ್ಷೇತ್ರ ವ್ಯಾಪ್ತಿಯ ಇಲವಾಲದಲ್ಲಿ ಶನಿವಾರ ನಡೆಸಿದ ಕಂದಾಯ ಮತ್ತು ಪಿಂಚಣಿ ಅದಾಲತ್‌ನಲ್ಲಿ ಕೇಳಿಬಂದ ದೂರುಗಳು.

Advertisement

ಇಲವಾಲ ಗ್ರಾಮದ ತಾಯಮ್ಮ ಎಂಬಾಕೆ ಗ್ರಾಮದಲ್ಲಿ ವಾರಕ್ಕೆ ಒಮ್ಮೆ ನೀರು ಬಿಡಲಾಗುತ್ತಿದೆ. ತಿಂಗಳಿಗೊಮ್ಮೆ ಚರಂಡಿ ಸ್ವತ್ಛಗೊಳಿಸಲಾಗುತ್ತಿದ್ದು, ಯಾವೊಬ್ಬ ಜನಪ್ರತಿನಿಧಿಯೂ ನಮ್ಮ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ದೂರಿದರು. 

ಭೈರೆಗೌಡ, ಅಂಚೆ ಕಚೇರಿ ರಸ್ತೆ ಕಿರಿದಾಗಿದ್ದು ಜನ ಸಂಚಾರಕ್ಕೆ ಅಡಚಣೆಯಾಗಿ ಆಗಾಗ್ಗೆ ಸಣ್ಣಪುಟ್ಟ ಅಪಘಾತಗಳು ಸಂಭವಿಸುತ್ತಿವೆ. ಈ ಬಗ್ಗೆ ಗಮನಹರಿಸದ ಪಂಚಾಯ್ತಿಯವರು ಖಾತೆ ತಿದ್ದುಪಡಿ, ಪಿಂಚಣಿ ಸೇರಿದಂತೆ ಯಾವುದೇ ಕೆಲಸಕ್ಕೂ ಲಂಚ ಕೇಳುತ್ತಿದ್ದಾರೆ. ಇಲ್ಲವೆಂದರೆ ಸಬೂಬು ಹೇಳಿ ಅಲೆದಾಡಿಸುತ್ತಾರೆ ಎಂದು ಅವಲತ್ತುಕೊಂಡರು.

ಚಿಕ್ಕೇಗೌಡನಕೊಪ್ಪಲಿನ ನಿವಾಸಿಯೊಬ್ಬರು ಮನೆಗೆ ವಿದ್ಯುತ್‌ ಸಂಪರ್ಕ ಪಡೆಯಲು ಒಂದು ವರ್ಷದಿಂದ ಕಚೇರಿಗೆ ಅಲೆದಾಡುತ್ತಿದ್ದೇನೆ. ಮನೆಯ ನಕ್ಷೆ ಕೊಡದೆ ಮೀಟರ್‌ ಕೊಡಲು ಬರುವುದಿಲ್ಲ ಎಂದು ಚೆಸ್ಕಾಂನವರು ಹೇಳುತ್ತಿದ್ದಾರೆ. ಪಿಡಿಒ ನಕ್ಷೆ ಕೊಡಲು ಬರುವುದಿಲ್ಲ ಎನ್ನುತ್ತಿದ್ದಾರೆ ಎಂದು ಅಳಲು ತೋಡಿಕೊಂಡರು.

ಶೀಘ್ರ ಮನೆಯ ನಕ್ಷೆ ನೀಡಲು ಕ್ರಮ ಕೈಗೊಳ್ಳುವಂತೆ ಪಿಡಿಒಗೆ ಸಚಿವರು ಸೂಚಿಸಿದರು. ಇಲವಾಲ ಗ್ರಾಮದ ಕಾಳಯ್ಯ, ವೆಲ್ಡಿಂಗ್‌ ಶಾಪ್‌ ಇಟ್ಟಿಕೊಂಡಿದ್ದೇನೆ. ವಿದ್ಯುತ್‌ ಮೀಟರ್‌ ಹಾಕಿಕೊಳ್ಳಲು ಬೇಕಿರುವ ಎನ್‌ಒಸಿ ಪಡೆಯಲು ಪಿಡಿಒ ಅನುಮತಿ ಕೊಡುತ್ತಿಲ್ಲ ಎಂದು ದೂರಿದರು.

Advertisement

ಅದೇ ಗ್ರಾಮದ ಈರಗಪ್ಪ ಎಂಬುವವರ ಕಾಲಿಗೆ ಅಪಘಾತದಲ್ಲಿ ಪೆಟ್ಟಾಗಿದ್ದು, ವಾಹನ ಕೊಡಿಸುವಂತೆ ಸಚಿವರಿಗೆ ಮನವಿ ಮಾಡಿದರು. ಜನರ ಸಮಸ್ಯೆ ಆಲಿಸಿದ ಸಚಿವ ಜಿ.ಟಿ.ದೇವೇಗೌಡ, ಕ್ಷೇತ್ರದ ಸಾಕಷ್ಟು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಹೊಂಗಳ್ಳಿಯಿಂದ 10 ಎಂಎಲ್‌ಡಿ, ಮೇಗಳಾಪುರದಿಂದ 30 ಎಂಎಲ್‌ಡಿ ನೀರು ತರಬೇಕಿದೆ.

ಉಂಡವಾಡಿ ಯೋಜನೆ ಪೂರ್ಣಗೊಳ್ಳಲು ಇನ್ನೂ 3 ವರ್ಷ ಬೇಕಿದ್ದು,  ಆನಂತರ 40 ರಿಂದ 50 ವರ್ಷ ನೀರಿನ ಸಮಸ್ಯೆ ಇರುವುದಿಲ್ಲ ಎಂದರು. ಗ್ರಾಮೀಣ ಜನರ ಕೆಲಸ ಮಾಡದ ಅಧಿಕಾರಿಗಳನ್ನು ಅಮಾನತು ಮಾಡಲಾಗುವುದು. ಸಾಗುವಳಿ ಚೀಟಿ ಹಾಗೂ ಆಶ್ರಯ ಮನೆ ಹಣ ಹಂಚಿಕೆ ಮಾಡಲು ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಅದಾಲತ್‌ನಲ್ಲಿ ಇಲವಾಲ, ಯಡಹಳ್ಳಿ, ಹೊಸಕೋಟೆ, ದಡದಕಲ್ಲಹಳ್ಳಿ, ಯಾಚೇಗೌಡನಹಳ್ಳಿಯ ಒಟ್ಟು 226, 94 ಸಿ ಅರ್ಜಿಗಳಿಗೆ ಹಕ್ಕುಪತ್ರಗಳನ್ನು  ನೀಡಲಾಯಿತು. ಸಂಧ್ಯಾ ಸುರಕ್ಷ ಯೋಜನೆ, ನಿರ್ಗತಿಕ, ಇಂದಿರಾಗಾಂಧಿ ರಾಷ್ಟ್ರೀಯ ವೃದ್ಯಾಪ್ಯ ವೇತನ, ವಿಶೇಷಚೇತನ, ಮನಸ್ವಿನಿ ಯೋಜನೆಗಳ ಅರ್ಜಿಗಳನ್ನು ವಿತರಿಸಲಾಯಿತು. 

ಜಿಲ್ಲಾಧಿಕಾರಿ ಅಭಿರಾಮ್‌ ಜಿ.ಶಂಕರ್‌, ಹೆಚ್ಚುವರಿ ಜಿಲ್ಲಾಧಿಕಾರಿ ಟಿ.ಯೋಗೇಶ, ಜಿಪಂ ಸಿಇಒ ಕೆ.ಜ್ಯೋತಿ, ಜಿಪಂ ಸದಸ್ಯರಾದ ಬೀರಿಹುಂಡಿ ಬಸವಣ್ಣ, ಮಾದೇಗೌಡ, ಇಲವಾಲ ಗ್ರಾಪಂ ಉಪಾಧ್ಯಕ್ಷ ಗಂಗಾಧರಗೌಡ ಇತರರಿದ್ದರು.

ಕೆಲಸ ಮಾಡದಿದ್ದರೆ ಮನೆಗೆ ಕಳುಹಿಸುವೆ: ಪಾಲಿಕೆ ಚುನಾವಣೆ, ದಸರಾ ಹಾಗೂ ಉಪ ಚುನಾವಣೆ ಹಿನ್ನೆಲೆಯಲ್ಲಿ ಕಳೆದ 5 ತಿಂಗಳಿಂದ ಕ್ಷೇತ್ರಕ್ಕೆ ಬರಲು ಸಾಧ್ಯವಾಗಿರಲಿಲ್ಲ. ಬೆಳಗಾವಿ ಅಧಿವೇಶನ ಮುಗಿಸಿ ಬರುವಷ್ಟರಲ್ಲಿ ಅಧಿಕಾರಿಗಳು ಪ್ರತಿ ಹಳ್ಳಿಗೆ ಹೋಗಿ ಜನರ ಸಮಸ್ಯೆ ಆಲಿಸಬೇಕು. ನಿತ್ಯ ನನ್ನ ಮನೆಗೆ ಸಾವಿರಾರು ಮಂದಿ ಸಮಸ್ಯೆ ಹೇಳಿಕೊಂಡು ಬರುತ್ತಿದ್ದಾರೆ.

ಅಧಿಕಾರಿಗಳು ಸರಿಯಾಗಿ ಕೆಲಸ ಮಾಡಿದ್ದರೆ ಅವರೆಲ್ಲಾ ಯಾಕೆ ನಮ್ಮ ಮನೆಗೆ ಅಲೆಯಬೇಕು? ಅಧಿಕಾರಿಗಳು ಕಚೇರಿಯಲ್ಲಿ ಕೂರುವ ಬದಲು ಕ್ಷೇತ್ರ ದರ್ಶನ ಮಾಡಬೇಕು. ಸಮಸ್ಯೆ ಕಂಡು ಬಂದರೆ ಸ್ಥಳದಲ್ಲೇ ಅದನ್ನು ಪರಿಹರಿಸಬೇಕು. ಇಲ್ಲದಿದ್ದರೆ ನಿರ್ದಾಕ್ಷಿಣ್ಯವಾಗಿ ಮನೆಗೆ ಕಳುಹಿಸಲಾಗುವುದು ಎಂದು ಸಚಿವ ಜಿ.ಟಿ.ದೇವೇಗೌಡ ಎಚ್ಚರಿಕೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next