Advertisement

ಪೋಷಕರ ಹತ್ಯೆಗೆ ಯತ್ನಿಸಿದ ಚೋರ ಪುತ್ರನ ಸೆರೆ

12:01 PM Jul 11, 2018 | Team Udayavani |

ಬೆಂಗಳೂರು: ಯುವತಿಯರೊಂದಿಗೆ ಶೋಕಿ ಮಾಡುತ್ತಾ ಕಾಲಹರಣ ಮಾಡದೆ ಮದುವೆಯಾಗು ಎಂದು ಬುದ್ಧಿವಾದ ಹೇಳಿದ ತಂದೆ-ತಾಯಿಯನ್ನೇ ಹತ್ಯೆ ಮಾಡಲು ಯತ್ನಿಸಿದ. ಅದು ಸಾಧ್ಯವಾಗದೆ ಮನೆಯಿಂದಲೇ ಹೊರದೂಡಲ್ಪಟ್ಟ ಮಗ ಶೋಕಿಗೆ ಕಂಡುಕೊಂಡಿದ್ದು ಬುಲೆಟ್‌, ದ್ವಿಚಕ್ರ ವಾಹನಗಳ ಕಳ್ಳತನ. ಇದೆಲ್ಲಕ್ಕೂ ಪೋಷಕರು ಆಕ್ಷೇಪಿಸಿದಾಗ ಆತ್ಮಹತ್ಯೆಗೆ ದಾರಿ ಹಿಡಿದು ಈಗ ಪೊಲೀಸರ ಅತಿಥಿಯಾಗಿದ್ದಾನೆ.

Advertisement

ಇದು ಕಳ್ಳತನಕ್ಕಿಳಿದ ಕಾಮಾಕ್ಷಿಪಾಳ್ಯದ ಪಾಪ್ಪರೆಡ್ಡಿಪಾಳ್ಯ ನಿವಾಸಿ ಶರತ್‌ (25) ಚರಿತ್ರೆ. ಕುರುಬರಹಳ್ಳಿ ವೃತ್ತದಲ್ಲಿ ಗಸ್ತಿನಲ್ಲಿ ಪೊಲೀಸರು ವಾಹನ ತಪಾಸಣೆ ನಡೆಸುವಾಗ ಅನುಮಾನಸ್ಪದವಾಗಿ ಶರತ್‌ ಓಡಾಡುತ್ತಿದ್ದು, ಇದನ್ನು ಗಮನಿಸಿ ವಿಚಾರಣೆ ನಡೆಸಿದಾಗ ಶರತ್‌ನ ಇತಿಹಾಸ ತೆರೆದುಕೊಂಡಿದೆ.

ಆರೋಪಿಯಿಂದ 8.37 ಲಕ್ಷ ರೂ. ಮೌಲ್ಯದ 6 ಬುಲೆಟ್‌ ಬೈಕ್‌ ಸೇರಿದಂತೆ 10 ದ್ವಿಚಕ್ರ ವಾಹನಗಳು, ಒಂದು ನಾಡಪಿಸ್ತೂಲ್‌, 8 ಜೀವಂತ ಗುಂಡುಗಳನ್ನು ವಶಕ್ಕೆ ಪಡೆಯಲಾಗಿದೆ. ಡಿಪ್ಲೋಮಾ ಇಂಜಿನಿಯರಿಂಗ್‌ ಮಾಡಿರುವ ಈತ ಐಷಾರಾಮಿ ಬದುಕಿನ ಗೀಳಿಗೆ ಬಿದ್ದು, ಮನೆ ಮುಂದೆ ನಿಲ್ಲಿಸಿದ್ದ ರಾಯಲ್‌ ಎನ್‌ಫೀಲ್ಡ್‌ ಬುಲೆಟ್‌ಗಳನ್ನು ಕಳವು ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಜಿಮ್ಮು ಇಲ್ಲ, ಪ್ರೀಯತಮೆಯರೂ ಇಲ್ಲ: ಡಿಪ್ಲೋಮಾ, ಇಂಜಿನಿಯರಿಂಗ್‌ ಮುಕ್ತಾಯಗೊಳಿಸಿದ್ದ ಶರತ್‌ ಆರಂಭದಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸಕ್ಕೆ ಸೇರಿದ್ದ. ಆದರೆ, ಕೆಲಸಕ್ಕೆ ಸರಿಯಾಗಿ ಹೋಗದೆ ಕಂಪನಿಯಿಂದ ಆಕ್ಷೇಪಿತನಾಗಿ ಕೆಲಸ ತೊರೆದು ಕೆಲ ತಿಂಗಳಿಂದ ಮನೆಯಲ್ಲೇ ಇದ್ದ.

ಬಳಿಕ ನಾಗರಬಾವಿಯ ದೇಹದಾಡ್ಯ ಸಂಸ್ಥೆಯೊಂದರಲ್ಲಿ ಜಿಮ್‌ ಟ್ರೈನರ್‌ ಆಗಿ ಸೇರಿಕೊಂಡ. ಈ ಮಧ್ಯೆ ಕೆಲ ಯುವತಿಯರ ಜತೆ ಸ್ನೇಹ ಬೆಳೆಸಿದ್ದ ಶರತ್‌ ಅವರನ್ನು ಮನೆಗೆ ಕರೆದೊಯ್ದು ತನ್ನ ಗರ್ಲ್ಫ್ರೆಂಡ್ಸ್‌ ಅಥವಾ ಪ್ರೀತಿಸಿದ ಹುಡುಗಿ ಎಂದು ಪರಿಚಯಿಸುತ್ತಿದ್ದ. ಹೀಗೆ ನಾಲ್ಕೈದು ಯುವತಿಯರು ಬದಲಾದಾಗ ಬೇಸತ್ತ ಪೋಷಕರು ಬುದ್ದಿವಾದ ಹೇಳಿ, ಮದುವೆಗೆ ಒತ್ತಡ ಹಾಕಿದ್ದರು.

Advertisement

ಒಂದೆಡೆ ತನ್ನ ಪ್ರೀತಿಗೆ ನಿರಾಕರಣೆ ಮತ್ತು ನಡೆಸುತ್ತಿರುವ ವ್ಯವಹಾರಗಳ ಬಗ್ಗೆ ಪೋಷಕರು ಆಕ್ಷೇಪ ವ್ಯಕ್ತಪಡಿಸುತ್ತಿದ್ದರಿಂದ ಆಕ್ರೋಶಗೊಂಡ ಶರತ್‌ ಮೊದಲು ಅವರನ್ನು ಹತ್ಯೆಗೈದು ಬಳಿಕ ತಾನು ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದ. ಅದರಂತೆ ಒಮ್ಮೆ ಊಟದಲ್ಲಿ ಹಾಗೂ ಇನ್ನೊಮ್ಮೆ ವಾಟರ್‌ ಟ್ಯಾಂಕ್‌ನಲ್ಲಿ ವಿಷ ಬೆರೆಸಿ ತಂದೆ-ತಾಯಿಯರನ್ನು ಕೊಲ್ಲಲು ಯತ್ನಿಸಿದ್ದ. ಆದರೆ, ಅದೃಷ್ಟವಷಾತ್‌ ಬದುಕುಳಿದ ಪೋಷಕರು ಅವನನ್ನು ಮನೆಯಿಂದ ಹೊರಹಾಕಿದ್ದರು.

ಇದಾದ ಬಳಿಕ ಬಾಡಿಗೆ ಕೊಠಡಿಯಲ್ಲಿ ಪ್ರತ್ಯೇಕವಾಗಿ ವಾಸವಾಗಿದ್ದ ಶರತ್‌ ತನ್ನ ಶೋಕಿಗಾಗಿ ಬೈಕ್‌ ಕಳ್ಳತನ ಆರಂಭಿಸಿದ್ದ. ಈ ಮಧ್ಯೆ ನಾಲ್ಕು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದ. ಎರಡು ಬಾರಿ ಮಾತ್ರೆ ಸೇವಿಸಿ, ಒಮ್ಮೆ ಮಾಗಡಿ ರಸ್ತೆಯಲ್ಲಿ ಸ್ವಯಂ ಅಪಘಾತ ಮಾಡಿಕೊಂಡು. ಮತ್ತೂಮ್ಮೆ ಬೆಳೆ ಪೌಡರ್‌ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಬದುಕುಳಿದಿದ್ದ.

ಹತ್ಯೆಗೆ ಯುಟ್ಯೂಬ್‌ ಪ್ರೇರಣೆ: ಪೋಷಕರನ್ನು ಕೊಂಡು ತಾನೂ ಸಾಯಬೇಕೆಂದು ನಿರ್ಧರಿಸಿದ ಶರತ್‌ ಯೂಟೂಬ್‌ನಲ್ಲಿ ಆತ್ಮಹತ್ಯೆ ದೃಶ್ಯಗಳನ್ನು ನೋಡುತ್ತಿದ್ದ. “ಪಿಸ್ತೂಲ್‌ನಿಂದ ಸಾಯುವುದೇ ಸೂಕ್ತ’ ಎಂದು ನಿರ್ಧಾರ ಮಾಡಿಕೊಂಡು, ತನ್ನೊಂದಿಗೆ ಡಿಪ್ಲೋಮಾ ವ್ಯಾಸಂಗ ಮಾಡುತ್ತಿದ್ದ ಬಿಹಾರ ಮೂಲದ ಸ್ನೇಹಿತನ ಸಹಾಯದೊಂದಿಗೆ 25 ಸಾವಿರ ರೂ. ಕೊಟ್ಟು ನಾಡಪಿಸ್ತೂಲ್‌ ಹಾಗೂ ಗುಂಡುಗಳನ್ನು ಖರೀದಿಸಿದ್ದ.

ಪಿಸ್ತೂಲ್‌ ಕಾರ್ಯ ನಿರ್ವಹಿಸುತ್ತದೆಯೇ ಎಂದು ನೋಡಲು ತನ್ನ ಕೈ ಬೆರಳುಗಳ ಮೇಲೆ ಗುಂಡು ಹಾರಿಸಿಕೊಂಡಿದ್ದ. ಪೊಲೀಸರ ವಿಚಾರಣೆ ವೇಳೆ ಈ ಎಲ್ಲಾ ವಿಚಾರಗಳನ್ನು ಬಾಯಿ ಬಿಟ್ಟಿದ್ದ ಶರತ್‌, ಪೋಷಕರನ್ನು ಕೊಂದು ನಾನು ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದೆ. ಅದಕ್ಕಾಗಿ ಪಿಸ್ತೂಲ್‌ ಖರೀದಿಸಿದೆ ಎಂದು ಹೇಳಿಕೆ ದಾಖಲಿಸಿದ್ದಾನೆ.

ಐಷಾರಾಮಿ ಬಾಳಿಗಾಗಿ ಬುಲೆಟ್‌ ಕಳವು: ಮನೆಯಿಂದ ಹೊರಬಂದಿದ್ದ ಶರತ್‌ ಐಷಾರಾಮಿ ಜೀವನಕ್ಕಾಗಿ ದುಬಾರಿ ದ್ವಿಚಕ್ರವಾಹನವನ್ನು ಕಳವು ಮಾಡುತ್ತಿದ್ದ. ಬುಲೆಟ್‌ ಕಾಣಿಸದಿದ್ದರೆ ಡ್ನೂಕ್‌ನಂಥ ಬೈಕ್‌ಗಳನ್ನು ನಕಲೀ ಕೀ ಬಳಸಿ ಮತ್ತು ಹ್ಯಾಂಡಲ್‌ ಲಾಕ್‌ ಮುರಿದು ಕಳವು ಮಾಡುತ್ತಿದ್ದ.

ಇವುಗಳ ಮಾರಾಟದಿಂದ ಮೋಜಿನ ಜೀವನ ಮುಂದುವರಿದಿತ್ತು. ಬಸವೇಶ್ವರನಗರ, ವಿಜಯನಗರ, ಕಾಮಾಕ್ಷಿಪಾಳ್ಯ, ಸುಬ್ರಹ್ಮಣ್ಯನಗರ, ಮಹಾಲಕ್ಷಿ ಲೇಔಟ್‌ ಹಾಗೂ ಯಶವಂತಪುರ ಠಾಣಾವ್ಯಾಪ್ತಿಗಳಲ್ಲಿ ಸುಮಾರು 6 ರಾಯಲ್‌ ಎನ್‌ಫೀಲ್ಡ್‌ ಸೇರಿ 10 ದ್ವಿಚಕ್ರ ವಾಹನಗಳನ್ನು ಕಳವು ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next