ಮೈಸೂರು: ನಾಡಹಬ್ಬ ದಸರಾ ಮಹೋತ್ಸವ ಅಂಗವಾಗಿ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಹಾಗೂ ಆಟೋಮೋಟಿವ್ ಸ್ಪೋರ್ಟ್ಸ್ ಕ್ಲಬ್ ಆಫ್ ಮೈಸೂರು ವತಿಯಿಂದ ಲಲಿತ ಮಹಲ್‌ನ ಹ್ಯಾಲಿಪ್ಯಾಡ್ ಮೈದಾನದಲ್ಲಿ ಭಾನುವಾರ ಆಯೋಜಿಸಿದ್ದ “ಗ್ರಾವೆಲ್ ಫೆಸ್ಟ್’ನಲ್ಲಿ ಮಿಂಚಿನ ವೇಗದಲ್ಲಿ ಓಡಿದ ಕಾರುಗಳನ್ನು ಕಂಡು ಮೈಸೂರಿಗರು ನಿಬ್ಬೆರಗಾದರು.
ಕಾರ್ ರೇಸ್‌ನಲ್ಲಿ ದೂಳೆಬ್ಬಿಸಿದ ಸ್ಪರ್ಧಿಗಳು ಕ್ಷಣ ಕ್ಷಣಕ್ಕೂ ನೋಡುಗರ ಮೈ ನವಿರೇಳಿಸುವ ಮೂಲಕ, ಸ್ಪರ್ಧೆ ನಡೆಯುತ್ತಿದ್ದ ಟ್ರ್ಯಾಕ್‌ನ ಕ್ರಾಸ್‌ಗಳಲ್ಲಿ ವಿವಿಧ ಕಸರತ್ತಿನ ಮೂಲಕ ಮಿಂಚಿನ ವೇಗದಲ್ಲಿ ಕಾರು ಚಲಾಯಿಸಿ ಪ್ರೇಕ್ಷಕರ ಎದೆ ಝಲ್ ಎನ್ನುವಂತೆ ಮಾಡಿದರು.
ಹರ್ಷೋದ್ಘಾರ, ಶಿಳ್ಳೆ, ಚಪ್ಪಾಳೆ: ಬೆಳಗಿನಿಂದ ಸಂಜೆವರೆಗೂ ಸ್ಪರ್ಧಿಗಳು ತಮ್ಮ ಕೌಶಲದ ಮೂಲಕ ಕ್ರೀಡಾಪ್ರೇಮಿಗಳನ್ನು ರಂಜಿಸಿದರು. ರೇಸ್ ನೋಡಲು ಯುವಕರ ದಂಡೇ ಆಗಮಿಸಿತ್ತು. ದೂಳನ್ನು ಲೆಕ್ಕಿಸದೆ ಸ್ಪರ್ಧಿಗಳನ್ನು ಹುರಿದುಂಬಿಸುತ್ತಿದ್ದರು. ಬೆಳಗ್ಗೆ 8.30ರ ಸುಮಾರಿಗೆ ರೇಸ್‌ಗೆ ಚಾಲನೆ ನೀಡಲಾಯಿತು. ರೇಸ್ ಪ್ರಾರಂಭವಾಗುತ್ತಿದ್ದಂತೆ ಪ್ರೇಕ್ಷಕರ ಹರ್ಷೋದ್ಘಾರ, ಶಿಳ್ಳೆ, ಚಪ್ಪಾಳೆ ಮುಗಿಲು ಮುಟ್ಟಿತ್ತು. ದೂಳೆಬ್ಬಿಸಿ ನುಗ್ಗುತ್ತಿದ್ದ ಕಾರುಗಳನ್ನು ಕಂಡು ಪ್ರೇಕ್ಷಕರು ರೋಮಾಂಚನಗೊಂಡರು.
ವಿವಿಧ ಸಾಮರ್ಥ್ಯದ ಸ್ಪರ್ಧೆ: ವಿವಿಧ ಸಿಸಿ ಸಾಮರ್ಥ್ಯದ ಕಾರುಗಳ 8 ವಿಭಾಗದಲ್ಲಿ ನಡೆದ ಸ್ಪರ್ಧೆಯಲ್ಲಿ 1100 ಸಿಸಿ ಒಳಗಿನ ವಿಭಾಗ, 1100 ರಿಂದ 1400 ಸಿಸಿ ಒಳಗಿನ ವಿಭಾಗ, 1400 ರಿಂದ 1650 ಸಿಸಿ ಒಳಗಿನ ವಿಭಾಗ, ಮಹಿಳಾ ವಿಭಾಗ, ಇಂಡಿಯನ್ ಓಪನ್ ಕ್ಲಾಸ್, ಎಸ್‌ಯುವಿ ಕ್ಲಾಸ್, ಅನ್ ರಿಸ್ಟ್ರಿಕ್ಟೆಡ್ ಕ್ಲಾಸ್ ವಿಭಾಗದಲ್ಲಿ ಸ್ಪರ್ಧೆ ನಡೆಯಿತು. ಎಲ್ಲಾ ಸ್ಪರ್ಧೆಗಾಗಿ 900 ಮೀಟರ್ ದೂರದ ಎರಡು ಟ್ರ್ಯಾಕ್ ನಿರ್ಮಿಸಲಾಗಿತ್ತು.
ಒಟ್ಟು 1.8 ಕಿ.ಮೀ. ಅಂತರದ ಟ್ರ್ಯಾಕ್‌ನಲ್ಲಿ ಸ್ಪರ್ಧೆ ನಡೆಯಿತು. ಒಂದು ಬಾರಿಗೆ ಎರಡು ಕಾರುಗಳನ್ನು ಮಾತ್ರ ಸ್ಪರ್ಧೆಗೆ ಬಿಡಲಾಗುತ್ತಿತ್ತು. ಕಳೆದ ಬಾರಿಯ ಚಾಂಪಿಯನ್ ಮಡಿಕೇರಿ ತಿಮ್ಮಯ್ಯ ಸೇರಿದಂತೆ ಚೇತನ್, ಶಿವರಾಂ, ಬೋಪಯ್ಯ, ಧ್ರುವ, ಚಂದ್ರಶೇಖರ್ ಸೇರಿದಂತೆ ಪ್ರಮುಖ ಸ್ಪರ್ಧಿಗಳು ಭಾಗವಹಿಸಿದ್ದರು.
ಚಾಲನೆ: ಇದಕ್ಕೂ ಮುನ್ನ ನಟ ದರ್ಶನ್ ರೇಸ್‌ಗೆ ಚಾಲನೆ ನೀಡಿದರು. ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಜನಾರ್ದನ್ ಸೇರಿದಂತೆ ಇತರರು ಇದ್ದರು. ರೇಸ್‌ನ್ನು ಯಶಸ್ವಿಯಾಗಿ ಆಯೋಜಿಸಲು 250 ಮಂದಿ ಸ್ವಯಂ ರಕ್ಷಕರು ಹಾಗೂ 70 ಮಂದಿ ಪೊಲೀರನ್ನು ನಿಯೋಜಿಸಲಾಗಿತ್ತು. ತುರ್ತು ಸಂದರ್ಭಕ್ಕಾಗಿ ಆ್ಯಂಬುಲೆನ್ಸ್ ಸೇರಿದಂತೆ ಎಲ್ಲಾ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿತ್ತು.
ಮಹಿಳೆಯರ ಚಾಲನೆ ಕೌಶಲ್ಯಕ್ಕೆ ನಿಬ್ಬೆರಗಾದರು: ಈ ಬಾರಿಯ ರೇಸ್‌ನ ಲೇಡಿಸ್ ಕ್ಲಾಸ್ ವಿಭಾಗದಲ್ಲಿ 10 ಮಹಿಳೆಯರು ಭಾಗವಹಿಸಿದ್ದು ಗಮನ ಸೆಳೆಯಿತು. ಮಹಿಳೆಯರು ತಮ್ಮ ಚಾಲನಾ ಕೌಶಲ್ಯ ಪ್ರದರ್ಶಿಸುವ ಮೂಲಕ ಸಾರ್ವಜನಿಕರು ನಿಬ್ಬೆರಗಾಗುವಂತೆ ಮಾಡಿದರು. ಸ್ಪರ್ಧೆಯಲ್ಲಿ ದೆಹಲಿ, ಮಹಾರಾಷ್ಟ್ರ, ಗೋವಾ, ಕೇರಳ, ತಮಿಳುನಾಡ, ಪಂಜಾಬ್, ಮುಂಬೈ, ಮೈಸೂರು, ಮಡಿಕೇರಿ, ಮಂಗಳೂರು, ಹಾಸನ, ಚಿಕ್ಕಮಗಳೂರು, ಮೂಡಿಗೆರೆ, ಬೆಂಗಳೂರು ಸೇರಿದಂತೆ ದೇಶದ ವಿವಿಧ ಭಾಗಗಳಿಂದ ನೂರಕ್ಕೂ ಹೆಚ್ಚಿನ ಸ್ಪರ್ಧಿಗಳು ಭಾಗವಹಿಸಿದ್ದರು.