ಬೆಂಗಳೂರು: ಅಕ್ರಮ ವಾಸ ಆರೋಪದ ಮೇಲೆ ಬಂಧನಕ್ಕೆ ಒಳಗಾದ ವಿದೇಶಿ ಪ್ರಜೆಗಳ ಮಕ್ಕಳಿಗೆ ಸೂಕ್ತ ಆಶ್ರಯ ಕಲ್ಪಿಸುವುದಕ್ಕಾಗಿ ನಿಯಮಗಳ ಕುರಿತು ಮಾಹಿತಿ ನೀಡುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಬುಧವಾರ ನಿರ್ದೇಶನ ನೀಡಿದೆ.
ರಾಜ್ಯದಲ್ಲಿ ಅಕ್ರಮ ವಾಸ ಆರೋಪದ ಮೇಲೆ ಬಂಧನಕ್ಕೆ ಒಳಾಗಿರುವ ಬಾಂಗ್ಲಾ ದೇಶದ ನಿವಾಸಿಗಳು ಎನ್ನಲಾದ ಬಾಬುಲ್ ಖಾನ್ ಹಾಗೂ ಮಹಮ್ಮದ್ ಆರೀಫ್ ಸೇರಿ ಮತ್ತಿತರರು ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾ. ಕೆ.ಎನ್. ಫಣೀಂದ್ರ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ನಿರ್ದೇಶನ ನೀಡಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ವಾದಿಸಿ, ತಮ್ಮ ಕಕ್ಷಿದಾರರನಿಗೆ ಮೂವರು ಮಕ್ಕಳು ಇದ್ದಾರೆ. ನಾಲ್ಕು ವರ್ಷದ ಮಗು ತಾಯಿಯೊಂದಿಗೆ ಕಾರಾಗೃಹದಲ್ಲಿ ವಾಸವಾಗಿದೆ. ಇನ್ನಿಬ್ಬರು ಮಕ್ಕಳನ್ನು ನಗರದ ನಿಮ್ಹಾನ್ಸ್ ಆಸ್ಪತ್ರೆ ಬಳಿಯ ಮಕ್ಕಳ ರಕ್ಷಣಾ ಕೇಂದ್ರದಲ್ಲಿ ಇರಿಸಲಾಗಿದೆ. ಹೀಗಾಗಿ, ವಿದೇಶಿಯರ ಬಂಧನದ ಬಳಿಕ ಅವರ ಮಕ್ಕಳಿಗೆ ಸೂಕ್ತ ಆಶ್ರಯ ಕಲ್ಪಿಸಬೇಕಿದೆ ಎಂದು ನ್ಯಾಯಪೀಠದ ಗಮನ ಸೆಳೆದರು.
ಆಗ, ವಿದೇಶಿ ದಂಪತಿ ಬಂಧನಕ್ಕೆ ಒಳಗಾದಾಗ ಅವರ ಮಕ್ಕಳು ಸಣ್ಣವರಾಗಿದ್ದರೆ ಸೂಕ್ತ ಆಶ್ರಯ ಕಲ್ಪಿಸಬೇಕಾಗುತ್ತದೆ. ವಿದೇಶಿಯರ ಮಕ್ಕಳಾದರೂ, ಅವರ ಯೋಗಕ್ಷೇಮ ಬಹುಮುಖ್ಯ. ಯುನೆಸ್ಕೋ ಒಪ್ಪಂದಂತೆ ಕೇಂದ್ರ ಸರ್ಕಾರವು ಬಾಲ ನ್ಯಾಯ ಕಾಯ್ದೆ ಜಾರಿ ಮಾಡಿದೆ. ಅದರಲ್ಲಿ ವಿದೇಶಿ ಪ್ರಜೆಗಳ ಮಕ್ಕಳ ಆಶ್ರಯ ಕುರಿತು ನಿರ್ದಿಷ್ಟ ನಿಯಮ ಅಥವಾ ಮಾರ್ಗಸೂಚಿ ಇರಬೇಕಾಗುತ್ತದೆ. ಆ ಅಂಶದ ಮೇಲೆ ಬೆಳಕು ಚೆಲ್ಲಬೇಕಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು.
ಅಲ್ಲದೆ, ಅರ್ಜಿಯ ಮುಂದಿನ ವಿಚಾರಣೆ ವೇಳೆ ಕೇಂದ್ರ, ರಾಜ್ಯ ಸರ್ಕಾರ ಮತ್ತು ಅರ್ಜಿದಾರರ ಪರ ವಕೀಲರು, ವಿದೇಶಿ ದಂಪತಿ ಬಂಧನಕ್ಕೆ ಒಳಗಾದಾಗ ಅವರ ಮಕ್ಕಳಿಗೆ ಸೂಕ್ತ ಆರೈಕೆ ಹಾಗೂ ಆಶ್ರಯ ಕಲ್ಪಿಸಲು ಅನುಕೂಲವಾಗುವಂತೆ ದೇಶದಲ್ಲಿರುವ ಕಾನೂನು ಹಾಗೂ ಅವಕಾಶಗಳ ಬಗ್ಗೆ ಮಾಹಿತಿ ನೀಡಬೇಕು ಎಂದು ನಿದೇಶಿಸಿದ ನ್ಯಾಯಪೀಠ, ಡಿ.11ಕ್ಕೆ ಮುಂದೂಡಿತು.