Advertisement
ಇಸ್ಪೀಟ್ ಕ್ಲಬ್ ತೆರವಿಗೆ ಆಗ್ರಹ ಪ.ಪಂ. ವ್ಯಾಪ್ತಿಯಲ್ಲಿ ಇಸ್ಪೀಟ್ ಕ್ಲಬ್ ಕಾರ್ಯನಿರ್ವಹಿಸುತ್ತಿದ್ದು ಇದು ನಮ್ಮೂರಿಗೆ ಕಪ್ಪುಚುಕ್ಕೆಯಾಗಿದೆ. ಇದರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಸದಸ್ಯ ಶ್ರೀನಿವಾಸ್ ಅಮೀನ್ ಪ್ರಸ್ತಾವಿಸಿದರು. ಇಸ್ಪೀಟ್ ಕ್ಲಬ್‌ಗ ಪ.ಪಂ. ಯಾವುದೇ ಅನುಮತಿ ನೀಡಿಲ್ಲ ಹಾಗೂ ಅದನ್ನು ತೆರವುಗೊಳಿಸುವಂತೆ ಆಗ್ರಹಿಸಲು ನಾವು ಬದ್ಧರಾಗಿದ್ದೇವೆ ಎಂದು ಅಧ್ಯಕ್ಷೆ ರತ್ನಾ ನಾಗರಾಜ್ ಗಾಣಿಗ ತಿಳಿಸಿದರು. ಇಸ್ಪೀಟ್ ಕ್ಲಬ್ ತೆರವಿಗೆ ಸರ್ವ ಸದಸ್ಯರ ಒಮ್ಮತವಿರುವುದರಿಂದ ನಿರ್ಣಯ ಕೈಗೊಳ್ಳಬಹುದು ಎಂದು ಸದಸ್ಯ ರಾಜು ಪೂಜಾರಿ ಸೂಚಿಸಿದರು. ಸ್ಥಳೀಯ ಠಾಣಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳಿಗೆ ಕ್ಲಬ್ ತೆರವುಗೊಳಿಸು ವಂತೆ ನಿರ್ಣಯ ಕಳುಹಿಸುವುದಾಗಿ ಮುಖ್ಯಾಧಿಕಾರಿ ಶ್ರೀಪಾದ್ ಪುರೋಹಿತ್ ತಿಳಿಸಿದರು.
ಪಾರಂಪಳ್ಳಿ ವಾರ್ಡ್‌ನಲ್ಲಿ ನಿರ್ಮಾಣಗೊಳ್ಳುತ್ತಿರುವ ಬಾವಿ ಕಾಮಗಾರಿ ಅಸಮರ್ಪಕವಾಗಿದೆ. ಈ ಕುರಿತು ಕ್ರಮಕೈಗೊಳ್ಳಬೇಕು ಎಂದು ಹಿರಿಯ ಸದಸ್ಯ ಶ್ರೀನಿವಾಸ್ ಅಮೀನ್ ಪ್ರಸ್ತಾವಿಸುತ್ತಿದ್ದಂತೆ ಉಪಾಧ್ಯಕ್ಷ ಉದಯ ಪೂಜಾರಿ ಆಕ್ಷೇಪ ವ್ಯಕ್ತಪಡಿಸಿ, ಎಲ್ಲ ವಾರ್ಡ್ ಗಳ ಸಮಸ್ಯೆ ಕುರಿತು ಮಾತನಾಡಲು ನೀವು ವಿಪಕ್ಷ ನಾಯಕರೇ? ಆ ವಾರ್ಡ್‌ನಲ್ಲಿ ಸದಸ್ಯರಿರುವುದು ಯಾಕೆ. ನೀವು ಅನಗತ್ಯವಾಗಿ ಎಲ್ಲ ವಾರ್ಡ್ ಗಳ ವಿಚಾರದಲ್ಲಿ ತಲೆಹಾಕುವುದು
ಸರಿಯಲ್ಲ ಎಂದು ಗಟ್ಟಿ ಧ್ವನಿಯಲ್ಲಿ ಆಕ್ಷೇಪಿಸಿದರು. ಸಾಮಾನ್ಯ ಸದಸ್ಯನಾದರೂ ಈ ವಿಚಾರ ಪ್ರಸ್ತಾವಿಸುವ ಹಕ್ಕು ನನಗಿದೆ ಎಂದು ಅಮೀನ್ ವಾದಿಸಲು ಮುಂದಾದಾಗ ಮತ್ತೆ ಆಕ್ಷೇಪ ವ್ಯಕ್ತವಾಗಿ ನೀವು ಪದೇ-ಪದೇ ಅನಗತ್ಯ ವಿಚಾರ ಪ್ರಸ್ತಾಪಿಸುತ್ತಿದ್ದೀರಿ ಎಂದರು. ಈ ಕುರಿತು ವಾರ್ಡ್ ಸದಸ್ಯ ರಾಘವೇಂದ್ರ ಗಾಣಿಗ ಮಾತನಾಡಿ, ಆ ಕಾಮಗಾರಿಯ ಪ್ರತಿಯೊಂದು ಹಂತವನ್ನು ನಾನು ಅವಲೋಕಿಸುತ್ತಿದ್ದೇನೆ. ಎಲ್ಲವು ಸರಿ ಇದೆ ಎಂದರು. ಇನ್ನೊಂದು ವಿಚಾರವಾಗಿ ಪ.ಪಂ. ಅಧ್ಯಕ್ಷರು ಯಾವ ಪಕ್ಷ ಎಂದು ಅಮೀನ್ ಪ್ರಶ್ನಿಸಿದಾಗ, ನಾನು ಹಲವು ಬಾರಿ ಈ ಕುರಿತು ಉತ್ತರ ನೀಡಿದ್ದೇನೆ. ನನಗೆ ಅವಮಾನ ಮಾಡುವ ಉದ್ದೇಶದಿಂದ ಮತ್ತೆ-ಮತ್ತೆ ಈ ಪ್ರಶ್ನೆ ಕೇಳುತ್ತಿದ್ದೀರಿ. ಈ ಕುರಿತು ಉತ್ತರ ಬೇಕಾದರೆ ಬ್ಲಾಕ್ ಕಾಂಗ್ರೆಸ್ ಕಚೇರಿಗೆ ನಮ್ಮ ನಾಯಕರು ಬಂದಾಗ ಬನ್ನಿ ಅಥವಾ ಪಕ್ಷದ ಸಭೆಯಲ್ಲಿ ಕುಳಿತು ಚರ್ಚಿಸುವ. ಅದನ್ನು ಬಿಟ್ಟು ಅಭಿವೃದ್ಧಿ ಪರ ಚರ್ಚೆ ನಡೆಯಬೇಕಾದ ಸಭೆಯಲ್ಲಿ ಅನಗತ್ಯವಾಗಿ ಈ ವಿಚಾರ ಸರಿಯಲ್ಲ ಎಂದು ಎದ್ದು ನಿಂತು ಏರಿದ ಧ್ವನಿಯಲ್ಲಿ ಅಧ್ಯಕ್ಷರು ಉತ್ತರಿಸಿದರು. ಸ್ವಲ್ಪ ಹೊತ್ತಿನ ಅನಂತರ ಪ.ಪಂ.ನಲ್ಲಿ ಬೇಲಿಯೇ ಎದ್ದು ಹೊಲ ಮೇಯುತ್ತಿದೆ ಎಂದು ಅಮೀನ್ ಹೇಳಿದಾಗ ಸಹನೆ ಕಳೆದುಕೊಂಡ ಮುಖ್ಯಾಧಿಕಾರಿಗಳು ಎದ್ದು ನಿಂತು, ಪ.ಪಂ.ನಲ್ಲಿ ಎಲ್ಲ ಸರಿ ಇದೆ. ನೀವು ಯಾರಿಗೆ ಆರೋಪ ಮಾಡುತ್ತಿದ್ದೀರಿ, ಕುಳಿತುಕೊಳ್ಳಿ ಎಂದರು. ಸದಸ್ಯರು ಮಾತನಾಡುವಾಗ ಕುಳಿತುಕೊಳ್ಳಿ ಎಂದಿದ್ದು ಸರಿಯಲ್ಲ ಎಂದು ಅಚ್ಯುತ್ ಪೂಜಾರಿ ಆಕ್ಷೇಪಿಸಿದಾಗ ಮುಖ್ಯಾಧಿಕಾರಿಗಳು ಕ್ಷಮೆಯಾಚಿಸಿದರು. ಪಾರಂಪಳ್ಳಿ ಬಾವಿ ವಿಚಾರದಲ್ಲಿ ಕಾಮಗಾರಿ ಕಳಪೆಯಾಗಿದೆ ಎಂದ ಕುರಿತು ಎಂಜಿನಿಯರ್ ಆಕ್ಷೇಪ ವ್ಯಕ್ತಪಡಿಸಿ, ಕೆಲಸ ಎಲ್ಲಿ ಸರಿಯಾಗಿಲ್ಲ ಎಂದು ತಿಳಿಸಿ. ಅದು ಬಿಟ್ಟು ಕಳಪೆ ಎಂದು ಹೇಗೆ ಹೇಳುತ್ತೀರಿ ಎಂದು ಪ್ರಶ್ನಿಸಿದರು.
Related Articles
Advertisement
ಟೋಲ್‌ನಲ್ಲಿ ಸಂಗ್ರಹವಾಗುವ ಹಣದಲ್ಲಿ ಶೇ. 2ರಷ್ಟನ್ನು ಸ್ಥಳೀಯಾಡಳಿತಕ್ಕೆ ನೀಡಬೇಕು ಎನ್ನುವ ನಿಯಮವಿದೆ. ಹೀಗಾಗಿ ಸಾಸ್ತಾನ ಟೋಲ್‌ಗೇಟ್‌ನಿಂದ ನಿಗದಿತ ಮೊತ್ತವನ್ನು ಪಡೆಯಬೇಕು ಎಂದು ನಾಮನಿರ್ದೇಶಿತ ಸದಸ್ಯ ಅಚ್ಯುತ್ ಪೂಜಾರಿ ಮನವಿ ಮಾಡಿದರು.
ಘಟನೋತ್ತರ ಮಂಜೂರಾತಿಗೆ ವಿರೋಧಕೆಲವೊಂದು ಕಾಮಗಾರಿ ಹಾಗೂ ಪ.ಪಂ.ಗೆ ಬೇಕಿರುವ ವಸ್ತುಗಳ ಖರೀದಿಗೆ ಘಟನೋತ್ತರ ಮಂಜೂರಾತಿ ಮಾಡಿರುವುದನ್ನು ಸದಸ್ಯ ಶ್ರೀನಿವಾಸ್ ಅಮೀನ್ ಆಕ್ಷೇಪಿಸಿದರು. ತುರ್ತು ಕಾಮಗಾರಿಯೊಂದಕ್ಕೆ 8 ಸಾವಿರ ರೂ ಬಿಲ್ ಮಾಡಿದ ಕುರಿತು ಸದಸ್ಯೆ ವಸುಮತಿ ನಾಗೇಶ ನಾೖರಿ ಆಕ್ಷೇಪ ವ್ಯಕ್ತಪಡಿಸಿದಾಗ, ಆ ಕಾಮಗಾರಿ ನನ್ನ ವಾರ್ಡ್‌ಗೆ ಸಂಬಂಧಿಸಿದ್ದು ಹಾಗೂ ಸರಿಯಾಗಿಯೇ ಬಿಲ್ ಮಾಡಲಾಗಿದೆ. ಅದ್ನನು ಆಕ್ಷೇಪಿಸುವುದಾದರೆ ಎಲ್ಲ ಕಾಮಗಾರಿಗೆ ನನ್ನ ಆಕ್ಷೇಪವಿದೆ ಎಂದು ಸದಸ್ಯೆ ಸಾಧು ಪಿ. ಹಾಗೂ ಕರುಣಾಕರ ಪೂಜಾರಿ ತಿಳಿಸಿದರು. ಚರ್ಚೆಗಳು ವ್ಯರ್ಥ ಪ್ರಲಾಪವಾಗಬಾರದು
ಸಾಮಾನ್ಯಸಭೆಯಲ್ಲಿ ಚರ್ಚಿಸುವ ವಿಚಾರ ಹಾಗೂ ನಿರ್ಣಯಗಳು ಸಮಸ್ಯೆಗೆ ಪರಿಹಾರವಾಗಬೇಕು ಹೊರತು ವ್ಯರ್ಥ ಪ್ರಲಾಪವಾಗಬಾರದು ಎಂದು ಹಿರಿಯ ಸದಸ್ಯ ಸಂಜೀವ ದೇವಾಡಿಗ ಅಭಿಪ್ರಾಯಪಟ್ಟರು. ಪತ್ರಿಕೆಯಲ್ಲಿ ಹೆಸರು ಬರುವ ಉದ್ದೇಶದಿಂದ ಕೆಲವೊಮ್ಮೆ ಸಭೆಯಲ್ಲಿ ಚರ್ಚೆಗಳನ್ನು ಮಾಡಲಾಗುತ್ತದೆ. ಪ್ರಚಾರ ಪಡೆಯುವ ಸಲುವಾಗಿ ಚರ್ಚೆ ಅನಗತ್ಯ ಎಂದು ರಾಜು ಪೂಜಾರಿ ತಿಳಿಸಿದರು. ಪಾರಂಪಳ್ಳಿ-ಪಡುಕರೆ ವಾರ್ಡ್‌ನಲ್ಲಿ ಈಗಾಗಲೇ ಡೆಂಗ್ಯೂ ಕಾಣಿಸಿಕೊಂಡಿದ್ದು, ಪ.ಪಂ. ವ್ಯಾಪ್ತಿಯಲ್ಲಿ ವ್ಯಾಪಿಸಿದೆ. ಹೀಗಾಗಿ ಈ ಕುರಿತು ಎಚ್ಚರಿಕೆ ವಹಿಸಬೇಕು ಎಂದು ರಾಘವೇಂದ್ರ ಗಾಣಿಗ ತಿಳಿಸಿದರು.