ಬೆಂಗಳೂರು: ಪಾಸ್‌ಪೋರ್ಟ್ ಪಡೆಯಲು ಪ್ರಧಾನ ಮಂತ್ರಿ, ವಿದೇಶಾಂಗ ಸಚಿವರ ಹೆಸರಿನ ನಕಲಿ ಲೆಟರ್‌ಹೆಡ್‌ಗಳನ್ನು ಬಳಸಿದ ಆರೋಪಕ್ಕೆ ಸಂಬಂಧಿಸಿದಂತೆ ಇಬ್ಬರು ಸಹೋದರರನ್ನು ಕೋರಮಂಗಲ ಪೊಲೀಸರು ಬಂಧಿಸಿದ್ದಾರೆ. ಜೆ.ಎಂ.ಗಾರ್ಡ್‌ನ್ ನಿವಾಸಿಗಳಾದ ಸೂರ್ಯ ರೋಷನ್(21) ಮತ್ತು ಆರ್ಯ ರೋಷನ್ (27) ಬಂಧಿತ ಸಹೋದರರು. ಇವರಿಂದ ಲ್ಯಾಪ್‌ಟಾಪ್, ಕಲರ್ ಪ್ರಿಂಟರ್ ಹಾಗೂ ಭಾರತ ಸರ್ಕಾರದ ಅಶೋಕ ಸ್ಥಂಭದ ಚಿಹ್ನೆ(ಲೋಗೋ)ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳು ಈ ಹಿಂದೆ ಪಾಸ್‌ಪೋರ್ಟ್ ಪಡೆಯಲು ಅರ್ಜಿ ಸಲ್ಲಿಸಿದ್ದರು. ಆದರೆ, ತಮ್ಮ ಹೊಸ ಹೆಸರುಗಳೊಂದಿಗೆ ಹಳೆ ಹೆಸರಿನ ದಾಖಲೆಗಳನ್ನು ಸಲ್ಲಿಸಿದ್ದರಿಂದ ಪಾಸ್‌ಪೋರ್ಟ್ ವಿತರಿಸಲು ಅಧಿಕಾರಿಗಳು ನಿರಕಾರಿಸಿದ್ದರು. ಬಳಿಕ ಮತ್ತೂಮ್ಮೆ ಅರ್ಜಿ ಹಾಕುವ ವೇಳೆ ಪ್ರಧಾನಿ, ವಿದೇಶಾಂಗ ಸಚಿವರ ನಕಲಿ ಲೆಟರ್‌ಹೆಡ್‌ಗಳನ್ನು ಸಲ್ಲಿಸಿದ್ದರು. ಇದರಿಂದ ಅನುಮಾನಗೊಂಡ ಪಾಸ್‌ಪೋರ್ಟ್ ಕಚೇರಿಯ ಅಧಿಕಾರಿಗಳು ಪೊಲೀಸರಿಗೆ ದೂರು ನೀಡಿದ್ದರು ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಹೇಮಂತ್ ನಿಂಬಾಳ್ಕರ್ ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಸೂರ್ಯ ರೋಷನ್ ವೆಬ್‌ಡಿಸೈನಿಂಗ್ ಮತ್ತು ಕಂಪ್ಯೂಟರ್ ಅಪ್ಲಿಕೇಷನ್ ವ್ಯಾಸಂಗ ಮಾಡಿದ್ದ. ಆರ್ಯ ರೋಷನ್ 10ನೇ ತರಗತಿ ಓದಿದ್ದಾನೆ. ಕಿರುತೆರೆ ಮತ್ತು ಸಿನಿಮಾಗಳಲ್ಲಿ ನಟನೆ ಮಾಡುತ್ತಿದ್ದ. ಈ ನಡುವೆ ವಿದೇಶದಲ್ಲಿ ಕೆಲಸಕ್ಕೆ ತೆರಳಲು ಸಹೋದರರು 2012ರಲ್ಲಿ ಪಾಸ್‌ಪೋರ್ಟ್ ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಜನನ ಪ್ರಮಾಣ ಪತ್ರ ಮತ್ತು ಎಸ್‌ಎಸ್‌ಎಲ್‌ಸಿ ಅಂಕ ಪಟ್ಟಿಯಲ್ಲಿ ಹಳೆ ಹೆಸರು ದಾಖಲಾಗಿದ್ದ ಹಿನ್ನೆಲೆಯಲ್ಲಿ ಪಾಸ್‌ಪೋರ್ಟ್ ಕಚೇರಿ ಅಧಿಕಾರಿಗಳು ಅರ್ಜಿಯನ್ನು ತಿರಸ್ಕರಿಸಿದರು.
ನಂತರ 2017 ಮಾರ್ಚ್‌ನಲ್ಲಿ ಸೂಕ್ತ ದಾಖಲೆಗಳ ಸಮೇತ ಮತ್ತೆ ಅರ್ಜಿ ಸಲ್ಲಿಸಿದ್ದರು. ಆದರೆ, ಮತ್ತೂಮ್ಮೆ ಅರ್ಜಿ ತಿರಸ್ಕರಿಸುತ್ತಾರೆ ಎಂಬ ಭಯದಿಂದ, ಆರೋಪಿ ಸೂರ್ಯ ರೋಷನ್, ವಿದೇಶಾಂಗ ಸಚಿವರಾದ ಸುಷ್ಮಾ ಸ್ವರಾಜ್ ಅವರ ಫೋಟೋ, ಸಹಿ ಹೊಂದಿರುವ ಲೆಟರ್ ಹೆಡ್ ಅನ್ನು ಡೌನ್‌ಲೋಡ್ ಮಾಡಿಕೊಂಡು, ಅದರಲ್ಲಿ ಸೂರ್ಯ ಮತ್ತು ಆರ್ಯ ರೋಷನ್ ತಮ್ಮ ಕುಟುಂಬಕ್ಕೆ ಆತ್ಮೀಯರು. ಪಾಸ್‌ಪೋರ್ಟ್ ವಿತರಿಸಲು ಅನುಕೂಲ ಮಾಡಿಕೊಡುವಂತೆ ನಕಲಿ ಶಿಫಾರಸ್ಸು ಪತ್ರ ಸೃಷ್ಟಿಸಿದ್ದ.
ನಂತರ ಕೇಂದ್ರ ಸಚಿವರೊಬ್ಬರ ಹೆಸರಿನ ಲೆಟರ್‌ಹೆಡ್‌ನಲ್ಲಿ ಅದೇ ಮಾದರಿಯಲ್ಲಿ ಪತ್ರ ಬರೆದು ಪ್ರಾದೇಶಿಕ ಕಚೇರಿಗೆ ಅಂಚೆ ಮೂಲಕ ಕಳುಹಿಸಿ ಪಾಸ್‌ಪೋರ್ಟ್ ವಿತರಿಸಲು ಮನವಿ ಸಲ್ಲಿಸಿದ್ದ. ಈ ಕುರಿತು ಪರಿಶೀಲನೆ ನಡೆಸಿದ ಪಾಸ್‌ಪೋರ್ಟ್ ಕಚೇರಿ ಅಧಿಕಾರಿಗಳು, ಖಚಿತ ಪಡಿಸಿಕೊಳ್ಳಲು ಆಯಾ ಇಲಾಖೆಯ ಸಚಿವಾಲಯಕ್ಕೆ ಕಳುಹಿಸಿಕೊಟ್ಟಿದ್ದರು. ಆದರೆ, ಅಲ್ಲಿನ ಅಧಿಕಾರಿಗಳು ಇದು ನಕಲಿ ದೃಢಪಡಿಸಿದ್ದರು. ಇನ್ಸ್‌ಪೆಕ್ಟರ್ ಅಜಯ್, ಸಬ್ ಇನ್ಸ್‌ಪೆಕ್ಟರ್ ಶ್ಯಾಮ್ ಮತ್ತಿತರರು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.
ಯಾರ್ಯಾರ ಹೆಸರಲ್ಲಿ ಲೆಟರ್‌ಹೆಡ್?
ವೆಬ್ ಡಿಸೈನಿಂಗ್ ಕೋರ್ಸ್ ಮತ್ತು ಕಂಪ್ಯೂಟರ್ ಅಪ್ಲಿಕೇಷನ್‌ಗಳ ಬಗ್ಗೆ ಅಪಾರ ಜ್ಞಾನ ಹೊಂದಿದ್ದ ಆರೋಪಿ ಸೂರ್ಯ ರೋಷನ್, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ರಾಜನಾಥ್ ಸಿಂಗ್, ಹಣಕಾಸು ಸಚಿವ ಅರುಣ್ ಜೇಟಿÉ ಮತ್ತು ಕೇಂದ್ರ ವೀಚಕ್ಷಣಾ ಆಯುಕ್ತರು, ಮಾಹಿತಿ ಮತ್ತು ಪ್ರಸಾರ ಸಚಿವಾಲಯ, ಕೇಂದ್ರದ ಮಾಜಿ ಸಚಿವ ಮನೀಶ್ ತಿವಾರಿ, ಮಹಾರಾಷ್ಟ್ರ ಮುಖ್ಯಮಂತ್ರಿಗಳ ಸಚಿವಾಲಯಯದ ಸಹಿ ಹೊಂದಿರುವ ನಕಲಿ ವಿಸಿಟಿಂಗ್ ಕಾರ್ಡ್ ಮತ್ತು ಲೆಟರ್‌ಹೆಡ್‌ಗಳನ್ನು ಸೃಷ್ಟಿಸಿದ್ದ ಎಂದು ಡಿಸಿಪಿ ಬೋರಲಿಂಗಯ್ಯ ತಿಳಿಸಿದ್ದಾರೆ.